DK Shivakumar: ನನಗೆ ಯಾರ ಜತೆಯೂ ಭಿನ್ನಾಭಿಪ್ರಾಯವಿಲ್ಲ, ಪಕ್ಷಕ್ಕಾಗಿ ತ್ಯಾಗ ಮಾಡಿಕೊಂಡೇ ಬಂದಿದ್ದೇನೆ: ಡಿ.ಕೆ. ಶಿವಕುಮಾರ್
DK Shivakumar: ಬೆಳಗಾವಿಯ ಸರ್ಕಿಟ್ ಹೌಸ್ ಬಳಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದರು. ಮಾಧ್ಯಮದವರು ಯಾರೋ ಹೇಳಿದ ಸುಳ್ಳನ್ನು ನಂಬಬೇಡಿ ಎಂದು ಪಕ್ಷದಲ್ಲಿ ಬಂಡಾಯವಿದೆ ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ.
ಬೆಳಗಾವಿ, ಜ.20: “ಪಕ್ಷವನ್ನು ಉಳಿಸುವುದು, ಸರ್ಕಾರವನ್ನು ಭದ್ರವಾಗಿಡುವುದೇ ನನ್ನ ಕರ್ತವ್ಯ. ಇದರ ಹೊರತಾಗಿ ನನಗೆ ಬೇರೆ ಯಾವುದೇ ಕರ್ತವ್ಯಗಳಿಲ್ಲ. ಬೇರೆ ಯಾವುದಕ್ಕೂ ನನ್ನ ಹೆಸರನ್ನು ಉಪಯೋಗಿಸಿಕೊಳ್ಳಬೇಡಿ. ನನಗೆ ಯಾರ ಜೊತೆಯೂ ಭಿನ್ನಾಭಿಪ್ರಾಯವಿಲ್ಲ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಹೇಳಿದರು.
ಬೆಳಗಾವಿಯ ಸರ್ಕಿಟ್ ಹೌಸ್ ಬಳಿ ಶಿವಕುಮಾರ್ ಅವರು ಮಾಧ್ಯಮಗಳಿಗೆ ಸೋಮವಾರ ಪ್ರತಿಕ್ರಿಯೆ ನೀಡಿ, “ಕಾರ್ಯಕರ್ತರ ರಕ್ಷಣೆ ಮಾಡುವುದು ನನ್ನ ಮೊದಲ ಕರ್ತವ್ಯ. ನಾನು ನನ್ನ ಕೆಲಸವನ್ನು ಮಾಡುತ್ತಿದ್ದೇನೆ. ನಾನು, ಪಕ್ಷ, ಹೈಕಮಾಂಡ್ ಉಂಟು. ಮಾಧ್ಯಮದವರು ಯಾರೋ ಹೇಳಿದ ಸುಳ್ಳನ್ನು ನಂಬಬೇಡಿ. ಶಿವಕುಮಾರ್ ಅವರಿವರನ್ನು ಭೇಟಿ ಮಾಡಿದರು, ಪಕ್ಷದಲ್ಲಿ ಬಂಡಾಯವಿದೆ ಎಂದೆಲ್ಲಾ ಹೇಳಬೇಡಿ” ಎಂದು ಕಿಡಿಯಾದರು.
ಕಾಂಗ್ರೆಸ್ ಪಕ್ಷದಲ್ಲಿ ಬಂಡಾಯ, ಆಂತರಿಕ ಬೇಗುದಿ ಇಲ್ಲವೇ ಎಂದು ಕೇಳಿದಾಗ, “ಯಾವ ಬಂಡಾಯವೂ ಇಲ್ಲ. ಯಾರ ಜತೆಯೂ ವೈಯಕ್ತಿಕ ಭಿನ್ನಾಭಿಪ್ರಾಯವಿಲ್ಲ. ನಾನು ಎಲ್ಲರನ್ನು ಸಮಾನವಾಗಿ ಕಾಣುವ ಅಧ್ಯಕ್ಷ ಸ್ಥಾನದಲ್ಲಿದ್ದು, ನನಗೆ ಎಲ್ಲರೂ ಒಂದೇ. ಎಲ್ಲರನ್ನೂ ಸರಿ ಸಮಾನವಾಗಿ ತೆಗೆದುಕೊಂಡು ಹೋಗುವುದು ನನ್ನ ಕರ್ತವ್ಯ” ಎಂದರು.
ಯಾರದ್ದೋ ಸುಳ್ಳನ್ನು ನಂಬಬೇಡಿ
ರಣದೀಪ್ ಸುರ್ಜೇವಾಲಾ ಅವರನ್ನೇ ಬದಲಾವಣೆ ಮಾಡಬೇಕು ಎಂದು ಕೆಲವು ಸಚಿವರು ರಾಹುಲ್ ಗಾಂಧಿ ಅವರಿಗೆ ದೂರು ನೀಡುತ್ತಿದ್ದಾರಂತೆ ಎಂಬ ಬಗ್ಗೆ ಕೇಳಿದಾಗ, “ಯಾರೋ ಸುಳ್ಳು ಮಾಹಿತಿ ನೀಡಿ ಮಾಧ್ಯಮಗಳ ಘನತೆಯನ್ನೇ ಹಾಳು ಮಾಡುತ್ತಿದ್ದಾರೆ. ನಾನು ಭಾನುವಾರ ಹಿರಿಯ ಶಾಸಕರ ಮನೆಗೆ ಭೇಟಿ ನೀಡಿದ್ದೆ. ಅವರಿಗೆ ಯಾರ ಜತೆಯೋ ಜಗಳ ಇತ್ತಂತೆ ಎಂದು ಒಂದಷ್ಟು ಟಿವಿ ಮಾಧ್ಯಮಗಳು ನೂತನ ಕಥೆಯನ್ನು ಸೃಷ್ಟಿಸಿದ್ದವು. ಫಿರೋಜ್ ಸೇಠ್ ಅವರು ಪಕ್ಷದ ಹಿರಿಯ ನಾಯಕರು. ನನ್ನ ಜತೆ ಶಾಸಕರಾಗಿ ಕೆಲಸ ಮಾಡಿದ್ದಾರೆ. ಬೆಳಗಾವಿಯಲ್ಲಿ ಸಮಾವೇಶ ನಡೆಯುತ್ತಿದೆ. ಅವರನ್ನು ಈ ಸಮಾವೇಶದ ಸಮಿತಿಯ ಸದಸ್ಯರನ್ನಾಗಿ ಮಾಡಲಾಗಿದೆ. ಸಂಘಟನೆ ದೃಷ್ಟಿಯಿಂದ ಜಿಲ್ಲಾ ಅಧ್ಯಕ್ಷರ ಜತೆ ಹೋಗಿ ಭೇಟಿ ಮಾಡಿದ್ದೆ. ಆದರೆ, ಮಾಧ್ಯಮಗಳು ಏನೇನೋ ವರದಿ ಬಿತ್ತರ ಮಾಡಿದವು. ಯಾರೋ ಸ್ಟೋರಿ ಪ್ಲಾಂಟ್ ಮಾಡಿದ್ದನ್ನು ನಂಬಿ ಮಾಧ್ಯಮಗಳು ತಮ್ಮ ಘನತೆಯನ್ನು ಹಾಳು ಮಾಡಿಕೊಳ್ಳಬಾರದು” ಎಂದರು.
ಕಾಂಗ್ರೆಸ್‌ನ 60 ಜನ ಶಾಸಕರು ಬಿಜೆಪಿಗೆ ಬರುತ್ತಾರೆ ಎನ್ನುವ ಯತ್ನಾಳ್ ಹೇಳಿಕೆ ಬಗ್ಗೆ ಕೇಳಿದಾಗ, “ಇಂತಹ ನೀಚ ರಾಜಕಾರಣದ ಬಗ್ಗೆ ನೀವು ಪ್ರಶ್ನೆ ಮಾಡಿದರೆ ಹೇಗೆ? ಇಂತಹ ಪ್ರಶ್ನೆಗಳಿಗೆ ನಾನು ಉತ್ತರಿಸುವುದಿಲ್ಲ. ಬೆಳಗಾವಿಯಲ್ಲಿ ನಡೆಯುತ್ತಿರುವ ರಾಷ್ಟ್ರ ಮಟ್ಟದ ಕಾರ್ಯಕ್ರಮದ ಬಗ್ಗೆ ಗಮನಹರಿಸಿ. ನಿಮಗೆ ಯಾರು ಏನೇ ಹೇಳಿದ್ದರೂ ಅದೆಲ್ಲಾ ಸುಳ್ಳಿನ ಕಂತೆ. ಕಾಂಗ್ರೆಸ್‌ಗೆ ಶಕ್ತಿ ತುಂಬಲು ಅನೇಕ ಹೋರಾಟ, ತ್ಯಾಗ ಮಾಡಲಾಗಿದೆ. ಈ ಬೆಳಗಾವಿ ಭೂಮಿಯಿಂದಲೇ ಗಾಂಧಿ ಬಾವಿಯಿಂದ ನೀರು ತೆಗೆದು ಸ್ವಚ್ಛಗೊಳಿಸಿ ಪಕ್ಷವನ್ನು ಅಧಿಕಾರಕ್ಕೆ ತರಲಾಗಿದೆ” ಎಂದರು.
2023ರ ಚುನಾವಣೆಯಲ್ಲಿ ಫಿರೋಜ್ ಸೇಠ್ ಅವರಿಗೆ ಟಿಕೆಟ್ ಸಿಗದಿದ್ದಕ್ಕೆ ಸತೀಶ್ ಜಾರಕಿಹೊಳಿ ಅವರು ಕಾರಣ ಎನ್ನುವ ಮಾತಿನ ಬಗ್ಗೆ ಕೇಳಿದಾಗ, “ನನಗೆ ಈ ವಿಚಾರದ ಬಗ್ಗೆ ಗೊತ್ತಿಲ್ಲ. ನನಗೆ ಎಲ್ಲರೂ ಒಂದೇ. ಕಾರ್ಯಕರ್ತರು, ಶಾಸಕರು, ಸಚಿವರು ಎಲ್ಲರೂ ಒಂದೇ. ನಮ್ಮ ಪಕ್ಷದ ಶಿಸ್ತಿನ ಚೌಕಟ್ಟಿನಲ್ಲಿ ಕೆಲಸ ಮಾಡುವವರ ಎದುರು ತಲೆಬಾಗಿ ಅವರ ಸೇವೆ ಮಾಡುತ್ತೇನೆ. ನನಗೆ ಪಕ್ಷವೇ ಮುಖ್ಯ. ನನಗೆ ಕೊಟ್ಟಿರುವ ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ಕಾಲ, ಕಾಲದಿಂದಲೂ ನಿರ್ವಹಿಸಿಕೊಂಡು ಬಂದಿದ್ದೇನೆ” ಎಂದರು.
ಪಕ್ಷಕ್ಕಾಗಿ ತ್ಯಾಗ ಮಾಡಿಕೊಂಡು ಬಂದಿದ್ದೇನೆ
“ಪಕ್ಷಕ್ಕಾಗಿ ಮೊದಲಿನಿಂದಲೂ ಹಲವಾರು ತ್ಯಾಗಗಳನ್ನು ಮಾಡಿದ್ದೇನೆ. ಧರಂಸಿಂಗ್ ಅವರ ನೇತೃತ್ವದ ಸಮ್ಮಿಶ್ರ ಸರ್ಕಾರ ಹಾಗೂ ಸಿದ್ದರಾಮಯ್ಯ ಅವರ ಹಿಂದಿನ ಸರ್ಕಾರದಲ್ಲಿಯೂ ಉಸಿರು ಬಿಗಿ ಹಿಡಿದುಕೊಂಡು ತ್ಯಾಗ ಮಾಡಿದ್ದೇನೆ. ನನಗೆ ಪಕ್ಷವೇ ಮುಖ್ಯ. ನಾನು ಪಕ್ಷದಿಂದ ಬೆಳೆದವನು. ವಿದ್ಯಾರ್ಥಿ ನಾಯಕನಾಗಿದ್ದ ನನ್ನನ್ನು ಗುರುತಿಸಿ ಪಕ್ಷ ಟಿಕೆಟ್ ನೀಡಿತ್ತು. ಮಾಧ್ಯಮದವರು ಯಾರ ಮಾತನ್ನೋ ಕೇಳಬೇಡಿ” ಎಂದರು.
ಎಷ್ಟು ದಿನ ಶಿವಕುಮಾರ್ ತ್ಯಾಗ ಮಾಡುತ್ತಾರೆ, ತ್ಯಾಗಕ್ಕೆ ಫಲ ಯಾವಾಗ ಸಿಗುತ್ತದೆ ಎಂದು ಕೇಳಿದಾಗ, “ನಾನು ತ್ಯಾಗ ಮಾಡಿಕೊಂಡೆ ಬರುತ್ತೇನೆ. ನನಗೆ ಫಲದ ಅವಶ್ಯಕತೆಯೇ ಇಲ್ಲ. ಜನಕ್ಕೆ ಒಳೆಯದಾಗುತ್ತಿದೆಯಲ್ಲ, ಅಷ್ಟು ಸಾಕು ನನಗೆ” ಎಂದು ಹೇಳಿದರು.
ಸಾಮಾಜಿಕ ನ್ಯಾಯ, ಸಂವಿಧಾನ ಉಳಿಸುವುದು ನಮ್ಮ ಮೂಲ ಮಂತ್ರ
“ಮಹಾತ್ಮ ಗಾಂಧಿ ಅವರ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸ್ಮರಣೆ, ಸಂವಿಧಾನ ರಕ್ಷಣೆಯೇ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶದ ಉದ್ಧೇಶ. ಸಾಮಾಜಿಕ ನ್ಯಾಯವನ್ನು ಉಳಿಸುವುದೇ ನಮ್ಮ ಮೂಲ ಮಂತ್ರ. ಕಳೆದ ಬಾರಿ ರೂಪಿಸಿದ ಕಾರ್ಯಕ್ರಮಗಳನ್ನು ಈ ಬಾರಿಯೂ ಮುಂದಿವರೆಸಲಾಗುವುದು” ಎಂದು ಹೇಳಿದರು.
“ಸುಮಾರು 60 ಕ್ಕೂ ಹೆಚ್ಚು ರಾಷ್ಟ್ರೀಯ ಮಟ್ಟದ ನಾಯಕರು, ಅತಿಥಿಗಳು, ಸಂಸದರು, ಕಾರ್ಯಕಾರಿ ಸಮಿತಿ ಸದಸ್ಯರು ಬೆಳಗಾವಿ ಸಮಾವೇಶಕ್ಕೆ ಆಗಮಿಸುತ್ತಿದ್ದಾರೆ. ಸಚಿವರು, ಶಾಸಕರು, ಹಿರಿಯ ನಾಯಕರು ಕಾರ್ಯಕ್ರದಲ್ಲಿ ಭಾಗವಹಿಸಲಿದ್ದು, ಒಂದಷ್ಟು ನಾಯಕರಿಗೆ ಮುಖ್ಯ ವೇದಿಕೆಯಲ್ಲಿ ಅವಕಾಶ ಮಾಡಿಕೊಡಲಾಗಿದೆ” ಎಂದು ಹೇಳಿದರು.
ದೆಹಲಿ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ನಿಮ್ಮ ಹೆಸರಿದೆ ಎಂದು ಕೇಳಿದಾಗ, “ನಾನೇ ಖುದ್ದಾಗಿ ದೆಹಲಿಗೆ ಹೋಗಿ ಮಹಿಳೆಯರಿಗೆ ತಿಂಗಳಿಗೆ 2,500 ರೂಪಾಯಿ ನೀಡುವ ಪ್ಯಾರಿ ದೀದಿ ಯೋಜನೆ ಪ್ರಕಟಣೆ ಮಾಡಿದ್ದೆ” ಎಂದರು.
ಎಲ್ಲಾ ರಾಜ್ಯಗಳ ಸಿಎಂಗಳಿದ್ದು ಸಿದ್ದರಾಮಯ್ಯ ಅವರನ್ನು ಕೈ ಬಿಟ್ಟಿರುವ ಬಗ್ಗೆ ಕೇಳಿದಾಗ, “ಸಿದ್ದರಾಮಯ್ಯ ಅವರು ಬಜೆಟ್ ತಯಾರಿಯಲ್ಲಿದ್ದಾರೆ. ಎಲ್ಲಾ ಮಂತ್ರಿಗಳು, ಇಲಾಖಾ ಅಧಿಕಾರಿಗಳ ಜತೆ ಚರ್ಚೆ ನಡೆಸಬೇಕಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಎಐಸಿಸಿ ಸಮಯ ನೀಡಿದೆ” ಎಂದರು.
ಈ ಸುದ್ದಿಯನ್ನೂ ಓದಿ | R T Vittal Murthy Column: ನಿಖಿಲ್ ಇಲ್ಲಿಗೆ, ಕುಮಾರಣ್ಣ ದಿಲ್ಲಿಗೆ
ಸುವರ್ಣಸೌಧದ ಗಾಂಧಿ ಪ್ರತಿಮೆಯನ್ನು ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತನೆ ಮಾಡಿದ್ದಾರೆಯೇ ಎನ್ನುವ ಬಗ್ಗೆ ಕೇಳಿದಾಗ, “ಇದನ್ನು ನಿರ್ವಹಿಸಿದ್ದು ಲೋಕೋಪಯೋಗಿ ಇಲಾಖೆ, ಶಿಲ್ಪಿ ಯಾರು ಎಂದು ನಾನು ಬಹಿರಂಗಪಡಿಸಲು ಆಗುವುದಿಲ್ಲ” ಎಂದರು.