ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Gaza Ceasefire Deal: ಗಾಜಾ ಕದನ ವಿರಾಮ; 200 ಪ್ಯಾಲಸ್ತೀನ್‌ ಖೈದಿಗಳನ್ನು ಬಿಡುಗಡೆಗೊಳಿಸಿದ ಇಸ್ರೇಲ್‌

ಇಸ್ರೇಲ್-ಪ್ಯಾಲಸ್ತೀನ್‌ ನಡುವೆ ಕದನ ವಿರಾಮ ಜ. 19ರಂದು ಘೋಷಣೆಯಾಗಿದ್ದು, ಪ್ರಕಾರ ಹಮಾಸ್ ಇಂದು (ಜ. 25) ನಾಲ್ವರು ಇಸ್ರೇಲಿ ಮಹಿಳಾ ಸೈನಿಕರನ್ನು ಮತ್ತು ಇಸ್ರೇಲ್‌ 200 ಪ್ಯಾಲಸ್ತೀನ್‌ ಖೈದಿಗಳನ್ನು ಬಿಡುಗಡೆ ಮಾಡಿದೆ.

ಗಾಜಾ ಕದನ ವಿರಾಮ; 200 ಪ್ಯಾಲಸ್ತೀನ್‌ ಖೈದಿಗಳನ್ನು ಬಿಡುಗಡೆಗೊಳಿಸಿದ ಇಸ್ರೇಲ್‌

ಇಸ್ರೇಲ್-ಪ್ಯಾಲಸ್ತೀನ್‌ ಕದನ ವಿರಾಮ.

Profile Ramesh B Jan 25, 2025 7:34 PM

ಜೆರುಸೆಲೆಂ: ಇಸ್ರೇಲ್-ಪ್ಯಾಲಸ್ತೀನ್‌ ನಡುವೆ ಕದನ ವಿರಾಮ ಜ. 19ರಂದು ಘೋಷಣೆಯಾಗಿದ್ದು (Gaza Ceasefire Deal) ಗಾಜಾದಲ್ಲಿ ಸದ್ಯ ಬಾಂಬ್‌, ಬಂದೂಕು ಸದ್ದಡಗಿದೆ. ಈ ಮೂಲಕ ಇಸ್ರೇಲ್ ಮತ್ತು ಹಮಾಸ್ ಬಂಡುಕೋರರ ನಡುವಿನ 15 ತಿಂಗಳ ಯುದ್ಧಕ್ಕೆ ತೆರೆ ಬಿದ್ದಿದೆ. ಒಪ್ಪಂದದ ಪ್ರಕಾರ ಹಮಾಸ್ ಇಂದು (ಜ. 25) ನಾಲ್ವರು ಇಸ್ರೇಲಿ ಮಹಿಳಾ ಸೈನಿಕರನ್ನು(Israeli Soldiers) ಮತ್ತು ಇಸ್ರೇಲ್‌ 200 ಪ್ಯಾಲಸ್ತೀನ್‌ ಖೈದಿಗಳನ್ನು ಬಿಡುಗಡೆ ಮಾಡಿದೆ.

"ಅಧಿಕಾರಿಗಳ ಅನುಮೋದನೆಯ ನಂತರ, ಎಲ್ಲ ಪ್ರಕ್ರಿಯೆ ಮುಗಿಸಿ 200 ಭಯೋತ್ಪಾದಕರನ್ನು ಒಫರ್ ಮತ್ತು ಕಿಟ್ಜಿಯೋಟ್ ಜೈಲುಗಳಿಂದ ಬಿಡುಗಡೆ ಮಾಡಲಾಯಿತು" ಎಂದು ಇಸ್ರೇಲ್‌ ತಿಳಿಸಿದೆ ವರದಿ ಹೇಳಿದೆ. ಇದಕ್ಕೂ ಮೊದಲು ಹಮಾಸ್‌ ನಾಲ್ವರು ಇಸ್ರೇಲ್‌ ಸೈನಿಕರಾದ ಕರೀನಾ ಅರಿವ್, ಡೇನಿಯೆಲಾ ಗಿಲ್ಬೋವಾ, ನಾಮಾ ಲೆವಿ ಮತ್ತು ಲಿರಿ ಅಲ್ಬಾಗ್ ಅವರನ್ನು ಗಾಜಾದಲ್ಲಿ ರೆಡ್‌ಕ್ರಾಸ್‌ಗೆ ಹಸ್ತಾಂತರಿಸಿತ್ತು.

15 ತಿಂಗಳ ಕದನ

2023ರ ಅ. 7ರಂದು ಹಮಾಸ್‌ ಹಾಗೂ ಇಸ್ರೇಲ್‌ ನಡುವೆ ಯುದ್ಧ ಪ್ರಾರಂಭವಾಗಿತ್ತು. ಯುದ್ಧದಲ್ಲಿ ಇಸ್ರೇಲ್‌ನ 1200 ನಾಗರಿಕರು ಮತ್ತು ಪ್ಯಾಲೆಸ್ತೀನ್‌ನಲ್ಲಿ 46 ಸಾವಿರಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ. ವಿವಿಧ ರಾಷ್ಟ್ರಗಳ ಹಲವಾರು ಪ್ರಯತ್ನದ ಬಳಿಕವೂ ಕದನ ವಿರಾಮ ಕಗ್ಗಂಟಾಗಿಯೇ ಉಳಿದಿತ್ತು. ಕೆಲವು ದಿನಗಳ ಹಿಂದೆ ಜಾಗತಿಕ ಒತ್ತಡದಿಂದಾಗಿ ಹಾಗೂ ದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಯಿಂದ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿದ್ದರು.



ಇಸ್ರೇಲ್‌ ಹಾಗೂ ಹಮಾಸ್‌ ನಡುವಿನ ಕದನ ವಿರಾಮ ಒಪ್ಪಂದದ ಮೊದಲ ಹಂತ 42 ದಿನಗಳ ಕಾಲ ಇರಲಿದೆ. ಇದೇ ವೇಳೆಗೆ ಹಮಾಸ್‌ ತನ್ನ ಸೆರೆಯಲ್ಲಿಟ್ಟಿದ್ದ 33 ಮಂದಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಿದೆ. ಪ್ರತಿಯಾಗಿ ಇಸ್ರೇಲ್‌ 737 ಪ್ಯಾಲೆಸ್ತೀನ್‌ ಖೈದಿಗಳನ್ನು ಬಿಡುಗಡೆ ಮಾಡುತ್ತದೆ. ಯುದ್ಧದ ಕಾರಣದಿಂದ ಗಾಜಾವನ್ನು ತೊರೆದಿದ್ದ ಪ್ಯಾಲೆಸ್ತಿನ್ನಿಯರು ಗಾಜಾಗೆ ಮತ್ತೆ ಮರಳಲಿದ್ದಾರೆ.

ಇನ್ನು 2ನೇ ಹಂತದ ಕದನ ವಿರಾಮ ಒಪ್ಪಂದ 16ನೇ ದಿನದಿಂದ ಪ್ರಾರಂಭವಾಗಲಿದೆ. ಇದರಲ್ಲಿ ಉಳಿದ ಒತ್ತೆಯಾಳುಗಳ ಬಿಡುಗಡೆ ಹಾಗೂ ಇಸ್ರೇಲ್‌ ಸೇನೆಯನ್ನು ಸಂಪೂರ್ಣವಾಗಿ ಹಿಂದಕ್ಕೆ ತೆಗೆದುಕೊಳ್ಳುವುದು ಮತ್ತು ಉಭಯ ದೇಶಗಳಲ್ಲಿ ಶಾಂತಿ ಸ್ಥಾಪನೆಗೆ ಮಹತ್ವ ನೀಡಲಾಗಿದೆ. 3ನೇ ಮತ್ತು ಅಂತಿಮ ಹಂತದ ಕದನ ವಿರಾಮದಲ್ಲಿ ಗಾಜಾವನ್ನು ಮತ್ತೆ ಮೊದಲಿನ ರೀತಿಯಲ್ಲಿ ಸಜ್ಜುಗೊಳಿಸಲು ತೀರ್ಮಾನಿಸಲಾಗಿದೆ.

ಈ ಸುದ್ದಿಯನ್ನೂ ಓದಿ: Israel Hamas: ಇಸ್ರೇಲ್‌ ಹಮಾಸ್‌ ನಡುವಿನ ಯುದ್ಧಕ್ಕೆ ಬ್ರೇಕ್‌ ! ಕದನ ವಿರಾಮ ಒಪ್ಪಂದದಲ್ಲಿ ಏನೇನಿದೆ?

ಅಮೆರಿಕದ ಪಾತ್ರ

ಕದನ ವಿರಾಮಕ್ಕೆ ಮಧ್ಯವರ್ತಿಗಳಾಗಿರುವ ಕತಾರ್‌, ಅಮೆರಿಕ ಹಾಗೂ ಈಜಿಪ್ಟ್‌ ಮೇಲ್ವಿಚಾರಣೆ ನಡೆಸಲಿದ್ದು, ಇದರ ಕಂಟ್ರೋಲಿಂಗ್‌ ಬಾಡಿ ಕೈರೋದಲ್ಲಿ ಸ್ಥಾಪನೆಯಾಗಲಿದೆ. ಅನೇಕ ದೇಶಗಳು ಗಾಜಾದ ನೆರವಿಗೆ ಬಂದಿದ್ದು, ಮಾನವೀಯ ನೆಲೆಯಲ್ಲಿ ಸಹಾಯಹಸ್ತವನ್ನು ಚಾಚುತ್ತಿವೆ. ಕದನ ವಿರಾಮ ಒಪ್ಪಂದ ಜಾರಿಗೆ ಬರುವಲ್ಲಿ ಹಲವರು ಶ್ರಮಿಸಿದ್ದು, ಅಮೆರಿಕದ ನಿರ್ಗಮಿತ ಅಧ್ಯಕ್ಷ ಜೋ ಬೈಡನ್‌ ಹಾಗೂ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬಹುಮುಖ್ಯ ಪಾತ್ರವನ್ನು ವಹಿಸಿದ್ದಾರೆ.