ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Deepika Padukone: ಕ್ರಿಸ್ಟಿಯಾನೊ ರೊನಾಲ್ಡೊ ಹಿಂದಿಕ್ಕಿ ಹೊಸ ದಾಖಲೆ ಬರೆದ ದೀಪಿಕಾ ಪಡುಕೋಣೆ; ರೀಲ್‌ 190 ಕೋಟಿ ವೀಕ್ಷಣೆ

ಸ್ಯಾಂಡಲ್‌ವುಡ್‌ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿ, ಬಾಲಿವುಡ್‌ ಟಾಪ್‌ ನಾಯಕಿಯಾಗಿರುವ ಕನ್ನಡತಿ ದೀಪಿಕಾ ಪಡುಕೋಣೆ ಇದೀಗ ಹೊಸದೊಂದು ಇತಿಹಾಸ ಸೃಷ್ಟಿಸಿದ್ದಾರೆ. ವಿಶ್ವ ವಿಖ್ಯಾತ ಫುಟ್​ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರನ್ನೂ ಹಿಂದಿಕ್ಕಿ ವಿಶ್ವ ದಾಖಲೆ ಬರೆದಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ದೀಪಿಕಾ ಹಂಚಿಕೊಂಡ ರೀಲ್‌ ಬರೋಬ್ಬರಿ 190 ಕೋಟಿ ವ್ಯೂವ್ಸ್‌ ಗಳಿಸಿದೆ.

ರೀಲ್‌ 190 ಕೋಟಿ ವೀಕ್ಷಣೆ; ಹೊಸ ದಾಖಲೆ ಬರೆದ ದೀಪಿಕಾ

ದೀಪಿಕಾ ಪಡುಕೋಣೆ.

Ramesh B Ramesh B Aug 5, 2025 5:46 PM

ಮುಂಬೈ: ಸ್ಯಾಂಡಲ್‌ವುಡ್‌ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿ, ಬಾಲಿವುಡ್‌ ಟಾಪ್‌ ನಾಯಕಿಯಾಗಿ ಗುರುತಿಸಿಕೊಂಡು ಹಾಲಿವುಡ್ ಚಿತ್ರದಲ್ಲಿಯೂ ನಟಿಸಿರುವ ಕುಂದಾಪುರ ಮೂಲದ ಕನ್ನಡತಿ ದೀಪಿಕಾ ಪಡುಕೋಣೆ (Deepika Padukone) ಇದೀಗ ಹೊಸದೊಂದು ಇತಿಹಾಸ ಸೃಷ್ಟಿಸಿದ್ದಾರೆ. ವಿಶ್ವ ವಿಖ್ಯಾತ ಫುಟ್​ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರನ್ನೂ ಹಿಂದಿಕ್ಕಿ ವಿಶ್ವ ದಾಖಲೆ ಬರೆದಿದ್ದಾರೆ. ಹೌದು, ದೀಪಿಕಾ ಪಡುಕೋಣೆ ಅವರ ವಿಡಿಯೊವೊಂದು ಇಂಟರ್‌ನೆಟ್‌ನಲ್ಲಿ ಸಂಚಲನ ಸೃಷ್ಟಿಸಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ದೀಪಿಕಾ ಹಂಚಿಕೊಂಡ ರೀಲ್‌ ಬರೋಬ್ಬರಿ 190 ಕೋಟಿ ವ್ಯೂವ್ಸ್‌ (1.9 Billion Views), ಸುಮಾರು 11 ಲಕ್ಷ ಲೈಕ್ಸ್​ಗಳನ್ನು ಪಡೆದುಕೊಂಡಿದೆ.

ಜಾಗತಿಕವಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ಅತೀ ಹೆಚ್ಚು ವೀಕ್ಷಿಸ್ಪಟ್ಟ ರೀಲ್‌ ಎನ್ನುವ ದಾಖಲೆಯನ್ನು ದೀಪಿಕಾ ತಮ್ಮ ಖಾತೆಯಲ್ಲಿ ಹಂಚಿಕೊಂಡ ಈ ವಿಡಿಯೊ ಪಡೆದುಕೊಂಡಿದೆ. ದೀಪಿಕಾ ಈ ವಿಡಿಯೊವನ್ನು ಜೂನ್ 9ರಂದು ಶೇರ್‌ ಮಾಡಿದ್ದರು.

ಈ ಸುದ್ದಿಯನ್ನೂ ಓದಿ: Deepika Padukone: ದೀಪಿಕಾ ಪಡುವಕೋಣೆಗೆ ‘ಹಾಲಿವುಡ್ ವಾಕ್ ಆಫ್ ಫೇಮ್ ಸ್ಟಾರ್' ಪ್ರತಿಷ್ಠಿತ ಗೌರವ ಪುರಸ್ಕಾರ

ಯಾವ ವಿಡಿಯೊ?

ದೀಪಿಕಾ ಇನ್‌ಸ್ಟಾಗ್ರಾಮ್‌ನಲ್ಲಿ ಬರೋಬ್ಬರಿ 8 ಕೋಟಿ (80 ಮಿಲಿಯನ್‌) ಫಾಲೋವರ್ಸ್‌ ಹೊಂದಿದ್ದಾರೆ. ಹಿಲ್ಟನ್ ಹೊಟೇಲ್‌ನ ರಾಯಭಾರಿಯೂ ಆಗಿರುವ ಅವರು ಅದರ ಜಾಹೀರಾತನ್ನು ಹಂಚಿಕೊಂಡಿದ್ದು, ಆಗಸ್ಟ್ 4ಕ್ಕೆ ಇದು 190 ಕೋಟಿ ವೀವ್ಸ್ ಪಡೆದುಕೊಂಡಿದೆ. ಹಿಲ್ಟನ್ ಹೊಟೇಲ್‌ನ ವೈಶಿಷ್ಟ್ಯವನ್ನು ಸಾರುವ ರೀಲ್‌ ಇದಾಗಿದೆ. ಆ ಮೂಲಕ ದೀಪಿಕಾ ಹೊಸದೊಂದು ದಾಖಲೆ ಬರೆದಿದ್ದಾರೆ. ಸದ್ಯ ಈ ಸುದ್ದಿ ತಿಳಿದು ಅವರ ಫ್ಯಾನ್ಸ್‌ ಥ್ರಿಲ್‌ ಆಗಿದ್ದಾರೆ. ದೀಪಿಕಾ ಜಗತ್ತಿನಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ ಎನ್ನುವುದನ್ನು ಇದು ಮತ್ತೊಮ್ಮೆ ಸಾಬೀತುಪಡಿಸಿದೆ. ಅನೇಕರು ದೀಪಿಕಾಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ.

ಮತ್ತೆ ಚಿತ್ರರಂಗದಲ್ಲಿ ಬ್ಯುಸಿಯಾದ ದೀಪಿಕಾ

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಹೆಣ್ಣುಮಗುವಿಗೆ ಜನ್ಮ ನೀಡಿದ ದೀಪಿಕಾ ಕೆಲವು ದಿನಗಳ ಬ್ರೇಕ್‌ ನಂತರ ಇದೀಗ ಚಿತ್ರರಂಗಕ್ಕೆ ಕಂಬ್ಯಾಕ್‌ ಮಾಡಲು ಮುಂದಾಗಿದ್ದಾರೆ. ಈಗಾಗಲೇ ಕುತೂಹಲ ಕೆರಳಿಸಿರುವ, ದುಬಾರಿ ಬಜೆಟ್‌ನ AA22xA6 ಸಿನಿಮಾ ಒಪ್ಪಿಕೊಂಡಿದ್ದಾರೆ. ದಕ್ಷಿಣ ಭಾರತದ ಜನಪ್ರಿಯ ನಿರ್ದೇಶಕ ಅಟ್ಲಿ ಮತ್ತು ಟಾಲಿವುಡ್‌ ಸೂಪರ್‌ ಸ್ಟಾರ್‌ ಅಲ್ಲು ಅರ್ಜುನ್‌ ಮೊದಲ ಬಾರಿಗೆ ಒಂದಾಗುತ್ತಿರುವ ಚಿತ್ರ ಇದಾಗಿದ್ದು, ನಾಯಕಿಯಾಗಿ ದೀಪಿಕಾ ಆಯ್ಕೆಯಾಗಿದ್ದಾರೆ. ವಿಶಿಷ್ಟ ಕಥಾ ಹಂದರ ಹೊಂದಿರುವ ಈ ಸಿನಿಮಾದ ಶೂಟಿಂಗ್‌ ಸದ್ಯದಲ್ಲೇ ಆರಂಭವಾಗಲಿದೆ. ದೀಪಿಕಾ ಪಾತ್ರಕ್ಕೆ ಬಹಳಷ್ಟು ಒತ್ತು ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇದರ ಜತೆಗೆ ಕಳೆದ ವರ್ಷ ತೆರೆಕಂಡ ʼಕಲ್ಕಿ 2898 ಎಡಿʼ ಪ್ಯಾನ್‌ ಇಂಡಿಯಾ ಚಿತ್ರದ ಮುಂದುವರಿದ ಭಾಗದಲ್ಲಿ ದೀಪಿಕಾ ನಟಿಸುವ ಸಾಧ್ಯತೆ ಇದೆ. ನಾಗ್‌ ಅಶ್ವಿನ್‌ ನಿರ್ದೇಶನದ ಈ ಸಿನಿಮಾದಲ್ಲಿ ಪ್ರಭಾಸ್‌, ಅಮಿತಾಬ್‌ ಬಚ್ಚನ್‌ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮುಂದಿನ ವರ್ಷ ಇದರ ಚಿತ್ರೀಕರಣ ಆರಂಭವಾಗುವ ಸಾಧ್ಯತೆ ಇದೆ. ಮಾತ್ರವಲ್ಲದೆ ಶಾರುಖ್‌ ಖಾನ್‌ ಅಭಿನಯಿಸುತ್ತಿರುವ ʼಕಿಂಗ್‌ʼ ಚಿತ್ರದ ಮುಖ್ಯ ಪಾತ್ರದಲ್ಲಿಯೂ ದೀಪಿಕಾ ನಟಿಸುವ ಸಾಧ್ಯತೆ ಇದೆ.