Dr. M.R. Doreswamy: ಪಿಇಎಸ್ ವಿಶ್ವವಿದ್ಯಾಲಯದ ಕುಲಾಧಿಪತಿ, ಮಾಜಿ ಎಂಎಲ್‌ಸಿ ಪ್ರೊ.ಎಂ.ಆರ್. ದೊರೆಸ್ವಾಮಿ ಇನ್ನಿಲ್ಲ
ಬೆಂಗಳೂರಿನ ಪಿಇಎಸ್ ವಿಶ್ವವಿದ್ಯಾಲಯದ ಕುಲಾಧಿಪತಿ, ರಾಜ್ಯ ಸರ್ಕಾರದ ಶೈಕ್ಷಣಿಕ ಸುಧಾರಣೆಗಳ ಸಲಹೆಗಾರಾಗಿದ್ದ, ಮಾಜಿ ಎಂಎಲ್‌ಸಿ ಪ್ರೊ.ಎಂ.ಆರ್. ದೊರೆಸ್ವಾಮಿ (87) ನಿಧನ ಹೊಂದಿದ್ದಾರೆ. ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರೊ.ಎಂ.ಆರ್. ದೊರೆಸ್ವಾಮಿ.

ಬೆಂಗಳೂರು: ಬೆಂಗಳೂರಿನ ಪಿಇಎಸ್ ವಿಶ್ವವಿದ್ಯಾಲಯ (PES University)ದ ಕುಲಾಧಿಪತಿ, ರಾಜ್ಯ ಸರ್ಕಾರದ ಶೈಕ್ಷಣಿಕ ಸುಧಾರಣೆಗಳ ಸಲಹೆಗಾರಾಗಿದ್ದ, ಮಾಜಿ ಎಂಎಲ್‌ಸಿ ಪ್ರೊ.ಎಂ.ಆರ್. ದೊರೆಸ್ವಾಮಿ (Dr. M.R. Doreswamy) ಅವರು ಗುರುವಾರ (ಮಾ. 6) ಬೆಂಗಳೂರಿನಲ್ಲಿ ನಿಧನ ಹೊಂದಿದರು. ಅವರಿಗೆ 87 ವರ್ಷ ವಯಸ್ಸಾಗಿತ್ತು. ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ನಾಡಿನ ಅತ್ಯುನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಪಿಇಎಸ್ ಅನ್ನು ಕಟ್ಟಿ ಬೆಳೆಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಕನ್ನಡದ ಬಗ್ಗೆ ಕಳಕಳಿ, ಕನ್ನಡ ಶಾಲೆಗಳ ಕುರಿತು ಕಾಳಜಿ ಮತ್ತು ಕನ್ನಡ ಶಾಲಾ ಮಕ್ಕಳ ಬಗ್ಗೆ ಅಪಾರ ಪ್ರೀತಿ ಹೊಂದಿದ್ದ ದೊರೆಸ್ವಾಮಿ ಅವರು ಇವುಗಳ ಅಭಿವೃದ್ಧಿಗಾಗಿ ಹತ್ತಾರು ಸಲಹೆಗಳನ್ನು ನೀಡಿದ್ದರು. ಇವರ ಈ ಸೇವೆಯನ್ನು ಗಮನಿಸಿ ರಾಜ್ಯ ಸರ್ಕಾರ ಶಿಕ್ಷಣ ಸುಧಾರಣೆಗಳ ಸಲಹೆಗಾರರನ್ನಾಗಿ ನೇಮಕ ಮಾಡಿತ್ತು.
ಸರ್ಕಾರಕ್ಕೆ ಸಲಹೆ ನೀಡುವುದರ ಜತೆಗೆ ತಾವೇ ಸುಮಾರು 40 ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಆಮೂಲಾಗ್ರ ಬದಲಾವಣೆ ತರುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಕೃಷಿ ಕುಟುಂಬದಲ್ಲಿ ಜನಿಸಿದ ಇವರು ವಿಶ್ವ ಮಟ್ಟದಲ್ಲೇ ಪ್ರಸಿದ್ಧ ಪಿಇಎಸ್ ವಿಶ್ವವಿದ್ಯಾಲಯ ಸ್ಥಾಪಿಸಿದ್ದರು.
ಪಿಇಎಸ್ ಸಂಸ್ಥೆ ಹುಟ್ಟಿದ್ದು ಹೇಗೆ?
5 ದಶಕಗಳ ಹಿಂದೆ ಅಂದರೆ 1973ರಲ್ಲಿ ಬೆಂಗಳೂರಿನ ಗವಿಪುರ ಗುಟ್ಟಹಳ್ಳಿಯಲ್ಲಿ ತಾತ್ಕಾಲಿಕ ಕಟ್ಟಡವೊಂದರಲ್ಲಿ ಕೇವಲ 45 ವಿದ್ಯಾರ್ಥಿಗಳೊಂದಿಗೆ ಪಿಯು ಕಾಲೇಜು ಆರಂಭಿಸಿದ ದೊರೆಸಾಮಿ ಬಳಿಕ ಪೀಪಲ್ಸ್ ಎಜುಕೇಷನ್ ಸೊಸೈಟಿ (PES) ಎಂಬ ಬ್ರ್ಯಾಂಡ್ ಕಟ್ಟಿ, ಬೃಹದಾಕಾರವಾಗಿ ಬೆಳೆಸಿ ದೇಶ-ವಿದೇಶಗಳಲ್ಲಿ ಛಾಪು ಮೂಡಿಸಿದ್ದರು. 45 ವಿದ್ಯಾರ್ಥಿಗಳೊಂದಿಗೆ ಆರಂಭವಾದ ವಿದ್ಯಾ ಸಂಸ್ಥೆಯಲ್ಲಿ ಪ್ರಸ್ತುತ ಬರೋಬ್ಬರಿ 25 ಸಾವಿರ ವಿದ್ಯಾರ್ಥಿಗಳು ಓದುತ್ತಿದ್ದಾರೆ. 6 ಸಾವಿರ ಬೋಧಕ, ಬೋಧಕೇತರ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಈ ಸುದ್ದಿಯನ್ನೂ ಓದಿ: Khaji Arshad Ali: ವಿಧಾನ ಪರಿಷತ್ ಮಾಜಿ ಸದಸ್ಯ ಖಾಜಿ ಅರ್ಷದ್ ಅಲಿ ನಿಧನ
1973ರಲ್ಲಿ ಪಿಯು ಕಾಲೇಜಿನಿಂದ ಆರಂಭವಾದ ಪಿಇಎಸ್ ಸಂಸ್ಥೆ ಇಂದು ಸುಸಜ್ಜಿತ ಆತ್ಯಾಧುನಿಕ ಸೌಲಭ್ಯಗಳೊಂದಿಗೆ ಬನಶಂಕರಿ 100 ಅಡಿ ರಸ್ತೆಯಲ್ಲಿ ಪಿಇಎಸ್ ವಿಶ್ವವಿದ್ಯಾಲಯ, ಎಲೆಕ್ಟ್ರಾನಿಕ್ ಸಿಟಿಯಲ್ಲಿ ವೈದ್ಯಕೀಯ ಕಾಲೇಜು ಆರಂಭಿಸಿದೆ. ಆಂಧ್ರಪ್ರದೇಶದ ಕುಪಂನಲ್ಲಿ ಮೆಡಿಕಲ್ ಕಾಲೇಜು ಹೊಂದಿದೆ.
ಬೆಂಗಳೂರಿನಲ್ಲಿ ಪಿಇಎಸ್ ವಿವಿಯ 3 ಕ್ಯಾಂಪಸ್‌ಗಳಿವೆ. ಅವುಗಳೆಂದರೆ: ಪಿಇಎಸ್ ವಿವಿ- ರಿಂಗ್‌ರೋಡ್ ಕ್ಯಾಂಪಸ್, ಪಿಇಎಸ್ ವಿವಿ -ಎಲೆಕ್ಟ್ರಾನಿಕ್ ಸಿಟಿ ಕ್ಯಾಂಪಸ್ ಮತ್ತು ಪಿಇಎಸ್ ವಿವಿ-ಹನುಮಂತ ನಗರ ಕ್ಯಾಂಪಸ್.
ಎಂಜಿನಿಯರಿಂಗ್ ಶಿಕ್ಷಣಕ್ಕೆ ಪಿಇಎಸ್ ವಿವಿ ದೇಶದಲ್ಲೇ ಪ್ರಸಿದ್ಧವಾಗಿದೆ. ಇದರ ಜತೆಗೆ ಬೆಂಗಳೂರಿನಲ್ಲಿ ಪಿಯು, ಪದವಿ, ಸ್ನಾತಕೋತ್ತರ ಪದವಿ, ಸಂಶೋಧನೆ ಕೋರ್ಸ್‌ಗಳು ಲಭ್ಯ. ಅಲ್ಲದೆ ಪಾಲಿಟೆಕ್ನಿಕ್, ನರ್ಸಿಂಗ್, ಬಿಸಿನೆಸ್ ಮ್ಯಾನೇಜ್‌ಮೆಂಟ್, ಹೊಟೇಲ್ ಮ್ಯಾನೇಜ್‌ಮೆಂಟ್, ಪ್ಯಾರಾ ಮೆಡಿಕಲ್, ಸಿಬಿಎಸ್‌ಸಿ ಶಾಲೆಗಳು ಸೇರಿದಂತೆ ಒಟ್ಟು 50ಕ್ಕೂ ಹೆಚ್ಚು ಕೋರ್ಸ್‌ಗಳು ಲಭ್ಯ ಇದೆ. ಪ್ರೊ.ಎಂ.ಆರ್. ದೊರೆಸ್ವಾಮಿ ಅವರ ನಿಧನಕ್ಕೆ ವಿವಿಧ ರಂಗ ಗಣ್ಯರು ಸಂತಾಪ ಸೂಚಿಸಿದ್ದಾರೆ.