ಭಾರತದ ವಿರುದ್ಧ 0-3 ಅಂತರದಲ್ಲಿ ಸೋತರೂ ಪರವಾಗಿಲ್ಲ, ಚಾಂಪಿಯನ್ಸ್ ಟ್ರೋಫಿ ಗೆಲ್ಲಬೇಕು: ಬೆನ್ ಡಕೆಟ್!
Ben Duckett on Champions Trophy: ಭಾರತ ತಂಡದ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು 3-0 ಅಂತರದಲ್ಲಿ ಸೋಲು ಅನುಭವಿಸಿದರೂ ಪರವಾಗಿಲ್ಲ, ಮುಂಬರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಗೆಲ್ಲುವುದು ನಮ್ಮ ಮುಖ್ಯ ಗುರಿಯಾಗಿದೆ ಎಂದು ಇಂಗ್ಲೆಂಡ್ ಓಪನಿಂಗ್ ಬ್ಯಾಟ್ಸ್‌ಮನ್ ಬೆನ್ ಡಕೆಟ್ ತಿಳಿಸಿದ್ದಾರೆ.
![ಇಂಗ್ಲೆಂಡ್ ತಂಡ ಚಾಂಪಿಯನ್ಸ್ ಟ್ರೋಫಿ ಗೆಲ್ಲಲಿದೆ: ಬೆನ್ ಡಕೆಟ್!](https://cdn-vishwavani-prod.hindverse.com/media/original_images/Ben_Ducket.jpg)
Ben Duckett
![Profile](https://vishwavani.news/static/img/user.png)
ನವದೆಹಲಿ: ಭಾರತ ವಿರುದ್ಧದ ಏಕದಿನ ಸರಣಿಯನ್ನು ಗೆಲ್ಲಬೇಕೆಂದು ನಾವು ಇಲ್ಲಿಗೆ ಬಂದಿಲ್ಲ ಹಾಗೂ 3-0 ಅಂತರದಲ್ಲಿ ಸೋತರೂ ಪರವಾಗಿಲ್ಲ. ಮುಂಬರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲಬೇಕೆಂದು ಬಯಸುತ್ತಿದ್ದೇವೆ. ಹಾಗಾಗಿ ಈ ಸರಣಿಯಲ್ಲಿ ತಯಾರಿ ನಡೆಸುತ್ತಿದ್ದೇವೆಂದು ಎಂದು ಇಂಗ್ಲೆಂಡ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಬೆನ್ ಡಕೆಟ್ ತಿಳಿಸಿದ್ದಾರೆ.
ಆರಂಭಿಕ ಎರಡೂ ಪಂದ್ಯಗಳಲ್ಲಿ ಸೋಲು ಅನುಭವಿಸಿರುವ ಇಂಗ್ಲೆಂಡ್ ತಂಡ, ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಏಕದಿನ ಸರಣಿಯನ್ನು ಕೈಚೆಲ್ಲಿಕೊಂಡಿದೆ. ಇದೀಗ ಉಭಯ ತಂಡಗಳು ಫೆಬ್ರವರಿ 12 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುವ ಮೂರನೇ ಹಾಗೂ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಕಾದಾಟ ನಡೆಸಲಿವೆ. ಈ ಪಂದ್ಯದ ನಿಮಿತ್ತ ಮಾಧ್ಯಮಗಳ ಜೊತೆ ಮಾತನಾಡಿದ ಬೆನ್ ಡಕೆಟ್, ಭಾರತದ ವಿರುದ್ದ ಏಕದಿನ ಸರಣಿ ಸೋತರೂ ಪರವಾಗಿಲ್ಲ, ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆಲ್ಲುವುದು ಮುಖ್ಯ ಎಂದು ಹೇಳಿಕೊಂಡಿದ್ದಾರೆ.
IND vs ENG 3rd ODI: ಸರಣಿ ಕ್ಲೀನ್‌ಸ್ವೀಪ್ ಯೋಜನೆಯಲ್ಲಿ ಭಾರತ
ಚಾಂಪಿಯನ್ಸ್ ಟ್ರೋಫಿ ಗೆಲ್ಲುವುದು ನಮ್ಮ ಗುರಿ: ಬೆನ್ ಡಕೆಟ್
"ನಾವು ಒಂದೇ ಒಂದು ಸಂಗತಿಯೊಂದಿಗೆ ಇಲ್ಲಿಗೆ ಬಂದಿದ್ದೇವೆ, ಅದೇನೆಂದರೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆಲ್ಲುವುದು. ನಾವು ಪ್ರಶಸ್ತಿಯನ್ನು ಗೆಲ್ಲುತ್ತೇವೆಂಬ ನಂಬಿಕೆ ಇನ್ನೂ ಇದೆ. ಕೆಲ ಆಟಗಾರರು ಫಾರ್ಮ್ ಅನ್ನು ಕಂಡುಕೊಳ್ಳುವ ಹಾದಿಯಲ್ಲಿದ್ದಾರೆ," ಎಂದು ಬೆನ್ ಡಕೆಟ್ ತಿಳಿಸಿದ್ದಾರೆ.
"ಇದು ನಿಜಕ್ಕೂ ದೊಡ್ಡ ಸರಣಿ, ಆದರೆ ಚಾಂಪಿಯನ್ಸ್ ಟ್ರೋಫಿ ಟೂರ್ನಿಯು ದೊಡ್ಡ ಸ್ಪರ್ಧೆಯಾಗಿದೆ. ಭಾರತದ ಎದುರು ಏಕದಿನ ಸರಣಿಯನ್ನು 3-0 ಅಂತರದಲ್ಲಿ ಸೋತರೂ ಪರವಾಗಿಲ್ಲ, ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಅವರನ್ನು ಸೋಲಿಸುತ್ತೇವೆ. ನಾವು ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದರೆ, ಭಾರತದ ಸರಣಿಯಲ್ಲಿನ ನಮ್ಮ ಸೋಲನ್ನು ಯಾರೂ ನೋಡುವುದಿಲ್ಲ," ಎಂದು ಇಂಗ್ಲೆಂಡ್ ಆರಂಭಿಕ ಹೇಳಿದ್ದಾರೆ.
Cuttack 🛬 Ahmedabad #TeamIndia have arrived for the Third and the Final #INDvENG ODI 👌👌@IDFCFIRSTBank pic.twitter.com/JOd2fCAkgU
— BCCI (@BCCI) February 10, 2025
ಕಳೆದ ಎರಡು ವೈಟ್ ಬಾಲ್ ಸರಣಿಗಳಲ್ಲಿ ಇಂಗ್ಲೆಂಡ್ ನಿರೀಕ್ಷಿತ ಪ್ರದರ್ಶನವನ್ನು ತೋರಿಲ್ಲ. 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಹೀನಾಯ ಪ್ರದರ್ಶನ ತೋರಿದ್ದ ಇಂಗ್ಲೆಂಡ್, ನಂತರ 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಹಣಾಹಣಿಯಲ್ಲಿ ಭಾರತ ತಂಡದ ಎದುರು ಸೋಲು ಅನುಭವಿಸಿತ್ತು. ತನ್ನ ತಪ್ಪುಗಳನ್ನು ತಿದ್ದಿಕೊಂಡು ಭಾರತದ ಎದುರು ಕೊನೆಯ ಏಕದಿನ ಪಂದ್ಯವನ್ನು ಗೆದ್ದು, ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಆಂಗ್ಲರು ಸಜ್ಜಾಗಲಿದ್ದಾರೆ.
ಮೂರನೇ ಏಕದಿನ ಪಂದ್ಯಕ್ಕೆ ಇಂಗ್ಲೆಂಡ್ ಸಂಭಾವ್ಯ ಪ್ಲೇಯಿಂಗ್ XI
ಬೆನ್ ಡಕೆಟ್, ಫಿಲ್ ಸಾಲ್ಟ್ (ವಿ.ಕೀ), ಜೋ ರೂಟ್, ಹ್ಯಾರಿ ಬ್ರೂಕ್, ಜೋಸ್ ಬಟ್ಲರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜೇಮಿ ಓವರ್ಟನ್, ಬ್ರೈಡೆನ್ ಕಾರ್ಸ್, ಜೋಫ್ರಾ ಆರ್ಚರ್, ಆದಿಲ್ ರಶೀದ್, ಮಾರ್ಕ್ ವುಡ್