ಮುಂಬಯಿ: ಇದುವರೆಗೂ ಆರ್‌ಸಿಬಿ ಮತ್ತು ತಂಡದ ಅಭಿಮಾನಿಗಳನ್ನು ಅಪಹಾಸ್ಯ ಮಾಡುವ ಮಾಡುತ್ತಿದ್ದ ಮಾಜಿ ಆಟಗಾರ ಅಂಬಾಟಿ ರಾಯುಡು(Ambati Rayudu) ಇದೀಗ ದಿಗ್ಗಜ ಆಟಗಾರ ರಾಹುಲ್ ದ್ರಾವಿಡ್(Rahul Dravid) ಬಗ್ಗೆ ಮಾತನಾಡುವ ಮೂಲಕ ಭಾರೀ ಟೀಕೆಗೆ ಗುರಿಯಾಗಿದ್ದಾರೆ. ಜತೆಗೆ ಅವರ ವಿರುದ್ಧ ಆಕ್ರೋಶ ಕೂಡ ವ್ಯಕ್ತವಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್(CSK vs RR) ವಿರುದ್ಧದ ಪಂದ್ಯದ ವೇಳೆ ರಾಜಸ್ಥಾನ್ ತಂಡದ ಮುಖ್ಯ ಕೋಚ್ ಆಗಿರುವ ದ್ರಾವಿಡ್ ವೀಲ್ಚೇರ್ನಲ್ಲಿ ಕುಳಿತು ಪಿಚ್ ವೀಕ್ಷಣೆ ಮಾಡಿದ್ದರು. ಅವರ ಈ ಬದ್ಧತೆ ಕಂಡು ಅನೇಕರು ಮೆಚ್ಚುಗೆ ಸೂಚಿಸಿದರೆ, ರಾಯುಡು ವ್ಯಂವ್ಯವಾಡಿದ್ದಾರೆ. ಇದು ಕ್ರಿಕೆಟ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಚೆನೈ ಪಂದ್ಯಕ್ಕೂ ಮುನ್ನ ದ್ರಾವಿಡ್ ಪಿಚ್ ವೀಕ್ಷಣೆಗೆ ಬಂದು ಅಲ್ಲಿದ್ದ ಅಧಿಕಾರಿಗಳ ಜತೆ ಮಾತುಕತೆ ನಡೆಸುತ್ತಿದ್ದರು. ಈ ವೇಳೆ ಸಂಜಯ್ ಮಾಂಜ್ರೇಕರ್ ಜತೆ ಹಿಂದಿ ಕಾಮೆಂಟ್ರಿ ಮಾಡುತ್ತಿದ್ದ ರಾಯುಡು, ದ್ರಾವಿಡ್‌ಗೆ ವೀಲ್ ಚೇರ್‌ನಲ್ಲಿ ಪಿಚ್ ಬಳಿ ಬರಲು ಅನುಮತಿ ಕೊಟ್ಟಿದ್ದು ಯಾರು? ಇದಕ್ಕೆ ಅವಕಾಶ ಇದೆಯೇ? ಎಂದು ಪ್ರಶ್ನೆ ಮಾಡಿದ್ದಾರೆ. ಇದು ದ್ರಾವಿಡ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ IPL 2025: ಪಂದ್ಯ ಗೆದ್ದರೂ ದಂಡಕ್ಕೆ ಗುರಿಯಾದ ರಾಜಸ್ಥಾನ್ ನಾಯಕ
ಮಾಂಜ್ರೇಕರ್ ಅವರು ದ್ರಾವಿಡ್ ಕರ್ತವ್ಯ ನಿಷ್ಠೆಗೆ ಮೆಚ್ಚುಗೆ ಸೂಚಿಸಿದರು. ಈ ರೀತಿ ಕರ್ತವ್ಯ ನಿರ್ವಹಿಸಲು ಅದು ದ್ರಾವಿಡ್ ಅವರಿಂದ ಮಾತ್ರ ಸಾಧ್ಯ. ಅವರು ಯಾವುದೇ ಒಂದು ಕಾರ್ಯವನ್ನು ಕೈಗೆತ್ತಿಕೊಂಡರೆ ಅದನ್ನು ಪೂರ್ಣ ಮಾಡದೆ ಬಿಡುವುದಿಲ್ಲ. ನಿಜವಾಗಿಯೂ ನಾವು ಅವರಿಗೆ ಮೆಚ್ಚುಗೆ ಸೂಚಿಸಲೇ ಬೇಕು ಎಂದಿದ್ದಾರೆ.
ರಾಯುಡು ಅತಿರೇಕ ಕಂಡ ಅನೇಕ ನೆಟ್ಟಿಗರು ತಕ್ಷಣ ಅವರನ್ನು ಐಪಿಎಲ್ ಕಾಮೆಂಟ್ರಿ ಪ್ಯಾನೆಲ್‌ನಿಂದ ಕಿತ್ತೊಗೆಯುವಂತೆ ಆಗ್ರಹಿಸಿದ್ದಾರೆ. ಇತ್ತೀಚೆಗಷ್ಟೇ ಇರ್ಫಾನ್ ಪಠಾಣ್ ರನ್ನು ಪಕ್ಷಪಾತಿಯಾಗಿ ಕಾಮೆಂಟರಿ ಮಾಡುತ್ತಾರೆ ಎಂಬ ಕಾರಣಕ್ಕೆ ಐಪಿಎಲ್ ಕ್ಯಾಮೆಂಟರಿ ಪ್ಯಾನೆಲ್ ನಿಂದಲೇ ಕಿತ್ತು ಹಾಕಲಾಗಿತ್ತು. ರಾಯುಡು ಕೂಡ ಇದೇ ರೀತಿಯ ಹೇಳಿಕೆ ನೀಡುತ್ತಿದ್ದರೆ ಅವರನ್ನು ಮುಂದಿನ ಆವೃತ್ತಿಯಿಂದ ಕೈಬಿಡುವ ಸಾಧ್ಯತೆ ಅಧಿಕವಾಗಿದೆ.
ದ್ರಾವಿಡ್ ತಿಂಗಳ ಹಿಂದೆ ಕೆಎಸ್‌ಸಿಎ 3ನೇ ಡಿವಿಷನ್ ಕ್ರಿಕೆಟ್ ಟೂರ್ನಿಯಲ್ಲಿ ವಿಜಯ್ ಕ್ರಿಕೆಟ್ ಕ್ಲಬ್ ಪರ ಆಡುವ ವೇಳೆ ಕಾಲಿಗೆ ಗಾಯ ಮಾಡಿಕೊಂಡಿದ್ದರು. ಆದರೆ ತಮ್ಮ ಗಾಯವನ್ನು ಲೆಕ್ಕಿಸದೆ ಐಪಿಎಲ್(IPL 2025) ಕರ್ತವ್ಯಕ್ಕೆ ಹಾಜರ್ ಆಗಿದ್ದಾರೆ. ಕಾಲಿಗೆ ಬ್ಯಾಂಡೇಜ್ ಕಟ್ಟಿಕೊಂಡೇ ಊರುಗೋಲಿನ ಸಹಾಯದಲ್ಲಿ ನಡೆಯುತ್ತಾ ಮೈದಾನದಲ್ಲಿ ಆಟಗಾರರಿಗೆ ಮಾರ್ಗದರ್ಶನ ನೀಡುವ ಮೂಲಕ ತಮ್ಮ ಕರ್ತವ್ಯ ಬದ್ಧತೆಯನ್ನು ತೋರಿಸಿಕೊಟ್ಟಿದ್ದಾರೆ.