ಕೆಲಸದ ಒತ್ತಡ ತಾಳಲಾರದೆ ಕೋರ್ಟ್‌ನಿಂದ ಹಾರಿ ವಿಶೇಷ ಚೇತನ ಸಿಬ್ಬಂದಿ ಆತ್ಮಹತ್ಯೆ; ಡೆತ್ ನೋಟ್‌ನಲ್ಲಿ ಏನಿದೆ?
ಕೆಲಸದ ಒತ್ತಡ ತಾಳಲಾರದೆ ದೆಹಲಿಯ ಸಾಕೇತ್ ಜಿಲ್ಲಾ ನ್ಯಾಯಾಲಯ ಸಂಕೀರ್ಣದ ಕಟ್ಟಡದಿಂದ ಜಿಗಿದು ಲೋವರ್ ಡಿವಿಷನ್ ಕ್ಲರ್ಕ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರನ್ನು ಹರೀಶ್ ಸಿಂಗ್ ಮಹರ್ ಎಂದು ಗುರುತಿಸಲಾಗಿದೆ. ಸ್ಥಳದಲ್ಲಿ ಡೆತ್‌ನೋಟ್ ಕೂಡ ಲಭ್ಯವಾಗಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.
ದೆಹಲಿಯ ಸಾಕೇತ್ ಜಿಲ್ಲಾ ನ್ಯಾಯಾಲಯ ಸಂಕೀರ್ಣ (ಸಂಗ್ರಹ ಚಿತ್ರ) -
ದೆಹಲಿ, ಜ. 9: ಕೆಲಸದ ಒತ್ತಡ ತಾಳಲಾರದೆ ಸಾಕೇತ್ ಕೋರ್ಟ್‌ನ ವಿಶೇಷ ಚೇತನ ಸಿಬ್ಬಂದಿಯೊಬ್ಬರು ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ (ಜನವರಿ 9) ನಡೆದಿದೆ. ದೆಹಲಿಯ ಸಾಕೇತ್ ಜಿಲ್ಲಾ ನ್ಯಾಯಾಲಯ ಸಂಕೀರ್ಣದ ಕಟ್ಟಡದಿಂದ ಜಿಗಿದು ಆತ್ಮಹತ್ಯೆಗೆ ಶರಣಾದ ಲೋವರ್ ಡಿವಿಷನ್ ಕ್ಲರ್ಕ್‌ನನ್ನು ಹರೀಶ್ ಸಿಂಗ್ ಮಹರ್ (Harish Singh Mahar) ಎಂದು ಗುರುತಿಸಲಾಗಿದೆ. ಸ್ಥಳದಲ್ಲಿ ಡೆತ್‌ನೋಟ್ ಕೂಡ ಲಭ್ಯವಾಗಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಕೆಲಸದ ಒತ್ತಡವೇ ಆತ್ಮಹತ್ಯೆಗೆ ಕಾರಣ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗಿದೆ.
ಹರೀಶ್ ಡೆತ್ ನೋಟ್‌ನಲ್ಲಿ ಕೆಲಸದ ಒತ್ತಡ ಮತ್ತು ಇದರಿಂದ ಉಂಟಾದ ಮಾನಸಿಕ ಕಿರಿಕಿರಿಯೇ ಆತ್ಮಹತ್ಯೆಗೆ ಕಾರಣ ಎಂದು ಉಲ್ಲೇಖಿಸಿದ್ದಾರೆ. ʼʼನ್ಯಾಯಾಲಯ ಸಿಬ್ಬಂದಿಯ ಆತ್ಮಹತ್ಯೆ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದೇವೆ. ಸ್ಥಳದಲ್ಲಿ ಡೆತ್ ನೋಟ್ ಕೂಡ ಲಭ್ಯವಾಗಿದ್ದು ಅದನ್ನು ಪರಿಶೀಲಿಸುತ್ತಿದ್ದೇವೆ. ತನಿಖೆಯ ಕುರಿತಾದ ಹೆಚ್ಚಿನ ವಿವರಗಳನ್ನು ಸದ್ಯದಲ್ಲೇ ನೀಡಲಾಗುವುದುʼʼ ಎಂದು ಪೊಲೀಸರು ತಿಳಿಸಿದ್ದಾರೆ. ಹರೀಶ್ ತಾವು ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ಎಲ್ಲಿಯೂ ಸೂಚನೆ ಬಿಟ್ಟುಕೊಟ್ಟಿರಲಿಲ್ಲ ಎಂದು ಸಹೋದ್ಯೋಗಿಗಳು ಮಾಹಿತಿ ನೀಡಿದ್ದಾರೆ.
ದೆಹಲಿಯಲ್ಲಿ ನಡೆದ ಪ್ರತಿಭಟನೆ:
#WATCH | Delhi: A protest was held outside the court after a court staff member committed suicide by jumping from a building in the Saket court complex. The protestors raised the slogan 'Justice for Harish'.
— ANI (@ANI) January 9, 2026
Anil Basoya, Secretary, Saket Court, says, "At around 10 AM, everyone… pic.twitter.com/fvYS3hwNtP
ಪ್ರತಿಭಟನೆ
ಘಟನೆಯ ಮಾಹಿತಿ ಹೊರ ಬೀಳುತ್ತಿದ್ದಂತೆ ಕೋರ್ಟ್ ಸಿಬ್ಬಂದಿ ಪ್ರತಿಭಟನೆ ಆರಂಭಿಸಿದರು. ʼಜಸ್ಟೀಸ್ ಫಾರ್ ಹರೀಶ್ʼ ಎನ್ನುವ ಘೋಷ ವಾಕ್ಯಗಳ ಮೂಲಕ ಹೋರಾಟಗಾರರು ನ್ಯಾಯಕ್ಕಾಗಿ ಆಗ್ರಹಿಸಿದರು. ಸಾಕೇತ್ ನ್ಯಾಯಾಲಯದ ಕಾರ್ಯದರ್ಶಿ ಅನಿಲ್ ಬಸೋಯ ಈ ಬಗ್ಗೆ ಮಾತನಾಡಿ, ʼʼಬೆಳಗ್ಗೆ ಸುಮಾರು 10 ಗಂಟೆಗೆ ಹರೀಶ್ ಕಟ್ಟಡದಿಂದ ಹಾರಿದ್ದಾಗಿ ಮಾಹಿತಿ ಸಿಕ್ಕಿತು. ಆಗಲೇ ಅವರ ಸ್ಥಿತಿ ಬಹಳ ಗಂಭೀರವಾಗಿತ್ತು. ಬದುಕಿಳಿಯುವ ಬಗ್ಗೆ ವೈದ್ಯರು ಸಂದೇಹ ವ್ಯಕ್ತಪಡಿಸಿದ್ದರು. ಅದರಂತೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸ್ಥಳದಲ್ಲಿ ಡೆತ್ ನೋಟ್ ಕೂಡ ಲಭ್ಯವಾಗಿದೆ. ಎಲ್ಲ ಸಿಬ್ಬಂದಿಯೊಂದಿಗೆ ನಾವಿದ್ದೇವೆ. ಯಾರಿಗೂ ಅನ್ಯಾಯವಾಗಲು ಬಿಡುವುದಿಲ್ಲʼʼ ಎಂದು ಹೇಳಿದ್ದಾರೆ.
ವಿದೇಶದಲ್ಲಿ ಎಂಜಿನಿಯರಿಂಗ್ ಮುಗಿಸಿ ಬಂದಿದ್ದ ಬೆಂಗಳೂರಿನ ಯುವಕ 16ನೇ ಮಹಡಿಯಿಂದ ಹಾರಿ ಆತ್ಮಹತ್ಯೆ
ಡೆತ್ ನೋಟ್‌ನಲ್ಲಿ ಹರೀಶ್ ಯಾರ ಹೆಸರನ್ನೂ ಉಲ್ಲೇಖಿಸಿಲ್ಲ. ʼʼಅತಿಯಾದ ಒತ್ತಡದಿಂದ ಆತ್ಮಹತ್ಯೆಯ ನಿರ್ಧಾರಕ್ಕೆ ತೆಗೆದುಕೊಂಡೆ. ಇದಕ್ಕಾಗಿ ಯಾರನ್ನೂ ದೂರುವುದಿಲ್ಲ. ಒತ್ತಡದಿಂದ ಹೊರ ಬರುವ ಬಗ್ಗೆ ವಿಶ್ವಾಸವಿತ್ತು. ಆದರೆ ಸಾಧ್ಯವಾಗಲಿಲ್ಲ. ನಾನು ಶೇಕಡಾ 60 ಅಂಗವೈಕಲ್ಯ ಹೊದಿದ್ದೇನೆ. ಇದೇ ಕಾರಣಕ್ಕೆ ನನಗೆ ಈ ಕೆಲಸ ಕಷ್ಟವಾಗುತ್ತಿದೆʼʼ ಎಂದು ಬರೆದುಕೊಂಡಿದ್ದಾರೆ.
35 ವರ್ಷದ ಹರೀಶ್ ಸಾಕೇತ್ ಜಿಲ್ಲಾ ನ್ಯಾಯಾಲಯದಲ್ಲಿ 2010ರಿಂದ ಕೆಲಸ ಮಾಡುತ್ತಿದ್ದರು. ಸದ್ಯ ಅವರು ಡಿಜಿಟಲ್ ಟ್ರಾಫಿಕ್ ಕೋರ್ಟ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ʼಇಂಡಿಯನ್ ಎಕ್ಸ್‌ಪ್ರೆಸ್ʼ ವರದಿ ಮಾಡಿದೆ. ನ್ಯಾಯಾಲಯದ ದಾಖಲೆಗಳನ್ನು ನಿರ್ವಹಿಸುವ ಮತ್ತು ನ್ಯಾಯಾಧೀಶರಿಗೆ ಸಹಾಯ ಮಾಡುವ ಜವಾಬ್ದಾರಿ ಹರೀಶ್ ಸಿಂಗ್ ಅವರದ್ದಾಗಿತ್ತು. ಎಂದಿನಂತೆ ಶುಕ್ರವಾರವೂ ಕರ್ತವ್ಯಕ್ಕೆ ಹಾಜರಾದ ಅವರು ಸಾಕೇತ್ ನ್ಯಾಯಾಲಯದ ಕಟ್ಟಡದ ಅತಿ ಎತ್ತರದ ಮಹಡಿಗೆ ಹತ್ತಿ ಅಲ್ಲಿಂದ ಹಾರಿ ಪ್ರಾಣಬಿಟ್ಟರು. ತಮ್ಮ ಈ ಕೃತ್ಯಕ್ಕೆ ಯಾರನ್ನೂ ಹೊಣೆಗಾರರನ್ನಾಗಿ ಮಾಡಬಾರದೆಂದೂ ತಿಳಿಸಿದ್ದಾರೆ.