Chikkaballapur News: ಜನಸಾಗರದ ನಡುವೆ ನಡೆದ ಚಿತ್ರಾವತಿ ಶ್ರೀಸುಬ್ರಹ್ಮಣ್ಯೇಶ್ವರಸ್ವಾಮಿ ಬ್ರಹ್ಮರಥೋತ್ಸವ
ಜಾತ್ರೆಯ ಅಂಗವಾಗಿ ದೇವಾಲಯಕ್ಕೆ ಸುಣ್ಣ ಬಣ್ಣ ಬಳಿದರೆ,ರಥವನ್ನು ತಳಿರು ತೋರಣಗಳು, ಬಗೆ ಬಗೆಯ ಹೂವುಗಳಿಂದ ಸಿಂಗಾರ ಮಾಡಲಾಗಿತ್ತು. ಶ್ರೀಸುಬ್ರಹ್ಮಣ್ಯಸ್ವಾಮಿ ದೇವರ ದರ್ಶನ ಮಾಡಲು ಭಕ್ತರು ಸರತಿ ಸಾಲಿ ನಲ್ಲಿ ನಿಂತಿದ್ದು ಪೊಲೀಸರು ಶಾಂತಿ ಸುವ್ಯವಸ್ಥೆಯ ವ್ಯವಸ್ಥೆ ಮಾಡಿದ್ದರು
ಚಿಕ್ಕಬಳ್ಳಾಪುರ : ನಗರ ಹೊರವಲಯ ಚಿತ್ರಾವತಿ ಶ್ರೀ ಸುಬ್ರಹ್ಮಣ್ಯೇಶ್ವರಸ್ವಾಮಿ ಸನ್ನಿಧಿಯಲ್ಲಿ ವರ್ಷಂಪ್ರತಿ ಜಾತ್ರಾಮಹೋತ್ಸವ ಅಂಗವಾಗಿ ನಡೆದುಕೊಂಡು ಬಂದಿರುವ ಬ್ರಹ್ಮರಥೋತ್ಸವ ಜನಸಾಗರದ ನಡುವೆ ಅದ್ಧೂರಿಯಾಗಿ ನೆರವೇರಿತು.
ಬ್ರಹ್ಮರಥೋತ್ಸವದ ಅಂಗವಾಗಿ ಸೋಮವಾರ ಬೆಳಗಿನಿಂದಲೇ ರುದ್ರಾಭಿಷೇಕ,ಪಾನಕ ಪೂಜೆ ಸಹಿತ ಅನೇಕ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು. ಜಾತ್ರೆಯ ಅಂಗವಾಗಿ ದೇವಾಲಯಕ್ಕೆ ಸುಣ್ಣ ಬಣ್ಣ ಬಳಿದರೆ,ರಥವನ್ನು ತಳಿರು ತೋರಣಗಳು,ಬಗೆಬಗೆಯ ಹೂವುಗಳಿಂದ ಸಿಂಗಾರ ಮಾಡಲಾಗಿತ್ತು. ಶ್ರೀಸುಬ್ರಹ್ಮಣ್ಯಸ್ವಾಮಿ ದೇವರ ದರ್ಶನ ಮಾಡಲು ಭಕ್ತರು ಸರತಿ ಸಾಲಿ ನಲ್ಲಿ ನಿಂತಿದ್ದು ಪೊಲೀಸರು ಶಾಂತಿ ಸುವ್ಯವಸ್ಥೆಯ ವ್ಯವಸ್ಥೆ ಮಾಡಿದ್ದರು.
ಇದನ್ನೂ ಓದಿ: Chikkaballapur News: ಘಂಟಂವಾರಿಪಲ್ಲಿಯಲ್ಲಿ: ಗಮನ ಸೆಳೆದ ಮಕ್ಕಳ ಗ್ರಾಮ ಸಭೆ: ಸಮಸ್ಯೆಗಳ ಅನಾವರಣ
ರಾಷ್ಟ್ರೀಯ ಹೆದ್ದಾರಿ ಸಮೀಪವಿರುವ ಚಿತ್ರಾವತಿಯ ಪುರಾಣ ಪ್ರಸಿದ್ಧ ಸುಬ್ರಹ್ಮಣ್ಯೇಶ್ವರ ದೇವರ ಸನ್ನಿಧಿಯಲ್ಲಿ ಪ್ರತಿ ವರ್ಷ ಕುಮಾರಷಷ್ಟಿ ಸಂದರ್ಭದಲ್ಲಿ ದನಗಳ ಜನಗಳ ಜಾತ್ರೆ ನಡೆಯುವುದು ವಾಡಿಕೆ.ಅದರಂತೆ ಸೋಮವಾರ ನಡೆದ ಬ್ರಹ್ಮರಥೋತ್ಸವಕ್ಕೆ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಮಂಜುನಾಥ್ ಚಾಲನೆ ನೀಡಿದರು. ಭಕ್ತಾದಿಗಳ ಹರ್ಷೋದ್ಗಾರದ ನಡುವೆ ಶ್ರದ್ಧಾಭಕ್ತಿಯಿಂದ ಸ್ವಾಮಿಯ ಉತ್ಸವಮೂರ್ತಿಯನ್ನು ರಥದಲ್ಲಿ ಪ್ರತಿಷ್ಟಾಪಿಸಿ ಪೂಜೆ ಸಲ್ಲಿಸುವ ಮೂಲಕ ತೇರನ್ನು ಎಳೆಯಲಾಯಿತು. ಈ ವೇಳೆ ಭಗವಂತನ ನಾಮಸ್ಮರಣೆಯೊಂದಿಗೆ ಹರಕೆ ಹೊತ್ತ ಭಕ್ತಾಧಿಗಳು ಧವನ ಸಹಿತ ಬಾಳೇಹಣ್ಣುಗಳನ್ನು ರಥಕ್ಕೆ ಎಸೆಯುವ ಮೂಲಕ ತಮ್ಮ ಹರಕೆ ತೀರಿಸುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.
ಇನ್ನು ವರ್ಷಕ್ಕೊಮ್ಮೆ ನಡೆಯುವ ಚಿತ್ರಾವತಿ ಶ್ರೀಸುಬ್ರಹ್ಮಣ್ಯೇಶ್ವರಸ್ವಾಮಿ ರಥೋತ್ಸವದ ದಿನ ಸಬ್ಬೇನಹಳ್ಳಿ, ಹೊನ್ನೇನಹಳ್ಳಿ, ಹಾರೋಬಂಡೆ ಮಂಚನಬಲೆ ಸೇರಿದಂತೆ ಸುತ್ತಮುತ್ತಲ ಗ್ರಾಮ ಸ್ಥರು ಎತ್ತಿನ ಗಾಡಿಗಳಲ್ಲಿ,ಟ್ರಾಕ್ಟರ್‌ಗಳಲ್ಲಿ ಬಂದು ಮಜ್ಜಿಗೆ ಪಾನಕ ಪನ್ನೀರು ಸೇವೆ ಸಲ್ಲಿಸುವುದು ಸಂಪ್ರದಾಯ. ಈ ಬಾರಿಯೂ ಕೂಡ ರಥೋತ್ಸವಕ್ಕೆ ಚಾಲನೆ ದೊರೆತ ನಂತರ ಪಾನಕ ಪನ್ನೀರು ಸೇವೆ ಸಾಂಗೋಪಾಂಗವಾಗಿ ನಡೆಯಿತು. ಜಾತ್ರೆಗೆ ಬಂದವರು ಪಾನಕ ಪನ್ನೀರು ಸೇವೆಗೆ ಮಾರು ಹೋದರು.
ಅನ್ನದಾನದ ಸೇವೆ : ಚಿತ್ರಾವತಿ ಸುಬ್ರಹ್ಮಣ್ಯೇಶ್ವರನ ಸನ್ನಿಧಿಗೆ ಬಂದು ಪೂಜೆ ಸಲ್ಲಿಸಿ ಹರಕೆ ಹೊತ್ತರೆ ಮನೋರಥಗಳು ಈಡೇರುತ್ತವೆ ಎಂಬ ನಂಬಿಕೆ ಜನಮಾನಸದಲ್ಲಿ ಬೇರೂರಿದ್ದು ದೇವಾಲಯದ ಅಕ್ಕ ಪಕ್ಕ ಹರಕೆ ಹೊತ್ತ ಭಕ್ತಾಧಿಗಳು ಮತ್ತು ದೇವಾಲಯದ ಆಡಳಿತ ಮಂಡಳಿವರು ಸಾವಿರಾರು ಸಂಖ್ಯೆಯಲ್ಲಿ ಬಂದಿದ್ದ ಭಕ್ತಾಧಿಗಳಿಗೆ ನೀರು ಮತ್ತು ಅನ್ನದಾನದ ವ್ಯವಸ್ಥೆ ಮಾಡಿ ಹಸಿದ ಹೊಟ್ಟೆ ಗಳಿಗೆ ಅನ್ನ ನೀಡಿದ ಸತ್ಕಾರ್ಯಕ್ಕೆ ಪಾತ್ರರಾದರು.
ಬುರುಗು ಬತ್ತಾಸು ಸೇವೆ :ಜಾತ್ರೆಗೆ ಬಂದಿದ್ದ ಜನತೆ ಜಾತ್ರೆಯನ್ನು ಕಣ್ತುಂಬಿಕೊಂಡು ಮನೆಗೆ ಮರಳುತ್ತಿದ್ದ ದೃಶ್ಯಗಳು ಜಾತ್ರೆಯ ಸೊಬಗನ್ನು ಇಮ್ಮಡಿಗೊಳಿಸಿತ್ತು.ಬುರುಗು ಬತ್ತಾಸು ಅಂಗಡಿ ಗಳವರು ಕೂಡ ಒಂದು ಸೇರು ಬುರುಗು ೧೦, ಕಾಲು ಕೆಜಿ ಖಾರ ೫೦ ರೂಪಾಯಿ, ಪಕೋಡ, ಜಿಲೇಬಿ ಮಾರಾಟವನ್ನು ಜೋರಾಗಿಯೇ ಮಾಡಿ ಲಾಭ ಗಳಿಸಿದರು.
ನಗರೀಕರಣದ ನಡುವೆ ಕಳೆದುಹೋಗುತ್ತಿರುವ ದನಗಳ ಜಾತ್ರೆ, ರಥೋತ್ಸವಗಳಿಗೆ ಅಪವಾದ ಎನ್ನು ವಂತೆ ಚಿಕ್ಕಬಳ್ಳಾಪುರದ ಚಿತ್ರಾವತಿ ಜಾತ್ರೆ ನಡೆಯಿತು. ಜಾತ್ರೆಗೆ ಬಂದಿದ್ದ ಜನತೆ ಗಿರಗಿಟ್ಲೆ, ರಂಕಲ ರಾಟೆ, ಮಕ್ಕಳ ರಂಜಿಸುವ ಚುಕುಬುಕು ರೈಲು ಇವುಗಳಲ್ಲಿ ಮಕ್ಕಳನ್ನು ಕೂರಿಸಿ, ತಾವೂ ಕೂತು ಸಂತೋಷಪಡುತ್ತಿದ್ದ ದೃಶ್ಯಗಳು ಮನಸೂರೆಗೊಂಡವು.
ನಿರಾಸೆ ಮೂಡಿಸಿದ ದನಗಳ ಜಾತ್ರೆ : ಚಿತ್ರಾವತಿ ಜಾತ್ರೆ ಬಂದರೆ ಸಾಕು ದನಗಳ ಜಾತ್ರೆಯನ್ನು ಕಣ್ತುಂಬಿಕೊಳ್ಳಲು ರೈತಾಪಿ ವರ್ಗ ತಪ್ಪದೆ ಆಗಮಿಸುತ್ತಿದ್ದರು.ಸ್ಥಳೀಯರು ಕೂಡ ತಮ್ಮ ದನ ಗಳನ್ನು ಜಾತ್ರೆಗೆ ಕರೆದುಕೊಂಡು ಹೋಗಿ ಮಾರುವುದೋ ಅದಲು ಬದಲು ಮಾಡಿಕೊಳ್ಳುವುದೋ ಹೊಸರಾಸುಗಳನ್ನು ಕೊಳ್ಳುವುದೋ ಮಾಡುತ್ತಿದ್ದರು.ಆದರೆ ಈವರ್ಷ ಯಾಕೋ ದನಗಳ ಜಾತ್ರೆ ಯಿಲ್ಲದ ಕೊರಗು ಜನತೆಯನ್ನು ಇನ್ನಿಲ್ಲದಂತೆ ಕಾಡಿತು.
ಒಟ್ಟಾರೆ ಸೋಮವಾರ ನಡೆದ ಚಿತ್ರಾವತಿ ಜಾತ್ರೆ ನಗರೀಕರಣದ ನಡುವೆ ಗ್ರಾಮ್ಯ ಸೊಗಡನ್ನು ಜನತೆಗೆ ದಾಟಿಸುವಲ್ಲಿ ಯಶಸ್ವಿಯಾದರೆ, ಬ್ರಹ್ಮರಥೋತ್ಸವ ಆಸ್ತಿಕ ಜನತೆ ಮತ್ತು ಭಕ್ತರ ಸಂಭ್ರಮಾ ಚರಣೆಗೆ ಸಾಕ್ಷಿಯಾಯಿತು.