Viral News: ಮನುಷ್ಯರೇ ಇಲ್ಲದ ಭೂಮಿಯಲ್ಲಿ ಹೊಸ ದೇಶ ಸೃಷ್ಟಿಸಿ ಅಧ್ಯಕ್ಷನಾದ 20 ವರ್ಷದ ಯುವಕ
ಬ್ರಿಟನ್ ಮೂಲದ ಯುವಕನೊಬ್ಬ ಸೆರ್ಬಿಯಾ ಮತ್ತು ಕ್ರೊಯೇಷಿಯಾ ನಡುವಿನ ವಿವಾದಿತ ಭೂಮಿಯಲ್ಲಿ ಫ್ರೀ ರಿಪಬ್ಲಿಕ್ ಆಫ್ ವರ್ಡಿಸ್ ಎಂಬ ಹೆಸರಿನಲ್ಲಿ ಹೊಸ ದೇಶವನ್ನು ಸ್ಥಾಪಿಸಿದ್ದಾನೆ. ಯಾವುದೇ ಮಾನವರಿಲ್ಲದ ಈ ಪ್ರದೇಶದಲ್ಲಿ ಆತ 400 ನಾಗರಿಕರ ಹೊಸ ದೇಶವನ್ನು ಸೃಷ್ಟಿಸಿದ್ದು ಮಾತ್ರವಲ್ಲದೇ ಅದರ ಅಧ್ಯಕ್ಷನೂ ಆಗಿದ್ದಾನೆ.


ವರ್ಡಿಸ್: ಬ್ರಿಟನ್ ಮೂಲದ 20 ವರ್ಷದ ಯುವಕ ಡೇನಿಯಲ್ ಜಾಕ್ಸನ್ (Daniel Jackson) ಎಂಬಾತ ಸೆರ್ಬಿಯಾ ಮತ್ತು ಕ್ರೊಯೇಷಿಯಾ (Serbia and Croatia) ನಡುವೆ ಒಂದು ಹೊಸ ದೇಶವನ್ನು (new country) ಸೃಷ್ಟಿ ಮಾಡಿದ್ದಾನೆ. ಅದಕ್ಕೆ ಫ್ರೀ ರಿಪಬ್ಲಿಕ್ ಆಫ್ ವರ್ಡಿಸ್ (Republic of Verdis) ಎಂಬ ಹೆಸರು ನೀಡಿದ್ದು, ಈ ನೂತನ ದೇಶ ಧ್ವಜ, ಕ್ಯಾಬಿನೆಟ್, ಕರೆನ್ಸಿ ಮತ್ತು 400 ನಾಗರಿಕರನ್ನು ಹೊಂದಿದೆ. ಕ್ರೊಯೇಷಿಯಾ ಮತ್ತು ಸೆರ್ಬಿಯಾ ನಡುವಿನ ವಿವಾದಿತ ಭೂಮಿಯಲ್ಲಿ ಡೇನಿಯಲ್ ಈ ದೇಶವನ್ನು ರಚನೆ ಮಾಡಿದ್ದು, ತನ್ನನ್ನು ತಾನು ಈ ದೇಶದ ಅಧ್ಯಕ್ಷನೆಂದು ಘೋಷಿಸಿಕೊಂಡಿದ್ದಾನೆ.
ಸೆರ್ಬಿಯಾ ಮತ್ತು ಕ್ರೊಯೇಷಿಯಾ ರಾಷ್ಟ್ರಗಳ ನಡುವಿನ ಗಡಿ ವಿವಾದದ ವೇಳೆ ಡೇನಿಯಲ್ 'ಪಾಕೆಟ್ ತ್ರೀ' ಎಂದು ಕರೆಯಲ್ಪಡುವ ಹಕ್ಕು ಪಡೆಯದ ಭೂಮಿಯನ್ನು ಕಂಡು ಹಿಡಿದಿದ್ದಾನೆ. ಡ್ಯಾನ್ಯೂಬ್ ನದಿಯ ದಡದಲ್ಲಿರುವ ಸುಮಾರು 125 ಎಕರೆಗಳಿಗಿಂತಲೂ ಕಡಿಮೆ ಇರುವ ಅರಣ್ಯ ಪ್ರದೇಶ ಇದಾಗಿದೆ.

ಡೇನಿಯಲ್ 14 ವರ್ಷದವನಿದ್ದಾಗ ವರ್ಡಿಸ್ ದೇಶದ ಬಗ್ಗೆ ಕನಸು ಕಾಣಲು ಪ್ರಾರಂಭಿಸಿದ್ದ. ಮೊದಲು ಆತ ಒಂದು ಕಾಡು ಸೃಷ್ಟಿಸಲು ಬಯಸಿದ್ದ. ಆದರೆ ಬಳಿಕ 2019ರ ಮೇ 30ರಂದು ವರ್ಡಿಸ್ ಅನ್ನು ಸ್ವತಂತ್ರ ಗಣರಾಜ್ಯವೆಂದು ಅಧಿಕೃತವಾಗಿ ಘೋಷಿಸಿದನು.
ಡಿಜಿಟಲ್ ವಿನ್ಯಾಸಕರಾಗಿರುವ ಡೇನಿಯಲ್ ಜಾಕ್ಸನ್ 18ನೇ ವಯಸ್ಸಿನಲ್ಲಿ ವರ್ಡಿಸ್ ಸ್ವಾತಂತ್ರ್ಯ ರಾಷ್ಟ್ರವಾಗಲು ಬೇಕಾದ ವ್ಯವಸ್ಥೆಗಳನ್ನು ಮಾಡಲು ಪ್ರಾರಂಭಿಸಿದನು. ಕಾನೂನುಗಳು, ಧ್ವಜ ಮತ್ತು ಕ್ಯಾಬಿನೆಟ್‌ಗಳ ರಚನೆಯಲ್ಲಿ ತೊಡಗಿದ್ದಾನೆ. ಈ ಹೊಸ ದೇಶದಲ್ಲಿ ಅಧಿಕೃತವಾಗಿ ಇಂಗ್ಲಿಷ್, ಕ್ರೊಯೇಷಿಯನ್ ಮತ್ತು ಸರ್ಬಿಯನ್ ಭಾಷೆಗಳನ್ನು ಬಳಸಲಾಗುತ್ತಿದ್ದು, ಯೂರೋವನ್ನು ಕರೆನ್ಸಿಯಾಗಿ ಮಾಡಲಾಗಿದೆ. ಕ್ರೊಯೇಷಿಯಾದ ಒಸಿಜೆಕ್ ನಗರದಿಂದ ದೋಣಿ ಮೂಲಕ ಮಾತ್ರ ವರ್ಡಿಸ್ ಗೆ ಹೋಗಬಹುದು.
ಜಾಕ್ಸನ್ ಬಂಧನ, ಗಡೀಪಾರು
ಹೊಸ ರಾಷ್ಟ್ರವನ್ನು ನಿರ್ಮಿಸುವುದು ಜಾಕ್ಸನ್ ಗೆ ಸುಲಭದ ಕಾರ್ಯವೇನು ಆಗಿರಲಿಲ್ಲ. 2023ರಲ್ಲಿ ಕ್ರೊಯೇಷಿಯಾದ ಪೊಲೀಸರಿಂದ ಬಂಧನಕ್ಕೆ ಒಳಗಾದ ಜಾಕ್ಸನ್ ನನ್ನು ಗಡೀಪಾರು ಮಾಡಲಾಯಿತು. ಕ್ರೊಯೇಷಿಯಾ ಪ್ರವೇಶ ನಿಷೇಧಿಸಲಾಯಿತು. ಆದರೂ ಜಾಕ್ಸನ್ ಕ್ರೊಯೇಷಿಯಾದೊಂದಿಗೆ ಶಾಂತಿಯುತ ಸಂಬಂಧಗಳನ್ನು ಮುಂದುವರಿಸಲು ಬಯಸುತ್ತಿರುವುದಾಗಿ ಹೇಳಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ಮಾತುಕತೆಯನ್ನು ಮುಂದುವರಿಸಿದ್ದಾರೆ.
ವರ್ಡಿಷಿಯನ್ ಆಗಲು ಯಾರು ಅರ್ಹರು?
ವರ್ಡಿಸ್ ರಾಷ್ಟ್ರ ನಿರ್ಮಾಣ ಕೇವಲ ನಾಲ್ಕು ಜನರಿಂದ ಪ್ರಾರಂಭವಾಗಿದೆ. ಈಗ ಇಲ್ಲಿ 400 ಅಧಿಕೃತ ನಾಗರಿಕರಿದ್ದಾರೆ. ಸಾವಿರಾರು ಜನರು ಇಲ್ಲಿ ಬಂದು ವಾಸಿಸಲು ಆಸಕ್ತಿ ತೋರಿದ್ದಾರೆ. ಇದಕ್ಕಾಗಿ ತನ್ನದೇ ಆದ ಪಾಸ್‌ಪೋರ್ಟ್‌ಗಳನ್ನು ನೀಡುತ್ತಿರುವ ವರ್ಡಿಸ್ ಇದನ್ನು ಅಂತಾರಾಷ್ಟ್ರೀಯ ಪ್ರಯಾಣಕ್ಕೆ ಬಳಸದಂತೆ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: Khalistan Terrorists: ಗುರುದ್ವಾರ ಆವರಣದಲ್ಲಿ ಖಲಿಸ್ತಾನ್ ರಾಯಭಾರ ಕಚೇರಿ; ಫೋಟೋ ವೈರಲ್
ಅತ್ಯಂತ ಪುಟ್ಟ ರಾಷ್ಟ್ರವಾಗಿರುವ ವರ್ಡಿಸ್ ಗೆ ವೈದ್ಯಕೀಯ ಅಥವಾ ಪೊಲೀಸ್ ಅನುಭವವಿರುವವರನ್ನು ಜಾಕ್ಸನ್ ಆಹ್ವಾನಿಸುತ್ತಾರೆ. ಇಲ್ಲಿಂದ ಹಿಂತಿರುಗುವುದನ್ನು ಸದ್ಯ ನಿಷೇಧಿಸಲಾಗಿದೆ. ಕ್ರೊಯೇಷಿಯಾ ಈ ಭೂಮಿಗಾಗಿ ಬೇಡಿಕೆ ಮಾಡುವುದಿಲ್ಲ. ಹೀಗಾಗಿ ನಾವು ಇಲ್ಲಿ ಸುರಕ್ಷಿತವಾಗಿದ್ದೇವೆ. ಇದು ಅರಣ್ಯದಿಂದ ಸುತ್ತುವರೆದಿರುವ ಅತ್ಯಂತ ಸುಂದರ ರಾಷ್ಟ್ರ ಎನ್ನುತ್ತಾರೆ ಡೇನಿಯಲ್ ಜಾಕ್ಸನ್.