Ugadi Festival 2026: ಯುಗಾದಿ ಹಬ್ಬಕ್ಕೆ ಮನೆಯಲ್ಲಿ ಸುಲಭವಾಗಿ ಮಾಡಿ ರುಚಿಯಾದ ಸ್ಪೆಷಲ್ ಮಾವಿನಕಾಯಿ ಚಿತ್ರಾನ್ನ
ಯುಗಾದಿ ಹಬ್ಬದ ಸಂಭ್ರಮಕ್ಕೆ ಮಾವಿನಕಾಯಿ ಚಿತ್ರಾನ್ನ ವಿಶೇಷ ಸ್ಥಾನ ಹೊಂದಿದೆ. ಹೊಸ ಮಾವಿನಕಾಯಿಯಿಂದ ತಯಾರಿಸುವ ಈ ರುಚಿಕರ ಚಿತ್ರಾನ್ನವನ್ನು ಮನೆಯಲ್ಲಿ ಸರಳವಾಗಿ ಮಾಡಬಹುದು. ಹಬ್ಬದ ಊಟಕ್ಕೆ ಮತ್ತಷ್ಟು ರುಚಿ ನೀಡುವ ಈ ಸ್ಪೆಷಲ್ ರೆಸಿಪಿ ಇಲ್ಲಿದೆ.
ಮಾವಿನಕಾಯಿ ಚಿತ್ರಾನ್ನ -
ಬೆಂಗಳೂರು: ಯುಗಾದಿ ಹಬ್ಬವು (Ugadi Festival) ದಕ್ಷಿಣ ಭಾರತದ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ‘ಯುಗ’ ಎಂದರೆ ಕಾಲಾವಧಿ ಮತ್ತು ‘ಆದಿ’ ಎಂದರೆ ಆರಂಭ ಎಂಬ ಅರ್ಥವನ್ನು ಹೊಂದಿದೆ. ಅಂದರೆ ಯುಗಾದಿ ಹೊಸ ವರ್ಷದ ಆರಂಭವನ್ನು ಸೂಚಿಸುವ ಹಬ್ಬವಾಗಿದೆ. ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಯುಗಾದಿಯನ್ನು ಹೊಸ ವರ್ಷದ ಮೊದಲ ಹಬ್ಬವಾಗಿ ಸಂಭ್ರಮದಿಂದ ಆಚರಿಸಲಾಗುತ್ತದೆ.
ಯುಗಾದಿಯಂದು ಜನರು ಮನೆಗಳನ್ನು ಅಲಂಕರಿಸಿ, ಹೊಸ ಬಟ್ಟೆ ತೊಟ್ಟು ಹಬ್ಬವನ್ನು ಆಚರಿಸುತ್ತಾರೆ. ಬೇವು-ಬೆಲ್ಲ ತಿನ್ನುವ ಸಂಪ್ರದಾಯವೂ ಈ ದಿನ ವಿಶೇಷವಾಗಿದೆ. ಇದು ಜೀವನದಲ್ಲಿ ಸಿಹಿ ಹಾಗೂ ಕಹಿ ಅನುಭವಗಳು ಎರಡೂ ಸಹ ಸಹಜ ಎಂಬ ಸಂದೇಶವನ್ನು ನೀಡುತ್ತದೆ. ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಪಂಚಾಂಗ ಪಠಣ ನಡೆಯುತ್ತದೆ. ಇದರ ಮೂಲಕ ಹೊಸ ವರ್ಷದ ಫಲಗಳು, ಮಳೆ ಹಾಗೂ ಬೆಳೆಗಳ ಸ್ಥಿತಿ ಬಗ್ಗೆ ತಿಳಿದುಕೊಳ್ಳುತ್ತಾರೆ. ಜ್ಯೋತಿಷ್ಯವನ್ನು ನಂಬುವವರು ತಮ್ಮ ರಾಶಿಯ ವಾರ್ಷಿಕ ಫಲಗಳನ್ನೂ ಕೇಳಿ ತಿಳಿದುಕೊಳ್ಳುತ್ತಾರೆ.
ಚೈತ್ರ ಮಾಸದಲ್ಲಿ ಬರುವ ಯುಗಾದಿ ಹಬ್ಬವು ಪ್ರಕೃತಿಯಲ್ಲಿಯೂ ಹೊಸತನದ ಸಂಕೇತವಾಗಿದೆ. ಈ ಸಮಯದಲ್ಲಿ ರೈತರು ಬೆಳೆಗಳ ಕಟಾವನ್ನು ಮುಗಿಸಿಕೊಂಡು ಸ್ವಲ್ಪ ವಿಶ್ರಾಂತಿ ಪಡೆಯುತ್ತಾರೆ. ಮಾರುಕಟ್ಟೆಯಲ್ಲಿ ಹೊಸದಾಗಿ ಬಂದ ಗೇರು, ಮಾವು ಮತ್ತು ಹಲಸು ಸೇರಿದಂತೆ ಹಲವು ಹಣ್ಣುಗಳು ಲಭ್ಯವಾಗುತ್ತವೆ. ಹೀಗಾಗಿ ಯುಗಾದಿ ಹಬ್ಬದ ದಿನ ಮನೆಗಳಲ್ಲಿ ವಿವಿಧ ಸಾಂಪ್ರದಾಯಿಕ ಅಡುಗೆಗಳನ್ನು ತಯಾರಿಸಲಾಗುತ್ತದೆ.
ಹೋಳಿಗೆ, ಬೇವು-ಬೆಲ್ಲ, ಸೌತೆಕಾಯಿ ಕೋಸಂಬರಿ ಸೇರಿದಂತೆ ಹಲವು ತಿನಿಸುಗಳ ಜೊತೆಗೆ ಮಾವಿನಕಾಯಿ ಚಿತ್ರಾನ್ನಕ್ಕೂ ವಿಶೇಷ ಸ್ಥಾನವಿದೆ. ಚಳಿಗಾಲದ ನಂತರ ಮಾವಿನ ಮರಗಳಲ್ಲಿ ಹೂ ಬಿದ್ದು, ಬೇಸಿಗೆ ಆರಂಭವಾಗುವ ವೇಳೆಗೆ ಎಳೆ ಮಾವಿನಕಾಯಿ ಸಿಗುತ್ತದೆ. ಅದರಿಂದಲೇ ಯುಗಾದಿ ಹಬ್ಬದಂದು ರುಚಿಕರವಾದ ಮಾವಿನಕಾಯಿ ಚಿತ್ರಾನ್ನವನ್ನು (Mavinakayi chitranna recipe) ತಯಾರಿಸುವ ವಿಧಾನ ಇಲ್ಲಿದೆ.
ಮಾವಿನಕಾಯಿ ಚಿತ್ರಾನ್ನಕ್ಕೆ ಬೇಕಾಗುವ ಸಾಮಗ್ರಿಗಳು
2 ಟೇಬಲ್ ಸ್ಪೂನ್ ಎಣ್ಣೆ
1 ಟೀ ಸ್ಪೂನ್ ಸಾಸಿವೆ
1 ಟೀ ಸ್ಪೂನ್ ಉದ್ದಿನ ಬೇಳೆ
1 ಟೀ ಸ್ಪೂನ್ ಕಡ್ಲೆ ಬೇಳೆ
ಚಿಟಿಕೆ ಹಿಂಗ್
ಯುಗಾದಿ ವಿಶೇಷ: ಜೀವನದ ಸಾರವನ್ನು ಸಾರುವ ಸಾಂಪ್ರದಾಯಿಕ ತಿನಿಸು ಪಚಡಿ ಮಾಡೋದು ಹೇಗೆ ಗೊತ್ತಾ..?
ಕೆಲವು ಕರಿಬೇವಿನ ಎಲೆಗಳು
3 ಟೇಬಲ್ ಸ್ಪೂನ್ ಕಡಲೆಕಾಯಿ
1 ಕಪ್ ತುರಿದ ಮಾವಿನಕಾಯಿ
2 ಹಸಿಮೆಣಸಿನಕಾಯಿ
¼ ಟೀ ಸ್ಪೂನ್ ಅರಿಶಿನ
2 ಕಪ್ ಬೇಯಿಸಿದ ಅನ್ನ
ಉಪ್ಪು – ರುಚಿಗೆ ತಕ್ಕಷ್ಟು
2 ಟೇಬಲ್ ಸ್ಪೂನ್ ತುರಿದ ತೆಂಗಿನಕಾಯಿ
2 ಟೇಬಲ್ ಸ್ಪೂನ್ ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ
ಮೊದಲು ಒಂದು ಕಡಾಯಿಯಲ್ಲಿ ಎಣ್ಣೆ ಬಿಸಿ ಮಾಡಿ. ನಂತರ ಅದಕ್ಕೆ ಸಾಸಿವೆ ಹಾಕಿ ಸಿಡಿಯಲು ಬಿಡಿ. ಬಳಿಕ ಉದ್ದಿನ ಬೇಳೆ, ಕಡ್ಲೆ ಬೇಳೆ, ಚಿಟಿಕೆ ಹಿಂಗ್ ಹಾಗೂ ಕರಿಬೇವಿನ ಎಲೆಗಳನ್ನು ಸೇರಿಸಿ ಹುರಿಯಿರಿ. ನಂತರ ಕಡಲೆಕಾಯಿಯನ್ನು ಹಾಕಿ ಸ್ವಲ್ಪ ಹೊತ್ತು ಫ್ರೈ ಮಾಡಿ.
ಅದಾದ ಬಳಿಕ ತುರಿದ ಮಾವಿನಕಾಯಿ, ಹಸಿಮೆಣಸಿನಕಾಯಿ ಮತ್ತು ಅರಿಶಿನ ಸೇರಿಸಿ ಕೆಲವು ನಿಮಿಷಗಳ ಕಾಲ ಹುರಿಯಿರಿ. ನಂತರ ಬೇಯಿಸಿದ ಅನ್ನ ಮತ್ತು ಉಪ್ಪನ್ನು ಸೇರಿಸಿ ನಿಧಾನವಾಗಿ ಚೆನ್ನಾಗಿ ಕಲಸಿ. ಸುಮಾರು ಎರಡು ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಇಡಿ, ಇದರಿಂದ ಅನ್ನ ಮಸಾಲೆಯ ರುಚಿಯನ್ನು ಹೀರಿಕೊಳ್ಳುತ್ತದೆ.
ಕೊನೆಗೆ ತುರಿದ ತೆಂಗಿನಕಾಯಿ ಹಾಗೂ ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿದರೆ ರುಚಿಕರವಾದ ಬಿಸಿ ಬಿಸಿ ಮಾವಿನಕಾಯಿ ಚಿತ್ರಾನ್ನ ಸವಿಯಲು ಸಿದ್ಧವಾಗುತ್ತದೆ.