ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bengaluru CID Inspector: ಕೇರಳ ಉದ್ಯಮಿಗಳನ್ನು ಬೆದರಿಸಿ 20 ಲಕ್ಷ ವಸೂಲಿ ಮಾಡಿದ ಸಿಐಡಿ ಇನ್ಸ್‌ಪೆಕ್ಟರ್; ದೂರಿನ ಬೆನ್ನಲ್ಲೇ ಎಸ್ಕೇಪ್‌!

ವ್ಯಾಪಾರ ಉದ್ದೇಶಕ್ಕಾಗಿ ಬಂದಿದ್ದ ಕೇರಳದ ಉದ್ಯಮಿಗಳು ಹಣದೊಂದಿಗೆ ಬೆಂಗಳೂರಿನ ಮಡಿವಾಳದ ಖಾಸಗಿ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದರು. ಈ ಬಗ್ಗೆ ಮಾಹಿತಿ ಪಡೆದಿದ್ದ ಸಿಐಡಿ ಇನ್ಸ್‌ಪೆಕ್ಟರ್ ಮಹೇಶ್ ಕನಕಗಿರಿ, ಗ್ಯಾಂಗ್‌ನೊಂದಿಗೆ ಹೋಟೆಲ್‌ಗೆ ತೆರಳಿ ಉದ್ಯಮಿಗಳಿಂದ 20 ಹಣ ವಸೂಲಿ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಕೇರಳ ಉದ್ಯಮಿಗಳನ್ನು ಬೆದರಿಸಿ 20 ಲಕ್ಷ ಪೀಕಿದ ಸಿಐಡಿ ಇನ್ಸ್‌ಪೆಕ್ಟರ್

-

Prabhakara R
Prabhakara R Jun 19, 2026 4:49 PM

ಬೆಂಗಳೂರು: ಸಿಐಡಿ ಇನ್ಸ್‌ಪೆಕ್ಟರ್ (Bengaluru CID Inspector) ಒಬ್ಬರು ಕೇರಳ ಮೂಲದ ವ್ಯಕ್ತಿಗಳನ್ನು ಬೆದರಿಸಿ ಬರೋಬ್ಬರಿ 20 ಲಕ್ಷ ರೂ. ಪೀಕಿರುವ ಪ್ರಕರಣ ( ನಗರದಲ್ಲಿ ಬೆಳಕಿಗೆ ಬಂದಿದೆ. ಸಿಐಡಿ ಇನ್ಸ್‌ಪೆಕ್ಟರ್ ಮಹೇಶ್ ಕನಕಗಿರಿ ವಿರುದ್ಧ ದರೋಡೆ ಆರೋಪ ಕೇಳಿಬಂದಿದ್ದು, ಸದ್ಯ ಪೊಲೀಸ್‌ ಅಧಿಕಾರಿ ನಾಪತ್ತೆಯಾಗಿದ್ದಾರೆ.

ವ್ಯಾಪಾರ ಉದ್ದೇಶಕ್ಕಾಗಿ ಕೇರಳದ ಉದ್ಯಮಿಗಳು ಹಣದೊಂದಿಗೆ ಮಡಿವಾಳದ ಖಾಸಗಿ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದರು. ಈ ಬಗ್ಗೆ ನಿಖರ ಮಾಹಿತಿ ಪಡೆದಿದ್ದ ಇನ್ಸ್‌ಪೆಕ್ಟರ್ ಮಹೇಶ್ ಕನಕಗಿರಿ, ಹ್ಯಾರಿಸ್, ಕುಪೇಂದ್ರ, ಶಪಿ ಮತ್ತು ಶಾನಿ ಎಂಬ ನಾಲ್ವರೊಂದಿಗೆ ಸೇರಿ ದರೋಡೆಗೆ ಪ್ಲ್ಯಾನ್ ಮಾಡಿದ್ದರು.

ಯೋಜನೆಯಂತೆ ಹೋಟೆಲ್‌ಗೆ ಸಿಐಡಿ ಪೊಲೀಸ್ ಜೀಪ್‌ನಲ್ಲೇ ಇನ್ಸ್‌ಪೆಕ್ಟರ್ ತೆರಳಿದ್ದರು. ಅವರ ಗ್ಯಾಂಗ್‌ನ ಇಬ್ಬರು ಹೋಟೆಲ್ ಕೋಣೆಗೆ ನುಗ್ಗಿ, ತಾವು ಪೊಲೀಸರು ಎಂದು ಇನ್ಸ್‌ಪೆಕ್ಟರ್‌ನ ಐಡಿ ಕಾರ್ಡ್ ತೋರಿಸಿ, ಅಕ್ರಮವಾಗಿ ಟ್ರೇಡಿಂಗ್ ಮಾಡಲು ಹಣ ತಂದಿದ್ದೀರಿ ಎಂದು ಉದ್ಯಮಿಗಳನ್ನು ಬೆದರಿಸಿದ್ದಾರೆ. ಬಳಿಕ ಅವರಿಂದ 20 ಲಕ್ಷ ರೂ.ಗಳನ್ನು ವಸೂಲಿ ಮಾಡಿ ಪರಾರಿಯಾಗಿದ್ದಾರೆ.

ದೂರಿನ ಬೆನ್ನಲ್ಲೇ ಇನ್ಸ್‌ಪೆಕ್ಟರ್ ಪರಾರಿ

ಆರಂಭದಲ್ಲಿ ಪೊಲೀಸರು ಇರಬಹುದು ಎಂದು ಹೆಸರಿದ್ದ ಕೇರಳದ ವ್ಯಕ್ತಿಗಳಿಗೆ ನಂತರ ಅನುಮಾನ ಮೂಡಿದೆ. ತಕ್ಷಣವೇ ಅವರು ಮಡಿವಾಳ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಪ್ರಕರಣದ ಗಂಭೀರತೆ ಅರಿತು ತಕ್ಷಣವೇ ತನಿಖೆಗೆ ಇಳಿದ ಮಡಿವಾಳ ಪೊಲೀಸರು, ರಾತ್ರೋರಾತ್ರಿ ಕಾರ್ಯಾಚರಣೆ ನಡೆಸಿ ದರೋಡೆ ಗ್ಯಾಂಗ್‌ನಲ್ಲಿದ್ದ ಕುಪೇಂದ್ರ ಎಂಬಾತನನ್ನು ಬಂಧಿಸಿದ್ದಾರೆ. ಆರೋಪಿಯ ವಿಚಾರಣೆ ನಡೆಸಿದಾಗ ಇಡೀ ದರೋಡೆ ಪ್ರಕರಣದ ಅಸಲಿ ಕಿಂಗ್‌ಪಿನ್ ಸಿಐಡಿ ಇನ್ಸ್‌ಪೆಕ್ಟರ್ ಮಹೇಶ್ ಕನಕಗಿರಿ ಎಂಬ ಸತ್ಯ ಬಾಯ್ಬಿಟ್ಟಿದ್ದಾನೆ.

Bengaluru Mobile Theft: ಮೊಬೈಲ್ ಕದ್ದು ಪರಾರಿಯಾಗುತ್ತಿದ್ದ ಕಳ್ಳನಿಗೆ ಹೃದಯಾಘಾತ; ಓಡಿ ಓಡಿ ಸುಸ್ತಾಗಿ ಸ್ಥಳದಲ್ಲೇ ಸಾವು!

ಕುಪೇಂದ್ರ ಅರೆಸ್ಟ್ ಆಗುತ್ತಿದ್ದಂತೆಯೇ ಇನ್ಸ್‌ಪೆಕ್ಟರ್ ಮಹೇಶ್ ಕನಕಗಿರಿ ಹಾಗೂ ಉಳಿದ ಮೂವರು ಆರೋಪಿಗಳು ನಾಪತ್ತೆಯಾಗಿದ್ದಾರೆ. ಸದ್ಯ ಪೊಲೀಸರು ಆರೋಪಿ ಕುಪೇಂದ್ರ ಮತ್ತು ದರೋಡೆಗೆ ಬಳಸಲಾಗಿದ್ದ ಸಿಐಡಿ ಜೀಪನ್ನು ಜಪ್ತಿ ಮಾಡಿದ್ದು, ತಲೆಮರೆಸಿಕೊಂಡಿರುವ ಖಾಕಿ ಅಧಿಕಾರಿ ಸೇರಿ ನಾಲ್ವರಿಗಾಗಿ ಬಲೆ ಬೀಸಿದ್ದಾರೆ.

ಮಹೇಶ್​​ ಕನಕಗಿರಿ ಸಿವಿಲ್​​ ಇನ್ಸ್​​ಪೆಕ್ಟರ್​​ ಆಗಿದ್ದು, ಡೆಪ್ಯೂಟೇಶನ್​ ಮೇಲೆ ಸಿಐಡಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.