ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

ಎಬಿ ಡಿ ವಿಲಿಯರ್ಸ್‌ ಪ್ರತಿಭೆಗೆ ಆರ್‌ಸಿಬಿ ಸೂಕ್ತ ತಂಡವಲ್ಲ: ಸಂಜಯ್‌ ಮಾಂಜ್ರೇಕರ್ ಅಚ್ಚರಿ ಹೇಳಿಕೆ!

Sanjay Majrekar on ABD: ದಕ್ಷಿಣ ಆಫ್ರಿಕಾ ಮಾಜಿ ನಾಯಕ ಎಬಿ ಡಿ ವಿಲಿಯರ್ಸ್‌ ಅವರ ಪ್ರತಿಭೆಗೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಸೂಕ್ತ ತಂಡವಲ್ಲ. ಅವರು ಬೇರೆ ಯಾವುದಾದರೂ ಫ್ರಾಂಚೈಸಿ ಪರ ಆಡಬೇಕಾಗಿತ್ತು ಎಂದು ಸಂಜಯ್‌ ಮಾಂಜ್ರೇಕರ್‌ ಅಚ್ಚರಿ ಹೇಳಿಕೆ ನೀಡಿದ್ದಾರೆ.

IPL: ಎಬಿ ಡಿ ವಿಲಿಯರ್ಸ್‌ಗೆ ಆರ್‌ಸಿಬಿ ಸೂಕ್ತ ತಂಡವಲ್ಲ ಎಂದ ಸಂಜಯ್‌ ಮಾಂಜ್ರೇಕರ್‌!

Sanjay Manjrekar on ABD

Profile Ramesh Kote Jan 27, 2025 4:27 PM

ನವದೆಹಲಿ: ದಕ್ಷಿಣ ಆಫ್ರಿಕಾ ಮಾಜಿ ನಾಯಕ ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡದ ಮಾಜಿ ಬ್ಯಾಟ್ಸ್‌ಮನ್‌ ಎಬಿ ಡಿವಿಲಿಯರ್ಸ್‌ (AB De Villiers) ಬಗ್ಗೆ ಭಾರತ ತಂಡದ ಮಾಜಿ ಬ್ಯಾಟ್ಸ್‌ಮನ್‌ ಸಂಜಯ್‌ ಮಾಜ್ರೇಕರ್‌ ಅಚ್ಚರಿ ಹೇಳಿಕೆ ನೀಡಿದ್ದಾರೆ. ಎಬಿ ಡಿ ವಿಲಿಯರ್ಸ್‌ ತಮ್ಮ ಪ್ರತಿಭೆಗೆ ಸೂಕ್ತವಲ್ಲದ ತಂಡದ ಪರ ಐಪಿಎಲ್‌ (IPL) ಟೂರ್ನಿಯನ್ನು ಆಡಿದ್ದಾರೆ. ಆರ್‌ಸಿಬಿ ಬದಲಿಗೆ ಬೇರೆ ಯಾವುದಾದರೂ ತಂಡದ ಪರ ಅವರು ಆಡಬೇಕಾಗಿತ್ತು ಎಂದು ತಿಳಿಸಿದ್ದಾರೆ.

ತಮ್ಮ 13 ವರ್ಷಗಳ ಐಪಿಎಲ್‌ ವೃತ್ತಿ ಜೀವನದಲ್ಲಿ ಎಬಿ ಡಿ ವಿಲಿಯರ್ಸ್‌ ಅವರು ಕೇವಲ ಎರಡು ತಂಡಗಳ ಪರ ಮಾತ್ರ ಆಡಿದ್ದಾರೆ. ಐಪಿಎಲ್‌ ಟೂರ್ನಿಯ ಆರಂಭಿಕ ವರ್ಷಗಳಲ್ಲಿ ಡೆಲ್ಲಿ ಡೇರ್‌ ಡೆವಿಲ್ಸ್‌ (ಡೆಲ್ಲಿ ಕ್ಯಾಪಿಟಲ್ಸ್)‌ ಪರ ಆಡಿದ್ದರು. ನಂತರ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಪರ ಆಡಿದ್ದರು. ತಮ್ಮ ಐಪಿಎಲ್‌ ವೃತ್ತಿ ಜೀವನದ ಬಹುತೇಕ ಅವಧಿಯನ್ನು ಆರ್‌ಸಿಬಿ ತಂಡದಲ್ಲಿ ಅವರು ಕಳೆದಿದ್ದಾರೆ.

ಐಪಿಎಲ್‌ ಇತಿಹಾಸದ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಎಬಿ ಡಿ ವಿಲಿಯರ್ಸ್‌ ಕೂಡ ಒಬ್ಬರು. ಐಪಿಎಲ್‌ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಏಳನೇ ಬ್ಯಾಟ್ಸ್‌ಮನ್‌ ಎಂಬ ಸಾಧನೆಗೆ ಎಬಿಡಿ ಹೆಸರಿನಲ್ಲಿದೆ. ಅವರು ತಮ್ಮ ಐಪಿಎಲ್‌ ವೃತ್ತಿ ಜೀವನದಲ್ಲಿ ಆಡಿದ 184 ಪಂದ್ಯಗಳಿಂದ 39.70ರ ಸರಾಸರಿ ಹಾಗೂ 151.68ರ ಸ್ಟ್ರೈಕ್‌ ರೇಟ್‌ನಲ್ಲಿ 5162 ರನ್‌ಗಳನ್ನು ಸಿಡಿಸಿದ್ದಾರೆ. ಇದರಲ್ಲಿ ಅವರು ಮೂರು ಶತಕಗಳು ಹಾಗೂ 40 ಅರ್ಧಶತಕಗಳನ್ನು ಸಿಡಿಸಿದ್ದಾರೆ.

ಎಬಿಡಿಗೆ ಸೂರ್ಯಕುಮಾರ್‌ ಹೋಲಿಕೆ ಇದೆ

ಮಿಸ್ಟರ್‌ 360 ಡಿಗ್ರಿ ರೀತಿ ಎಬಿ ಡಿ ವಿಲಿಯರ್ಸ್‌ ಅವರನ್ನು ಭಾರತದ ಸೂರ್ಯಕುಮಾರ್‌ ಯಾದವ್‌ ಹಿಂಬಾಲಿಸುತ್ತಿದ್ದಾರೆಯೇ? ಎಂದು ಇತ್ತೀಚೆಗೆ ಸಂಜಯ್‌ ಮಾಂಜ್ರೇಕರ್‌ಗೆ ಪ್ರಶ್ನೆಯನ್ನು ಕೇಳಲಾಗಿತ್ತು. ಇದನ್ನು ಸಂಜಯ್‌ ಮಾಂಜ್ರೇಕರ್‌ ಒಪ್ಪಿಕೊಂಡಿದ್ದಾರೆ. ಸೂರ್ಯಕುಮಾರ್‌ ಯಾದವ್‌ ಅವರು ಕೂಡ ಮ್ಯಾಚ್‌ ವಿನ್ನಿಂಗ್‌ ಸಾಮರ್ಥ್ಯವನ್ನು ಹೊಂದಿದ್ದಾರೆಂದು ಹೇಳಿದ್ದಾರೆ.

"ಹೌದು, ನಾನು ಇದನ್ನು ಒಪ್ಪಿಕೊಳ್ಳುತ್ತೇನೆ, ಅವರಿಗೆ (ಸೂರ್ಯಕುಮಾರ್‌ ಯಾದವ್‌) ಮ್ಯಾಚ್‌ ವಿನ್ನಿಂಗ್‌ ಸಾಮರ್ಥ್ಯವಿದೆ. ಎಬಿ ಡಿ ವಿಲಿಯರ್ಸ್‌ ಅಸಾಧಾರಣ ಪ್ರತಿಭೆಯನ್ನು ಹೊಂದಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಅವರು 50ರ ಸರಾಸರಿಯನ್ನು ಹೊಂದಿದ್ದರು. ಏಕದಿನ ಕ್ರಿಕೆಟ್‌ನಲ್ಲಿಯೂ ಅವರು ಉತ್ತಮ ಸರಾಸರಿಯನ್ನು ಹೊಂದಿದ್ದಾರೆ. ಅವರು ಅದ್ಭುತ ಆಟಗಾರ. ಟಿ20 ಕ್ರಿಕೆಟ್‌ನಲ್ಲಿ ನೋಡುವುದಾದರೆ, ಇವರಿಬ್ಬರು ಪಂದ್ಯ ಗೆಲ್ಲಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ," ಎಂದು ಸಂಜಯ್‌ ಮಾಂಜ್ರೇಕರ್‌ ತಿಳಿಸಿದ್ದಾರೆ.

ಎಬಿಡಿಗೆ ಆರ್‌ಸಿಬಿ ಸೂಕ್ತ ತಂಡವಲ್ಲ: ಸಂಜಯ್‌ ಮಾಂಜ್ರೇಕರ್‌

ಐಪಿಎಲ್‌ ಟೂರ್ನಿಯಲ್ಲಿ ಎಬಿ ಡಿ ವಿಲಿಯರ್ಸ್‌ ಅವರನ್ನು ಸರಿಯಾಗಿ ಬಳಸಿಕೊಂಡಿಲ್ಲ. ಅವರು ಸ್ವಲ್ಪ ಅಗ್ರ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಬೇಕಿತ್ತು. ಅಲ್ಲದೆ ತಮಗೆ ಸೂಕ್ತವಲ್ಲದ ತಂಡದ ಪರ ಅವರು ಐಪಿಎಲ್‌ ಟೂರ್ನಿಯನ್ನು ಆಡಿದ್ದಾರೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

"ಎಬಿ ಡಿ ವಿಲಿಯರ್ಸ್‌ ಅವರನ್ನು ಐಪಿಎಲ್‌ ಟೂರ್ನಿಯಲ್ಲಿ ಸರಿಯಾಗಿ ಬಳಸಿಕೊಂಡಿಲ್ಲ. ಅವರು ನಿಜವಾದ ಸಾಮರ್ಥ್ಯವನ್ನು ಹೊಂದಿದ್ದಾರೆ. ಐಪಿಎಲ್‌ ಟೂರ್ನಿಯಲ್ಲಿ ಎಬಿ ಡಿ ವಿಲಿಯರ್ಸ್‌ ಅವರ ಪ್ರತಿಭೆಗೆ ತಕ್ಕ ಪ್ರದರ್ಶನ ಮೂಡಿ ಬಂದಿಲ್ಲ. ಅವರು ಐಪಿಎಲ್‌ನಲ್ಲಿ ಸ್ವಲ್ಪ ಅಗ್ರ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಬೇಕಾಗಿತ್ತು. ಅವರು ತಮಗೆ ಸೂಕ್ತವಲ್ಲದ ತಂಡದ ಪರ ಐಪಿಎಲ್‌ ಟೂರ್ನಿಯನ್ನು ಆಡಿದ್ದಾರೆಂದು ಹೇಳಲು ನಿಮ್ಮ ಕ್ಷಮೆಯನ್ನು ಕೇಳುತ್ತೇನೆ. ಒಂದು ವೇಳೆ ಬೇರೆ ತಂಡದ ಪರ ಆಡಿದ್ದರೆ ಅವರು ಇನ್ನಷ್ಟು ಸಾರ್ವಕಾಲಿಕ ಶ್ರೇಷ್ಠ ಆಟಗಾರರಾಗುತ್ತಿದ್ದರು," ಎಂದು ಸಂಜಯ್‌ ಮಾಂಜ್ರೇಕರ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.