Champions Trophy Squad: ತಂಡದ ಆಯ್ಕೆ ಬಗ್ಗೆ ಕೋಚ್ ಗಂಭೀರ್ ಅಸಮಾಧಾನ
Champions Trophy Squad: 25 ವರ್ಷದ ಗಿಲ್ ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ನಿರೀಕ್ಷಿತ ನಿರ್ವಹಣೆ ತೋರಿರಲಿಲ್ಲ. ಪಾಂಡ್ಯ ಕಳೆದ ವರ್ಷ ನಡೆದಿದ್ದ ಟಿ20 ವಿಶ್ವಕಪ್‌ನಲ್ಲಿ ಉಪನಾಯಕನಾಗಿದ್ದರು.
ಮುಂಬಯಿ: ಮುಂದಿನ ತಿಂಗಳು ನಡೆಯುವ ಚಾಂಪಿಯನ್ಸ್ ಟ್ರೋಫಿ(Champions Trophy)ಗೆ ಆಯ್ಕೆ ಮಾಡಿರುವ ಭಾರತ ತಂಡದ(Champions Trophy Squad) ಕುರಿತು ಪ್ರಧಾನ ಕೋಚ್ ಗೌತಮ್ ಗಂಭೀರ್(Gautam Gambhir)ಗೆ ಅಸಮಾಧಾನ ಉಂಟಾಗಿದೆ ಎಂದು ವರದಿಯಾಗಿದೆ. ಇದಕ್ಕೆ ಕಾರಣ ಗಂಭೀರ್ ಅಭಿಪ್ರಾಯಕ್ಕೆ ಮನ್ನಣೆ ಸಿಗದಿರುವುದು ಎಂದು ವರದಿಯಾಗಿದೆ.
ಆಟಗಾರರ ಆಯ್ಕೆಗಾಗಿ ನಡೆದ ಸಭೆಯಲ್ಲಿ ಗಂಭೀರ್ ಅವರು ರಿಷಭ್ ಪಂತ್ ಬದಲು ಕೇರಳದ ಸ್ಟಂಪರ್ ಸಂಜು ಸ್ಯಾಮ್ಸನ್ ಅವರನ್ನು ವಿಕೆಟ್ ಕೀಪರ್& ಬ್ಯಾಟರ್ ಆಗಿ ಆಯ್ಕೆ ಮಾಡಲು ಒಲವು ತೋರಿದ್ದರು. ಆದರೆ ನಾಯಕ ರೋಹಿತ್ ಶರ್ಮ(Rohit Sharma) ಮತ್ತು ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಇದನ್ನು ನಿರಾಕರಿಸಿದರು ಎನ್ನಲಾಗಿದೆ. ಇದು ಮಾತ್ರವಲ್ಲದೆ ಅನುಭವಿ ಹಾರ್ದಿಕ್ ಪಾಂಡ್ಯ ತಂಡದಲ್ಲಿರುವಾಗ ಶುಭಮನ್ ಗಿಲ್‌ಗೆ ಉಪನಾಯಕ ಸ್ಥಾನ ನೀಡಿದ್ದು ಕೂಡ ಗಂಭೀರ್ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ.
25 ವರ್ಷದ ಗಿಲ್ ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ನಿರೀಕ್ಷಿತ ನಿರ್ವಹಣೆ ತೋರಿರಲಿಲ್ಲ. ಪಾಂಡ್ಯ ಕಳೆದ ವರ್ಷ ನಡೆದಿದ್ದ ಟಿ20 ವಿಶ್ವಕಪ್‌ನಲ್ಲಿ ಉಪನಾಯಕನಾಗಿದ್ದರು. ಭಾರತ ಕಪ್ ಗೆಲ್ಲುವಲ್ಲಿ ಪಾಂಡ್ಯ ಕೊಡುಗೆ ಕೂಡ ಮಹತ್ವದಾಗಿತ್ತು. ಬ್ಯಾಟಿಂಗ್ ಜತೆಗೆ ಬೌಲಿಂಗ್‌ನಲ್ಲಿಯೂ ಅವರು ಮಿಂಚಿದ್ದರು.
ಬಿಸಿಸಿಐ ಸೂಚಿಸಿದಂತೆ ಭಾರತ ತಂಡದ ಪ್ರಕಟ ಮಧ್ಯಾಹ್ನ 12.30ಕ್ಕೆ ಆಗಬೇಕಿತ್ತು. ಆದರೆ ತಂಡ ಪ್ರಕಟವಾಗುವಾಗ 3 ಗಂಟೆ ಕಳೆದಿತ್ತು. ಇದಕ್ಕೆ ಕಾರಣ ಆಯ್ಕೆಯ ವಿಚಾರದಲ್ಲಿ ನಡೆದ ತೀವ್ರ ಚರ್ಚೆ ಎಂದು ಇದೀಗ ವರದಿಯಾಗಿದೆ. ಒಟ್ಟಾರೆ ನಾಯಕ ಮತ್ತು ಕೋಚ್ ನಡುವಿನ ಮನಸ್ತಾಪದೊಂದಿಗೆ ಭಾರತ ಈ ಬಾರಿ ಚಾಂಪಿಯನ್ಸ್ ಟ್ರೋಫಿ ಆಡಲಿದೆ.
ಇದನ್ನೂ ಓದಿ ಚಾಂಪಿಯನ್ಸ್ ಟ್ರೋಫಿ ಉದ್ಘಾಟನೆಯಲ್ಲಿ ರೋಹಿತ್ ಶರ್ಮ ಹಾಜರ್?
ಚಾಂಪಿಯನ್ಸ್ ಟ್ರೋಫಿ ಬಳಿಕ ಗಿಲ್ ನಾಯಕ!
ಒಂದೊಮ್ಮೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲವಾದರೆ, ರೋಹಿತ್ ಶರ್ಮ ನಾಯಕತ್ವ ಕಳೆದುಕೊಳ್ಳುವುದು ಬಹುತೇಕ ಖಚಿತ. ಈಗಾಗಲೇ ಬಿಸಿಸಿಐ ರೋಹಿತ್‌ಗೆ ಈ ಬಗ್ಗೆ ಸ್ಪಷ್ಟ ಸಂದೇಶ ನೀಡಿದೆ ಎನ್ನಲಾಗಿದೆ. ಮುಂದಿನ ನಾಯಕನಾಗಿ ಶುಭಮನ್ ಗಿಲ್ ಆಯ್ಕೆಯಾಗಲಿದ್ದಾರೆ ಎಂದು ಹೇಳಲಾಗಿದೆ. ಇದೇ ಕಾರಣಕ್ಕೆ ಅವರಿಗೆ ಉಪನಾಯಕ ಜವಾಬ್ದಾರಿ ನೀಡಿದ್ದು ಎನ್ನಲಾಗಿದೆ.