Dengue Fever: ಬೆಂಗಳೂರಲ್ಲಿ ಮಳೆ ತಂದ ಆತಂಕ: ಡೆಂಘೀ, ಮಲೇರಿಯಾ, ವೈರಲ್ ಜ್ವರ ಹೆಚ್ಚಳ, ಜೊತೆಗೆ ಕೋವಿಡ್!
ಮಳೆ ಬಂದು ನೀರು ಎಲ್ಲೆಡೆ ನಿಂತು ಸೊಳ್ಳೆಗಳು ಹುಟ್ಟಿಕೊಂಡ ಪರಿಣಾಮ ಡೆಂಘೀ (Dengue Fever), ಮಲೇರಿಯಾ, ಚಿಕುನ್‌ಗುನ್ಯಾ ಪ್ರಕರಣಗಳು ಕಂಡುಬರುತ್ತಿವೆ. ಜತೆಗೆ ಸಾಮಾನ್ಯ ಜ್ವರ, ವೈರಲ್ ಸೋಂಕು, ನೆಗಡಿ, ಸುಸ್ತು, ತಲೆನೋವು ಪ್ರಕರಣಗಳೂ ಹೆಚ್ಚಾಗಿವೆ. ಕಲುಷಿತ ನೀರು ಸೇವನೆಯಿಂದ ಬರುವ ಗ್ಯಾಸ್ಟ್ರೋ ಎಂಟರೈಟಿಸ್ ಹೆಚ್ಚಾಗಿದೆ.


ಬೆಂಗಳೂರು: ಕಳೆದ ಒಂದು ವಾರದಿಂದ ಏಕಾಏಕಿ ಸುರಿದ ಮಳೆಯಿಂದಾಗಿ (rain) ಬೆಂಗಳೂರು (Bengaluru) ನಗರದಲ್ಲಿ ಡೆಂಘೀ ಜ್ವರ (Dengue Fever) ಸೇರಿದಂತೆ ಸಾಂಕ್ರಾಮಿಕ ರೋಗಗಳು ಏಕಾಏಕಿ ಹೆಚ್ಚಾಗಿವೆ. ನಗರದಲ್ಲಿ ಸಕ್ರಿಯ 500ಕ್ಕೂ ಹೆಚ್ಚಿನ ಡೆಂಘೀ ಪ್ರಕರಣಗಳು ಕಂಡುಬಂದಿವೆ. ಸಾಮಾನ್ಯ ಜ್ವರವೂ ವ್ಯಾಪಕವಾಗಿದೆ. ಮುಂಗಾರು ಪೂರ್ವ ಮಳೆ ನಗರವನ್ನು ಜಲಾವೃತ ಮಾಡಿದ್ದು ಮಾತ್ರವಲ್ಲದೆ ಆರೋಗ್ಯ ದೃಷ್ಟಿಯಿಂದಲೂ ಆತಂಕ ಸೃಷ್ಟಿಸಿದೆ. ಇದರ ಜತೆಗೆ ಕೋವಿಡ್ (Covid 19) ಆತಂಕವೂ ಎದುರಾಗಿದ್ದು ಬೆಂಗಳೂರಿನಲ್ಲಿ ಸದ್ಯ 16 ಸಕ್ರಿಯ ಪ್ರಕರಣಗಳಿವೆ.
ಮಳೆ ಬಂದು ನೀರು ಎಲ್ಲೆಡೆ ನಿಂತು ಸೊಳ್ಳೆಗಳು ಹುಟ್ಟಿಕೊಂಡ ಪರಿಣಾಮ ಡೆಂಘೀ, ಮಲೇರಿಯಾ, ಚಿಕುನ್‌ಗುನ್ಯಾ ಪ್ರಕರಣಗಳು ಕಂಡುಬರುತ್ತಿವೆ. ಜತೆಗೆ ಸಾಮಾನ್ಯ ಜ್ವರ, ವೈರಲ್ ಸೋಂಕು, ನೆಗಡಿ, ಸುಸ್ತು, ತಲೆನೋವು ಪ್ರಕರಣಗಳೂ ಹೆಚ್ಚಾಗಿವೆ. ಕಲುಷಿತ ನೀರು ಸೇವನೆಯಿಂದ ಬರುವ ಗ್ಯಾಸ್ಟ್ರೋ ಎಂಟರೈಟಿಸ್ ಹೆಚ್ಚಾಗಿದೆ.
ನಗರದ ಕೆ.ಸಿ.ಜನರಲ್, ವಿಕ್ಟೋರಿಯಾ ಸೇರಿ ಇತರೆ ಆಸ್ಪತ್ರೆಗಳಲ್ಲಿ ಹೊರರೋಗಿ ವಿಭಾಗದಲ್ಲಿ ಈ ಪ್ರಕರಣಗಳಿಂದ ಬಳಲುವ ಜನ ಹೆಚ್ಚಾಗಿ ದಾಖಲಾಗುತ್ತಿದ್ದಾರೆ. ಮಳೆಯಿಂದಾಗಿ ನಿಂತಿರುವ ನೀರು, ಬದಲಾದ ಹವಾಮಾನ, ದಿನವಿಡೀ ಶೀತ ವಾತಾವರಣ ಇದಕ್ಕೆ ಕಾರಣವಾಗಿದೆ. ಹೆಚ್ಚಾಗಿ ನಗರದ ಸ್ಲಂ, ಇಕ್ಕಟ್ಟಾಗಿರುವ, ಸಂಕೀರ್ಣ ವಸತಿ ವ್ಯವಸ್ಥೆ ಇರುವೆಡೆ ನಿವಾಸಿಗಳು ಅನಾರೋಗ್ಯಕ್ಕೀಡಾಗುತ್ತಿದ್ದಾರೆ. ವಿಶೇಷವಾಗಿ ಮಕ್ಕಳು, ವೃದ್ಧರಲ್ಲಿ ಜ್ವರ ಕಂಡುಬರುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈಡೀಸ್ ಈಜಿಪ್ಟಿ ಸೊಳ್ಳೆಯಿಂದ ಬರುವ ಡೆಂಘಿಗೆ ಕಾಯಿಲೆಗೆ ಪ್ರಾರಂಭದಲ್ಲಿಯೇ ಸರಿಯಾದ ಚಿಕಿತ್ಸೆ ಪಡೆದುಕೊಳ್ಳದೇ ಹೋದರೆ ಜೀವಕ್ಕೆ ಅಪಾಯವಾಗುವ ಸಾಧ್ಯತೆಯೇ ಹೆಚ್ಚು. ಲಾರ್ವಾ ಉಂಟಾಗದಂತೆ ನೀರು ನಿಲ್ಲುವುದನ್ನು ತಡೆಯಲು ಹೆಚ್ಚಿನ ಜಾಗೃತಿ ವಹಿಸಿ ಎಂದು ವೈದ್ಯರು ತಿಳಿಸಿದ್ದಾರೆ.
ಮಕ್ಕಳು, ವೃದ್ಧರ ಬಗ್ಗೆ ಕಾಳಜಿ ಇರಲಿ: ಇನ್ನು, ಹೊಟ್ಟೆಯ ಜ್ವರ ಎನ್ನಬಹುದಾದ ಗ್ಯಾಸ್ಟ್ರೋ ಎಂಟರೈಟಿಸ್ ಪ್ರಕರಣವೂ ನಗರದಲ್ಲಿ ಏರಿಕೆಯಾಗಿದೆ. ಸೋಂಕುಪೀಡಿತ ವ್ಯಕ್ತಿಯ ಸಂಪರ್ಕ ಅಥವಾ ಕಲುಷಿತ ಆಹಾರ, ನೀರಿಂದ ಬರುವ ಈ ಜ್ವರದಿಂದ ಅತಿಸಾರ, ವಾಂತಿ, ರಕ್ತದೊತ್ತಡ ಕಡಿಮೆಯಾಗುವುದು, ಮೂತ್ರಪಿಂಡ ಸಮಸ್ಯೆ ಸೇರಿ ಇತರೆ ತೊಂದರೆಗಳು ಉಂಟಾಗುತ್ತವೆ. ಮಕ್ಕಳು, ವೃದ್ಧರು ಅಂದರೆ ರೋಗನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಹೆಚ್ಚಾಗಿ ಇದು ಕಾಣಿಸುತ್ತಿದೆ. ಇಂತಹ ಸಮಸ್ಯೆ ಕಂಡುಬಂದರೆ ತಕ್ಷಣ ಚಿಕಿತ್ಸೆ ಪಡೆಯುವಂತೆ ವೈದ್ಯರು ತಿಳಿಸಿದ್ದಾರೆ.
ರಾಜ್ಯದಲ್ಲಿ 1403 ಡೆಂಘೀ ಪ್ರಕರಣ
ಬೆಂಗಳೂರಿನಲ್ಲಿ ಕಳೆದ ವಾರ 110 ಡೆಂಘೀ ದಾಖಲಾಗಿದ್ದು, ಒಟ್ಟಾರೆ 500ಕ್ಕೂ ಹೆಚ್ಚು ಪ್ರಕರಣಗಳು ಸಕ್ರಿಯವಾಗಿವೆ. ಉಳಿದ ಜಿಲ್ಲೆಗಳು ಸೇರಿ ರಾಜ್ಯದಲ್ಲಿ ಒಟ್ಟಾರೆ 1403 ಡೆಂಘೀ ಪ್ರಕರಣಗಳಿವೆ ಎಂದು ಡಾ.ಅನ್ಸಾರ್ ಅಹ್ಮದ್ ತಿಳಿಸಿದರು. ಜತೆಗೆ ಕಳೆದ ವಾರ ದಾಖಲಾದ 22 ಸೇರಿ 343 ಚಿಕನ್ ಗುನ್ಯಾ ಹಾಗೂ 65 ಮಲೇರಿಯಾ ಪ್ರಕರಣಗಳು ರಾಜ್ಯದಲ್ಲಿವೆ. ಈ ಪೈಕಿ ಬೆಂಗಳೂರಿನಲ್ಲೇ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಇದರ ಜತೆಗೆ ಕೋವಿಡ್ ಆತಂಕವೂ ಎದುರಾಗಿದೆ. ಬೆಂಗಳೂರಿನಲ್ಲಿ ಸದ್ಯ 16 ಸಕ್ರಿಯ ಪ್ರಕರಣಗಳಿವೆ. ರಾಜ್ಯದಲ್ಲಿ ಒಟ್ಟು 33 ಪ್ರಕರಣಗಳು ದಾಖಲಾಗಿದೆ. ಹೀಗಾಗಿ ಜನ ಆರೋಗ್ಯದ ಬಗ್ಗೆ ಮುಂಜಾಗೃತೆ ವಹಿಸಬೇಕು ಎಂದು ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ: ಡೆಂಘೀ ಉಲ್ಬಣ; ಮುನ್ನಚ್ಚರಿಕೆ ಅಗತ್ಯ