CT Ravi: ಸಚಿವೆ ಹೆಬ್ಬಾಳ್ಕರ್ ವಿರುದ್ಧ ಅವಾಚ್ಯ ಪದ ಬಳಕೆ ಆರೋಪ: ಸಿಟಿ ರವಿಗೆ ಹೈಕೋರ್ಟ್ ರಿಲೀಫ್
ತನಿಖೆ ವ್ಯಾಪ್ತಿಯ ಪ್ರಶ್ನೆಯನ್ನು ನಾವು ತೀರ್ಮಾನಿಸಬೇಕಿದೆ ಎಂದ ಹೈಕೋರ್ಟ್, ಫೆಬ್ರವರಿ 30ವರೆಗೆ ಬಲವಂತದ ಕ್ರಮ ಕೈಗೊಳ್ಳದಂತೆ ಆದೇಶ ನೀಡಿದೆ.
ಬೆಂಗಳೂರು: ವಿಧಾನಪರಿಷತ್ತಿನಲ್ಲಿ (Vidhana parishat) ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸಿದ ಆರೋಪ ಎದುರಿಸುತ್ತಿರುವ ಬಿಜೆಪಿ ಎಂಎಲ್ಸಿ ಸಿಟಿ ರವಿಗೆ (MLC CT Ravi) ಕರ್ನಾಟಕ ಹೈಕೋರ್ಟ್ (Karnataka high court) ಗುರುವಾರ ರಿಲೀಫ್ ನೀಡಿದೆ. ಸಿಟಿ ರವಿ ವಿರುದ್ಧ ಫೆಬ್ರವರಿ 30ರವರೆಗೆ ಬಲವಂತದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಸೂಚಿಸಿದೆ.
ಶಾಸಕರ ನಡುವೆ ಸದನದಲ್ಲಿ ನಡೆದ ವಿಚಾರಕ್ಕೆ ವಿನಾಯಿತಿ ಇದೆ ಎಂದು ಸಿಟಿ ರವಿ ಪರವಾಗಿ ಹಿರಿಯ ವಕೀಲ ಸಿವಿ ನಾಗೇಶ್ ವಾದ ಮಂಡಿಸಿದರು. ಇದಕ್ಕೆ ಪ್ರತಿಯಾಗಿ ಕ್ರಿಮಿನಲ್ ಕೃತ್ಯಗಳಿಗೆ ವಿನಾಯಿತಿ ಇಲ್ಲವೆಂದು ಎಸ್ಪಿಪಿ ಬಿಎ ಬೆಳ್ಳಿಯಪ್ಪ ವಾದ ಮಂಡಿಸಿದರು. ತನಿಖೆ ವ್ಯಾಪ್ತಿಯ ಪ್ರಶ್ನೆಯನ್ನು ನಾವು ತೀರ್ಮಾನಿಸಬೇಕಿದೆ ಎಂದ ಹೈಕೋರ್ಟ್, ಅಲ್ಲಿಯವರೆಗೂ ಬಲವಂತದ ಕ್ರಮ ಕೈಗೊಳ್ಳದಂತೆ ಆದೇಶ ನೀಡಿದೆ.
ಸಿಟಿ ರವಿ ಧ್ವನಿಯ ಮಾದರಿ ತೆಗೆದುಕೊಳ್ಳಬೇಕಿದೆ ಎಂದು ಎಸ್ಪಿಪಿ ವಾದ ಮಂಡಿಸಿದರು. ಆದಾಗ್ಯೂ ಮುಂದಿನ ಪ್ರಶ್ನೆ ಬಗ್ಗೆ ತೀರ್ಮಾನಿಸುವವರೆಗೆ ಕಾಯುವಂತೆ ಹೈಕೋರ್ಟ್ ಸೂಚನೆ ನೀಡಿತು.
ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ವಿಧಾನ ಪರಿಷತ್ತಿನಲ್ಲಿ ಸಿಟಿ ರವಿ ಸಚಿವೆ ಹೆಬ್ಬಾಳ್ಕರ್ ಅವರನ್ನು ಅಶ್ಲೀಲವಾಗಿ ನಿಂದಿಸಿದ್ದಾರೆ ಎಂದು ಆರೋಪ ಮಾಡಲಾಗಿದೆ. ಆದರೆ ಈ ಆರೋಪವನ್ನು ಸಿಟಿ ರವಿ ಅಲ್ಲಗಳೆದಿದ್ದಾರೆ. ರವಿ ಅವರು ಅಶ್ಲೀಲ ಪದ ಬಳಸಿರುವುದು ಸರ್ಕಾರಿ ಟಿವಿಯಲ್ಲಿ ದಾಖಲಾಗಿದೆ ಎಂದು ಹೇಳಲಾಗಿದೆ. ಆದರೆ ಅದು ಸಿಟಿ ರವಿ ಅವರ ಧ್ವನಿಯೇ ಎಂಬುದನ್ನು ಖಚಿತಪಡಿಸಲು ಅವರ ವಾಯ್ಸ್ ಸ್ಯಾಂಪಲ್ ಕೋರಲಾಗಿತ್ತು. ವಾಯ್ಸ್ ಸ್ಯಾಂಪಲ್ ನೀಡಲು ಅವರು ನಿರಾಕರಿಸಿದ್ದರು. ಈ ವಿಚಾರದ ಬಗ್ಗೆಯೂ ಹೈಕೋರ್ಟ್ನಲ್ಲಿ ವಾದ ಪ್ರತಿವಾದ ನಡೆಯುತ್ತಿದೆ. ಪ್ರಕರಣದ ತನಿಖೆಯನ್ನು ಸಿಐಡಿ ನಡೆಸುತ್ತಿದೆ.
ಘಟನೆ ರಾಜ್ಯದಾದ್ಯಂತ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿತ್ತು. ಸಿಟಿ ರವಿ ಅವರನ್ನು ಬಂಧಿಸಿದ್ದ ಬೆಳಗಾವಿ ಪೊಲೀಸರು ರಾತ್ರಿ ಇಡೀ ಅವರನ್ನು ಪೊಲೀಸ್ ವಾಹನದಲ್ಲಿ ಸುತ್ತಾಡಿಸಿದ್ದರು. ಈ ವಿಚಾರವಾಗಿ ಸರ್ಕಾರದ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿತ್ತು. ರವಿ ಅವರನ್ನು ಎನ್ಕೌಂಟರ್ ಮಾಡಲು ಸರ್ಕಾರ ಸಂಚು ಹೂಡಿತ್ತು ಎಂದು ಕೆಲವು ಮಂದಿ ಬಿಜೆಪಿ ನಾಯಕರು ಗಂಭೀರ ಆರೋಪ ಮಾಡಿದ್ದರು.