ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಖಮೇನಿ ಹತ್ಯೆಯ ಬಗ್ಗೆ ಭಾರತದ ನಿಲುವನ್ನು ಟೀಕಿಸಿದ ಸೋನಿಯಾ ಗಾಂಧಿ; ಕಾಂಗ್ರೆಸ್‌ ನಾಯಕಿ ಕಾಶ್ಮೀರವನ್ನು ಉಲ್ಲೇಖಿಸಿದ್ದೇಕೆ?

Sonia Gandhi criticises Centre: ಇರಾನ್‌ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿಯ ಹತ್ಯೆಯ ಬಗ್ಗೆ ಭಾರತ ಸರ್ಕಾರದ ಮೌನವನ್ನು ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಪ್ರಶ್ನಿಸಿದ್ದಾರೆ. ಮೌನವಾಗಿರುವುದು, ತಟಸ್ಥ ಧೋರಣೆಯಲ್ಲ ಬದಲಾಗಿ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವುದು ಎಂದು ಹೇಳಿದ್ದಾರೆ. ಭಾರತಕ್ಕೆ ಇರಾನ್ ನೆರವಾಗಿರುವ ಸಂದರ್ಭಗಳನ್ನು ಅವರು ನೆನಪಿಸಿದ್ದಾರೆ.

ಖಮೇನಿ ಸಾವಿನ ಬಗ್ಗೆ ಕೇಂದ್ರದ ನಿಲುವನ್ನು ಟೀಕಿಸಿದ ಸೋನಿಯಾ ಗಾಂಧಿ

ಸೋನಿಯಾ ಗಾಂಧಿ ಮತ್ತು ಖಮೇನಿ (ಸಂಗ್ರಹ ಚಿತ್ರ) -

Priyanka P
Priyanka P Mar 3, 2026 3:59 PM

ನವದೆಹಲಿ, ಮಾ. 3: ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ (Ayatollah Ali Khamenei) ಅವರ ಹತ್ಯೆಯ ಬಗ್ಗೆ ಭಾರತ ಸರ್ಕಾರದ ಮೌನವನ್ನು ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ (Sonia Gandhi) ಪ್ರಶ್ನಿಸಿದ್ದಾರೆ. ಈ ಸಂದರ್ಭದಲ್ಲಿ ಮೌನವಾಗಿರುವುದು ತಟಸ್ಥ ಧೋರಣೆಯಲ್ಲ, ಬದಲಾಗಿ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವುದು ಎಂದು ಹೇಳಿದ್ದಾರೆ. ʼದಿ ಇಂಡಿಯನ್ ಎಕ್ಸ್‌ಪ್ರೆಸ್‌ʼ ಪತ್ರಿಕೆಯಲ್ಲಿ ಬರೆದ ಲೇಖನದಲ್ಲಿ ಅವರು, ದೆಹಲಿ–ಟೆಹರಾನ್‌ ನಡುವಿನ ಸಂಬಂಧಗಳು ಸಾಂಸ್ಕೃತಿಕ ಹಾಗೂ ತಂತ್ರಾತ್ಮಕ ಎಂದು ಬರೆದಿದ್ದಾರೆ. ಹಲವು ಸಂದರ್ಭಗಳಲ್ಲಿ ಇರಾನ್ (Iran), ಭಾರತಕ್ಕೆ ನೆರವಾದ ವಿಷಯವನ್ನು ಅವರು ನರೇಂದ್ರ ಮೋದಿ (Narendra Modi) ಸರ್ಕಾರಕ್ಕೆ ನೆನಪಿಸಿದ್ದಾರೆ.

ಖಮೇನಿ ಅವರ ಸಾವಿನ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ಹೇಳಿಕೆ ನೀಡಿಲ್ಲ. ಆದರೆ ಮಧ್ಯಪ್ರಾಚ್ಯ ಪ್ರದೇಶದಲ್ಲಿ ಸಂಯಮ ಮತ್ತು ಉದ್ವಿಗ್ನತೆಯನ್ನು ಕಡಿಮೆ ಮಾಡಲು ಕರೆ ನೀಡಿದೆ. ಭಾರತದ ಈ ನಿಲುವು ಜಗತ್ತಿನ ಪ್ರಮುಖ ಶಕ್ತಿಗಳ ಪ್ರತಿಕ್ರಿಯೆಯನ್ನೇ ಪ್ರತಿಬಿಂಬಿಸುತ್ತದೆ. ವಿದೇಶಾಂಗ ಪ್ರತಿಕ್ರಿಯೆಗಳು ಮುಖ್ಯವಾಗಿ ರಾಷ್ಟ್ರೀಯ ಹಿತಾಸಕ್ತಿಯನ್ನು ಆದ್ಯತೆಯಾಗಿ ಇಟ್ಟುಕೊಂಡೇ ರೂಪಿಸಲಾಗುತ್ತವೆ

ಮಾರ್ಚ್ 1ರಂದು ಇರಾನ್ ತನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಸಯ್ಯದ್ ಅಲಿ ಹೊಸೇನಿ ಖಮೇನಿ ಅವರನ್ನು ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ಹತ್ಯೆ ಮಾಡಲಾಗಿದೆ ಎಂದು ದೃಢಪಡಿಸಿತು. ನಡೆಯುತ್ತಿರುವ ಮಾತುಕತೆಗಳ ಮಧ್ಯೆ ಇರಾನ್‍ನ ಮುಖ್ಯಸ್ಥರ ಹತ್ಯೆಯು ಸಮಕಾಲೀನ ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ಗಂಭೀರ ಬಿರುಕು ಮೂಡಿಸುತ್ತದೆ ಎಂದು ಸೋನಿಯಾ ಗಾಂಧಿ ಹೇಳಿದರು. ಈ ವಿಚಾರದಲ್ಲಿ ದೆಹಲಿಯ ಮೌನವೂ ಅಷ್ಟೇ ಗಮನಾರ್ಹವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಹಾರ್ಮುಜ್‌ ಜಲಸಂಧಿಯಲ್ಲಿ ಡಿಜಿಟಲ್‌ ಬ್ಲಾಕೌಟ್‌, ದಿಕ್ಕು ತೋಚದೆ ನಿಂತ ನೂರಾರು ತೈಲ ನೌಕೆಗಳು!

ಆರಂಭದಲ್ಲಿ, ಅಮೆರಿಕ-ಇಸ್ರೇಲ್‌ಗಳ ಬೃಹತ್ ದಾಳಿಯನ್ನು ನಿರ್ಲಕ್ಷಿಸಿ, ಪ್ರಧಾನಿ ನರೇಂದ್ರ ಮೋದಿ ಯುಎಇ ಮೇಲೆ ಇರಾನ್ ನಡೆಸಿದ ಪ್ರತೀಕಾರದ ದಾಳಿಯನ್ನು ಖಂಡಿಸುವುದಕ್ಕೆ ಮಾತ್ರ ಸೀಮಿತರಾದರು. ಆದರೆ, ಹಿಂದಿನ ದಾಳಿಗಳನ್ನು ಉಲ್ಲೇಖಿಸಲಿಲ್ಲ ಎಂದು ಕಾಂಗ್ರೆಸ್‌ ನಾಯಕಿ ಹೇಳಿದ್ದಾರೆ.

ವಿದೇಶಿ ನಾಯಕರನ್ನು ಗುರಿಯಾಗಿಸಿಕೊಂಡು ಹತ್ಯೆ ಮಾಡಿದಂತಹ ಘಟನೆಗೆ ಸಂಬಂಧಿಸಿ, ನಮ್ಮ ದೇಶದಿಂದ ಸ್ವಾಯತ್ತತೆ (Sovereignty) ಅಥವಾ ಅಂತಾರಾಷ್ಟ್ರೀಯ ಕಾನೂನುಗಳ ಬಗ್ಗೆ ಸ್ಪಷ್ಟವಾದ ರಕ್ಷಣಾತ್ಮಕ ನಿಲುವು ವ್ಯಕ್ತವಾಗದಿದ್ದಾಗ ಮತ್ತು ತಟಸ್ಥತೆ ಕಳೆದುಹೋದಾಗ, ಅದು ನಮ್ಮ ವಿದೇಶಾಂಗ ನೀತಿಯ ದಿಕ್ಕು ಹಾಗೂ ವಿಶ್ವಾಸಾರ್ಹತೆ ಬಗ್ಗೆ ಗಂಭೀರ ಅನುಮಾನಗಳನ್ನು ಎಬ್ಬಿಸುತ್ತದೆ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.

ಯುದ್ಧವನ್ನು ಅಧಿಕೃತವಾಗಿ ಘೋಷಿಸದೆ ಮತ್ತು ರಾಜತಾಂತ್ರಿಕ ಪ್ರಕ್ರಿಯೆ ನಡೆಯುತ್ತಿರುವ ಸಮಯದಲ್ಲೇ ಈ ಹತ್ಯೆ ನಡೆದಿರುವುದನ್ನು ಉಲ್ಲೇಖಿಸಿ, ಇಂತಹ ಘಟನೆಗಳಿಗೆ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದಿಂದ ತತ್ವಾಧಾರಿತ ವಿರೋಧ ವ್ಯಕ್ತವಾಗದಿದ್ದರೆ, ಅಂತಾರಾಷ್ಟ್ರೀಯ ನಿಯಮಗಳ ಕುಸಿತವನ್ನು ಸಾಮಾನ್ಯವೆಂದು ಒಪ್ಪಿಕೊಳ್ಳುವುದು ಇನ್ನಷ್ಟು ಸುಲಭವಾಗುತ್ತದೆ ಎಂದು ಅವರು ಬರೆದಿದ್ದಾರೆ.

ಈ ಅಸಮಾಧಾನವನ್ನು ಮತ್ತಷ್ಟು ಹೆಚ್ಚಿಸಿದ್ದು, ಪ್ರಧಾನಿ ಮೋದಿ ಅವರ ಇಸ್ರೇಲ್ ಭೇಟಿ. ಖಮೇನಿ ಹತ್ಯೆಗೆ ಕೇವಲ 48 ಗಂಟೆಗಳ ಮುನ್ನವೇ ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್ ಭೇಟಿಯಿಂದ ಹಿಂದಿರುಗಿದ್ದರು. ಅಲ್ಲಿ ಅವರು ಬೆಂಜಮಿನ್ ನೆತನ್ಯಾಹು ಸರ್ಕಾರಕ್ಕೆ ಸ್ಪಷ್ಟ ಬೆಂಬಲವನ್ನು ಪುನರುಚ್ಚರಿಸಿದ್ದರು. ಇದೇ ವೇಳೆ, ಗಾಜಾ ಸಂಘರ್ಷದಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿ ನಾಗರಿಕರ ಸಾವು-ನೋವಿನ ಪ್ರಮಾಣದ ಕುರಿತು ಜಾಗತಿಕ ಮಟ್ಟದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿರುವುದನ್ನೂ ಸೋನಿಯಾ ಗಾಂಧಿ ಅವರು ಉಲ್ಲೇಖಿಸಿದ್ದಾರೆ.

ರಿಯಾದ್‌ನ ಅಮೆರಿಕ ರಾಯಭಾರ ಕಚೇರಿ ಮೇಲೆ ಇರಾನ್ ಡ್ರೋನ್ ದಾಳಿ

ಇದೇ ವೇಳೆ ಸೋನಿಯಾ ಗಾಂಧಿ ಕಾಶ್ಮೀರ ವಿಚಾರವನ್ನೂ ಉಲ್ಲೇಖಿಸಿದರು. 1994ರಲ್ಲಿ ಇಸ್ಲಾಮಿಕ್ ಸಹಕಾರ ಸಂಘಟನೆಯೊಳಗಿನ ವಿಭಾಗಗಳು ಕಾಶ್ಮೀರದ ಕುರಿತು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗದಲ್ಲಿ ಭಾರತದ ವಿರುದ್ಧ ನಿರ್ಣಯವನ್ನು ಮಂಡಿಸಲು ಪ್ರಯತ್ನಿಸಿದಾಗ, ಟೆಹರಾನ್‌ ಆ ಪ್ರಯತ್ನವನ್ನು ತಡೆಯುವಲ್ಲಿ ಪರಿಣಾಮಕಾರಿ ಪಾತ್ರ ವಹಿಸಿತು. ಆ ಹಸ್ತಕ್ಷೇಪವು ಭಾರತದ ಆರ್ಥಿಕ ಸೂಕ್ಷ್ಮ ಹಂತದಲ್ಲಿ ಕಾಶ್ಮೀರ ವಿಚಾರದ ಅಂತಾರಾಷ್ಟ್ರೀಯೀಕರಣವನ್ನು ತಡೆಯಲು ಸಹಾಯ ಮಾಡಿತು ಎಂದು ಅವರು ಹೇಳಿದ್ದಾರೆ.

ಭಾರತವು ಬಹುಕಾಲದಿಂದ ವಸುಧೈವ ಕುಟುಂಬಕಂ- ಜಗತ್ತು ಒಂದು ಕುಟುಂಬ ಎಂಬ ಆದರ್ಶವನ್ನು ಮುಂದಿಟ್ಟುಕೊಂಡಿದೆ. ನಿಯಮಾಧಾರಿತ ಜಾಗತಿಕ ವ್ಯವಸ್ಥೆ ಒತ್ತಡಕ್ಕೆ ಒಳಗಾಗಿರುವ ಸಂದರ್ಭಗಳಲ್ಲಿ ಮೌನವಾಗಿರುವುದು ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವುದಕ್ಕೆ ಸಮಾನ ಎಂದು ಸೋನಿಯಾ ಗಾಂಧಿ ಸುದೀರ್ಘ ಲೇಖನದಲ್ಲಿ ಬರೆದುಕೊಂಡಿದ್ದಾರೆ.