Champions Trophy: ಸೆಮೀಸ್ ತಲುಪಬಲ್ಲ 4 ತಂಡಗಳನ್ನು ಆರಿಸಿದ ಪಾರ್ಥಿವ್ ಪಟೇಲ್!
Parthiv Patel predicted four semi-finalists: ಫೆಬ್ರವರಿ 19 ರಂದು ಹೈಬ್ರಿಡ್ ಮಾದರಿಯಲ್ಲಿ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ನಡೆಯಲಿದೆ. ಈ ಮೆಗಾ ಟೂರ್ನಿಯಲ್ಲಿ ಸೆಮಿಫೈನಲ್ಸ್ ತಲುಪಬಲ್ಲ ನಾಲ್ಕು ತಂಡಗಳನ್ನು ಮಾಜಿ ಕ್ರಿಕೆಟಿಗರಾದ ಪಾರ್ಥಿವ್ ಪಟೇಲ್ ಹಾಗೂ ಕೆವಿನ್ ಪೀಟರ್ಸನ್ ಆರಿಸಿದ್ದಾರೆ.

ICC Champions Trophy

ನವದೆಹಲಿ: ಬಹು ನಿರೀಕ್ಷಿತ 2025ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಸೆಮಿಫೈನಲ್ಸ್ ತಲುಪಬಲ್ಲ ನಾಲ್ಕು ತಂಡಗಳನ್ನು ಆರಿಸಿದ ಮಾಜಿ ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್, ಅಫಘಾನಿಸ್ತಾನ ತಂಡ ಪ್ರಬಲ ಪೈಪೋಟಿ ನೀಡುವ ಮೂಲಕ ಅಚ್ಚರಿ ಫಲಿತಾಂಶ ನೀಡಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಫೆಬ್ರವರಿ 19 ರಂದು ಚಾಂಪಿಯನ್ಸ್ ಟ್ರೋಫಿ ಟೂರ್ನಿ ಆರಂಭವಾಗಲಿದ್ದು, ಪ್ರಶಸ್ತಿಗಾಗಿ ಎಂಟು ತಂಡಗಳು ಕಾದಾಟ ನಡೆಸಲಿವೆ.
ಐಸಿಸಿ ಟೂರ್ನಿಗಳಲ್ಲಿ ಹಸ್ಮತ್‌ವುಲ್ಲಾ ಶಾಹಿಡಿ ಸಾರಥ್ಯದ ಅಫಘಾನಿಸ್ತಾನ ತಂಡ ಅಚ್ಚರಿ ಫಲಿತಾಂಶ ನೀಡುತ್ತಿದ್ದು, 2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಫ್ಘನ್ ತಂಡ ಸೆಮಿಫೈನಲ್ ಆಡಿತ್ತು. ಅಲ್ಲದೆ 2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲೂ ಅದ್ಭುತ ಪ್ರದರ್ಶನ ತೋರಿತ್ತು. ಇದರ ಆಧಾರದ ಮೇಲೆ ಪಾರ್ಥಿವ್ ಪಟೇಲ್ ಅಫಘಾನಿಸ್ತಾನ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಪ್ರಬಲ ಪೈಪೋಟಿ ನೀಡಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವರುಣ್ ಚಕ್ರವರ್ತಿ ಇನ್, ಜಸ್‌ಪ್ರೀತ್ ಬುಮ್ರಾ ಔಟ್: ಚಾಂಪಿಯನ್ಸ್ ಟ್ರೋಫಿಗೆ ಭಾರತದ ಪರಿಷ್ಕೃತ ತಂಡ!
ಅಫಘಾನಿಸ್ತಾನ ತಂಡಕ್ಕೆ ಪಾರ್ಥಿವ್ ಪಟೇಲ್ ಬೆಂಬಲ
ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿದ ಪಾರ್ಥಿವ್ ಪಟೇಲ್, "ನನ್ನ ಆಯ್ಕೆಯಲ್ಲಿ ಭಾರತ ತಂಡವಿದೆ. ಅಲ್ಲದೆ ಐಸಿಸಿ ಟೂರ್ನಿಯಲ್ಲಿ ಉತ್ತಮ ದಾಖಲೆ ಹೊಂದಿರುವ ಪಾಕಿಸ್ತಾನ, ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಸೆಮಿಫೈನಲ್ಸ್‌ಗೆ ಲಗ್ಗೆ ಇಡಬಹುದು. ಅಲ್ಲದೆ ಅಫಘಾನಿಸ್ತಾನ ಪ್ರಬಲ ಪೈಪೋಟಿ ನೀಡುತ್ತದೆ. ಏಕದಿನ ಕ್ರಿಕೆಟ್‌ನಲ್ಲಿ ಆ ತಂಡ ಉತ್ತಮ ಪ್ರದರ್ಶನ ತೋರುತ್ತಿದೆ. 2023ರ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್ ಉತ್ತಮ ಪ್ರದರ್ಶನ ತೋರದಿದ್ದರೆ, ಅಫಘಾನಿಸ್ತಾನ ಸೆಮಿಫೈನಲ್‌ಗೇರುವ ಪ್ರಬಲ ತಂಡವಾಗುತ್ತಿತ್ತು. ಚಾಂಪಿಯನ್ಸ್ ಟ್ರೋಫಿಯಲ್ಲೂ ಆ ತಂಡದಿಂದ ಅಚ್ಚರಿ ಫಲಿತಾಂಶ ಮೂಡಿಬರಲಿದೆ," ಎಂದು ಪಾರ್ಥಿವ್ ಪಟೇಲ್ ಭವಿಷ್ಯ ನುಡಿದಿದ್ದಾರೆ.
ಭಾರತದ ವಿರುದ್ಧ 0-3 ಅಂತರದಲ್ಲಿ ಸೋತರೂ ಪರವಾಗಿಲ್ಲ, ಚಾಂಪಿಯನ್ಸ್ ಟ್ರೋಫಿ ಗೆಲ್ಲಬೇಕು: ಬೆನ್ ಡಕೆಟ್!
ಆಸ್ಟ್ರೇಲಿಯಾ ಸೆಮೀಸ್ ತಲುಪಲ್ಲ: ಕೆವಿನ್ ಪೀಟರ್ಸನ್
"ಈ ವಿಷಯ ಹೇಳಲು ತುಂಬಾ ಕಠಿಣವಾಗಿದೆ. ಆದರೆ ಇಂದು ಆಸೀಸ್ ವೇಗಿ ಮಿಚೆಲ್ ಸ್ಟಾರ್ಕ್ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಿಂದ ಹೊರನಡೆದ ಸುದ್ದಿ ಸ್ಪಷ್ಟವಾದ ನಂತರ, ಭಾರತ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ ಹಾಗೂ ನ್ಯೂಜಿಲೆಂಡ್ ಸೆಮಿಫೈನಲ್ಸ್‌ಗೆ ತಲುಪುವ ತಂಡಗಳಾಗಿ ಆಯ್ಕೆ ಮಾಡುತ್ತೇನೆ," ಎಂದು ಇಂಗ್ಲೆಂಡ್ ಮಾಜಿ ನಾಯಕ ಕೆವಿನ್ ಪೀಟರ್ಸನ್ ತಿಳಿಸಿದ್ದಾರೆ.
ಸ್ಟಾರ್ ಆಟಗಾರರ ಸೇವೆ ಕಳೆದುಕೊಂಡ ಆಸ್ಟ್ರೇಲಿಯಾ
ಚಾಂಪಿಯನ್ಸ್ ಟ್ರೋಫಿ ಟೂರ್ನಿ ಆರಂಭಕ್ಕೂ ಮುನ್ನ ಆಸ್ಟ್ರೇಲಿಯಾ ತನ್ನ ಸ್ಟಾರ್ ಆಟಗಾರರನ್ನು ಕಳೆದುಕೊಂಡಿದೆ. ತಮ್ಮ ವೈಯಕ್ತಿಕ ಕಾರಣಕ್ಕಾಗಿ ಮಿಚೆಲ್ ಸ್ಟಾರ್ಕ್, ಮಿಚೆಲ್ ಮಾರ್ಷ್ ಹಿಂದೆ ಸರಿದಿದ್ದರೆ, ಗಾಯದ ಸಮಸ್ಯೆಯಿಂದ ಪ್ಯಾಟ್ ಕಮಿನ್ಸ್, ಜಾಶ್ ಹೇಝಲ್‌ವುಡ್ ಸೇವೆ ಕಳೆದುಕೊಂಡಿದೆ. ಅಲ್ಲದೆ ತಮ್ಮ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ್ದರಿಂದ ಸ್ಟಾರ್ ಆಲ್‌ರೌಂಡರ್ ಮಾರ್ಕಸ್ ಸ್ಟೋಯ್ನಿಸ್ ಅವರನ್ನು ಸ್ಟೀವನ್ ಸ್ಮಿತ್ ಸಾರಥ್ಯದ ಆಸ್ಟ್ರೇಲಿಯಾ ಕಳೆದುಕೊಂಡಿದೆ.