ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

AFG vs AUS: ಮಳೆಯಿಂದ ಪಂದ್ಯ ರದ್ದು; ಸೆಮಿಫೈನಲ್‌ ಪ್ರವೇಶಿಸಿದ ಆಸೀಸ್‌

ಪಂದ್ಯ ರದ್ದಾದ ಕಾರಣ ಅಫಘಾನಿಸ್ತಾನದ ಸೆಮಿ ಆಸೆ ಜೀವಂತವಾಗಿ ಉಳಿದಿದೆ. ನಾಳೆ(ಮಾ.1) ನಡೆಯುವ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಇಂಗ್ಲೆಂಡ್‌ ವಿರುದ್ಧ ದೊಡ್ಡ ಅಂತರದಿಂದ ಸೋತರೆ ಅಫಘಾನಿಸ್ತಾನಕ್ಕೆ ಸೆಮಿ ಪ್ರವೇಶಿಸುವ ಅವಕಾಶವಿದೆ. ಸದ್ಯ ದಕ್ಷಿಣ ಆಫ್ರಿಕಾ ಮತ್ತು ಆಫ್ಘಾನ್‌ ತಲಾ 3 ಅಂಕ ಹೊಂದಿದೆ. ರನ್‌ರೇಟ್‌ ಆಧಾರದಲ್ಲಿ ಹರಿಣ ಪಡೆ ಮುಂದಿದೆ.

ಅಫಘಾನಿಸ್ತಾನದ ಸೆಮಿಫೈನಲ್‌ ಆಸೆ ಜೀವಂತವಿರಿಸಿದ ಮಳೆ

Profile Abhilash BC Feb 28, 2025 9:46 PM

ಲಾಹೋರ್‌: ಚಾಂಪಿಯನ್ಸ್‌ ಟ್ರೋಫಿಯ(ICC Champions Trophy) ಮತ್ತೊಂದು ಪಂದ್ಯ ಕೂಡ ಮಳೆಗೆ ಆಹುತಿಯಾಗಿದೆ. ಶುಕ್ರವಾರ ನಡೆದ ಆಸ್ಟ್ರೇಲಿಯಾ ಮತ್ತು ಅಫಘಾನಿಸ್ತಾನ(AFG vs AUS) ನಡುವಣ ಪಂದ್ಯ ಮಳೆಯಿಂದ ಫಲಿತಾಂಶ ಕಾಣದೆ ಅರ್ಧಕ್ಕೆ ರದ್ದುಗೊಂಡಿತು. ಚೇಸಿಂಗ್‌ ನಡೆಸುತ್ತಿದ್ದ ಆಸೀಸ್‌ ಒಂದು ವಿಕೆಟ್‌ಗೆ 109 ರನ್‌ ಗಳಿಸಿದ್ದ ವೇಳೆ ಸುರಿಯಲಾರಂಭಿಸಿದ ಮಳೆ ಸುಮಾರು ಒಂದುವರೆ ಗಂಟೆ ಕಾದರೂ ಬಿಡುವ ಸೂಚನೆ ಕಂಡು ಬಾರದ ಕಾರಣ ಕೊನೆಗೆ ಅಂಪೈರ್‌ಗಳು ಪಂದ್ಯವನ್ನು ರದ್ದು ಎಂದು ಘೋಷಿಸಿದರು. ಪಂದ್ಯ ರದ್ದಾದ ಕಾರಣ ಉಭಯ ತಂಡಗಳಿಗೂ ತಲಾ ಒಂದೊಂದು ಅಂಕ ನೀಡಲಾಯಿತು. 4 ಅಂಕ ಸಂಪಾದಿಸಿದ ಆಸ್ಟ್ರೇಲಿಯಾ 'ಬಿ' ಗುಂಪಿನಿಂದ ಸೆಮಿಫೈನಲ್‌ ಪ್ರವೇಶಿಸಿತು. ‌

ಪಂದ್ಯ ರದ್ದಾದ ಕಾರಣ ಅಫಘಾನಿಸ್ತಾನದ ಸೆಮಿ ಆಸೆ ಜೀವಂತವಾಗಿ ಉಳಿದಿದೆ. ನಾಳೆ(ಮಾ.1) ನಡೆಯುವ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಇಂಗ್ಲೆಂಡ್‌ ವಿರುದ್ಧ ದೊಡ್ಡ ಅಂತರದಿಂದ ಸೋತರೆ ಅಫಘಾನಿಸ್ತಾನಕ್ಕೆ ಸೆಮಿ ಪ್ರವೇಶಿಸುವ ಅವಕಾಶವಿದೆ. ಸದ್ಯ ದಕ್ಷಿಣ ಆಫ್ರಿಕಾ ಮತ್ತು ಆಫ್ಘಾನ್‌ ತಲಾ 3 ಅಂಕ ಹೊಂದಿದೆ. ರನ್‌ರೇಟ್‌ ಆಧಾರದಲ್ಲಿ ಹರಿಣ ಪಡೆ ಮುಂದಿದೆ.

ಗಡಾಫಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಆಫಘಾನಿಸ್ತಾನ 273ರನ್‌ಗೆ ಆಲೌಟ್‌ ಆಯಿತು. ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 12.5 ಓವರ್‌ಗಳಲ್ಲಿ ಒಂದು ವಿಕೆಟ್‌ಗೆ 109 ರನ್‌ ಗಳಿಸಿದ್ದ ವೇಳೆ ಮಳೆ ಬಂದು ಪಂದ್ಯ ರದ್ದಾಯಿತು. ಟ್ರಾವಿಸ್‌ ಹೆಡ್‌(59) ಮತ್ತು ನಾಯಕ ಸ್ವೀವನ್‌ ಸ್ಮಿತ್‌(19) ರನ್‌ ಗಳಿಸಿ ಕ್ರೀಸ್‌ನಲ್ಲಿದ್ದರು.

ಮೊದಲು ಬ್ಯಾಟಿಂಗ್‌ ನಡೆಸಿದ ಅಫಘಾನಿಸ್ತಾನ ಮೂರು ರನ್‌ಗೆ ಮೊದಲ ವಿಕೆಟ್‌ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಸಿಲುಕಿತು. ಆದರೆ ದ್ವಿತೀಯ ವಿಕೆಟ್‌ಗೆ ಜತೆಯಾದ ಇಬ್ರಾಹಿಂ ಜದ್ರಾನ್ ಮತ್ತು ಸೇದಿಕುಲ್ಲಾ ಅಟಲ್ ತಾಳ್ಮೆಯುತ ಬ್ಯಾಟಿಂಗ್‌ ಮೂಲಕ 67 ರನ್‌ ಜತೆಯಾಟ ನಡೆಸಿ ತಂಡಕ್ಕೆ ಆಸರೆಯಾದರು. ಜದ್ರಾನ್ 22 ರನ್‌ ಬಾರಿಸಿದರೆ, ಸೇದಿಕುಲ್ಲಾ 6 ಬೌಂಡರಿ ಮತ್ತು 3 ಸಿಕ್ಸರ್‌ ನೆರವಿನಿಂದ 85 ರನ್‌ ಚಚ್ಚಿದರು. ಉಭಯ ಆಟಗಾರರ ವಿಕೆಟ್‌ ಪತನದ ಬಳಿಕ ಆಫ್ಘಾನ್‌ ಮತ್ತೆ ಕುಸಿತ ಕಂಡಿತು.

ಇದನ್ನೂ ಓದಿ IND vs NZ: ನ್ಯೂಜಿಲ್ಯಾಂಡ್‌ ಪಂದ್ಯಕ್ಕೆ ಗಿಲ್‌ ನಾಯಕ!

150ರನ್‌ ತನಕ ಉತ್ತಮ ಸ್ಥಿತಿಯಲ್ಲಿದ್ದ ಆಫ್ಘಾನ್‌ 190 ರನ್‌ ಆಗುವಷ್ಟರಲ್ಲಿ 7 ವಿಕೆಟ್‌ ಕಳೆದುಕೊಂಡಿತು. ಕಳೆದ ಇಂಗ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್‌ ನಡೆಸಿದ್ದ ಮೊಹಮ್ಮದ್‌ ನಬಿ(1), ನಾಯಕ ಹಶ್ಮತುಲ್ಲಾ ಶಾಹಿದಿ(20), ರಹಮತ್ ಶಾ(12) ಮತ್ತು ರಶೀದ್‌ ಖಾನ್‌(19) ಈ ಪಂದ್ಯದಲ್ಲಿ ನಿಂತು ಆಡುವಲ್ಲಿ ವಿಫಲರಾದರು. ಒಂದೆಡೆ ವಿಕೆಟ್‌ ಬೀಳುತ್ತಿದ್ದರೂ ಆದರೆ ಮತ್ತೊಂದು ತುದಿಯಲ್ಲಿ ಏಕಾಂಗಿ ಹೋರಾಟ ನಡೆಸಿದ ಅಜ್ಮತುಲ್ಲಾ ಒಮರ್ಜಾಯ್ ಆಸೀಸ್‌ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿ ನಿಂತು ಅರ್ಧಶತಕ ಬಾರಿಸಿದರು.

ಕೊನೆಯ ಓವರ್‌ ತನಕ ಬ್ಯಾಟಿಂಗ್‌ ನಡೆಸಿದ ಅಜ್ಮತುಲ್ಲಾ ಒಮರ್ಜಾಯ್ 63 ಎಸೆತ ಎದುರಿಸಿ 6 ಸೊಗಸಾದ ಸಿಕ್ಸರ್‌ ಮತ್ತು 1 ಬೌಂಡರಿ ನೆರವಿನಿಂದ 67 ರನ್‌ ಬಾರಿಸಿದರು. ಅವರ ಅಸಾಧಾರಣ ಬ್ಯಾಟಿಂಗ್‌ ಬಲದಿಂದ ಆಫ್ಘಾನ್‌ 273 ರನ್‌ಗಳ ಸ್ಪರ್ಧಾತ್ಮಕ ಮೊತ್ತವನ್ನು ದಾಖಲಿಸಿತು. ಆಸೀಸ್‌ ಪರ ಬೆನ್ ದ್ವಾರ್ಶುಯಿಸ್ 47 ಕ್ಕೆ 3 ವಿಕೆಟ್‌ ಕಿತ್ತರೆ, ಸ್ಪೆನ್ಸರ್ ಜಾನ್ಸನ್ ಮತ್ತು ಆ್ಯಡಂ ಝಂಪ ತಲಾ 2 ವಿಕೆಟ್‌ ಪಡೆದರು. ಉಳಿದಂತೆ ನಥಾನ್‌ ಎಲ್ಲಿಸ್‌ ಮತ್ತು ಗ್ಲೆನ್‌ ಮ್ಯಾಕ್ಸ್‌ವೆಲ್‌ ಕೂಡ ಒಂದೊಂದು ವಿಕೆಟ್‌ ಕಲೆಹಾಕಿದರು.