Dharmasthala Case: ಧರ್ಮಸ್ಥಳ ಪ್ರಕರಣದಲ್ಲಿ ಯಾರೇ ತಪ್ಪು ಮಾಡಿದರೂ ಶಿಕ್ಷೆ ಖಚಿತ: ಸಿಎಂ ಸಿದ್ದರಾಮಯ್ಯ
CM Siddaramaiah: ಯಾರೇ ತಪ್ಪು ಮಾಡಿದರೂ ಶಿಕ್ಷೆ ಆಗುತ್ತದೆ. ಕಾನೂನು ಎಲ್ಲರಿಗೂ ಒಂದೇ ಎಂದು ಪ್ರತಿಕ್ರಿಯೆ ನೀಡಿದರು. ಈ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡಲು ಅವರು ನಿರಾಕರಿಸಿದರು. ಹೂತ ಹೆಣಗಳ ವಿಚಾರವಾಗಿ ಎಸ್‌ಐಟಿ ತನಿಖೆಗೆ ನೀಡಲಾಗಿದ್ದು, ಅದರಂತೆ ಕಾನೂನು ಪ್ರಕ್ರಿಯೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಧರ್ಮಸ್ಥಳದಲ್ಲಿ (Dharmasthala Case) ನಿನ್ನೆ ಖಾಸಗಿ ಮಾಧ್ಯಮದವರ ಮೇಲೆ ನಡೆದ ಹಲ್ಲೆ (Assault Case) ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಪ್ರತಿಕ್ರಿಯೆ ನೀಡಿದ್ದು ಯಾರೇ ತಪ್ಪು ಮಾಡಿದರೂ ಅವರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು. ನಿನ್ನೆ ಧರ್ಮಸ್ಥಳದಲ್ಲಿ ಯೂಟ್ಯೂಬರ್‌ಗಳ ಮೇಲೆ ಹಾಗೂ ಬಳಿಕ ಖಾಸಗಿ ಟಿವಿ ಮಾಧ್ಯಮದ ಪತ್ರಕರ್ತರ ಮೇಲೆ ಹಲ್ಲೆ ನಡೆದಿತ್ತು.
ಇಂದು ಬೆಂಗಳೂರಿನಲ್ಲಿ ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ, ಯಾರೇ ತಪ್ಪು ಮಾಡಿದರೂ ಶಿಕ್ಷೆ ಆಗುತ್ತದೆ. ಕಾನೂನು ಎಲ್ಲರಿಗೂ ಒಂದೇ ಎಂದು ಪ್ರತಿಕ್ರಿಯೆ ನೀಡಿದರು. ಈ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡಲು ಅವರು ನಿರಾಕರಿಸಿದರು. ಹೂತ ಹೆಣಗಳ ವಿಚಾರವಾಗಿ ಎಸ್‌ಐಟಿ ತನಿಖೆಗೆ ನೀಡಲಾಗಿದ್ದು, ಅದರಂತೆ ಕಾನೂನು ಪ್ರಕ್ರಿಯೆ ನಡೆಯಲಿದೆ ಎಂದು ಅವರು ಈ ಮೊದಲು ತಿಳಿಸಿದ್ದಾರೆ.
ಧರ್ಮಸ್ಥಳ ಪ್ರಕರಣದಲ್ಲಿ ರಾಜ್ಯ ಸರಕಾರ ಹಸ್ತಕ್ಷೇಪ ಇಲ್ಲ: ಪರಮೇಶ್ವರ್
ಬೆಂಗಳೂರು : ಧರ್ಮಸ್ಥಳದಲ್ಲಿ ಯೂಟ್ಯೂಬರ್‌ಗಳ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿನ್ನೆ ಎರಡು ಗುಂಪುಗಳ ನಡುವೆ ಘರ್ಷಣೆ ಆಗಿರುವ ಮಾಹಿತಿ ಬಂದಿದೆ. ಏಕೆ ಆಗಿದೆ? ಕಾರಣ ಏನು? ಉದ್ದೇಶ ಏನು? ಎಂಬ ವರದಿ ನೀಡಲು ಸೂಚನೆ ನೀಡಿದ್ದೇನೆ. ಧರ್ಮಸ್ಥಳ ಪ್ರಕರಣದಲ್ಲಿ ರಾಜ್ಯ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯಾಕೆ ಗಲಾಟೆ ಆಗುತ್ತಿದೆ ಅನ್ನುವುದು ನನಗೆ ಗೊತ್ತಿಲ್ಲ. ಜನರ ಆಗ್ರಹ ಹಿನ್ನೆಲೆಯಲ್ಲಿ ತನಿಖೆಗೆ ಎಸ್‌ಐಟಿ ರಚನೆ ಮಾಡಿದ್ದೇವೆ. ವ್ಯಕ್ತಿಯೊಬ್ಬ ಅನೇಕ ಶವ ಹೂತಿದ್ದೇನೆ ಎಂಬ ಮಾಹಿತಿ ನೀಡಿದ್ದಾನೆ. ಸುಮಾರು 13 ಸ್ಥಳಗಳಲ್ಲಿ ಉತ್ಖನನ ಕಾರ್ಯ ನಡೆದಿದೆ. 6ನೇ ಪಾಯಿಂಟ್‌ನಲ್ಲಿ ಪುರುಷನ ಅಸ್ಥಿಪಂಜರ ಸಿಕ್ಕಿದೆ ಎಂದಿದ್ದಾರೆ.
ಬೇರೆ ಗುಡ್ಡದಲ್ಲಿ ಮೂಳೆಗಳು ಸಿಕ್ಕಿವೆ. ಈ ಕುರಿತು ಎಫ್ ಎಸ್‌ಎಲ್‌ಗೆ ಮೂಳೆಗಳನ್ನು ಕಳುಹಿಸಿದ್ದಾರೆ. ನಿನ್ನೆ ಗಲಾಟೆ ಸಂಬಂಧ ಎರಡು ಗುಂಪಿನವರು ದೂರು ಕೊಟ್ಟಿದ್ದಾರೆ. ತನಿಖೆ ಮಾಡಿ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ಯಾರು ಏನು ಹೇಳಿಕೆ ಕೊಡುತ್ತಾರೆ ಅನ್ನೋದು ಮುಖ್ಯವಲ್ಲ. ಸತ್ಯ ಹೊರಬರುವುದು ಅಷ್ಟೇ ಮುಖ್ಯ. ಧರ್ಮಸ್ಥಳ ಪ್ರಕರಣದ ತನಿಖೆಯಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಗೃಹ ಸಚಿವರು ತಿಳಿಸಿದರು.
ಇದನ್ನೂ ಓದಿ: Dharmasthala burials case: ಧರ್ಮಸ್ಥಳ ಕೇಸ್ ಎಸ್‌ಐಟಿ ಮುಖ್ಯಸ್ಥ ಪ್ರಣಬ್ ಮೊಹಂತಿ ಕೇಂದ್ರ ಸೇವೆಗೆ ಆಯ್ಕೆ