ಸಿಡ್ನಿ: ಐಸಿಸಿ ಚಾಂಪಿಯನ್ಸ್ ಟ್ರೋಫಿ(Champions Trophy) ಆರಂಭಕ್ಕೆ ಇನ್ನು ಬೆರಳೆಣಿಕೆಯ ದಿನಗಳು ಮಾತ್ರ ಬಾಕಿ ಉಳಿದಿವೆ. ಹೀಗಿರುವಾಗಲೇ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ತಂಡಕ್ಕೆ ಆಘಾತ ಎದುರಾಗಿದೆ. ತಂಡದ ನಾಯಕ ಪ್ಯಾಟ್ ಕಮಿನ್ಸ್(Pat Cummins) ಮತ್ತು ವೇಗಿ ಜೋಶ್ ಹ್ಯಾಸಲ್ವುಡ್(Josh Hazlewood) ಗಾಯದಿಂದಾಗಿ ಟೂರ್ನಿಯಲ್ಲಿ ಆಡುವ ಬಗ್ಗೆ ಅನುಮಾನ ಮೂಡಿದೆ. ಇದು ಆಸೀಸ್‌ಗೆ ಚಿಂತಿಸುವಂತೆ ಮಾಡಿದೆ.
ಕಮಿನ್ಸ್ ಚಾಂಪಿಯನ್ ಟ್ರೋಫಿಗೆ ಫಿಟ್ ಆಗುವುದು ಬಹುತೇಕ ಅನುಮಾನವೆಂದು ಆಸೀಸ್ ತಂಡದ ಮುಖ್ಯ ಕೋಚ್ ಆಂಡ್ರೋ ಮೆಕ್ಡೊನಾಲ್ಡ್ ಬುಧವಾರ ಬಹಿರಂಗಪಡಿಸಿದ್ದಾರೆ. ಒಂದೊಮ್ಮೆ ಕಮಿನ್ಸ್ ಗೈರಾದರೆ ನಾಯಕನ ಹುದ್ದೆ ಅಲಂಕರಿಸಲು ಸ್ಟೀವನ್ ಸ್ಮಿತ್ ಮತ್ತು ಟ್ರಾವಿಸ್ ಹೆಡ್ ರೇಸ್ನಲ್ಲಿದ್ದಾರೆ
ಭಾರತ ವಿರುದ್ಧದ ಬಾರ್ಡರ್-ಗಾವಸ್ಕರ್ ಟ್ರೋಫಿಯ ವೇಳೆ ಕಮಿನ್ಸ್ ಪಾದದ ನೋವಿಗೆ ಸಿಲುಕಿದ್ದರು. ಇದುವರೆಗೆ ಕಮಿನ್ಸ್ ಬೌಲಿಂಗ್ ಅಭ್ಯಾಸ ಆರಂಭಿಸಿಲ್ಲ. ಹೀಗಾಗಿ ಅವರು ಆಡುವುದು ಅನುಮಾನ ಎನ್ನುವಂತಿದೆ. ಆಲ್ರೌಂಡರ್ಗಳಾದ ಆರನ್ ಹಾರ್ಡಿ ಮತ್ತು ಮಾರ್ಕಸ್ ಸ್ಟೋಯಿನಿಸ್ ಕೂಡ ಗಾಯದ ಭೀತಿ ಎದುರಿಸುತ್ತಿದ್ದಾರೆ.
ಭಾರತಕ್ಕೂ ಗಾಯದ ಚಿಂತೆ
ಭಾರತ ತಂಡಕ್ಕೂ ಗಾಯದ ಚಿಂತೆ ಎದುರಾಗಿದೆ. ಪ್ರಧಾನ ವೇಗಿ ಜಸ್‌ಪ್ರೀತ್ ಬುಮ್ರಾ ಬೆನ್ನು ನೋವಿನ ಕಾರಣದಿಂದ ಟೂರ್ನಿಗೆ ಅಲಭ್ಯರಾಗುವ ಸಾಧ್ಯತೆ ಅಧಿಕ ಎನ್ನಲಾಗಿದೆ. ಸದ್ಯ ಬುಮ್ರಾ ಎನ್‌ಸಿಎಯಲ್ಲಿ ಪುನಶ್ಚೇತನ ಶಿಬಿರದಲ್ಲಿದ್ದಾರೆ.
ಇದನ್ನೂ ಓದಿ IND vs ENG: ʻಭಾರತ ಚಾಂಪಿಯನ್ಸ್ ಟ್ರೋಫಿ ಗೆಲ್ಲಲು ಈ ಇಬ್ಬರ ಫಾರ್ಮ್ ಮುಖ್ಯʼ-ಸುರೇಶ್ ರೈನಾ!
ಬುಮ್ರಾ ಫಿಟ್ನೆಸ್ ಪರಿಶೀಲನೆಯ ಬಳಿಕ ಎನ್‌ಸಿಎ ವೈದ್ಯಕೀಯ ತಂಡ ಅಜಿತ್ ಅಗರ್ಕರ್ ಸಾರಥ್ಯದ ಆಯ್ಕೆ ಸಮಿತಿಗೆ ತನ್ನ ವರದಿಯನ್ನು ಸಲ್ಲಿಸುತ್ತದೆ. ಆ ಬಳಿಕ ಬುಮ್ರಾ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡುವ ಬಗ್ಗೆ ಬಿಸಿಸಿಐ ವೈದ್ಯಕೀಯ ತಂಡ ಅಧಿಕೃತ ಮಾಹಿತಿ ನೀಡಲಿದೆ. ಒಂದೊಮ್ಮೆ ಬುಮ್ರಾ ಅಲಭ್ಯರಾದರೆ ಹರ್ಷಿತ್ ರಾಣಾ ಅವರು ಬುಮ್ರಾ ಸ್ಥಾನವನ್ನು ತುಂಬುವ ನಿರೀಕ್ಷೆ ಇದೆ.
ಫೆ.12 ಅಂತಿಮ ದಿನ
ಚಾಂಪಿಯನ್ಸ್ ಟ್ರೋಫಿಗೆ ತಂಡಗಳ ಅಂತಿಮ ಪಟ್ಟಿಯನ್ನು ಸಲ್ಲಿಸಲು ಫೆಬ್ರವರಿ 12 ಕೊನೇ ದಿನಾಂಕವಾಗಿದೆ. ಎಲ್ಲ ತಂಡಗಳು ಈ ದಿನಾಂಕದ ಮೊದಲು ತಮ್ಮ ತಂಡದಲ್ಲಿ ಬದಲಾವಣೆ ಇದ್ದರೆ ಮಾಡಿಕೊಳ್ಳಬಹುದು. ಆ ಬಳಿಕದ ಬದಲಾವಣೆಗೆ ಐಸಿಸಿ ಅನುಮತಿ ಕಡ್ಡಾಯ. ಅದು ಕೂಡ ಗಾಯಗೊಂಡು ಆಟಗಾರನೊಬ್ಬ ಟೂರ್ನಿಯಿಂದ ಹೊರಬಿದ್ದರೆ ಮಾತ್ರ.