ಶಶಾಂಕಣ
ಮನುಷ್ಯ ಮತ್ತು ಇತರ ಪ್ರಾಣಿಗಳ ರಕ್ತವನ್ನೇ ಆಹಾರವನ್ನಾಗಿಸಿಕೊಂಡಿರುವ, ವಿಸ್ಮಯ ಎನಿಸುವ ಜೀವನಕ್ರಮ ಹೊಂದಿರುವ ಈ ಜೀವಿಗಳು ನಮ್ಮ ರಾಜ್ಯದ ಕಾಡುಗಳಲ್ಲಿವೆ! ನಮ್ಮ ಹಳ್ಳಿಯ ಪಕ್ಕದಲ್ಲೇ ‘ಜವಳೆ ಜಡ್ಡು’ ಎಂಬ ಕುಗ್ರಾಮವೊಂದಿದೆ. ಅಂಥ ವಿಶೇಷವೇನಿಲ್ಲ- ಅದರ ಹೆಸರಿನಲ್ಲೇ ವಿಶೇಷ. ‘ಜವಳೆ’ ಎಂದರೆ ಸ್ಥಳೀಯ ಕನ್ನಡದಲ್ಲಿ ಜಿಗಣೆಯನ್ನು ಹೋಲುವ ಮೃದ್ವಂಗಿ; ಜಡ್ಡು ಎಂದರೆ ಹಸಿರು ಹುಲ್ಲು ಬೆಳೆವ ಪುಟ್ಟ ಜಾಗ. ಆ ಜಾಗದಲ್ಲಿ ಜವಳೆಗಳು ಜಾಸ್ತಿ ಇವೆಯಂತೆ; ಹುಲ್ಲನ್ನು ಮೇಯಲು ಬರುವ ಕೋಣ, ಎಮ್ಮೆ, ಹಸುಗಳ ಮೂಗಿಗೆ ಕಚ್ಚಿಕೊಳ್ಳುವ ಇವು, ರಕ್ತ ಹೀರುತ್ತವೆಂಬ ನಂಬಿಕೆ. ಇವು ತುಸು ಅಪರೂಪದ ಪ್ರಭೇದದವು ಇರಬಹುದೇನೋ.
ಈಗ ನಮ್ಮೂರಿನಲ್ಲಿ ಸಾಮಾನ್ಯವಾಗಿ ಕಾಣಸಿಗುವ ‘ಜವಳೆ’ಯ ಪ್ರಭೇದಗಳು ರಕ್ತ ಹೀರುವುದಿಲ್ಲ. ನೆಲದ ಮೇಲೆ ಸಿಂಬಳದಂಥ ಗೆರೆಯನ್ನು ಮೂಡಿಸುತ್ತಾ ನಿಧಾನವಾಗಿ ತೆವಳುವ ಇವು ಮಳೆಗಾಲ ದಲ್ಲಿ ಹೇರಳವಾಗಿ ಕಾಣಸಿಗುತ್ತವೆ. ನೀರಿನ ಅಂಶವಿರುವ ಜೌಗು ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣ ಸಿಗುವ ಇವು ನೋಡಲು ಮೃದು, ಒಂದೆರಡು ಅಂಗುಲ ಉದ್ದ, ಮೇಲ್ನೋಟಕ್ಕೆ ಅಸಹ್ಯ ಹುಟ್ಟಿಸುವ ಜೀವಿಗಳು.
ಗೊಣ್ಣೆಯ ಪುಟ್ಟ ರಾಶಿಯೇ ಚಲಿಸುವಂತೆ ಕಾಣಿಸುವ ‘ಜವಳೆ’ಗಳ ಸಂಬಂಧಿಗಳು ನಮ್ಮ ರಾಜ್ಯದ ಎಲ್ಲೆಡೆ ಕಾಣಸಿಗುತ್ತವೆ. ಬೆಂಗಳೂರಿನಂಥ ಕಾಂಕ್ರೀಟು ಕಾಡನ್ನು ಹೊಂದಿರುವ ನಗರದಲ್ಲೂ, ಮಳೆ ಬಂದಾಗ ಅಲ್ಲಲ್ಲಿ ಪುಟ್ಟ ಜವಳೆಗಳು ನಿಧಾನವಾಗಿ ಅತ್ತಿತ್ತ ತೆವಳುತ್ತಾ ಸಾಗುವುದನ್ನು ಕಾಣ ಬಹುದು.
ಇದನ್ನೂ ಓದಿ: Shashidhara Halady Column: ದೆಹಲಿಯಲ್ಲೊಂದು ಆನೆಯ ಮೆರವಣಿಗೆ !
ಇವು ಮನುಷ್ಯರ ತಂಟೆಗೆ ಬರುವುದಿಲ್ಲ.ಆದರೆ ‘ಇಂಬಳ’ಗಳು (ಉಂಬುಳು, ಜಿಗಣೆ, ಲೀಚ್) ಮಾತ್ರ ನಿಜಾರ್ಥದ ರಕ್ತಪಿಪಾಸುಗಳೇ ಸರಿ! ಇಂಬಳ ಅಥವಾ ಜಿಗಣೆಯಿಂದ ಕಚ್ಚಿಸಿಕೊಂಡು, ನಮಗೆ ಗೊತ್ತಿಲ್ಲದಂತೆ ಹಲವು ನಿಮಿಷಗಳ ಕಾಲ ರಕ್ತದಾನ ಮಾಡಿ, ಕೊನೆಗೊಮ್ಮೆ ಅಕಸ್ಮಾತ್ ಎಂಬಂತೆ ಕಾಲಿಗೋ, ಕೈಗೋ ಕಚ್ಚಿಹಿಡಿದಿರುವ ಅವುಗಳನ್ನು ನೋಡಿದಾಗ, ಮನಸ್ಸಿಗಾಗುವ ರೇಜಿಗೆ ಅಷ್ಟಿ ಷ್ಟಲ್ಲ.
ಮಲೆನಾಡಿನ ಕಾಡುಗಳಲ್ಲಿ, ಮನೆಯ ಸುತ್ತಮುತ್ತ, ಹತ್ತಿರದ ತೋಟಗಳಲ್ಲಿ ಹೇರಳವಾಗಿರುವ ಇಂಬಳಗಳ ಪ್ರತಾಪವು ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯಲ್ಲಿ ವರ್ಣರಂಜಿತವಾಗಿ ಮೂಡಿಬಂದಿದೆ. ಮಳೆಗಾಲದ ಒಂದು ದಿನ, ಕಾಡುದಾರಿಯಲ್ಲಿ ನಡೆದು ಬರುವ ನಾಯಿಗುತ್ತಿಯ ಮೈತುಂಬಾ ಕಚ್ಚಿಕೊಂಡ ಇಂಬಳಗಳು, ಆತನ ‘ಗೌಪ್ಯ’ ಜಾಗಗಳನ್ನೂ ಬಿಟ್ಟಿರಲಿಲ್ಲ!
ನಾಯಿಗುತ್ತಿಯ ನಾಯಿಯ ಮೈಮೇಲೂ ಇಂಬಳಗಳ ಕಚ್ಚಿಕೊಂಡು, ರಕ್ತ ಹೀರುತ್ತಿದ್ದವು. ನಾನು ಮೊದಲು ಇಂಬಳವನ್ನು(ಜಿಗಣೆ) ನೋಡಿದ್ದು, ‘ಕಬ್ಬಿನಾಲೆ’ ಎಂಬ ಹಳ್ಳಿಯಲ್ಲಿ. ಹೆಬ್ರಿಯ ಸಮೀಪ, ಆಗುಂಬೆಯ ಕಾಡಿನ ತಪ್ಪಲು ಎನ್ನಬಹುದಾದ ಜಾಗದಲ್ಲಿರುವ ಕಬ್ಬಿನಾಲೆಯಲ್ಲಿ ಕಾಡು, ಬೆಟ್ಟ, ಪರ್ವತ, ಜಲಪಾತ, ಪ್ರಪಾತಗಳದ್ದೇ ಕಾರುಬಾರು. ಹಸಿರು ಅಲ್ಲಿ ಮಲೆತು ಮೆರೆದಿದೆ.
ಆ ಬೆಟ್ಟಗುಡ್ಡಗಳ ನಡುವೆ, ಕಾಡಿನ ನಡುವೆ ಕೃಷಿ ಕೆಲಸ ಮಾಡಿಕೊಂಡಿರುವ ನೂರಾರು ಕುಟುಂಬ ಗಳಿವೆ. ನನ್ನ ಬಾಲ್ಯದಲ್ಲಿ, ಒಮ್ಮೆ ಅಲ್ಲಿಗೆ ಹೋಗಿದ್ದಾಗ ಮಳೆಗಾಲ ಆಗಷ್ಟೇ ಆರಂಭವಾಗಿತ್ತು. ಅಲ್ಲಿದ್ದ ನಮ್ಮ ಬಂಧುಗಳ ಮನೆಯಿಂದ ಹೊರಗೆ ಕಾಲಿಟ್ಟರೆ, ಒಂದು ದಿಕ್ಕಿನಲ್ಲಿ ಅಡಕೆ ತೋಟ, ಇನ್ನೊಂದು ದಿಕ್ಕಿನಲ್ಲಿ ಕಾಡು. ಅಡಕೆ ತೋಟದ ನಡುವೆ ಸಾಗುವ ದಾರಿಯ ಜಾಡಿನಲ್ಲಿ ಎರಡು ಹೆಜ್ಜೆ ನಡೆದರೆ ಸಾಕು, ಇಂಬಳಗಳು ನಮ್ಮ ಕಾಲನ್ನು ಕಚ್ಚಿ ಹಿಡಿಯುವುದು ಖಚಿತ; ತುಸುವೂ ನೋವೇ ಆಗದಂತೆ ಅವು ಕಚ್ಚಿ ಹಿಡಿದು, ಕಾಲಿನ ಬೆರಳಿನ ಸಂದಿಯಲ್ಲಿ ಕುಳಿತವು ಎಂದರೆ, ರಕ್ತ ದಾನ ಖಚಿತ. ಮೊದಲ ಬಾರಿ ಇಂಬಳದಿಂದ ಕಚ್ಚಿಸಿಕೊಳ್ಳುವ ನಗರಿಗರು, ಪೇಟೆಯ ಮಂದಿ, ಹೌಹಾರಿ, ‘ಅಯ್ಯೋ. ಇಂಬಳ, ಜಿಗಣೆ’ ಎಂದು ಕೂಗಿ, ಥಕ ಥೈಎಂದು ಕುಣಿದಾಡುವುದೂ ಖಚಿತ!
ನಾನು ‘ಚೆನ್ನಾಗಿ’ ಇಂಬಳಗಳಿಂದ ಕಚ್ಚಿಸಿಕೊಂಡದ್ದು ಕೊಡಚಾದ್ರಿ ಪರ್ವತಕ್ಕೆ ಚಾರಣ ಹೋಗಿ ದ್ದಾಗ. ಕೊಲ್ಲೂರು ಸನಿಹದಲ್ಲಿರುವ, ಸುಮಾರು 4400 ಅಡಿ ಎತ್ತರವಿರುವ ಈ ಪರ್ವತದ ಸುತ್ತಲೂ ದಟ್ಟವಾದ ಕಾಡು. ಒಮ್ಮೆ, ಮಳೆಗಾಲದ ಚಾರಣದ ಅನುಭವ ಪಡೆಯಲೆಂದು, ನಮ್ಮ ಕಾಲೇಜಿನ ಉಪನ್ಯಾಸಕರಾಗಿದ್ದ ಜಯರಾಮ್ ಅವರ ಜತೆ ಕೊಡಚಾದ್ರಿಗೆ ನಡೆದು ಹೊರಟಿದ್ದೆವು.
ನಾಗೋಡಿಯ ಬಳಿ ಬಸ್ ಇಳಿದು, ಕಾಡುದಾರಿಯನ್ನುತುಳಿದ ತಕ್ಷಣ ಇಂಬಳಗಳು ನಮ್ಮ ಕಾಲನ್ನು ಮುತ್ತಿಕೊಂಡವು. ‘ಈಗ ಮಳೆಗಾಲ, ಇಲ್ಲೆಲ್ಲಾ ಜಿಗಣೆ ಜಾಸ್ತಿ ಉಂಟು. ಅವುಗಳ ಕುರಿತು ನೀವು ಗಮನ ನೀಡುವುದು ಬೇಡ ಆಯ್ತಾ. ಕೊಡಚಾದ್ರಿ ತುದಿಗೆ ಹೋದ ನಂತರ, ತೆಗೆದು ಬಿಸಾಕಿದರೆ ಸರಿ’ ಎಂದು ಜಯರಾಮರು ಚಾರಣದ ಆರಂಭದಲ್ಲೇ ಸಲಹೆ ನೀಡಿದ್ದರು.
ಅದಕ್ಕೂ ಮುಂಚೆ ಕೆಲವು ಕಾಡುಗಳಲ್ಲಿ ಜಿಗಣೆಗಳಿಂದ ಕಚ್ಚಿಸಿಕೊಂಡಿದ್ದ ಅನುಭವ ಇದ್ದುದರಿಂದ, ಚುರುಕಾಗಿ ಚಾರಣದ ನಡಿಗೆಯನ್ನು ಮುಂದುವರಿಸಿದೆವು. ಆದರೆ, ಆ ಮಳೆಗಾಲದ ಸಮಯದಲ್ಲಿ, ಆ ದಾರಿಯಲ್ಲಿ ಅವುಗಳ ದಟ್ಟಣೆ, ಸಂಖ್ಯೆ, ಕುಳಿತಲ್ಲೇ ತಮ್ಮ ತಲೆಯನ್ನಾಡಿಸುವ ಹಾವ ಭಾವ, ನಮ್ಮ ಕಾಲನ್ನು ಕಚ್ಚಿ ಹಿಡಿಯುವ ವೇಗ ಎಲ್ಲವೂ ಬೆರಗನ್ನೇ ಹುಟ್ಟಿಸಿತು!
ಶೂಸ್, ಸಾಕ್ಸ್ ಧರಿಸಿದ್ದ ಕೆಲವರು, ಅದರೊಳಗೆ ಇಂಬಳ ತೂರಲಾರದು ಎಂದು ಧೈರ್ಯವಾಗಿ ನಡೆಯುತ್ತಿದ್ದರು. ಒಂದೆರಡು ಕಿ.ಮೀ. ನಡೆದ ನಂತರ, ಶೂ ಬಿಚ್ಚಿ ನೋಡಿದರೆ, ಅದಾವ ಮಾಯ ದಲ್ಲೋ ಹತ್ತಾರು ಇಂಬಳಗಳು ಅವರ ಕಾಲಿನ ಬೆರಳಿನ ಸಂದಿಯಲ್ಲಿ ಸೇರಿ ಕುಳಿತಿದ್ದವು; ಮಾತ್ರ ವಲ್ಲ, ರಕ್ತ ಹೀರಿ, ಕೆಂಪನೆಯ ಪುಟ್ಟ ಗೋಲಿಗಳಂತಾಗಿದ್ದವು! ನಾವು ನಡೆಯುತ್ತಿದ್ದ ದಾರಿಯ ಎರಡೂ ಬದಿ ನೆಲದ ಮೇಲೆ ಕೂತು, ತಮ್ಮ ತಲೆಯನ್ನು ಅತ್ತಿತ್ತ ಆಂಟೆನಾದ ರೀತಿ ಅಲ್ಲಾಡಿಸುತ್ತಾ, ನಾವು ಹತ್ತಿರ ಸಾಗಿದ ಕೂಡಲೆ, ಚಕ್ಕನೆ ಕಚ್ಚಿ ಹಿಡಿಯುವ ಚಾಕಚಕ್ಯತೆ ಜಿಗಣೆಗಿದೆ!
ನೆಲದ ಮೇಲೆ ಮಾತ್ರವಲ್ಲ, ದಾರಿಯ ಇಕ್ಕೆಲಗಳ್ಲೂ ಬೆಳೆದಿರುವ ಗಿಡ, ಪೊದೆ, ಬಳ್ಳಿ, ಮರದ ಕೊಂಬೆ ಗಳ ಮೇಲೆ ಕುಳಿತು, ಆ ದಾರಿಯಗುಂಟ ಸಾಗುವವರನ್ನು ಕಚ್ಚಿ, ರಕ್ತ ಹೀರುತ್ತವೆ! ಬೆತ್ತದ ಗಿಡಗಳ ನ್ನೇರಿ ಕುಳಿತು, ನಮ್ಮ ತಲೆಯ ಮೇಲೂ ಕುಳಿತುಕೊಳ್ಳಬಲ್ಲ ಜೀವಿ ಈ ಜಿಗಣೆ! ಕಾಲು, ಕೈ, ಮೈ ಎಲ್ಲಾ ಕಡೆ ಕಚ್ಚಿ, ರಕ್ತ ಹೀರಲು ಒಮ್ಮೆ ಆರಂಭಿಸಿದವೆಂದರೆ, ಇಂಬಳ ಅಥವಾ ಜಿಗಣೆಯನ್ನು ಕಿತ್ತು ಬಿಸಾಕುವುದು ಸುಲಭವೇನಲ್ಲ!
ಕಚ್ಚಿದ ಜಾಗವನ್ನು ಗುರುತಿಸಿ (ಅದೇ ಕಷ್ಟದ ಕೆಲಸ; ಅವು ಕಚ್ಚಿದ್ದೇ ಗೊತ್ತಾಗುವುದಿಲ್ಲ!) ಬೆರಳಿ ನಿಂದ ಕೀಳಲು ಯತ್ನಿಸಿದರೆ, ಕಪ್ಪನೆಯ, ಮೆತ್ತನೆಯ ಇಂಬಳವು ರಬ್ಬರಿನಂತೆ ಉದ್ದಕ್ಕೆ ಹಿಗ್ಗುತ್ತ ವೆಯೇ ವಿನಾ, ಬೇಗನೆ ತಮ್ಮ ಕಚ್ಚಿದ ಹಿಡಿತವನ್ನು ಬಿಡಲಾರದು! ಕೊನೆಗೂ ಕಷ್ಟಪಟ್ಟು ಕಿತ್ತು, ಎಸೆದು, ಎಲ್ಲಿ ಬಿತ್ತು ಎಂದು ಹುಡುಕತೊಡಗಿದರೆ, ಕಿತ್ತು ಹಾಕಿದ ಕೈಬೆರಳನ್ನೇ ಕಚ್ಚಿ, ರಕ್ತ ಹೀರ ಲಾರಂಭಿಸಬಲ್ಲವು!
ಬಹುದಿನಗಳಿಂದ ಆಹಾರವಿಲ್ಲದ ಮರಿಜಿಗಣೆಯನ್ನು ಬರಿಗಣ್ಣಿನಿಂದ ಗುರುತಿಸಿ, ಪತ್ತೆ ಮಾಡು ವುದೇ ಕಷ್ಟ- ಚಿಕ್ಕದಾದ, ಕಪ್ಪನೆಯ ಕಸದ ಚೂರಿನಂತೆ ಕಾಣಿಸುವ ಜಿಗಣೆ, ಕಾಲಿನ ಒಂದು ಮೂಲೆ ಯಲ್ಲಿ ಅಂಟಿಕೊಂಡಿರುತ್ತದೆ. ಹತ್ತಿಪ್ಪತ್ತು ನಿಮಿಷದ ನಂತರ, ಸ್ವಲ್ಪ ರಕ್ತ ಹೀರಿ, ತುಸು ದಪ್ಪ ಗಾಗುತ್ತವೆ. ಒಂದು ಗಂಟೆಯ ತನಕ ರಕ್ತ ಕಚ್ಚಿದ ಜಾಗದಲ್ಲೇ ಇದ್ದರೆ, ರಕ್ತವನ್ನು ಚೆನ್ನಾಗಿ ಹೀರಿ, ಕೆಂಪನೆಯ ಪುಟ್ಟ ಗೋಲಿಯಂತಾಗುತ್ತವೆ.
ಆ ಸ್ಥಿತಿಯಲ್ಲಿದ್ದಾಗ, ಅವುಗಳನ್ನು ಕಿತ್ತು ತೆಗೆಯುವುದು ಸುಲಭ. ಪೂರ್ತಿ ರಕ್ತ ಹೀರಿ, ದುಂಡನೆಯ ಗೋಲಿಯಂತಾದ ನಂತರ, ಅವು ತಮ್ಮಷ್ಟಕ್ಕೆ ಬಿದ್ದು ಹೋಗುತ್ತವಂತೆ. ಮಳೆಗಾಲದಲ್ಲಿ ಕೊಡ ಚಾದ್ರಿಗೆ ಚಾರಣ ಮಾಡಿದ ನಮ್ಮ ತಂಡದ ಸದಸ್ಯರು ಪ್ರತಿಯೊಬ್ಬರೂ ಕನಿಷ್ಠ 20-30 ಜಿಗಣೆಗಳಿ ಗಾದರೂ ಆ ಮಳೆಗಾಲದ ದಿನ ರಕ್ತದಾನ ಮಾಡಿದ್ದೆವು. ಅವು ಕಚ್ಚಿದ ಜಾಗಕ್ಕೆ ಸುಣ್ಣ, ಹೊಗೆಸೊಪ್ಪು ತಾಗಿಸಿದರೆ ಅವು ಬಿದ್ದುಹೋಗುತ್ತವೆಂದು ಗೊತ್ತಿದ್ದುದರಿಂದ, ನಮ್ಮ ಚಾರಣ ತಂಡದ ಕೆಲವು ಸದಸ್ಯರು ಹೊಗೆಸೊಪ್ಪಿನ ಚೂರನ್ನು ಕೈಲಿ ಹಿಡಿದಿದ್ದರು.
ಕಚ್ಚಿದ ಜಿಗಣೆ ಕಾಣಿಸಿದರೆ, ಹೊಗೆ ಸೊಪ್ಪನ್ನು ಅದಕ್ಕೆ ತಾಗಿಸಿದ ಕೂಡಲೆ ಉದುರು ಬೀಳುತ್ತವೆ, ನಿಜ. ಆದರೆ, ಚಾರಣ ಮಾಡುವಾಗ, ಎಷ್ಟು ಬಾರಿ ನಿಂತು, ಆ ಕೆಲಸ ಮಾಡುವುದು? ನಿಂತರೆ, ನೆಲದ ಮೇಲಿದ್ದ ನಾಲ್ಕಾರು ಜಿಗಣೆಗಳು ಕಾಲೇರಿ, ತಮ್ಮ ಬಾಯನ್ನು ಚರ್ಮಕ್ಕೆ ತಾಗಿಸಿ, ನೋವಾಗದಂತೆ ರಕ್ತ ಹೀರುವ ಕೆಲಸ ಆರಂಭಿಸುತ್ತಿದ್ದವು.
ಆಗಾಗ ನಿಂತು, ಹೊಗೆ ಸೊಪ್ಪು ತಾಗಿಸಿ, ಅವುಗಳನ್ನು ಬೀಳಿಸುವುದಕ್ಕಿಂತ, ವೇಗವಾಗಿ ನಡೆಯು ವುದೇ ಹೆಚ್ಚು ಸೂಕ್ತ, ಆಗ ಅವು ಕಾಲನ್ನೇರುವುದನ್ನು ಸ್ವಲ್ಪ ತಪ್ಪಿಸಬಹುದು ಎಂದು ನಮಗೆ ಅನುಭವವಾಯಿತು. ಚಾರಣ ಮುಗಿದ ನಂತರ, ಕೊಡಚಾದ್ರಿಯ ಶಿಖರದ ಬಳಿ ಕುಳಿತು, ಜಿಗಣೆ ಪತ್ತೆ ಅಭಿಯಾನ ಕೈಗೊಂಡಾಗ, ಪ್ರತಿಯೊಬ್ಬರ ಕಾಲುಗಳಲ್ಲೂ ಹತ್ತಾರು ಜಿಗಣೆಗಳು ಕಚ್ಚಿಕೊಂಡಿದ್ದವು. ಕೆಲವು ಜಿಗಣೆಗಳು, ಮೇಲೇರಿ ತೊಡೆಯ ತನಕವೂ ಬಂದಿದ್ದವು. ಕೆಲವರ ಭುಜದಲ್ಲೂ ರಕ್ತ ಹೀರುತ್ತಾ ಕುಳಿತಿದ್ದವು!
ಇದೇ ರೀತಿಯ ಇನ್ನೊಂದು ಚಾರಣವನ್ನು ಮಳೆಗಾಲದಲ್ಲಿ, ಬೆಳಕಲ್ ತೀರ್ಥ ಎಂಬ ಜಲಪಾತಕ್ಕೆ ಕೈಗೊಂಡಿದ್ದೆವು. ಅಲ್ಲೂ ಕಾಡುದಾರಿ. ದಾರಿಯುದ್ದಕ್ಕೂ ಜಿಗಣೆಯಿಂದ ಕಚ್ಚಿಸಿಕೊಳ್ಳುತ್ತಾ ಸಾಗಿ ದೆವು. ಒಂದೇ ಧೈರ್ಯ ಎಂದರೆ, ಅದರಿಂದ ನೋವಾಗುವುದಿಲ್ಲ. ಜತೆಗೆ, ನಮ್ಮ ರಾಜ್ಯದ ಕಾಡು ಗಳಲ್ಲಿರುವ ಜಿಗಣೆ ಅಥವಾ ಇಂಬಳ ಕಚ್ಚಿ, ಅವು ರಕ್ತ ಹೀರಿದರೆ, ಸಾಮಾನ್ಯವಾಗಿ ತೊಂದರೆ ಇಲ್ಲ; ಕಚ್ಚಿದ ಜಾಗದಲ್ಲಿ ನಂತರದ ದಿನಗಳಲ್ಲಿ ತುಸು ತುರಿಕೆ ಆಗಬಹುದು.
ಆದರೆ, ಅಪರೂಪಕ್ಕೆ ಕೆಲವರಿಗೆ ಅವುಗಳು ಕಚ್ಚಿದಾಗ, ಅಲರ್ಜಿ ಆಗಿ, ಆರೋಗ್ಯದ ಸಮಸ್ಯೆ ಕಾಣಿಸ ಬಹುದು ಎಂದು ತಜ್ಞರು ಗುರುತಿಸಿದ್ದಾರೆ. ಅಂಥ ಅಲರ್ಜಿ ನಮ್ಮ ರಾಜ್ಯದಲ್ಲಿ ದಾಖಲಾ ದಂತಿಲ್ಲ.ಕೊಡಚಾದ್ರಿ ಅಥವಾ ಇತರ ಕಾಡು ಪ್ರದೇಶಗಳಲ್ಲಿ ಮಳೆಗಾಲ ಕಳೆದ ನಂತರ ಚಾರಣ ಕೈಗೊಂಡರೆ, ಓಡಾಡಿದರೆ ಜಿಗಣೆಗಳ ಕಾಟವಿಲ್ಲ; ಚಳಿಗಾಲದ ಸಮಯಕ್ಕೆ ಅವು ತಮ್ಮ ದೀರ್ಘ ನಿದ್ರೆಗೆ ಜಾರುತ್ತವೆ.
ಅಕಸ್ಮಾತ್ ಮಳೆ ಬಂದರೆ, ಪುನಃ ಮೇಲೆದ್ದು, ದಾರಿಗಳ ಪಕ್ಕದಲ್ಲಿ ಕಾದು ಕುಳಿತಿರುತ್ತವೆ, ತಮ್ಮ ತಲೆಯನ್ನು ಎತ್ತಿಕೊಂಡು, ಯಾರಾದರೂ ಬಂದರೆ ಕಚ್ಚೋಣ, ರಕ್ತ ಕುಡಿಯೋಣ, ಹೊಟ್ಟೆ ತುಂಬಿಸಿಕೊಳ್ಳೋಣ ಎಂದು ಕಾತುರ ತೋರುತ್ತವೆ.
ಜೀವ ವಿಕಾಸದ ಹಿನ್ನೆಲೆಯಲ್ಲಿ ಇಂಬಳ ಅಥವಾ ಜಿಗಣೆಗಳ ಜೀವನಕ್ರಮವೇ ವಿಸ್ಮಯ ಹುಟ್ಟಿಸು ವಂಥದ್ದು. ನಮಗೆ ನೋವಾಗದಂತೆ ಕಚ್ಚುವ ಕಲೆ ಅವುಗಳಿಗೆ ಗೊತ್ತಿದೆ! ಸ್ಥಳೀಯ ನೋವು ನಿವಾರ ಕವನ್ನು (ಲೋಕಲ್ ಅನೆಸ್ತೀಷಿಯಾ) ಅವು ತಮ್ಮ ಬಾಯಿಯ ಜೊಲ್ಲಿನಲ್ಲೇ ಪಡೆದು ಕೊಂಡು ಬಂದಿವೆ ಮತ್ತು ಅದನ್ನು ಪ್ರಯೋಗಿಸಿ, ತಮ್ಮ ಆಹಾರವನ್ನು ಸಂಪಾದಿಸಬಹುದು ಎಂದು ಅವಕ್ಕೆ ಗೊತ್ತಿದೆ. ಅವುಗಳ ಆಹಾರ ಏನು? ಇನ್ನೇನು, ಪ್ರಾಣಿಗಳ ರಕ್ತ! ಕಾಡೆಮ್ಮೆ, ಕಾಡಂಚಿನಲ್ಲಿ ಓಡಾಡುವ ಜಾನುವಾರು, ಜಿಂಕೆ, ನಾಯಿ, ಮನುಷ್ಯ- ಇಂಥ ಜೀವಿಗಳ ರಕ್ತವೇ ಅವುಗಳ ಆಹಾರ! ಈ ರೀತಿ ರಕ್ತ ವಿರುವ ಪ್ರಾಣಿಗಳು ವಿಕಾಸಗೊಂಡ ನಂತರವೇ, ಜಿಗಣೆಗಳು ಈ ಭೂಮಿಯಲ್ಲಿ ವಿಕಾಸಗೊಂಡವೆ? ರಕ್ತವಿಲ್ಲದೇ ಅವುಗಳ ಜೀವನಚಕ್ರ ಮುಂದುವರಿಯುವುದೇ ಇಲ್ಲವಲ್ಲ!
ಇಂಥ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿಸಬಲ್ಲಷ್ಟು ವಿಸ್ಮಯಕಾರಿ ಜೀವನಕ್ರಮವನ್ನು ಜಿಗಣೆ ಹೊಂದಿವೆ. ನಮ್ಮ ರಾಜ್ಯದ ಪಶ್ಚಿಮಘಟ್ಟಗಳಲ್ಲಿ ಕಾಣಸಿಗುವ ಜಿಗಣೆಗಳು ಒಮ್ಮೆ ರಕ್ತ ಕುಡಿದು, ಸಂತೃಪ್ತಗೊಂಡ ನಂತರ, ತಮ್ಮ ಹಿಡಿತವನ್ನು ಸಡಿಲಿಸಿ ಬಿದ್ದುಹೋಗುತ್ತವೆ; ನಂತರ ಮುಂದಿನ ಮಳೆಗಾಲದ ತನಕ ಅವುಗಳಿಗೆ ಆಹಾರ ಬೇಡವಂತೆ ಎಂದು ನಮ್ಮೂರಿನವರು ಹೇಳುವುದುಂಟು.
ಆರು ತಿಂಗಳುಗಳ ಕಾಲ ಅವು ಕಾಡಿನ ಕಿಬ್ಬದಿಯಲ್ಲಿ ಬಿದ್ದುಕೊಂಡು, ಬೇಸಗೆಯ ತಾಪವನ್ನು, ಒಣಹವೆಯನ್ನು ಎದುರಿಸುತ್ತವೆ. ಪುನಃ ಮುಂಗಾರು ಮಳೆ ಬಿದ್ದ ಕೂಡಲೇ, ಪ್ರಾಣಿಗಳು ಮತ್ತು ಮನುಷ್ಯರು ಓಡಾಡುವ ದಾರಿಯ ಬದಿಯಲ್ಲಿ ಕುಳಿತು, ತಮ್ಮ ಮೂತಿಯನ್ನು ಅಲ್ಲಾಡಿಸುತ್ತಾ, ವಾಸನೆಯನ್ನು ಗ್ರಹಿಸುತ್ತಾ, ಚಕ್ಕನೆ ಚರ್ಮವನ್ನು ಕಚ್ಚಿ ಹಿಡಿದು, ರಕ್ತ ಹೀರಲು ಹೊಂಚು ಹಾಕು ತ್ತವೆ.
ರಕ್ತವನ್ನೇ ಪ್ರಧಾನ ಆಹಾರವನ್ನಾಗಿಸಿಕೊಂಡಿರುವ ಇಂಬಳ ಅಥವಾ ಜಿಗಣೆ ನಮ್ಮ ರಾಜ್ಯದ ಕಾಡುಗಳಲ್ಲಿರುವ ವಿಸ್ಮಯಕಾರಿ ರಕ್ತಪಿಪಾಸುಗಳು ಎಂಬುದರಲ್ಲಿ ಅನುಮಾನವಿಲ್ಲ. ನೀವಿನ್ನೂ ಜಿಗಣೆ ನೋಡಿಲ್ಲವೇ, ಅವುಗಳಿಂದ ಕಚ್ಚಿಸಿಕೊಂಡಿಲ್ಲವೆ? ಕಚ್ಚಿಸಿಕೊಳ್ಳಿ, ಜಿಗಣೆಯಂತೆ ಹಿಡಿತ ಎಂಬ ನುಡಿಗಟ್ಟಿನ ಅರ್ಥ ತಿಳಿಯಲು ಇದರಿಂದ ಸಾಧ್ಯ. ನಮ್ಮ ರಾಜ್ಯದಲ್ಲೇ ದೊರಕುವ ಇಂಥ ಅನು ಭವವನ್ನು ಒಮ್ಮೆಯಾದರೂ ಪಡೆಯಬೇಕು, ಅಲ್ಲವೆ? ಜತೆಗೆ, ನಮಗೆ ಗೊತ್ತಿಲ್ಲದಂತೆ, ನಮ್ಮ ರಕ್ತ ಹೀರುವವರು ಹೇಗೆ ಕೆಲಸ ಮಾಡಬಹುದು ಎಂಬುದನ್ನು ಅರ್ಥೈಸಿಕೊಳ್ಳಲು, ಜಿಗಣೆಗೆ ರಕ್ತ ದಾನ ಮಾಡುವುದು ಒಂದು ಸರಳ ವಿಧಾನ! ಸ್ವಲ್ಪ ಮಳೆ ಇರುವಾಗ, ಸಹ್ಯಾದ್ರಿ ಕಾಡುಗಳಲ್ಲಿ ನಾಲ್ಕಾರು ಹೆಜ್ಜೆ ಓಡಾಡಿ ನೋಡಿ; ಈ ವಿಸ್ಮಯಕಾರಿ ಜೀವಿಗಳನ್ನು ಪ್ರತ್ಯಕ್ಷವಾಗಿ ನೋಡಿ, ಅನುಭವಿಸ ಬಹುದು!