Emergency Box Office Collection: ಬಾಕ್ಸ್ ಆಫೀಸ್‌ನಲ್ಲಿ ಕಂಗನಾ ಕಮಾಲ್; 'ಎಮರ್ಜೆನ್ಸಿ' ಚಿತ್ರ 2 ದಿನಗಳಲ್ಲಿ ಗಳಿಸಿದ್ದೆಷ್ಟು?
Emergency Box Office Collection: ಕಂಗನಾ ರಾಣಾವತ್ ನಟಿಸಿ, ನಿರ್ದೇಶಿಸಿರುವ ಬಾಲಿವುಡ್ ಚಿತ್ರ ಎಮರ್ಜೆನ್ಸಿ ರಿಲೀಸ್ ಆಗಿದ್ದು, ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡುತ್ತಿದೆ. 2 ದಿನಗಳಲ್ಲಿ ಈ ಚಿತ್ರ ಸುಮಾರು 7 ಕೋಟಿ ರೂ. ಗಳಿಸಿದೆ. ಕಂಗನಾ ಅವರು ಇಂದಿರಾ ಗಾಂಧಿ ಪಾತ್ರದಲ್ಲಿ ಮೋಡಿ ಮಾಡಿದ್ದಾರೆ.
ಮುಂಬೈ: ಬಾಲಿವುಡ್ ಕ್ವೀನ್, ರಾಷ್ಟ್ರ ಪ್ರಶಸ್ತಿ ವಿಜೇತ ನಟಿ, ಬಾಲಿವುಡ್ ಕಲಾವಿದೆ ಕಂಗನಾ ರಣಾವತ್ (Kangana Ranaut) ಸತತ ಸೋಲಿನಿಂದ ಹೊರ ಬಂದಿದ್ದಾರೆ. ಜ. 17ರಂದು ರಿಲೀಸ್ ಆದ ಕಂಗನಾ ಅಭಿನಯದ ಬಾಲಿವುಡ್ ಚಿತ್ರ ʼಎಮರ್ಜೆನ್ಸಿʼ (Emergency) ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡುತ್ತಿದೆ. ಭಾರತದ ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ (Indira Gandhi) ಅವರ ಜೀವನವನ್ನು ಆಧರಿಸಿದ ಈ ಸಿನಿಮಾ 1975ರ ತುರ್ತು ಪರಿಸ್ಥಿತಿ ದಿನಗಳತ್ತ ಬೆಳಕು ಚೆಲ್ಲುತ್ತದೆ. ಹಲವು ಬಾರಿ ಮುಂದೂಡಲ್ಪಟ್ಟಿದ್ದ ಈ ಚಿತ್ರವನ್ನು ಕಣ್ತುಂಬಿಕೊಂಡ ಸಿನಿ ರಸಿಕರು ಕಂಗನಾ ಅಭಿನಯಕ್ಕೆ ಮನ ಸೋತಿದ್ದಾರೆ (Emergency Box Office Collection).
ವಿಶೇಷ ಎಂದರೆ ʼಎಮರ್ಜೆನ್ಸಿʼ ಚಿತ್ರದಲ್ಲಿ ನಟಿಸುವ ಜತೆಗೆ ಕಂಗನಾ ನಿರ್ಮಿಸಿ, ನಿರ್ದೇಶಿಸಿದ್ದಾರೆ. ಅಂದಿನ ತುರ್ತು ಪರಿಸ್ಥಿತಿಯ ದಿನಗಳನನು ವಿವರಿಸುವ ಈ ಸಿನಿಮಾದಲ್ಲಿ ಕಂಗನಾ ರಣಾವತ್ ಮಾಜಿ ಪ್ರಧಾನಿ ಇಂದಿರಾ ಗಾಂಧಿಯ ಪಾತ್ರ ನಿರ್ವಹಿಸಿದ್ದಾರೆ. ಚಿತ್ರದ ರಿಲೀಸ್‌ಗೆ ಸಾಕಷ್ಟು ಅಡೆ-ತಡೆ ಎದುರಾಗಿತ್ತು. ಸಿಖ್ ಸಮುದಾಯ ವಿರೋಧಿಸಿತ್ತು. ಇದೀಗ ಎಲ್ಲ ಸಂಕಷ್ಟವನ್ನು ಮೀರಿ ಸಿನಿಮಾ ಬಿಡುಗಡೆಯಾಗಿದೆ.
ಸುಮಾರು 60 ಕೋಟಿ ರೂ. ವೆಚ್ಚದಲ್ಲಿ ತಯಾರಾದ ಈ ಸಿನಿಮಾ 3 ದಿನಗಳಲ್ಲಿ 7 ಕೋಟಿ ರೂ. ಗಳಿಸಿದೆ. ಮೊದಲ ದಿನ ಶುಕ್ರವಾರ ಚಿತ್ರ ಗಳಿಸಿದ್ದು 2.35 ಕೋಟಿ ರೂ. 2ನೇ ದಿನದ ಕಲೆಕ್ಷನ್‌ನಲ್ಲಿ ಏರಿಕೆಯಾಗಿದ್ದು, 3.50 ಕೋಟಿ ರೂ. ಬಾಚಿಕೊಂಡಿದೆ. ಇನ್ನು ಭಾನುವಾರ ರಜಾ ದಿನವಾಗಿರುವುದರಿಂದ ಕಲೆಕ್ಷನ್ ಹೆಚ್ಚಾಗುವ ಸಾಧ್ಯತೆ ಇದೆ.
ಬಾಕ್ಸ್ ಆಫೀಸ್‌ನಲ್ಲಿ ತೀವ್ರ ಪೈಪೋಟಿ ಎದುರಾಗಿದ್ದು, ಅವೆಲ್ಲವನ್ನೂ ಮೀರಿ ಕಂಗನಾ ಚಿತ್ರ ಗಮನ ಸೆಳೆಯುತ್ತಿದೆ. ಕಳೆದ ತಿಂಗಳು ತೆರೆಕಂಡ ಅಲ್ಲು ಅರ್ಜುನ್-ರಶ್ಮಿಕಾ ಮಂದಣ್ಣ ಅಭಿನಯದ ʼಪುಷ್ಪ 2ʼ ಈಗಲೂ ಹಿಂದಿ ಬಾಕ್ಸ್ ಆಫೀಸ್‌ನಲ್ಲಿ ತನ್ನ ಓಟ ಮುಂದುವರಿಸಿದೆ. ಜತೆಗೆ ಸೋನು ಸೂದ್, ಅಮನ್ ದೇವಗನ್, ರಾಶಾ ತಡಾನಿ ಅಭಿನಯದ ʼಅಜಾದ್ʼ ಸಿನಿಮಾ ಪ್ರಬಲ ಪೂಪೋಟಿ ಒಡ್ಡಿದೆ. ಈ ಎಲ್ಲದರ ಮಧ್ಯೆ ʼಎಮರ್ಜೆನ್ಸಿʼ ಕಮಾಲ್ ಮಾಡುತ್ತಿದೆ.
ಸತತ ಸೋಲಿನಿಂದ ಕಂಗೆಟ್ಟ ಕಂಗನಾಗೆ ಸಿಕ್ಕ ಗೆಲುವು
ʼಕ್ವೀನ್ʼ, ʼತನು ವೆಡ್ಸ್ ಮನುʼ ಸರಣಿ ಮುಂತಾದ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಕಂಗನಾ ಇತ್ತೀಚೆಗೆ ಸತತ ಸೋಲಿನಿಂದ ಕಂಗೆಟ್ಟಿದ್ದಾರೆ. ಕೆಲವು ವರ್ಷಗಳ ಅಂತರದಲ್ಲಿ ತೆರೆಕಂಡ ʼತಲೈವಿʼ, ʼಧಕಡ್ʼ, ʼಚಂದ್ರಮುಖಿ 2ʼ, ʼತೇಜಸ್ʼ ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿದೆ. ಈ ಸೋಲಿನ ಸುಳಿಯಿಂದ ಸದ್ಯ ಅವರು ಹೊರ ಬರುವ ಎಲ್ಲ ಲಕ್ಷಣಗಳಿವೆ. 2 ದಿನಗಳಲ್ಲಿ ʼತೇಜಸ್ʼ, ʼಧಕಡ್ʼ ಮತ್ತು ʼತಲೈವಿʼ ಕ್ರಮವಾಗಿ 2.50 ಕೋಟಿ ರೂ., 1.40 ಕೋಟಿ ರೂ. ಮತ್ತು 0.67 ಕೋಟಿ ರೂ. ಗಳಿಸಿದ್ದವು. ಇದೀಗ ʼಎಮರ್ಜೆನ್ಸಿʼ ಈ ಎಲ್ಲ ಕಲೆಕ್ಷನ್‌ಗಳನ್ನು ಮೀರಿ ಮುನ್ನುಗ್ಗುತ್ತಿದೆ.
ಈ ಸುದ್ದಿಯನ್ನೂ ಓದಿ: Emergency Movie: ಕಂಗನಾ ನಟನೆಯ ʻಎಮರ್ಜೆನ್ಸಿʼ ಚಿತ್ರ ಮೊದಲ ದಿನ ಗಳಿಸಿದೆಷ್ಟು?
ಮತ್ತೊಂದು ರಾಷ್ಟ್ರ ಪ್ರಶಸ್ತಿ?
ʼಎಮರ್ಜೆನ್ಸಿʼ ಚಿತ್ರವನ್ನು ಘೋಷಿಸಿದಾಗಲೇ ಇದು ಸಿನಿ ರಸಿಕರ ಗಮನ ಸೆಳೆದಿತ್ತು. ಅದರಲ್ಲಿಯೂ ಪೋಸ್ಟರ್ ರಿಲೀಸ್ ಆದಾಗ ಕಂಗನಾ ಥೇಟ್ ಇಂದಿರಾ ಗಾಂಧಿ ಅವರಂತೆ ಕಾಣಿಸುತ್ತಾರೆ ಎನ್ನುವ ಮೆಚ್ಚುಗೆಯ ಮಾತು ಕೇಳಿ ಬಂದಿತ್ತು. ಇದೀಗ ಚಿತ್ರ ನೋಡಿದವರು ಕಂಗನಾ ಅಭಿನಯಕ್ಕೆ ಫಿದಾ ಆಗಿದ್ದಾರೆ. ಈ ಚಿತ್ರದ ಅಭಿನಯಕ್ಕೆ ಅವರಿಗೆ ರಾಷ್ಟ್ರ ಪ್ರಶಸ್ತಿ ಲಭಿಸಲಿದೆ ಎಂದೇ ಭವಿಷ್ಯ ನುಡಿಯುತ್ತಿದ್ದಾರೆ. ಅನುಪಮ್ ಖೇರ್, ಮಹಿಮಾ ಚೌಧರಿ, ಶ್ರೇಯಸ್ ತಲ್ಪಡೆ, ಸತೀಶ್ ಕೌಶಿಕ್, ಮಿಲಿಂದ್ ಸೋಮನ್ ಮತ್ತಿತರರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.