ಫ್ಲೈಟ್ ಟಿಕೆಟ್ ಬುಕ್ ಮಾಡಿದ ಮೇಲೆ ಬೆಲೆ ಕಡಿಮೆಯಾಯ್ತಾ? ಚಿಂತೆ ಬೇಡ, ಹೆಚ್ಚುವರಿ ಹಣ ವಾಪಸ್ ಕೊಡುತ್ತೆ 'ಮೇಕ್‌ಮೈಟ್ರಿಪ್'!
ನೀವು 'ಮೇಕ್‌ಮೈಟ್ರಿಪ್' ಆ್ಯಪ್‌ನಲ್ಲಿ ವಿಮಾನದ ಟಿಕೆಟ್ ಬುಕ್ ಮಾಡಿದ ನಂತರ, ಆ ಟಿಕೆಟ್‌ನ ಬೆಲೆ ಕಡಿಮೆಯಾದರೆ, ವ್ಯತ್ಯಾಸದ ಹಣವನ್ನು ಕಂಪನಿಯೇ ನಿಮಗೆ ವಾಪಸ್ ಮಾಡಲಿದೆ. ಇದರಿಂದಾಗಿ, ಟಿಕೆಟ್ ಬೆಲೆ ಇಳಿಯುವವರೆಗೆ ಕಾಯುವ ಬದಲು, ಗ್ರಾಹಕರು ನೆಮ್ಮದಿಯಾಗಿ ಮುಂಚಿತವಾಗಿಯೇ ಟಿಕೆಟ್ ಬುಕ್ ಮಾಡಿಕೊಳ್ಳಬಹುದು.
-
ಬೆಂಗಳೂರು: ವಿಮಾನ ಪ್ರಯಾಣಿಕರಿಗೆ ಟಿಕೆಟ್ ಬುಕ್ ಮಾಡುವುದು ಯಾವಾಗಲೂ ಒಂದು ದೊಡ್ಡ ಗೊಂದಲದ ಕೆಲಸ. ʼಈಗಲೇ ಬುಕ್ ಮಾಡಬೇಕಾ? ಅಥವಾ ನಾಳೆ ಟಿಕೆಟ್ ದರ ಇನ್ನಷ್ಟು ಕಡಿಮೆಯಾಗುತ್ತಾ?ʼ ಎಂಬ ಆತಂಕ ಎಲ್ಲರಿಗೂ ಇದ್ದೇ ಇರುತ್ತದೆ. ಟಿಕೆಟ್ ಬುಕ್ ಮಾಡಿದ ಮರುದಿನವೇ ಫ್ಲೈಟ್ ರೇಟ್ ಕಡಿಮೆಯಾದರೆ ಆಗುವ ಬೇಸರ ಅಷ್ಟಿಷ್ಟಲ್ಲ. ವಿಮಾನ ಪ್ರಯಾಣಿಕರ ಈ 'ಟಿಕೆಟ್ ದರದ ಆತಂಕ'ವನ್ನು ದೂರ ಮಾಡಲು ಪ್ರಸಿದ್ಧ ಟ್ರಾವೆಲ್ ಆ್ಯಪ್ 'ಮೇಕ್‌ಮೈಟ್ರಿಪ್' ಭರ್ಜರಿ ಫೀಚರ್ ಒಂದನ್ನು ಪರಿಚಯಿಸಿದೆ.
ಅದೇ ‘ಪ್ರೈಸ್ ಡ್ರಾಪ್ ಪ್ರೊಟೆಕ್ಷನ್’.
ಏನಿದು 'ಪ್ರೈಸ್ ಡ್ರಾಪ್ ಪ್ರೊಟೆಕ್ಷನ್'?
ನೀವು 'ಮೇಕ್‌ಮೈಟ್ರಿಪ್' ಆ್ಯಪ್‌ನಲ್ಲಿ ವಿಮಾನದ ಟಿಕೆಟ್ ಬುಕ್ ಮಾಡಿದ ನಂತರ, ಆ ಟಿಕೆಟ್‌ನ ಬೆಲೆ ಕಡಿಮೆಯಾದರೆ, ವ್ಯತ್ಯಾಸದ ಹಣವನ್ನು ಕಂಪನಿಯೇ ನಿಮಗೆ ವಾಪಸ್ ಮಾಡಲಿದೆ. ಇದರಿಂದಾಗಿ, ಟಿಕೆಟ್ ಬೆಲೆ ಇಳಿಯುವವರೆಗೆ ಕಾಯುವ ಬದಲು, ಗ್ರಾಹಕರು ನೆಮ್ಮದಿಯಾಗಿ ಮುಂಚಿತವಾಗಿಯೇ ಟಿಕೆಟ್ ಬುಕ್ ಮಾಡಿಕೊಳ್ಳಬಹುದು.
ಯಾವ್ಯಾವ ಫ್ಲೈಟ್‌ಗಳಿಗೆ ಇದು ಲಭ್ಯ?
ಈ ಸೌಲಭ್ಯವು ದೇಶೀಯ ಹಾಗೂ ಅಂತಾರಾಷ್ಟ್ರೀಯ ವಿಮಾನಗಳಿಗೆ ಲಭ್ಯವಿದೆ. ಒನ್ ವೇ (ಏಕಮುಖ) ಹಾಗೂ ರೌಂಡ್ ಟ್ರಿಪ್ (ಹೋಗಿ - ಬರುವ) ಎರಡೂ ಬಗೆಯ ಟಿಕೆಟ್‌ಗಳಿಗೂ ಇದನ್ನು ಬಳಸಬಹುದು.
ಇದನ್ನೂ ಓದಿ: Summer Travel Fashion Tips 2026: ಸಮ್ಮರ್ ಟ್ರಾವೆಲ್ ಫ್ಯಾಷನ್ ಪ್ರಿಯರಿಗೆ ಇಲ್ಲಿವೆ 5 ಸ್ಟೈಲಿಂಗ್ ಟಿಪ್ಸ್
ಶುಲ್ಕ ಮತ್ತು ರೀಫಂಡ್ ಮಿತಿ ಎಷ್ಟು?
ಬುಕ್ಕಿಂಗ್ ಮಾಡುವಾಗಲೇ ನೀವು ‘ಪ್ರೈಸ್ ಡ್ರಾಪ್ ಪ್ರೊಟೆಕ್ಷನ್’ ಆಯ್ಕೆಯನ್ನು ಆಯ್ದುಕೊಳ್ಳಬೇಕು.
ದೇಶೀಯ ವಿಮಾನಗಳಿಗೆ ಪ್ರತಿ ಪ್ರಯಾಣಿಕನಿಗೆ ಕನಿಷ್ಠ 229 ರೂ. ಹಾಗೂ ಅಂತಾರಾಷ್ಟ್ರೀಯ ವಿಮಾನಗಳಿಗೆ 349 ರೂ. ಪಾವತಿಸಿ ಈ ಫೀಚರ್ ಆಯ್ಕೆ ಮಾಡಿಕೊಳ್ಳಬಹುದು.
ಟಿಕೆಟ್ ಬೆಲೆ ಕಡಿಮೆಯಾದರೆ, ದೇಶೀಯ ವಿಮಾನಗಳಿಗೆ ಗರಿಷ್ಠ 2,500 ರೂ. ಮತ್ತು ಅಂತಾ ರಾಷ್ಟ್ರೀಯ ವಿಮಾನಗಳಿಗೆ ಗರಿಷ್ಠ 3,000 ರೂ. (ಪ್ರತಿ ಪ್ರಯಾಣಿಕನಿಗೆ) ವರೆಗೆ ರೀಫಂಡ್ ಸಿಗಲಿದೆ.
ಇದು ಹೇಗೆ ಕೆಲಸ ಮಾಡುತ್ತದೆ?
ನೀವು ಟಿಕೆಟ್ ಬುಕ್ ಮಾಡಿದ ಸಮಯದಿಂದ ಹಿಡಿದು, ನಿಮ್ಮ ವಿಮಾನ ಹೊರಡುವ 6 ಗಂಟೆಗಳ ಮುಂಚಿನವರೆಗೂ ಈ ಕೊಡುಗೆ ಅನ್ವಯವಾಗುತ್ತದೆ. ಈ ಅವಧಿಯಲ್ಲಿ ಟಿಕೆಟ್ ಬೆಲೆ ಕಡಿಮೆ ಯಾದರೆ, ಮೇಕ್‌ಮೈಟ್ರಿಪ್ ಕಡೆಯಿಂದಲೇ ಗ್ರಾಹಕರಿಗೆ ನೇರವಾಗಿ ನೋಟಿಫಿಕೇಶನ್ ಬರುತ್ತದೆ. ಆ ಹೆಚ್ಚುವರಿ ಹಣ ನೀವು ಬುಕ್ ಮಾಡಲು ಬಳಸಿದ ಮೂಲ ಪಾವತಿ ಖಾತೆಗೆ ಜಮೆಯಾಗುತ್ತದೆ.
ಭಾರತೀಯರು ಸಾಮಾನ್ಯವಾಗಿ ಫ್ಲೈಟ್ ಟಿಕೆಟ್ ಬುಕ್ ಮಾಡುವಾಗ ಬೆಲೆಗಳ ಬಗ್ಗೆ ಪದೇ ಪದೇ ಚೆಕ್ ಮಾಡುತ್ತಾರೆ. ಬೆಲೆ ಕಡಿಮೆಯಾಗಬಹುದು ಎಂಬ ನಿರೀಕ್ಷೆಯಲ್ಲಿ ಕೊನೆಯ ಕ್ಷಣದವರೆಗೂ ಕಾಯುತ್ತಾರೆ. ಇದರಿಂದಾಗಿ ಕೊನೆ ಘಳಿಗೆಯಲ್ಲಿ ಟಿಕೆಟ್ ಸಿಗದೆ ಪರದಾಡುವ ಪರಿಸ್ಥಿತಿಯೂ ಬರುತ್ತದೆ. ಮುಂಚಿತವಾಗಿಯೇ ಟಿಕೆಟ್ ಬುಕ್ ಮಾಡುವ ಅಭ್ಯಾಸವನ್ನು ಬೆಳೆಸಲು ಮತ್ತು ಗ್ರಾಹಕರಿಗೆ ಆರ್ಥಿಕ ಭದ್ರತೆ ಒದಗಿಸಲು ಈ ಫೀಚರ್ ಪರಿಚಯಿಸಲಾಗಿದೆ.
ಈ ಬಗ್ಗೆ ಮಾತನಾಡಿರುವ ಮೇಕ್‌ಮೈಟ್ರಿಪ್‌ನ ಫ್ಲೈಟ್ಸ್ ವಿಭಾಗದ ಸಿಒಒ ರಾಜ್ ರಿಷಿ ಸಿಂಗ್, "ವಿಮಾನದ ಟಿಕೆಟ್ ಬುಕ್ ಮಾಡುವಾಗ ಬೆಲೆ ಕಡಿಮೆಯಾಗಬಹುದು ಎಂಬ ಆತಂಕ ಗ್ರಾಹಕರಿಗೆ ಇರಬಾರದು. ಈ ಹೊಸ ಫೀಚರ್‌ನಿಂದಾಗಿ ಪ್ರಯಾಣಿಕರು ತಮಗೆ ಬೇಕಾದಾಗ ಟಿಕೆಟ್ ಬುಕ್ ಮಾಡಬಹುದು. ಬೆಲೆ ಕಡಿಮೆಯಾದರೆ ಹಣ ವಾಪಸ್ ಸಿಗುತ್ತದೆ ಎಂಬ ನೆಮ್ಮದಿ ಅವರಿಗಿರುತ್ತದೆ,” ಎಂದು ತಿಳಿಸಿದ್ದಾರೆ.
'ಮೇಕ್‌ಮೈಟ್ರಿಪ್' ಈಗಾಗಲೇ ಗ್ರಾಹಕರಿಗಾಗಿ 'ಝೀರೋ ಕ್ಯಾನ್ಸಲೇಶನ್' ಮತ್ತು 'ಉಚಿತ ಡೇಟ್ ಚೇಂಜ್'ನಂತಹ ಸೌಲಭ್ಯಗಳನ್ನು ಒದಗಿಸುತ್ತಿದೆ. ಇದೀಗ ಆ ಸಾಲಿಗೆ ಈ ಹೊಸ ‘ಪ್ರೈಸ್ ಡ್ರಾಪ್ ಪ್ರೊಟೆಕ್ಷನ್’ ಸೇರ್ಪಡೆಯಾಗಿದ್ದು, ವಿಮಾನ ಪ್ರಯಾಣಿಕರಿಗೆ ಮತ್ತಷ್ಟು ಅನುಕೂಲವಾಗಲಿದೆ.