Congress politics: ಸಿಎಂ, ಡಿಸಿಎಂ ಬಳಿಕ ಈಗ ಕೈ ಶಾಸಕರಿಂದಲೇ ಡಿನ್ನರ್ ಮೀಟಿಂಗ್!
ಮೊದಲ ಬಾರಿ ಗೆದ್ದ 30ಕ್ಕೂ ಹೆಚ್ಚು ಶಾಸಕರು ನಗರದ ಖಾಸಗಿ ಹೋಟೆಲಿನಲ್ಲಿ ಡಿನ್ನರ್ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಎರಡೂ ಬಣದ ಶಾಸಕರಿದ್ದರು. ಸಭೆಯಲ್ಲಿ ಶಾಸಕರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಒತ್ತಡ ಹೇರುವ ಚರ್ಚೆ ನಡೆದಿದೆ. ಈ ಕುರಿತು ಸಹಿ ಮಾಡಿದ ಪತ್ರವನ್ನು ಈಗಾಗಲೇ ಹೈಕಮಾಂಡ್‌ಗೆ ಕಳುಹಿಸಲಾಗಿದೆ.
ಕಾಂಗ್ರೆಸ್ ಶಾಸಕರ ಮೀಟಿಂಗ್ -
ಬೆಂಗಳೂರು, ಮಾ.18: ಡಿಸಿಎಂ ಡಿಕೆ ಶಿವಕುಮಾರ್(DK Shivakumar), ಸಿಎಂ ಸಿದ್ದರಾಮಯ್ಯ (CM Siddaramaiah) ಬಳಿಕ ಇದೀಗ ಕಾಂಗ್ರೆಸ್ (Congress politics) ಶಾಸಕರೇ ಡಿನ್ನರ್ ಮೀಟಿಂಗ್ (Dinner Meeting) ಮಾಡಿದ್ದಾರೆ. ಮೊದಲ ಬಾರಿ ಗೆದ್ದ 30ಕ್ಕೂ ಹೆಚ್ಚು ಶಾಸಕರು ನಗರದ ಖಾಸಗಿ ಹೋಟೆಲಿನಲ್ಲಿ ಡಿನ್ನರ್ ಸಭೆ ನಡೆಸಿದ್ದಾರೆ. ಮೊದಲ ಬಾರಿ ಗೆದ್ದ ಶಾಸಕರಿಗೆ 4-5 ಹಿರಿಯ ಶಾಸಕರ ಸಾಥ್ ನೀಡಿದ್ದಾರೆ.
ಸಂಪುಟ ಪುನಾರಚನೆ ನಡೆದರೆ ತಮ್ಮನ್ನು ಪರಿಗಣಿಸುವಂತೆ ಈ ಹಿಂದೆ ಹೊಸದಾಗಿ ಆಯ್ಕೆಯಾದ ಶಾಸಕರು ಬೇಡಿಕೆ ಇಟ್ಟಿದ್ದರು. ಸಿಎಂ ಬದಲಾವಣೆ, ಸಂಪುಟ ಪುನಾರಚನೆಯ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ಕೈ ಶಾಸಕರು ಸಭೆ ನಡೆಸಿರುವುದು ಕುತೂಹಲ ಮೂಡಿಸಿದೆ.
ಈ ಹಿಂದೆ ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಪಟ್ಟವನ್ನು ಅಲಂಕರಿಸಿ 6 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಶಾಸಕರಿಗೆ ಡಿನ್ನರ್ ಕೊಟ್ಟಿದ್ದರು. ಬಳಿಕ ಸಿಎಂ ಸಿದ್ದರಾಮಯ್ಯನವರು ಮೊನ್ನೆ(ಮಾ.16 ರಂದು) 14 ಮಂದಿ ಶಾಸಕರ ಜೊತೆ ತಮ್ಮ ಕಾವೇರಿ ನಿವಾಸದಲ್ಲಿ ಡಿನ್ನರ್ ಸಭೆ ನಡೆಸಿದ್ದರು.
ಅಚ್ಚರಿಯೆಂದರೆ, ಈ ಸಭೆಯಲ್ಲಿ ಸಿಎಂ ಮತ್ತು ಡಿಸಿಎಂ ಎರಡೂ ಬಣದ ಶಾಸಕರಿದ್ದರು. ಸಭೆಯಲ್ಲಿ ಶಾಸಕರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಒತ್ತಡ ಹೇರುವ ಚರ್ಚೆ ನಡೆದಿದೆ. ಈ ಕುರಿತು ಸಹಿ ಮಾಡಿದ ಪತ್ರವನ್ನು ಈಗಾಗಲೇ ಹೈಕಮಾಂಡ್‌ಗೆ ಕಳುಹಿಸಲಾಗಿದೆ. ಸಿಎಂ ಮತ್ತು ಡಿಸಿಎಂ ಎರಡೂ ಬಣಗಳ ಶಾಸಕರು ಈ ಸಭೆಯಲ್ಲಿ ಹಾಜರಾಗಿದ್ದರೂ ಡಿಕೆ ಶಿವಕುಮಾರ್ ಬೆಂಬಲಿತ ಶಾಸಕರ ಸಂಖ್ಯೆ ಹೆಚ್ಚಾಗಿತ್ತು. ನಾಯಕತ್ವ ಬದಲಾವಣೆಯ ವಿಷಯದಲ್ಲಿಯೂ ಹೈಕಮಾಂಡ್ ಮಧ್ಯಪ್ರವೇಶಿಸಿ ತೀರ್ಮಾನ ತೆಗೆದುಕೊಳ್ಳುವಂತೆ ಒತ್ತಡ ಹೇರಬೇಕು ಎಂದೂ ಡಿಕೆಶಿ ಬೆಂಬಲಿಗ ಶಾಸಕರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಕಳೆದ ವಾರ ಹಿರಿಯ ಶಾಸಕರ ಸಭೆ ನಡೆದಿತ್ತು.