Ranji Trophy: ವಿರಾಟ್ ಕೊಹ್ಲಿಯನ್ನು ಕ್ಲೀನ್ ಬೌಲ್ಡ್ ಮಾಡಿದ ಹಿಮಾಂಶು ಸಂಗ್ವಾನ್ ಯಾರು?
Who is Himanshu Sangwan? ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿಯನ್ನು ರಣಜಿ ಟ್ರೋಫಿ ಪಂದ್ಯದಲ್ಲಿ ರೈಲ್ವೇಸ್ ತಂಡದ ವೇಗಿ ಹಿಮಾಂಶು ಸಂಗ್ವಾನ್ ಕ್ಲೀನ್ ಬೌಲ್ಡ್ ಮಾಡಿದರು. ಈ ಹಿನ್ನೆಲೆಯಲ್ಲಿ ಕೊಹ್ಲಿಯನ್ನು ಔಟ್ ಮಾಡಿದ ಹಿಮಾಂಶು ಸಂಗ್ವಾನ್ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.


ನವದೆಹಲಿ: ಹದಿಮೂರು ವರ್ಷಗಳ ಬಳಿಕ ರಣಜಿ ಟ್ರೋಫಿ ಟೂರ್ನಿಗೆ ಮರಳಿದ್ದ ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಅನ್ನು ಕಣ್ತುಂಬಿಸಿಕೊಳ್ಳಲು ಅರುಣ್ ಜೆಟ್ಲಿ ಸ್ಟೇಡಿಯಂಗೆ ಜನ ಸಾಗರ ಹರಿದು ಬಂದಿತ್ತು. ಆದರೆ, ವಿರಾಟ್ ಕೊಹ್ಲಿ ಕೇವಲ 6 ರನ್‌ಗೆ ವಿಕೆಟ್ ಒಪ್ಪಿಸಿದರು. ರೈಲ್ವೇಸ್ ತಂಡದ ವೇಗಿ ಹಿಮಾಂಶು ಸಂಗ್ವಾನ್ ಅವರ ಎಸೆತದಲ್ಲಿ ವಿರಾಟ್ ಕೊಹ್ಲಿ ಕ್ಲೀನ್ ಬೌಲ್ಡ್ ಆದರು. ವಿರಾಟ್ ಕೊಹ್ಲಿ ವಿಕೆಟ್ ಒಪ್ಪಿಸಿದ ಬೆನ್ನಲ್ಲೆ ನೆರೆದಿದ್ದ ಸಾವಿರಾರು ಅಭಿಮಾನಿಗಳು ನಿರಾಶೆಯಿಂದ ಕ್ರೀಡಾಂಗಣವನ್ನು ತೊರೆದರು. ಈ ವಿಡಿಯೊ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ರೈಲ್ವೇಸ್ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 241 ರನ್‌ಗಳಿಗೆ ಆಲ್‌ಔಟ್ ಆಯಿತು. ಬಳಿಕ ಪ್ರಥಮ ಇನಿಂಗ್ಸ್ ಆಡಿದ ದಿಲ್ಲಿ ತಂಡದ ಪರ ವಿರಾಟ್ ಕೊಹ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ್ದರು. ಇದೇ ಅಂಗಣದಲ್ಲಿ ಕ್ರಿಕೆಟ್ ಕಲಿತು ಆಡಿ ಬೆಳೆದಿದ್ದ ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಅನ್ನು ಕಣ್ತುಂಬಿಸಿಕೊಳ್ಳಲು ಸಾವಿರಾರು ಅಭಿಮಾನಿಗಳು ಕಾಯುತ್ತಿದ್ದರು.
ಅದರಂತೆ ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ವಿರಾಟ್ ಕೊಹ್ಲಿ 15 ಎಸೆತಗಳಲ್ಲಿ ಒಂದು ಬೌಂಡರಿಯೊಂದಿಗೆ 5 ರನ್ ಗಳಿಸಿ ಬ್ಯಾಟ್ ಮಾಡುತ್ತಿದ್ದರು. ಆದರೆ, ರೈಲ್ವೇಸ್ ತಂಡದ ಹಿಮಾಂಶು ಸಂಗ್ವಾನ್ ಅವರು 28ನೇ ಓವರ್‌ನ ನಾಲ್ಕನೇ ಎಸೆತದ ಇನ್‌ಸ್ವಿಂಗ್ ಅನ್ನು ಅರಿಯುವಲ್ಲಿ ವಿಫಲರಾದ ವಿರಾಟ್ ಕೊಹ್ಲಿ ಕ್ಲೀನ್ ಬೌಲ್ಡ್ ಆದರು. ಆ ಮೂಲಕ ವಿರಾಟ್ ಕೊಹ್ಲಿ ನಿರಾಶೆಯೊಂದಿಗೆ ಪೆವಿಲಿಯನ್‌ಗೆ ಮರಳಿದರು. ವಿರಾಟ್ ಕೊಹ್ಲಿಯನ್ನು ಕ್ಲೀನ್ ಬೌಲ್ಡ್ ಮಾಡಿದ ಬಳಿಕ ಹಿಮಾಂಶು ಸಂಗ್ವಾನ್ ಅವರು ಆಕ್ರಮಣಕಾರಿಯಾಗಿ ಸಂಭ್ರಮಿಸಿದರು.
ರಣಜಿ ಕಮ್‌ಬ್ಯಾಕ್‌ನಲ್ಲಿ ಕೊಹ್ಲಿ 6ಕ್ಕೆ ಕ್ಲೀನ್ ಬೌಲ್ಡ್
ಹಿಮಾಂಶು ಸಂಗ್ವಾನ್ ಯಾರು?
ಕ್ರಿಕೆಟ್ ವೃತ್ತಿ ಜೀವನ ಆರಂಭಿಸುವುದಕ್ಕೂ ಮುನ್ನ ದಿಲ್ಲಿಯ ನಜಾಫ್‌ಗಢದ ಮೂಲದ ಹಿಮಾಂಶು ಸಂಗ್ವಾನ್ ಡೆಲ್ಲಿ ರೈಲ್ವೆ ಸ್ಟೇಷನ್‌ನಲ್ಲಿ ಟಿಕೆಟ್ ಕಲೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2019ರಲ್ಲಿ ರೈಲ್ವೇಸ್ ಪರ ದೇಶಿ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಹಿಮಾಂಶು ಸಂಗ್ವಾನ್ ಅವರು, ಅಂದಿನಿಂದ ಇಲ್ಲಿಯವರೆಗೂ ರೈಲ್ವೇಸ್‌ಗೆ ಕೀ ಆಟಗಾರರಾಗಿದ್ದಾರೆ. ಇದಕ್ಕೂ ಮುನ್ನ ಅವರು ಚೆನ್ನೈನ ಎಂಆರ್‌ಎಫ್ ಪೇಸ್ ಫೌಂಡೇಷನ್‌ನಲ್ಲಿ ಫಾಸ್ಟ್ ಬೌಲಿಂಗ್ ದಿಗ್ಗಜ ಗ್ಲೆನ್ ಮೆಗ್ರಾಥ್ ಅವರ ಗಡಿಯಲ್ಲಿ ಪಳಗಿದ್ದರು. 2019ರಲ್ಲಿ ಉತ್ತರ ಪ್ರದೇಶ ವಿರುದ್ದದ ಪರ ತಮ್ಮ ರಣಜಿ ಟ್ರೋಫಿ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಈ ಪಂದ್ಯದಲ್ಲಿ ಅವರು 52 ರನ್ ನೀಡಿ 4 ವಿಕೆಟ್‌ಗಳನ್ನು ಕಬಳಿಸಿದ್ದರು. ತಮ್ಮ ಚೊಚ್ಚಲ ಆವೃತ್ತಿಯಲ್ಲಿ ಅವರು ಗಮನಾರ್ಹ ಬೌಲಿಂಗ್ ಪ್ರದರ್ಶನ ತೋರಿ ರೈಲ್ವೇಸ್ ಪರ ಅತಿ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದ ಬೌಲರ್ ಎನಿಸಿಕೊಂಡಿದ್ದರು. ಆಡಿದ್ದ ಎಂಟು ಪಂದ್ಯಗಳಿಂದ 32 ವಿಕೆಟ್‌ಗಳನ್ನು ಕಬಳಿಸಿದ್ದರು. ಇದರಲ್ಲಿ ಅವರು ಎರಡು ಬಾರಿ 5 ವಿಕೆಟ್ ಸಾಧನೆ ಮಾಡಿದ್ದರು.
Chokli kohli got owned by Ticket Collector 😭😭😭 Himanshu Sangwan
— 𝐀𝐚𝐫𝐚𝐯𝐌𝐒𝐃𝐢𝐚𝐧™ (@AaravMsd_07) January 31, 2025
pic.twitter.com/7wmyODsMtK
ಹಿಮಾಂಶು ಸಂಗ್ವಾನ್‌ರ ಪ್ರಥಮ ದರ್ಜೆ ಕ್ರಿಕೆಟ್ ಅಂಕಿಅಂಶಗಳು
ಪ್ರಸ್ತುತ ನಡಯುತ್ತಿರುವ ರಣಜಿ ಟ್ರೋಫಿ ಟೂರ್ನಿಯಲ್ಲಿ ಆಡಿದ 7 ಪಂದ್ಯಗಳಿಂದ 26.25ರ ಸರಾಸರಿಯಲ್ಲಿ 16 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಜಾರ್ಖಂಡ್ ವಿರುದ್ಧದ ಪಂದ್ಯದಲ್ಲಿ 94 ರನ್‌ಗಳಿಗೆ 5 ವಿಕೆಟ್‌ಗಳನ್ನು ಪಡೆದಿದ್ದು, ಇವರ ವೈಯಕ್ತಿಕ ಶ್ರೇಷ್ಠ ಸ್ಪೆಲ್ ಆಗಿದೆ. ಈ ಹಿಂದಿನ ಆವೃತ್ತಿಯಲ್ಲಿಯೂ ಉತ್ತಮ ಬೌಲಿಂಗ್ ಪ್ರದರ್ಶನ ತೋರಿದ್ದ ಹಿಮಾಂಶು , ಆರು ಪಂದ್ಯಗಳಿಂದ 23 ವಿಕೆಟ್‌ಗಳನ್ನು ಕಬಳಿಸಿದ್ದರು.
ತಮ್ಮ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ರೈಲ್ವೇಸ್ ತಂಡದ ವೇಗಿ 23 ಪಂದ್ಯಗಳಿಂದ 77 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದರಲ್ಲಿ 29ರ ಪ್ರಾಯದ ವೇಗಿ ಮೂರು ಬಾರಿ ಐದು ವಿಕೆಟ್ ಸಾಧನೆ ಮಾಡಿದ್ದಾರೆ. ಇನ್ನು ಲಿಸ್ಟ್ ಎ ಕ್ರಿಕೆಟ್‌ನಲ್ಲಿ 21 ವಿಕೆಟ್‌ಗಳು ಹಾಗೂ ಟಿ20 ಕ್ರಿಕೆಟ್‌ನಲ್ಲಿ ಐದು ವಿಕೆಟ್‌ಗಳನ್ನು ಪಡೆದಿದ್ದಾರೆ.