SSLC Result 2025: ಎಸ್‌ಎಸ್‌ಎಲ್‌ಸಿ ಪರೀಕ್ಷೆ: 22 ವಿದ್ಯಾರ್ಥಿಗಳಿಗೆ ಔಟ್ ಆಫ್ ಔಟ್! ಗ್ರೇಸ್ ಅಂಕ ಇಲ್ಲದೆಯೂ ಶೇ.8 ಫಲಿತಾಂಶ ಏರಿಕೆ
ಪರೀಕ್ಷಾ ಅಕ್ರಮ ತಡೆಗೆ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಜಾರಿಗೊಳಿಸಿದ್ದರಿಂದ ಕಳೆದ ಸಾಲಿನಲ್ಲಿ ನೀಡಿದ್ದ ಶೇ.10ರಷ್ಟು ಹೆಚ್ಚುವರಿ ಗ್ರೇಸ್ ಅಂಕ ವ್ಯವಸ್ಥೆಯನ್ನು ಈ ಬಾರಿ ಕೈಬಿಡಲಾಗಿದೆ. ಕಳೆದ ಬಾರಿ ಹೆಚ್ಚುವರಿ ಗ್ರೇಸ್ ಅಂಕ ನೀಡಿದ್ದರೂ ಶೇ.10ರಷ್ಟು ಫಲಿತಾಂಶ (SSLC result 2025) ಕುಸಿತ ಕಂಡಿತ್ತು. ಈ ಬಾರಿ 8% ಉತ್ತಮ ಫಲಿತಾಂಶ ಬಂದಿದೆ.


ಬೆಂಗಳೂರು: 2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಹೆಣ್ಣುಮಕ್ಕಳು ಹೆಚ್ಚಿನ ಮೇಲುಗೈ ಸಾಧಿಸಿದ್ದಾರೆ. ಹೆಣ್ಣುಮಕ್ಕಳು ಶೇ. 74 ಅಂಕ ಗಳಿಸಿದ್ದು, ಗಂಡು ಮಕ್ಕಳು 58.07 % ಫಲಿತಾಂಶ ಸಾಧಿಸಿದ್ದಾರೆ. ಫಲಿತಾಂಶದಲ್ಲಿ 22 ವಿದ್ಯಾರ್ಥಿಗಳು ಪೂರ್ಣ ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಟಾಪ್ 5 ಜಿಲ್ಲೆಗಳ ಸ್ಥಾನದಲ್ಲಿ ದಕ್ಷಿಣ ಕನ್ನಡ (91.12%), ಉಡುಪಿ (89.96%), ಉತ್ತರ ಕನ್ನಡ (83.19%), ಶಿವಮೊಗ್ಗ (82.29%), ಕೊಡಗು (82.21%) ಇವೆ. ಪರೀಕ್ಷಾ ಅಕ್ರಮ ತಡೆಗೆ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಜಾರಿಗೊಳಿಸಿದ್ದರಿಂದ ಕಳೆದ ಸಾಲಿನಲ್ಲಿ ನೀಡಿದ್ದ ಶೇ.10ರಷ್ಟು ಹೆಚ್ಚುವರಿ ಗ್ರೇಸ್ ಅಂಕ ವ್ಯವಸ್ಥೆಯನ್ನು ಈ ಬಾರಿ ಕೈಬಿಡಲಾಗಿದೆ. ಕಳೆದ ಬಾರಿ ಹೆಚ್ಚುವರಿ ಗ್ರೇಸ್ ಅಂಕ ನೀಡಿದ್ದರೂ ಶೇ.10ರಷ್ಟು ಫಲಿತಾಂಶ ಕುಸಿತ ಕಂಡಿತ್ತು. ಈ ಬಾರಿ 8% ಉತ್ತಮ ಫಲಿತಾಂಶ ಬಂದಿದೆ.
2024-25ನೇ ಸಾಲಿನಲ್ಲಿ ಈ ಬಾರಿ ಒಟ್ಟು 66.14% ನಷ್ಟು ಫಲಿತಾಂಶ ಬಂದಿದೆ. ಕರಾವಳಿಯ ಮೂರು ಜಿಲ್ಲೆಗಳು ಮೊದಲ ಮೂರು ಸ್ಥಾನ ಪಡೆದಿರುವುದು ವಿಶೇಷವಾಗಿದೆ. ಕೊನೆಯ ಸ್ಥಾನದಲ್ಲಿ ಕಲಬುರಗಿ (42.43%) ಇದೆ. 65 ಮಕ್ಕಳು 624 ಅಂಕ, 108 ಮಕ್ಕಳು 623 ಅಂಕ, 189 ಮಕ್ಕಳು 622 ಅಂಕ ಗಳಿಸಿದ್ದಾರೆ. 10.51% ಮಕ್ಕಳು ಎ ಪ್ಲಸ್ (90-100%), 18.46% ಮಕ್ಕಳು ಎ (80- 89%) 21.96% ಮಕ್ಕಳು ಬಿ (70- 79%) ಗ್ರೇಡ್ ಅಂಕಗಳನ್ನು ಪಡೆದಿದ್ದಾರೆ. ಸರಕಾರಿ ಶಾಲೆಗಳಿಗೆ 62.7% ಹಾಗೂ ಖಾಸಗಿ ಶಾಲೆಗಳಿಗೆ 75.59 ಫಲಿತಾಂಶ ಬಂದಿದೆ. ನಗರದ ಪ್ರದೇಶದಲ್ಲಿ ಶೇ.67.05 ಹಾಗೂ ಗ್ರಾಮೀಣ ಪ್ರದೇಶದಲ್ಲಿ ಶೇ. 65.47 ಫಲಿತಾಂಶ ದಾಖಲಾಗಿದೆ.
ಒಟ್ಟು 144 ಶಾಲೆಗಳಲ್ಲಿ ಶೇಕಡ 0% ಫಲಿತಾಂಶ ದಾಖಲಾಗಿದೆ. ಇದರಲ್ಲಿ ಸರ್ಕಾರಿ ಶಾಲೆ - 6, ಅನುದಾನಿತ ಶಾಲೆ - 30, ಅನುದಾನ ರಹಿತ ಶಾಲೆ - 108 ಸೊನ್ನೆ ಫಲಿತಾಂಶ ಪಡೆದ ಶಾಲೆಗಳು. ಒಟ್ಟು 921 ಶಾಲೆಗಳಲ್ಲಿ ಶೇಕಡ 100 ರಷ್ಟು ಫಲಿತಾಂಶ ಬಂದಿದೆ. ಸರ್ಕಾರಿ ಶಾಲೆ - 329, ಅನುದಾನಿತ ಶಾಲೆ - 53, ಅನುದಾನ ರಹಿತ ಶಾಲೆ - 530 ಔಟ್ ಆಫ್ ಔಟ್ ಫಲಿತಾಂಶ ಪಡೆದ ಶಾಲೆಗಳಾಗಿವೆ. ಶೇಕಡ 74.00 ರಷ್ಟು ವಿದ್ಯಾರ್ಥಿನಿಯರು ತೇರ್ಗಡೆಯಾದರೆ, ಶೇಕಡ 58.07 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಒಟ್ಟು 224900 (67.05%) ನಗರ ಪ್ರದೇಶದ ವಿದ್ಯಾರ್ಥಿಗಳು ಪಾಸ್. ಒಟ್ಟು 298175 (65.47%) ಗ್ರಾಮಾಂತರ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ಫಲಿತಾಂಶ ವೀಕ್ಷಿಸುವುದು ಹೇಗೆ?
ಫಲಿತಾಂಶಕ್ಕಾಗಿ ಸರ್ಕಾರದ ಅಧಿಕೃತ ವೆಬ್‌ಸೈಟ್ https://karresults.nic.in/ ನಲ್ಲಿ ಭೇಟಿ ನೀಡಿ.
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ 2025 ಲಿಂಕ್ ಆಯ್ಕೆ ಮಾಡಿಕೊಳ್ಳಬೇಕು.
ನಂತರ ನಿಮ್ಮ ಪರೀಕ್ಷಾ ನೋಂದಣಿ ಸಂಖ್ಯೆ, ಜನ್ಮ ದಿನಾಂಕ ಸೇರಿ ಅಗತ್ಯ ಮಾಹಿತಿ ದಾಖಲಿಸಬೇಕು.
ನಂತರ ಅಂಕಪಟ್ಟಿ ತೆರೆದುಕೊಳ್ಳಲಿದ್ದು, ಡೌನ್‌ಲೋಡ್ ಮಾಡಿಕೊಳ್ಳಬಹುದು.
ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ ವಿದ್ಯಾರ್ಥಿಗಳು ಫಲಿತಾಂಶ ವೀಕ್ಷಿಸಬಹುದಾಗಿದೆ. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಮಾಡಿದಂತೆಯೇ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೂ ಈ ವರ್ಷ ಇನ್ನೆರಡು ಪರೀಕ್ಷೆಯ ಅವಕಾಶ ನೀಡಲಾಗುತ್ತಿದೆ. ಉತ್ತೀರ್ಣರಾಗದಿದ್ದರೆ ಅಥವಾ ಉತ್ತಮ ಅಂಕ ಲಭಿಸದಿದ್ದರೆ ವಿದ್ಯಾರ್ಥಿಗಳು ಇನ್ನು ಎರಡು ಬಾರಿ ಪರೀಕ್ಷೆ ಬರೆಯಬಹುದಾಗಿದೆ.