Self Harming: ಸಾಲದ ಹೊರೆಯಿಂದ ಬೇಸತ್ತು ಜೀವ ತ್ಯಜಿಸಿದ ವೃದ್ಧ ದಂಪತಿ
ವಿಪರೀತವಾಗಿ ಸಾಲ ಮಾಡಿದ ದಂಪತಿ ಸಾಲ ತೀರಿಸಲು ಪರದಾಡುತ್ತಿದ್ದರು. ಜೊತೆಗೆ ಸಾಲಗಾರರ ಕಾಟವೂ ಇತ್ತು.
ಬಾಗಲಕೋಟೆ: ಇತ್ತೀಚಿಗೆ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳಕ್ಕೆ ಬೇಸತ್ತು ಹಲವರು ಆತ್ಮಹತ್ಯೆಗೆ (Self Harming) ಶರಣಾಗುತ್ತಿದ್ದಾರೆ. ಇಂತಹದ್ದೇ ಇನ್ನೊಂದು ಘಟನೆ ಬಾಗಲಕೋಟೆಯಲ್ಲಿ (Bagalakote news) ನಡೆದಿದೆ. ವಿಪರೀತ ಸಾಲದಿಂದ ಬೇಸತ್ತು ವೃದ್ಧ ದಂಪತಿಗಳು ಬ್ರಿಡ್ಜ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಘೋರ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನಲ್ಲಿ ನಡೆದಿದೆ. ಮೃತ ದಂಪತಿಗಳನ್ನು ಮಲ್ಲಪ್ಪ ಲಾಳಿ (56) ಹಾಗೂ ಪತ್ನಿ ಮಹಾದೇವಿ (51) ಎಂದು ಗುರುತಿಸಲಾಗಿದೆ. ಕಳೆದ 15 ವರ್ಷಗಳಿಂದ ಮೆಟಗುಡ್ಡ ಗ್ರಾಮದಲ್ಲಿ ವಾಸವಾಗಿದ್ದ ದಂಪತಿಗಳು ಅದೇ ಗ್ರಾಮದಲ್ಲಿ ಕಿರಾಣಿ ಅಂಗಡಿ ನಡೆಸುತ್ತಿದ್ದರು. ಫೈನಾನ್ಸ್ಗಳಲ್ಲಿ, ಖಾಸಗಿ ವ್ಯಕ್ತಿಗಳ ಬಳಿಯಲ್ಲಿ ಸಾಕಷ್ಟು ಸಾಲ ಮಾಡಿದ್ದರು. ಜೊತೆಗೆ ಇಬ್ಬರು ಹೆಣ್ಣು ಮಕ್ಕಳ ಮದುವೆಗಾಗಿಯೂ ಸಾಲ ಮಾಡಿದ್ದರು.
ಈ ರೀತಿ ವಿಪರೀತವಾಗಿ ಸಾಲ ಮಾಡಿದ ದಂಪತಿ ಸಾಲ ತೀರಿಸಲು ಪರದಾಡುತ್ತಿದ್ದರು. ಜೊತೆಗೆ ಸಾಲಗಾರರ ಕಾಟವೂ ಇತ್ತು. ಇದರಿಂದ ಬೇಸತ್ತ ದಂಪತಿ ಮುಧೋಳ ತಾಲೂಕಿನ ಯಾದವಾಡ ಬ್ರಿಡ್ಜ್‌ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳದಲ್ಲೆ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸ್ಥಳಕ್ಕೆ ಲೋಕಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಸಚಿವೆ ಹೆಬ್ಬಾಳ್ಕರ್ ವಿರುದ್ಧ ಅವಾಚ್ಯ ಪದ ಬಳಕೆ ಆರೋಪ: ಸಿಟಿ ರವಿಗೆ ಹೈಕೋರ್ಟ್ ರಿಲೀಫ್
ಬೆಂಗಳೂರು: ವಿಧಾನಪರಿಷತ್ತಿನಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸಿದ ಆರೋಪ ಎದುರಿಸುತ್ತಿರುವ ಬಿಜೆಪಿ ಎಂಎಲ್ಸಿ ಸಿಟಿ ರವಿ ಅವರಿಗೆ ಕರ್ನಾಟಕ ಹೈಕೋರ್ಟ್ ಗುರುವಾರ ರಿಲೀಫ್ ನೀಡಿದೆ. ಸಿಟಿ ರವಿ ವಿರುದ್ಧ ಫೆಬ್ರವರಿ 30ರವರೆಗೆ ಬಲವಂತದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಸೂಚಿಸಿದೆ.
ಶಾಸಕರ ನಡುವೆ ಸದನದಲ್ಲಿ ನಡೆದ ವಿಚಾರಕ್ಕೆ ವಿನಾಯಿತಿ ಇದೆ ಎಂದು ಸಿಟಿ ರವಿ ಪರವಾಗಿ ಹಿರಿಯ ವಕೀಲ ಸಿವಿ ನಾಗೇಶ್ ವಾದ ಮಂಡಿಸಿದರು. ಇದಕ್ಕೆ ಪ್ರತಿಯಾಗಿ ಕ್ರಿಮಿನಲ್ ಕೃತ್ಯಗಳಿಗೆ ವಿನಾಯಿತಿ ಇಲ್ಲವೆಂದು ಎಸ್ಪಿಪಿ ಬಿಎ ಬೆಳ್ಳಿಯಪ್ಪ ವಾದ ಮಂಡಿಸಿದರು. ತನಿಖೆ ವ್ಯಾಪ್ತಿಯ ಪ್ರಶ್ನೆಯನ್ನು ನಾವು ತೀರ್ಮಾನಿಸಬೇಕಿದೆ ಎಂದ ಹೈಕೋರ್ಟ್, ಅಲ್ಲಿಯವರೆಗೂ ಬಲವಂತದ ಕ್ರಮ ಕೈಗೊಳ್ಳದಂತೆ ಆದೇಶ ನೀಡಿದೆ.
ಸಿಟಿ ರವಿ ಧ್ವನಿಯ ಮಾದರಿ ತೆಗೆದುಕೊಳ್ಳಬೇಕಿದೆ ಎಂದು ಎಸ್ಪಿಪಿ ವಾದ ಮಂಡಿಸಿದರು. ಆದಾಗ್ಯೂ ಮುಂದಿನ ಪ್ರಶ್ನೆ ಬಗ್ಗೆ ತೀರ್ಮಾನಿಸುವವರೆಗೆ ಕಾಯುವಂತೆ ಹೈಕೋರ್ಟ್ ಸೂಚನೆ ನೀಡಿತು.
ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ವಿಧಾನ ಪರಿಷತ್ತಿನಲ್ಲಿ ಸಿಟಿ ರವಿ ಸಚಿವೆ ಹೆಬ್ಬಾಳ್ಕರ್ ಅವರನ್ನು ಅಶ್ಲೀಲವಾಗಿ ನಿಂದಿಸಿದ್ದಾರೆ ಎಂದು ಆರೋಪ ಮಾಡಲಾಗಿದೆ. ಆದರೆ ಈ ಆರೋಪವನ್ನು ಸಿಟಿ ರವಿ ಅಲ್ಲಗಳೆದಿದ್ದಾರೆ. ರವಿ ಅವರು ಅಶ್ಲೀಲ ಪದ ಬಳಸಿರುವುದು ಸರ್ಕಾರಿ ಟಿವಿಯಲ್ಲಿ ದಾಖಲಾಗಿದೆ ಎಂದು ಹೇಳಲಾಗಿದೆ. ಆದರೆ ಅದು ಸಿಟಿ ರವಿ ಅವರ ಧ್ವನಿಯೇ ಎಂಬುದನ್ನು ಖಚಿತಪಡಿಸಲು ಅವರ ವಾಯ್ಸ್ ಸ್ಯಾಂಪಲ್ ಕೋರಲಾಗಿತ್ತು. ವಾಯ್ಸ್ ಸ್ಯಾಂಪಲ್ ನೀಡಲು ಅವರು ನಿರಾಕರಿಸಿದ್ದರು. ಈ ವಿಚಾರದ ಬಗ್ಗೆಯೂ ಹೈಕೋರ್ಟ್ನಲ್ಲಿ ವಾದ ಪ್ರತಿವಾದ ನಡೆಯುತ್ತಿದೆ. ಪ್ರಕರಣದ ತನಿಖೆಯನ್ನು ಸಿಐಡಿ ನಡೆಸುತ್ತಿದೆ.
ಘಟನೆ ರಾಜ್ಯದಾದ್ಯಂತ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿತ್ತು. ಸಿಟಿ ರವಿ ಅವರನ್ನು ಬಂಧಿಸಿದ್ದ ಬೆಳಗಾವಿ ಪೊಲೀಸರು ರಾತ್ರಿ ಇಡೀ ಅವರನ್ನು ಪೊಲೀಸ್ ವಾಹನದಲ್ಲಿ ಸುತ್ತಾಡಿಸಿದ್ದರು. ಈ ವಿಚಾರವಾಗಿ ಸರ್ಕಾರದ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿತ್ತು. ರವಿ ಅವರನ್ನು ಎನ್ಕೌಂಟರ್ ಮಾಡಲು ಸರ್ಕಾರ ಸಂಚು ಹೂಡಿತ್ತು ಎಂದು ಕೆಲವು ಮಂದಿ ಬಿಜೆಪಿ ನಾಯಕರು ಗಂಭೀರ ಆರೋಪ ಮಾಡಿದ್ದರು.