ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

CET 2025: ಬೀದರ್, ಶಿವಮೊಗ್ಗ ಆಯ್ತು, ಇದೀಗ ಧಾರವಾಡದಲ್ಲಿಯೂ ಬೆಳಕಿಗೆ ಬಂತು ಜನಿವಾರಕ್ಕೆ ಕತ್ತರಿ ಪ್ರಕರಣ

ರಾಜ್ಯದಲ್ಲಿ ಜನಿವಾರ ಜಟಾಪಟಿ ನಡೆಯುತ್ತಲೇ ಇದೆ. ಬೀದರ್, ಶಿವಮೊಗ್ಗ ಬಳಿಕ ಇದೀಗ ಧಾರವಾಡಲ್ಲೂ ಇಂತಹದೇ ಘಟನೆ ನಡೆದಿದೆ. ಸಿಇಟಿ ಪರೀಕ್ಷೆ ಬರೆಯಲು ಆಗಮಿಸಿದ್ದ ವಿದ್ಯಾರ್ಥಿಯ ಜನಿವಾರವನ್ನು ಸಿಬ್ಬಂದಿ ಕತ್ತರಿಸಿದ್ದಾರೆ. ವಿದ್ಯಾರ್ಥಿ ಎಷ್ಟೇ ಬೇಡಿಕೊಂಡರೂ ಸಿಬ್ಬಂದಿ ಕತ್ತರಿಯಿಂದ ಜನಿವಾರವನ್ನು ಕತ್ತರಿಸಿದ್ದಾರೆ.

ಧಾರವಾಡ: ರಾಜ್ಯದಲ್ಲಿ ಜನಿವಾರ ಜಟಾಪಟಿ ನಡೆಯುತ್ತಲೇ ಇದೆ. ಬೀದರ್, ಶಿವಮೊಗ್ಗ ಬಳಿಕ ಇದೀಗ ಧಾರವಾಡಲ್ಲೂ (Dharwad) ಇಂತಹದೇ ಘಟನೆ ನಡೆದಿದೆ. ಸಿಇಟಿ ಪರೀಕ್ಷೆ ಬರೆಯಲು ಆಗಮಿಸಿದ್ದ ವಿದ್ಯಾರ್ಥಿಯ ಜನಿವಾರವನ್ನು ಸಿಬ್ಬಂದಿ ಕತ್ತರಿಸಿರುವಂತಹ ಘಟನೆ ನಡೆದಿದೆ. ಈ ಘಟನೆ ಧಾರವಾಡ ನಗರದ‌ ಹುರಕಡ್ಲಿ ಕಾಲೇಜ್‌ನ ಪರೀಕ್ಷಾ ಕೇಂದ್ರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ವಿದ್ಯಾರ್ಥಿ ಎಷ್ಟೇ ಕೋರಿಕೊಂಡರೂ ಸಿಬ್ಬಂದಿ ಜನಿವಾರವನ್ನು ಕತ್ತರಿಸಿ ಹಾಕಿದ್ದಾರೆ ಎಂದು ವಿದ್ಯಾರ್ಥಿ ಆರೋಪ ಮಾಡಿದ್ದಾರೆ. ಸದ್ಯ ಈ ಘಟನೆಗೆ ಎಲ್ಲಡೆ ಆಕ್ರೋಶ ವ್ಯಕ್ತವಾಗುತ್ತಿದೆ.

ಧಾರವಾಡದ ರಾಘವೇಂದ್ರ ನಗರದ ನಂದನ್ ಏರಿ, ವಿದ್ಯಾಗಿರಿ ಬಡಾವಣೆಯಲ್ಲಿರೋ ಜೆಎಸ್​ಎಸ್​ ಕಾಲೇಜಿನಲ್ಲಿ ಪಿಯುಸಿ ಮುಗಿಸಿದ್ದಾರೆ. ಎ. 16 ರಂದು ನಡೆದ ಸಿಇಟಿ ಪರೀಕ್ಷೆಗೆ ಹುರಕಡ್ಲಿ ಕಾಲೇಜಿನಲ್ಲಿ ಬರೆಯಲು ತೆರಳಿದ್ದಾರೆ. ಕೇಂದ್ರದ ಹೊರಗಡೆ ಭದ್ರತಾ ಸಿಬ್ಬಂದಿ ಈತನನ್ನು ಪರೀಕ್ಷಿಸುವಾಗ ನಂದನ್ ಧರಿಸಿದ್ದ ಜನಿವಾರ ಕಂಡಿದೆ. ಸಿಬ್ಬಂದಿ ಅದನ್ನು ತೆಗೆಯುವಂತೆ ಹೇಳಿದ್ದಾರೆ. ಆದರೆ ವಿದ್ಯಾರ್ಥಿ ಅವರ ಮಾತಿಗೆ ವಿರೋಧ ವ್ಯಕ್ತಪಡಿಸಿದ್ದಾನೆ. ಭದ್ರತಾ ಸಿಬ್ಬಂದಿ ಅದನ್ನು ತೆಗೆಯದೇ ಹೋದರೆ ಆತನನ್ನು ಒಳಗೆ ಬಿಡುವುದಿಲ್ಲ ಎಂದು ಹೇಳಿದ್ದಾರೆ. ನಂದನ್ ಬ್ಯಾಗಿನೊಳಗೆ ಜನಿವಾರ ಇಟ್ಟುಕೊಳ್ಳುತ್ತೇನೆ ಎಂದು ಕೇಳಿಕೊಂಡರೂ ಬಿಡದೇ ಜನಿವಾರವನ್ನು ಕಟ್ ಮಾಡಿ ಸಿಬ್ಬಂದಿಗಳು ತೆಗೆದಿದ್ದಾರೆ ಎಂದು ವಿದ್ಯಾರ್ಥಿ ಆರೋಪಿಸಿದ್ದಾರೆ.

ಇದರಿಂದ ಶಾಕ್​ಗೆ ಒಳಗಾದ ನಂದನ್ ಏನೊಂದೂ ಮಾತನಾಡಲಾಗದೇ ಪರೀಕ್ಷಾ ಕೇಂದ್ರದೊಳಗೆ ಹೋಗಿದ್ದಾನೆ. ಅಚ್ಚರಿಯ ಸಂಗತಿ ಎಂದರೆ, ಜನಿವಾರವನ್ನು ಕತ್ತರಿಸಿದ ಸಿಬ್ಬಂದಿ ಅದನ್ನು ಆತನ ಕೈಗೆ ಕೊಟ್ಟು ಒಳಗಡೆ ಕಳಿಸಿದ್ದಾರೆ. ಘಟನೆಯ ಬಗ್ಗೆ ಯಾರ ಬಳಿಯೂ ನಂದನ್‌ ಹೇಳಿಕೊಂಡಿರಲಿಲ್ಲ, ಆದರೆ ರಾಜ್ಯದಲ್ಲಿ ಇಂತಹುದೇ ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ಆತ ತನ್ನ ಅಣ್ಣನ ಬಳಿ ಘಟನೆಯ ಕುರಿತು ಹೇಳಿಕೊಂಡಿದ್ದಾನೆ. ಘಟನೆಯಿಂದ ಆಕ್ರೋಶಗೊಂಡಿರೋ ಕುಟುಂಬಸ್ಥರು, ಈ ಬಗ್ಗೆ ಸರಿಯಾದ ತನಿಖೆಯಾಗಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕೆಂದು ಆಗ್ರಹಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:CET 2025: ಜನಿವಾರ ವಿವಾದ; ಸಿಇಟಿ ವಂಚಿತ ವಿದ್ಯಾರ್ಥಿಗೆ ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶ

ಘಟನೆಯ ನಂತರ ಬ್ರಾಹ್ಮಣ ಸಮುದಾಯದವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಸೋಮವಾರ ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಇತ್ತ ಜಿಲ್ಲಾಡಳಿತವು ಕೂಡ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ನಿರ್ಧರಿಸಿದೆ. ಸಿಇಟಿ ಪರೀಕ್ಷೆ ವೇಳೆ ವಿದ್ಯಾರ್ಥಿಗಳು ಹಾಕಿದ್ದ ಜನಿವಾರ ತೆಗೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಆದಿಚುಂಚನಗಿರಿ ಪಿಯು ಕಾಲೇಜಿನ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರ ಸೂಚನೆ ಮೇರೆಗೆ ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಇಬ್ಬರು ಗೃಹ ರಕ್ಷಕರನ್ನು ಅಮಾನತುಗೊಳಿಸಿದ್ದು, ಸಿಇಟಿ ನಡೆಸುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ವರದಿ ಸಲ್ಲಿಸಲಾಗಿದೆ.