Assault case: ರಾಯಚೂರಲ್ಲಿ ಅಮಾನವೀಯ ಕೃತ್ಯ; ಮಹಿಳೆಯನ್ನು ಮರಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಥಳಿತ
Assault case: ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿಯಲ್ಲಿ ಘಟನೆ ನಡೆದಿದೆ. ವ್ಯಕ್ತಿಯೊಬ್ಬರ ಸಾವಿಗೆ ಕಾರಣವಾಗಿದ್ದಾಳೆಂದು ಆರೋಪಿಸಿ ಮಹಿಳೆಯನ್ನು ಗ್ರಾಮಸ್ಥರ ಎದುರು ಮರಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಲಾಗಿದೆ.


ರಾಯಚೂರು: ವ್ಯಕ್ತಿಯೊಬ್ಬರ ಸಾವಿಗೆ ಕಾರಣವಾಗಿದ್ದಾಳೆಂದು ಆರೋಪಿಸಿ ಮಹಿಳೆಯನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ ಮಾಡಿರುವಂತಹ ಘಟನೆ (Assault case) ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿಯಲ್ಲಿ ನಡೆದಿದೆ. ಸ್ಥಳಕ್ಕೆ ಪೊಲೀಸರು ತೆರಳಿ, ಮಹಿಳೆಯನ್ನು ರಕ್ಷಿಸಿ, ಹಲ್ಲೆ ಆರೋಪದಡಿ ನಾಲ್ವರ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.
ಬಸವರಾಜ ನಾಯಕ, ಯಂಕಮ್ಮ, ದುರ್ಗಮ್ಮ, ರೇಣುಕಾ ಎಂಬುವವರು ಮಹಿಳೆ ಮೇಲೆ ಹಲ್ಲೆ ಮಾಡಿದ್ದು, ಬಸವರಾಜನ ಅಣ್ಣ ರಂಗಪ್ಪ ಸಾವಿಗೆ ಮಹಿಳೆ ಕಾರಣವೆಂದು ಆರೋಪಿಸಿದ್ದಾರೆ. 20 ದಿನಗಳ ಹಿಂದೆ ಮೂರ್ಛೆ ರೋಗದಿಂದ ರಂಗಪ್ಪ ಮೃತಪಟ್ಟಿದ್ದರು.
ರಂಗಪ್ಪಗೆ ಪರಿಚಯವಿದ್ದ ಮಹಿಳೆ ಜತೆ ತೆರಳಿದ್ದಾಗ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿತ್ತು. ಹೀಗಾಗಿ ಅನುಮಾನದ ಮೇಲೆ ಮಹಿಳೆಯನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ಮಾಡಿ ನಿಂದಿಸಲಾಗಿದೆ. ನೂರಾರು ಜನರ ಎದುರು ಮನಬಂದಂತೆ ಬೈದು, ಹಿಗ್ಗಾಮುಗ್ಗಾ ಥಳಿಸಲಾಗಿದೆ.
ಈ ಸುದ್ದಿಯನ್ನೂ ಓದಿ | Crime News: ತನ್ನ ಸಹಪಾಠಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲು ಸುಪಾರಿ ಕೊಟ್ಟ 7ನೇ ತರಗತಿ ವಿದ್ಯಾರ್ಥಿ!
ಮೈಸೂರು ಮಹಾರಾಣಿ ಕಾಲೇಜಿನ ಗೋಡೆ ಕುಸಿದು ಓರ್ವ ಸಾವು
ಮೈಸೂರು: ನಗರದ ಮಹಾರಾಣಿ ಕಾಲೇಜಿನಲ್ಲಿ ಶಿಥಿಲ ಕಟ್ಟಡದ ದುರಸ್ತಿ ವೇಳೆ ಗೋಡೆ ಕುಸಿದು, ಅವಶೇಷಗಳಡಿ ಸಿಲುಕಿದ್ದ ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ (Mysore News). ಮೈಸೂರಿನ ಗೌಸಿಯಾ ನಗರದ ನಿವಾಸಿ ಸದ್ದಾಂ ಮೃತ ಯುವಕ. ಅಗ್ನಿಶಾಮಕದಳ ಸಿಬ್ಬಂದಿ ಮತ್ತು ಪೊಲೀಸರಿಂದ ರಕ್ಷಣಾ ಕಾರ್ಯ ಮುಂದುವರಿದಿದೆ. ಮೈಸೂರಿನ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ಹೇಗಾಯ್ತು?
ಮಹಾರಾಣಿ ಕಾಲೇಜು ಕಟ್ಟಡ ಶಿಥಿಲಗೊಂಡಿದ್ದರಿಂದ ದುರಸ್ತಿ ಕಾರ್ಯ ನಡೆಯುತ್ತಿತ್ತು. ಕಿಟಕಿಗಳನ್ನು ತೆಗೆದು ಹಾಕುವ ವೇಳೆ ಕಟ್ಟಡ ಕುಸಿದಿದೆ. ಜೆಸಿಬಿ ಮೂಲಕ ಅವಶೇಷಗಳನ್ನು ತೆರವು ಮಾಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಶಾಸಕ ಹರೀಶ್ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಾರ್ಮಿಕರು ಹೊಸ ಕಟ್ಟಡ ನಿರ್ಮಾಣಕ್ಕಾಗಿ ಶಿಥಿಲಗೊಂಡಿದ್ದ ಕಟ್ಟಡವನ್ನು ಒಡೆಯುವ ಕೆಲಸ ಮಾಡುತ್ತಿದ್ದರು. ಹಳೆಯ ಕಟ್ಟಡದಲ್ಲಿದ್ದ ಸಾಮಗ್ರಿಯನ್ನು ತೆರವುಗೊಳಿಸಿದ ಬಳಿಕ ಮೂವರು ಕಾರ್ಮಿಕರು ಕಿಟಕಿಗಳನ್ನು ತೆರವು ಮಾಡಲು ಮುಂದಾಗಿದ್ದಾರೆ. ಆಗ ಗೋಡೆ ಕುಸಿದಿದೆ. ಇಬ್ಬರು ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದರು. ಅವಶೇಷಗಳಡಿ ಸಿಲುಕಿಕೊಂಡಿದ್ದ ಸದ್ದಾಂ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಶಾಸಕರಾದ ಹರೀಶ್ ಗೌಡ, ತನ್ವೀರ್ ಸೇಠ್ ಸೇರಿದಂತೆ ಹಲವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ, ನಗರ ಪೊಲೀಸ್ ಕಮಿಷನರ್ ಸೀಮಾ ಲಟ್ಕರ್ ಸೇರಿದಂತೆ ಸ್ಥಳದಲ್ಲೇ ಮೊಕ್ಕಂ ಹೂಡಿದ್ದಾರೆ.
ಈ ಸುದ್ದಿಯನ್ನೂ ಓದಿ: Koppal News: ಕೊಪ್ಪಳ ಫ್ಯಾಕ್ಟರಿಯಲ್ಲಿ ಕಾರ್ಬನ್ ಮಾನಾಕ್ಸೈಡ್ ಸೋರಿಕೆಯಾಗಿ ಒಬ್ಬ ಕಾರ್ಮಿಕ ಸಾವು, 10ಕ್ಕೂ ಹೆಚ್ಚು ಮಂದಿ ಅಸ್ವಸ್ಥ