Roopa Gururaj Column: ಸಹಸ್ರಾರು ವರ್ಷಗಳ ಹಿಂದಿನ ಮಹಾನ್ ಸತ್ಯಾನ್ವೇಷಕಿ ಗಾರ್ಗಿ
ಗಾರ್ಗಿಗೆ ಸತ್ಯದ ದರ್ಶನವಾಗುತ್ತದೆ. ಅವಳು ಸಭೆಯಲ್ಲಿದ್ದ ವಿದ್ವಾಂಸರಿಗೆ ಹೇಳುತ್ತಾಳೆ- ನಮಸ್ಕರಿಸಿ ಅವರ ಜ್ಞಾನಕ್ಕೆ ತಲೆಬಾಗೋಣ. ಇವರನ್ನು ವಾದದಲ್ಲಿ ಗೆಲ್ಲಲು ಯಾರಿಂದಲೂ ಸಾಧ್ಯವಿಲ್ಲ. ಈ ಸಂವಾದವು ಬೃಹದಾರಣ್ಯಕ ಉಪನಿಷತ್ತಿನಲ್ಲಿ ದಾಖಲಾಗಿದ್ದು, ಗಾರ್ಗಿಯ ಪಾಂಡಿತ್ಯ ಮತ್ತು ಸ್ತ್ರೀ ಶಕ್ತಿಯ ಸಂಕೇತವಾಗಿ ಇಂದಿಗೂ ಪ್ರಸ್ತುತವಾಗಿದೆ.
-
ಒಂದೊಳ್ಳೆ ಮಾತು
ಪ್ರಾಚೀನ ಭಾರತದ ಇತಿಹಾಸದಲ್ಲಿ ಅಂದರೆ ಸಾವಿರಾರು ವರ್ಷಗಳ ಹಿಂದೆ ‘ಗಾರ್ಗಿ ವಾಚಕ್ನವಿ’ ಒಬ್ಬ ಅತ್ಯಂತ ಪ್ರಭಾವಶಾಲಿ ದಾರ್ಶನಿಕ ಮತ್ತು ಬ್ರಹ್ಮಜ್ಞಾನಿ ಎಂದು ಹೆಸರು ಮಾಡಿದ ಹೆಣ್ಣು ಮಗಳು ಇದ್ದಳು. ವಿದೇಹ ರಾಜ್ಯದ ರಾಜ ಜನಕನು ಒಮ್ಮೆ ಅತ್ಯಂತ ದೊಡ್ಡ ‘ಬಹುದಕ್ಷಿಣ’ ಯಾಗವನ್ನು ಆಯೋಜಿಸಿದ್ದನು. ಈ ಸಂದರ್ಭದಲ್ಲಿ ಬ್ರಹ್ಮಜ್ಞಾನದ ಬಗ್ಗೆ ಚರ್ಚಿಸಲು ಮತ್ತು ಯಾರು ಶ್ರೇಷ್ಠ ವಿದ್ವಾಂಸರು ಎಂದು ತಿಳಿಯಲು ಒಂದು ಸ್ಪರ್ಧೆ ಯನ್ನು ಏರ್ಪಡಿಸಿದನು.
ವಿಜೇತರಿಗೆ ಸಾವಿರ ಹಸುಗಳು, ಅವುಗಳ ಕೊಂಬಿಗೆ ಚಿನ್ನದ ನಾಣ್ಯಗಳನ್ನು ಕಟ್ಟಿ ಬಹುಮಾನವಾಗಿ ನೀಡುವುದಾಗಿ ಘೋಷಿಸಿದನು. ಆ ಸಭೆಯಲ್ಲಿದ್ದ ಮಹಾನ್ ಋಷಿ ಯಾಜ್ಞವಲ್ಕ್ಯರು, ತಾವು ಶ್ರೇಷ್ಠರೆಂದು ಭಾವಿಸಿ ತಮ್ಮ ಶಿಷ್ಯರಿಗೆ ಆ ಹಸುಗಳನ್ನು ಹೊಡೆದುಕೊಂಡು ಹೋಗಲು ಆಜ್ಞಾಪಿಸಿದರು.
ಇದು ಅಲ್ಲಿದ್ದ ಉಳಿದ ವಿದ್ವಾಂಸರನ್ನು ಕೆರಳಿಸಿತು. ಆಗ ಎಂಟು ಮಂದಿ ವಿದ್ವಾಂಸರು ಯಾಜ್ಞವಲ್ಕರನ್ನು ಪ್ರಶ್ನಿಸಲು ಮುಂದಾದರು. ಅವರಲ್ಲಿ ಏಕೈಕ ಮಹಿಳೆಯಾಗಿ ಎದ್ದು ನಿಂತವಳೇ ಗಾರ್ಗಿ.
ಇದನ್ನೂ ಓದಿ: Roopa Gururaj Column: ರಾಜನ ಅಜ್ಞಾನ ತೊಲಗಿಸಿತು ಜಡಭರತನ ಮೌನದಲ್ಲಿ ಅಡಗಿದ ಮಹಾಜ್ಞಾನ
ಸಂವಾದದ ಸ್ವರೂಪ: ಗಾರ್ಗಿ ಕೇಳಿದ ಪ್ರಶ್ನೆಗಳು ಕೇವಲ ತಾರ್ಕಿಕವಾಗಿರದೆ, ಬ್ರಹ್ಮಾಂಡದ ಮೂಲವನ್ನು ಹುಡುಕುವಂತಿದ್ದವು. ಅವಳು ಕೇಳುತ್ತಾಳೆ: ಯಾಜ್ಞವಲ್ಕರೇ, ಈ ಭೂಮಿ ಯೆಲ್ಲವೂ ನೀರಿನಲ್ಲಿ ಒತಪ್ರೋತವಾಗಿದ್ದರೆ (ಹಾಸುಹೊಕ್ಕಾಗಿದ್ದರೆ), ಆ ನೀರು ಯಾವು ದರಲ್ಲಿ ಅಡಗಿದೆ?
ಯಾಜ್ಞವಲ್ಕ್ಯರು ಉತ್ತರಿಸುತ್ತಾರೆ: ಗಾರ್ಗಿ, ನೀರು ಗಾಳಿಯಲ್ಲಿ ಅಡಗಿದೆ. ಹೀಗೆ ಗಾರ್ಗಿ ಒಂದೊಂದಾಗಿ ಪ್ರಶ್ನಿಸುತ್ತಾ ಹೋಗುತ್ತಾಳೆ-ಗಾಳಿ ಯಾವುದರಲ್ಲಿ ಅಡಗಿದೆ? ಆಕಾಶ ಯಾವುದರಲ್ಲಿ ಅಡಗಿದೆ? ನಕ್ಷತ್ರಗಳು, ಗಂಧರ್ವರು ಹೀಗೆ ಪ್ರತಿಯೊಂದರ ಮೂಲ ವನ್ನು ಕೇಳುತ್ತಾ ಹೋಗುತ್ತಾಳೆ. ಯಜ್ಞವಲ್ಕ್ಯರು ಎಲ್ಲದಕ್ಕೂ ಉತ್ತರಿಸುತ್ತಾ ಕೊನೆಗೆ ‘ಬ್ರಹ್ಮಲೋಕ’ಕ್ಕೆ ಬಂದು ನಿಲ್ಲುತ್ತಾರೆ.
ಆಗ ಗಾರ್ಗಿ ಒಂದು ಕಠಿಣ ಪ್ರಶ್ನೆ ಕೇಳುತ್ತಾಳೆ: ಬ್ರಹ್ಮಲೋಕವು ಯಾವುದರಲ್ಲಿ ಅಡಗಿದೆ? ಇದಕ್ಕೆ ಉತ್ತರಿಸಲು ಯಾಜ್ಞವಲ್ಕ್ಯರಿಗೆ ಸಾಧ್ಯವಾಗುವುದಿಲ್ಲ. ಅವರು ಎಚ್ಚರಿಸುತ್ತಾ, ಗಾರ್ಗಿ, ಅತಿಯಾಗಿ ಪ್ರಶ್ನಿಸಬೇಡ, ನಿನ್ನ ತಲೆ ಸಿಡಿದು ಹೋದೀತು. ಕೆಲವು ವಿಷಯಗಳನ್ನು ತರ್ಕದಿಂದ ತಿಳಿಯಲು ಸಾಧ್ಯವಿಲ್ಲ, ಎನ್ನುತ್ತಾರೆ. ಗಾರ್ಗಿ ತಾತ್ಕಾಲಿಕವಾಗಿ ಸುಮ್ಮನಾಗುತ್ತಾಳೆ.
ಅಂತಿಮ ಸವಾಲು: ಆದರೆ ಗಾರ್ಗಿ ಅಷ್ಟಕ್ಕೆ ಸೋಲೊಪ್ಪುವವಳಲ್ಲ. ಸಭೆಯನ್ನುದ್ದೇಶಿಸಿ ಅವಳು ಹೇಳುತ್ತಾಳೆ-ನಾನು ಇವರಿಗೆ ಇನ್ನೂ ಎರಡು ಪ್ರಶ್ನೆಗಳನ್ನು ಕೇಳುತ್ತೇನೆ. ಒಬ್ಬ ಶೂರ ಯೋಧನು ತನ್ನ ಬಿಲ್ಲು-ಬಾಣಗಳಿಂದ ಶತ್ರುವನ್ನು ಎದುರಿಸುವಂತೆ ನಾನು ಇವರನ್ನು ಎದುರಿಸುತ್ತೇನೆ. ಈ ಪ್ರಶ್ನೆಗಳಿಗೆ ಇವರು ಉತ್ತರಿಸಿದರೆ ಯಾರೂ ಇವರನ್ನು ಗೆಲ್ಲಲು ಸಾಧ್ಯವಿಲ್ಲ.
ಅವಳು ಕೇಳಿದ ಪ್ರಶ್ನೆ: ಈ ಭೂಮಿ ಮತ್ತು ಸ್ವರ್ಗದ ನಡುವೆ ಇರುವ, ಭೂತ-ವರ್ತಮಾನ-ಭವಿಷ್ಯತ್ತನ್ನು ಒಳಗೊಂಡಿರುವ ಆ ಶಕ್ತಿ ಯಾವುದು? ಯಾಜ್ಞವಲ್ಕ್ಯರು ಶಾಂತವಾಗಿ ಉತ್ತರಿಸುತ್ತಾರೆ: ಅದುವೇ ಆಕಾಶ ( Space ).
ತಕ್ಷಣ ಗಾರ್ಗಿ ಎರಡನೇ ಬಾಣ ಬಿಡುತ್ತಾಳೆ: ಹಾಗಾ ದರೆ ಆ ಆಕಾಶವು ಯಾವುದರಲ್ಲಿ ನೆಲೆ ನಿಂತಿದೆ?
ಆಗ ಯಾಜ್ಞವಲ್ಕ್ಯರು ಅದ್ಭುತವಾದ ಉತ್ತರ ನೀಡುತ್ತಾರೆ: ಅಕ್ಷರ (ಅವಿನಾಶಿ ಬ್ರಹ್ಮ) ದಲ್ಲಿ ಅದು ನೆಲೆಸಿದೆ. ಅದು ಸ್ಥೂಲವಲ್ಲ, ಸೂಕ್ಷ್ಮವಲ್ಲ, ಅದು ಅಳತೆಗೆ ನಿಲುಕದ್ದು. ಸೂರ್ಯಚಂದ್ರರು ಅದರ ಆಜ್ಞೆಯಂತೆಯೇ ನಡೆಯುತ್ತಿದ್ದಾರೆ.
ಗಾರ್ಗಿಗೆ ಸತ್ಯದ ದರ್ಶನವಾಗುತ್ತದೆ. ಅವಳು ಸಭೆಯಲ್ಲಿದ್ದ ವಿದ್ವಾಂಸರಿಗೆ ಹೇಳುತ್ತಾಳೆ- ನಮಸ್ಕರಿಸಿ ಅವರ ಜ್ಞಾನಕ್ಕೆ ತಲೆಬಾಗೋಣ. ಇವರನ್ನು ವಾದದಲ್ಲಿ ಗೆಲ್ಲಲು ಯಾರಿಂದಲೂ ಸಾಧ್ಯವಿಲ್ಲ. ಈ ಸಂವಾದವು ಬೃಹದಾರಣ್ಯಕ ಉಪನಿಷತ್ತಿನಲ್ಲಿ ದಾಖಲಾಗಿದ್ದು, ಗಾರ್ಗಿಯ ಪಾಂಡಿತ್ಯ ಮತ್ತು ಸ್ತ್ರೀ ಶಕ್ತಿಯ ಸಂಕೇತವಾಗಿ ಇಂದಿಗೂ ಪ್ರಸ್ತುತವಾಗಿದೆ.
ಪ್ರಾಚೀನ ಭಾರತದ ಕಾಲದಿಂದಲೂ ಭಾರತದಲ್ಲಿ ಹೆಣ್ಣು ಮಕ್ಕಳ ಸ್ಥಾನ ಇಷ್ಟು ವಿಶಿಷ್ಟ ಅಪೂರ್ವವಾಗಿದೆ. ನಮ್ಮ ದೇಶದಲ್ಲಿ ಮೊದಲಿನಿಂದಲೂ ವಿದ್ಯೆ, ಶೌರ್ಯ, ಅಧಿಕಾರ, ಆಡಳಿತ ಎಲ್ಲಾ ವಿಷಯಗಳಲ್ಲೂ ಹೆಣ್ಣುಮಕ್ಕಳು ಗಂಡುಮಕ್ಕಳಿಗೆ ಸರಿಸಮಾನರಾಗಿ ತಮ್ಮ ಆತ್ಮಬಲವನ್ನು ಪ್ರದರ್ಶಿಸುತ್ತಾ ಬಂದಿದ್ದಾರೆ. ಅದಕ್ಕೆ ಅವಕಾಶಗಳನ್ನು ಕೂಡ ನೀಡಲಾಗಿದೆ. ಇತ್ತೀಚಿನ ಕೆಲವು ನೂರು ವರ್ಷಗಳಲ್ಲಿ ಬ್ರಿಟಿಷರ ಆಡಳಿತದಿಂದ, ಮೊಘಲರ ಆಕ್ರಮಣರಿಂದ ಹಾಳಾದ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತಾ ಯಾರೂ ಭಾರತದ ಬಗ್ಗೆ, ಇಲ್ಲಿನ ಹೆಣ್ಣುಮಕ್ಕಳ ಬಗ್ಗೆ ಕೀಳಾಗಿ ಮಾತನಾಡಲು ಅವಕಾಶ ಕೊಡಬಾರದು. ನಮ್ಮ ಮನೆಯ ಹೆಣ್ಣುಮಕ್ಕಳಿಗೆ ಇಂತಹ ಸಾಧಕರ ಬಗ್ಗೆ ಪರಿಚಯ ಮಾಡಿಕೊಡುತ್ತಾ ಅವರಲ್ಲಿ ಆತ್ಮವಿಶ್ವಾಸವನ್ನು ಬೆಳೆಸಬೇಕು.