Sonu Nigam: ಕನ್ನಡ ಹಾಡಿಗೂ ಪಹಲ್ಗಾಂ ದಾಳಿಗೂ ಏನು ಸಂಬಂಧ? ಸೋನು ನಿಗಮ್ ಮಾತಿಗೆ ರೊಚ್ಚಿಗೆದ್ದ ಕನ್ನಡಿಗರು
Sonu Nigam Controversy: "ಕರ್ನಾಟಕದ ಯಾವ ನಿರ್ಮಾಪಕರೂ ಈತನಿಂದ ಹಾಡು ಹಾಡಿಸಬಾರದು. ಯಾವುದೇ ಸಂಸ್ಥೆಗಳು ಇವನ ಶೋ ನಡೆಸಲು ಮುಂದಾಗಬಾರದು. ಒಂದು ವೇಳೆ ಯಾರಾದರೂ ಈ ದುಸ್ಸಾಹಸ ಮಾಡಿದರೆ ಅವರೇ ಬೆಲೆ ತೆರಬೇಕಾಗುತ್ತದೆ" ಎಂದು ಕನ್ನಡ ಹೋರಾಟಗಾರರು ಗುಡುಗಿದ್ದಾರೆ.


ಬೆಂಗಳೂರು: ನಗರದಲ್ಲಿ ನಡೆದ ರಸಮಂಜರಿ ಕಾರ್ಯಕ್ರಮವೊಂದರಲ್ಲಿ ಕನ್ನಡ (Kannada song) ಹಾಡು ಹೇಳಿ ಎಂದದ್ದಕ್ಕೆ, ಇದಕ್ಕೇನೇ ಪಹಲ್ಗಾಮ್ ದಾಳಿ (Pahalgam terror attack) ನಡೆದಿದ್ದು ಎಂದು ಲಿಂಕ್ ಮಾಡಿ ಮಾತನಾಡಿದ ಗಾಯಕ ಸೋನು ನಿಗಮ್ (Sonu Nigam) ಬಾಲಿಶ ಕೃತ್ಯ ಇದೀಗ ವಿವಾದದ (controversy) ಕಿಚ್ಚು ಹತ್ತಿಸಿದೆ. ಸೋನು ನಿಗಮ್ ಮಾತಿಗೆ ಕನ್ನಡಪರ ಸಂಘಟನೆಗಳಿಂದ ಭಾರೀ ವಿರೋಧ ವ್ಯಕ್ತವಾಗಿದ್ದು, ಕನ್ನಡ ಹಾಡುವಂತೆ ಹೇಳಿದ್ದಕ್ಕೂ, ಭಯೋತ್ಪಾದಕರ ದಾಳಿಗೂ ಏನು ಸಂಬಂಧ ಎಂದು ಆಕ್ರೋಶ ಹೊರಹಾಕಿದ್ದಾರೆ. ಸೋನು ನಿಗಮ್‌ರನ್ನು ಕನ್ನಡ ಚಿತ್ರೋದ್ಯಮದಿಂದ ದೂರ ಇಡಿ ಹಾಗೂ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಬೆಂಗಳೂರಿನ ಈಸ್ಟ್ ಪಾಯಿಂಟ್ ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಸೋನು ನಿಗಮ್ ಭಾಗವಹಿಸಿದ್ದರು. ಈ ವೇಳೆ ವಿದ್ಯಾರ್ಥಿಯೊಬ್ಬ ಕನ್ನಡ ಹಾಡು ಹೇಳುವಂತೆ ಕೇಳಿದ. ಅದಕ್ಕೆ ಸೋನು ನಿಗಮ್ ಪ್ರತಿಕ್ರಿಯಿಸುತ್ತಾ "ಕನ್ನಡ, ಕನ್ನಡ ಎಂದು ಕಿರುಚಿಕೊಂಡು ಆ ಹುಡುಗ ಹೇಳಿದ್ದು ನನಗೆ ಇಷ್ಟವಾಗಲಿಲ್ಲ. ಇದೇ ಕಾರಣದಿಂದ ಪಹಲ್ಗಾಮ್ ದಾಳಿಯಾಗಿದ್ದು" ಎಂದು ಹೇಳಿದ್ದರು. ಇದಕ್ಕೆ ಕನ್ನಡ ಪರ ಹೋರಾಟಗಾರ ನಾರಾಯಣ ಗೌಡ ಸೇರಿದಂತೆ ಹಲವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಕನ್ನಡ ಸಂಘಟನೆಯ ಹೋರಾಟ: ನಾರಾಯಣ ಗೌಡ
''ಕನ್ನಡದಲ್ಲಿ ಹಾಡು ಹೇಳಿ ಎಂದು ಕೇಳಿದ್ದಕ್ಕೆ ಗಾಯಕ ಸೋನು ನಿಗಮ್ ʻಇದಕ್ಕೇನೇ, ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿ ನಡೆದಿದ್ದುʼ ಎಂದು ಹೇಳಿದ್ದಾನೆ. ಕರ್ನಾಟಕ ಪೊಲೀಸರು ಈ ಕೂಡಲೇ ಇವನ ಮೇಲೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಬಂಧಿಸಬೇಕು. ಕನ್ನಡದಲ್ಲಿ ಹಾಡು ಹೇಳಿ ಎಂದು ಕೇಳಿದರೆ ಅದು ಹೇಗೆ ಭಯೋತ್ಪಾದಕ ದಾಳಿಗೆ ಕಾರಣವಾಗಲು ಸಾಧ್ಯ? ಕನ್ನಡದ ಅನ್ನ ತಿಂದು ಕೊಬ್ಬಿರುವ ಈತ ಅದು ಹೇಗೆ ಕರ್ನಾಟಕದಲ್ಲಿ ಇನ್ನು ಮೇಲೆ ಶೋಗಳನ್ನು ನಡೆಸುತ್ತಾನೆ ನೋಡೋಣ. ಕರ್ನಾಟಕದ ಯಾವ ನಿರ್ಮಾಪಕರೂ ಈತನಿಂದ ಹಾಡು ಹಾಡಿಸಬಾರದು. ಯಾವುದೇ ಸಂಸ್ಥೆಗಳು ಇವನ ಶೋ ನಡೆಸಲು ಮುಂದಾಗಬಾರದು. ಒಂದು ವೇಳೆ ಯಾರಾದರೂ ಈ ದುಸ್ಸಾಹಸ ಮಾಡಿದರೆ ಅವರೇ ಬೆಲೆ ತೆರಬೇಕಾಗುತ್ತದೆ. ಸೋನು ನಿಗಮ್ ನೀಡಿರುವ ಹೇಳಿಕೆ ಕನ್ನಡಿಗರನ್ನು ಕೀಳಾಗಿ ಕಂಡಿರುವುದು ಮಾತ್ರವಲ್ಲ, ಕನ್ನಡಿಗರನ್ನು ದೇಶದ್ರೋಹಿಗಳೆಂದು ಬಿಂಬಿಸಿ ಅವರನ್ನು ಖಳನಾಯಕರನ್ನಾಗಿ ಮಾಡುವ ಹುನ್ನಾರ ಹೊಂದಿದೆ. ಹೀಗಾಗಿ ಅವನ ಮೇಲೆ ಈ ಕೂಡಲೇ ದೂರು ದಾಖಲಾಗಬೇಕು. ಇಲ್ಲವಾದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತೀವ್ರ ಸ್ವರೂಪದ ಹೋರಾಟಕ್ಕೆ ಕೈ ಹಾಕಬೇಕಾಗುತ್ತದೆ ಎಂದು ಎಚ್ಚರಿಸುತ್ತೇನೆ. ಇಂಥ ಕೃತಘ್ನರನ್ನು ಕರ್ನಾಟಕದ ನೆಲದಲ್ಲಿ ಅನ್ನ ಹಾಕಿ ಸಾಕುವುದನ್ನು ಇನ್ನು ಮುಂದಾದರೂ ನಾವು ಕೈಬಿಡಬೇಕು'' ಎಂದು ನಾರಾಯಣ ಗೌಡರು ಫೇಸ್‌ಬುಕ್‌ನಲ್ಲಿ ಗುಡುಗಿದ್ದಾರೆ.
ಮೂರ್ಖತನದ ಹೇಳಿಕೆ ಎಂದ ಕಾರ್ತಿಕ್ ಗೌಡ
''ಭಯೋತ್ಪಾದಕ ಕೃತ್ಯವನ್ನು ಕನ್ನಡ ಹಾಡನ್ನು ಹಾಡಬೇಕೆಂಬ ವಿನಂತಿಗೆ ತಳುಕು ಹಾಕುವುದು ಮೂರ್ಖತನವಲ್ಲದೆ ಬೇರೇನೂ ಅಲ್ಲ. ಅವರ ಹಿಂದಿನ ಎಲ್ಲಾ ಕಾರ್ಯಕ್ರಮಗಳಲ್ಲಿ, ಕನ್ನಡ ಹಾಡುಗಳನ್ನು ಹಾಡಿದ್ದಕ್ಕಾಗಿ ಕನ್ನಡಿಗರು ಇತರರಿಗಿಂತ ಹೆಚ್ಚಿನ ಪ್ರೀತಿಯನ್ನು ಹೇಗೆ ತೋರಿಸುತ್ತಾರೆ ಎಂದು ವಿವರಿಸುತ್ತಿದ್ದರು. ಈಗ ಈ ಮೂರ್ಖತನದ ಹೇಳಿಕೆ ನೀಡಿದ್ದಾರೆ. ಇದಕ್ಕಾಗಿ ಅವರು ಕನ್ನಡಿಗರಲ್ಲಿ ಕ್ಷಮೆಯಾಚಿಸಬೇಕು'' ಎಂದು ಆಗ್ರಹಿಸಿದ್ದಾರೆ ನಿರ್ಮಾಪಕ ಕಾರ್ತಿಕ್ ಗೌಡ.
ಕನ್ನಡಿಗರಿಗೆ ಅಪಮಾನ: ಮಾಸ್ತಿ
''ಇವತ್ತು ವೇದಿಕೆಯ ಮೇಲಿದ್ದ ಈತನನ್ನು ಕನ್ನಡ ಹಾಡು ಹಾಡೆಂದು ಕೇಳಿದಾಗ 'ಪೆಹಲ್ಗಾಮ್ ನಲ್ಲಿ ಉಗ್ರರು ದಾಳಿ ನಡೆಸಿದ್ದು ಇದೇ ಕಾರಣಕ್ಕೆ' ಎಂಬ ಬಾಲಿಶ ಹೇಳಿಕೆ ನೀಡಿದ್ದಾನೆ. ವರುಷಗಳಿಂದ ಕನ್ನಡಿಗರು ಯಾವ ಕಂಠವನ್ನು ಕೊಂಡಾಡುತ್ತಿದ್ದರೋ ಇಂದು ಅದೇ ಕಂಠ ತುಚ್ಚವಾಗಿ ಅಪಮಾನಿಸಿದೆ. ಇಲ್ಲಿನ ಜನರು ತೋರೋ ಪ್ರೀತಿ, ನೀಡೋ ಗೌರವ ಕಂಡು ವಿಶ್ವವಿಖ್ಯಾತ ಗಾಯಕ ಮೇರುಪ್ರತಿಭೆ ಶ್ರೀ ಎಸ್ ಪಿ ಬಾಲ ಸುಬ್ರಮಣ್ಯಮ್ ರವರು 'ನನಗೆ ಮುಂದಿನ ಜನುಮ ಅಂತ ಇದ್ದರೆ ಅದು ಕನ್ನಡ ನೆಲದಲ್ಲಿಯೇ ಇರಲಿ ನಾನು ಕನ್ನಡಿಗನಾಗಿಯೇ ಹುಟ್ಟಬೇಕು ' ಎಂದು ನುಡಿದಿದ್ದರು. ಇದು ಈ ನೆಲದ ಶ್ರೇಷ್ಠತೆ ಮತ್ತು ಮಹಾನುಭಾವ ಎಸ್ ಪಿ ಬಾಲ ಸುಬ್ರಮಣ್ಯಮ್ ರವರ ಜೇಷ್ಠತೆ. ಇದೆಲ್ಲಾ ಈ ಬಾಡಿಗೆ ಗಾಯಕ ಸೋನು ನಿಗಮ್ಮನಿಗೆ ಹೇಗೆ ತಾನೇ ತಿಳಿಯಬೇಕು. ದಿಕ್ಕಾರವಿರಲಿ ಈ ಅಪ್ರಭುದ್ದನ ಅರಿವಿಗೆ'' ಎಂದು ಕನ್ನಡ ಚಿತ್ರಕಥೆಗಾರ ಮಾಸ್ತಿ ಉಪ್ಪಾರಹಳ್ಳಿ ಫೇಸ್‌ಬುಕ್‌ನಲ್ಲಿ ಕಿಡಿಕಾರಿದ್ದಾರೆ.