ಮುಂಬೈ: ಬಹು ನಿರೀಕ್ಷಿತ ಬಾಲಿವುಡ್ ಛಾವಾ ಚಿತ್ರವು ಸಾಕಷ್ಟು ಸದ್ದು ಮಾಡುತ್ತಿದೆ. ಚಿತ್ರವು ಹಲವು ವಿವಾದಗಳನ್ನೂ ಮೈ ಮೇಲೆ ಎಳೆದುಕೊಂಡಿದೆ(Chhaava Controversy). ಛಾವಾ ಚಿತ್ರವು ಛತ್ರಪತಿ ಶಿವಾಜಿ(Chatrapati Shivaji) ಮಹಾರಾಜರ ಮಗ ಸಂಭಾಜಿ ಮಹಾರಾಜ (Sambhaji Maharaj) ಹಾಗೂ ಮಹಾರಾಣಿ ಯೇಸುಭಾಯಿ ಭೋನ್ಸಾಲೆ ಜೀವನಾಧರಿತವಾಗಿದೆ. ಫೆಬ್ರವರಿ 14 ರಂದು ಈ ಚಿತ್ರ ತೆರೆಗೆ ಬರಲಿದೆ. ಈ ಮಧ್ಯೆಯೇ ಚಿತ್ರದಲ್ಲಿನ ಲೆಝಿಮ್ ಡ್ಯಾನ್ಸ್ ಸೀನ್ ತೆಗೆಯಲು ಭಾರಿ ಪ್ರತಿಭಟನೆಗಳು ನಡೆದಿವೆ. ಇದರ ಬೆನ್ನಲ್ಲೇ ನಿರ್ದೇಶಕ ಲಕ್ಷ್ಮಣ್ ಉಟೇಕರ್ ಈ ವಿವಾದಿತ ಹಾಡಿನ ದೃಶ್ಯಗಳನ್ನು ಡಿಲೀಟ್ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಲೆಝಿಮ್ ಡ್ಯಾನ್ಸ್ ವಿವಾದ!
ಛಾವಾ ಚಿತ್ರದ ಟ್ರೇಲರ್‌ನಲ್ಲಿ ಸಂಭಾಜಿ ಮಹಾರಾಜನ ಪಾತ್ರದಲ್ಲಿ ವಿಕ್ಕಿ ಕೌಶಾಲ್,ಯೇಸುಬಾಯಿ ಭೋನ್ಸಾಲೆ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಇಬ್ಬರ ಲೆಝಿಮ್ ಡ್ಯಾನ್ಸ್ ದೃಶ್ಯವಿದೆ. ಡ್ಯಾನ್ಸ್‌ನ ಕೆಲವು ದೃಶ್ಯಗಳು ಹಲವು ಮರಾಠ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಇಲ್ಲ ಸಲ್ಲದನ್ನು ಚಿತ್ರದಲ್ಲಿ ಸೇರಿಸಬೇಡಿ, ಇತಿಹಾಸಕಾರರನ್ನು ಸಂಪರ್ಕಿಸಿ ಪೂರ್ಣ ಮಾಹಿತಿ ಪಡೆದುಕೊಳ್ಳಿ ಎಂದು ಕಿಡಿಕಾರಿದ್ದಾರೆ. ತಕ್ಷಣವೇ ಈ ದೃಶ್ಯಗಳನ್ನು ಡಿಲೀಟ್ ಮಾಡಲು ಹಲವು ನಾಯಕರು ಸೂಚನೆ ನೀಡಿದ್ದಾರೆ. ಇದೇ ರೀತಿ ಅಸಂಬದ್ಧ ವಿಚಾರಗಳನ್ನು ಚಿತ್ರದಲ್ಲಿ ತುರುಕಿದರೆ ಚಿತ್ರ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಮಹಾರಾಷ್ಟ್ರದಲ್ಲಿ ಪ್ರತಿಭಟನೆಯ ಕಾವು ಎದ್ದಿದೆ. ನಿರ್ದೇಶಕ ಉಟೇಕರ್, ನೇರವಾಗಿ ಮಹಾರಾಷ್ಟ್ರದ ಎಂಎನ್ಎಸ್ ನಾಯಕ ರಾಜ್ ಠಾಕ್ರೆಯನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಹಾಡಿನ ದೃಶ್ಯಗಳನ್ನು ಕತ್ತರಿಸುವುದು ದೊಡ್ಡ ವಿಷಯವಲ್ಲ. ಸಂಭಾಜಿ ಮಹಾರಾಜರಿಗಿಂತ ಹಾಡು ದೊಡ್ಡದಲ್ಲ. ವಿವಾದವಾಗಿರುವ ದೃಶ್ಯಗಳನ್ನು ಕೂಡಲೇ ಡಿಲೀಟ್ ಮಾಡುತ್ತೇನೆ ಎಂದು ಉಟೇಕರ್ ಹೇಳಿದ್ದಾರೆ.
ಶಿವಾಜಿ ಸಾವಂತ್ ಬರೆದಿರುವ ಛಾವಾ ಪುಸ್ತಕದಲ್ಲಿ ಸಂಭಾಜಿ ಮಹಾರಾಜರ ಜೀವನಚರಿತ್ರೆಯನ್ನು ದಾಖಲಿಸಿದ್ದಾರೆ. ಪುಸ್ತಕದ ಹೆಸರನ್ನೇ ಚಿತ್ರಕ್ಕೆ ತೆಗೆದುಕೊಳ್ಳಲಾಗಿದ್ದು, ಇದೇ ಕತೆಯನ್ನು ಚಿತ್ರಕ್ಕೆ ಬಳಸಿಕೊಳ್ಳಲಾಗಿದೆ. ಸಂಭಾಜಿ ಮಹಾರಾಜರು ಬರ್ಹನಪುರ್ ಮೇಲೆ ದಾಳಿ ಮಾಡಿದಾಗ ವಯಸ್ಸು ಕೇವಲ ಇಪ್ಪತ್ತು. ಯುವ ಸಂಭಾಜಿ ಮಹರಾಜರ ಹೋಳಿ ಹಬ್ಬ ಆಚರಿಸಿದ ಘಟನೆ ಇತಿಹಾಸದಲ್ಲಿ ಉಲ್ಲೇಖವಿದೆ. ಈ ಹೋಳಿ ಹಬ್ಬದಲ್ಲಿ ಸಂಭಾಜಿ ಮಹಾರಾಜ್ ಲೆಝಿಮ್ ಡ್ಯಾನ್ಸ್ ಮಾಡಿ ಸಂಭ್ರಮಿಸಿರುವ ದೃಶ್ಯವನ್ನು ಚಿತ್ರಿಸಲಾಗಿದೆ. ಲೆಝಿಮ್ ಡ್ಯಾನ್ಸ್ ಮಹಾರಾಷ್ಟ್ರದ ಸಂಸ್ಕೃತಿಯಾಗಿದೆ. ಆದರೆ ಈ ಡ್ಯಾನ್ಸ್‌ನಿಂದ ಹಲವರ ಮನಸ್ಸಿಗೆ ನೋವುಂಟಾಗಿದೆ. ನಾನು ಹಿಂದು ಮುಂದು ಯೋಚಿಸದೆ ಅದನ್ನು ತೆಗೆಯುತ್ತೇನೆ ಎಂದು ನಿರ್ದೇಶಕ ಉಟೇಕರ್ ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ:Chhava Trailer: ಐತಿಹಾಸಿಕ ಪಾತ್ರದಲ್ಲಿ ವಿಕ್ಕಿ ಕೌಶಲ್-ರಶ್ಮಿಕಾ ಮಿಂಚು; 'ಛಾವಾ' ಟ್ರೈಲರ್ ಔಟ್
ಸಂಭಾಜಿ ಮಹಾರಾಜರಿಗಿಂತ ಈ ಚಿತ್ರ, ಹಾಡು ದೊಡ್ಡದಲ್ಲ. ಹೀಗಾಗಿ ಸಲಹೆ ಸೂಚನೆಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಉಟೇಕರ್ ತಿಳಿಸಿದ್ದಾರೆ. ಆದರೆ ವಿವಾದ ಇಲ್ಲಿಗೆ ಅಂತ್ಯವಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಹೀಗಾಗಿ ನಿರ್ದೇಶಕ ಉಟೇಕರ್ ಸಂಪೂರ್ಣ ಛಾವಾ ಚಿತ್ರ ವೀಕ್ಷಿಸಿ ವಿಮರ್ಶಿಸುವಂತೆ ಮನವಿ ಮಾಡಿದ್ದಾರೆ.