ಬೆಂಗಳೂರು: ಇಂದು(ಭಾನುವಾರ) ದುಬೈ ಇಂಟರ್‌ನ್ಯಾಷನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಮಿನಿ ವಿಶ್ವಕಪ್ ಖ್ಯಾತಿಯ ಚಾಂಪಿಯನ್ಸ್ ಟ್ರೋಫಿ(Champions Trophy final) ಫೈನಲ್‌ನಲ್ಲಿ ಭಾರತ(IND vs NZ Final) ತಂಡ ಜಯ ಗಳಿಸಲಿ ಎಂದು ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿಯಲ್ಲಿ ಕ್ರಿಕೆಟ್ ಅಭಿಮಾನಿಗಳು(team india Fans) ಗೆದ್ದು ಬಾ ಭಾರತ ಎಂದು ಹೇಳುವ ಮೂಲಕ ಭಾರತ ತಂಡಕ್ಕೆ ಶುಭ ಕೋರಿದರು. ಉತ್ತರಪ್ರದೇಶದ ವಾರಾಣಸಿಯಲ್ಲಿ ಭಾರತದ ಗೆಲುವಿಗಾಗಿ ಅಭಿಮಾನಿಗಳು ಹೋಮ–ಹವನ ನಡೆಸಿದರು.
ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದ ಹಿನ್ನೆಲೆ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಭಾರತದ ಗೆಲುವಿಗೆ ವಿಶೇಷ ಪೂಜೆ ನಡೆಸಲಾಯಿತು. ಕ್ರಿಕೆಟ್ ಅಭಿಮಾನಿಗಳು, ಭಾರತ ತಂಡಕ್ಕೆ ಶುಭ ಹಾರೈಸಿದರು. ಮುಂಬೈಯಲ್ಲೂ ಅಭಿಮಾನಿಗಳು ಟೀಮ್ ಇಂಡಿಯಾ ಜೆರ್ಸಿ ತೊಟ್ಟು ಸ್ಥಳೀಯ ಮಂದಿರಗಳಿಗೆ ಭೇಟಿ ನೀಡಿ ರೋಹಿತ್ ಮತ್ತು ಕೊಹ್ಲಿಯ ಬ್ಯಾನರ್‌ಗಳಿಗೆ ಪೂಜೆ ಸಲ್ಲಿಸಿದರು. ಬೆಂಗಳೂರಿನಲ್ಲಿ ಕೊಹ್ಲಿ ಅಭಿಮಾನಿಗಳು ಫೈನಲ್‌ನಲ್ಲಿ ಶತಕ ಬಾರಿಸಲಿ ಎಂದು ಶುಭ ಹಾರೈಸಿದರು.
ಭಾರತ ತಂಡ ಬರೋಬ್ಬರಿ 25 ವರ್ಷಗಳ ಬಳಿಕ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಜಯಭೇರಿ ಮೊಳಗಿಸುವ ಕಾತರದಲ್ಲಿದೆ. ಇನ್ನೊಂದು ಕಡೆ 16 ವರ್ಷಗಳ ಬಳಿಕ ಚಾಂಪಿಯನ್ಸ್ ಟ್ರೋಫಿ ಕಿರೀಟ ಧರಿಸಿಕೊಳ್ಳಲು ಕಿವೀಸ್ ಕೂಡ ಕಾದು ಕುಳಿತಿದೆ. ಫೈನಲ್ ಹಣಾಹಣಿಗೆ ದುಬೈ ಅಂಗಳ ಸಿಂಗರಿಸಿಕೊಂಡು ನಿಂತಿದೆ. ಇದೊಂದು ಸಂಪೂರ್ಣ ಜೋಶ್‌ನಿಂದ ಕೂಡಿದ, ಏಕದಿನ ಕ್ರಿಕೆಟಿನ ನೈಜ ರೋಮಾಂಚನನ್ನು ತೆರೆದಿಡುವ ಬ್ಯಾಟ್-ಬಾಲ್ ಕದನವಾಗುವುದರಲ್ಲಿ ಅನುಮಾನವಿಲ್ಲ.
ತಂಡ ಎಷ್ಟೇ ಅಮೋಘ ಪ್ರದರ್ಶನ ನೀಡಿದರೂ ನಾಯಕರ ಅದೃಷ್ಟ ಕೂಡ ಚಾಂಪಿಯನ್ ನಿರ್ಧರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. 2023ರ ಏಕದಿನ ವಿಶ್ವಕಪ್‌ನಲ್ಲಿ ಅಜೇಯವಾಗಿ ಫೈನಲ್ ಪ್ರವೇಶಿಸಿದ್ದ ಭಾರತ ಅಲ್ಲಿ ಆಸೀಸ್ ವಿರುದ್ಧ ಸೋಲು ಕಂಡಿತ್ತು. 2024ರ ಟಿ20 ವಿಶ್ವಕಪ್‌ನಲ್ಲಿ ರೋಹಿತ್ ಶರ್ಮ ಅವರ ನಸೀಬು ಕೈ ಹಿಡಿತ್ತು. ತಂಡ ದಕ್ಷಿಣ ಆಫ್ರಿಕಾವನ್ನು ಮಣಿಸಿ ಚಾಂಪಿಯನ್ ಆಗಿತ್ತು. ಇದು ರೋಹಿತ್ ಪಾಲಿಗೆ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಭಾರತವನ್ನು ಮುನ್ನಡೆಸುವ ಕೊನೆಯ ಅವಕಾಶ. ಜತೆಗೆ ವಿರಾಟ್ ಕೊಹ್ಲಿ, ಜಡೇಜಾಗೂ ಇದು ಕೊನೆಯ ಟೂರ್ನಿ. ಹೀಗಾಗಿ ಇದು ಸ್ಮರಣೀಯವಾಗಬೇಕಿದೆ.
ನ್ಯೂಜಿಲ್ಯಾಂಡ್ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಭಾರತ ವಿರುದ್ಧ ಸೋತರೂ ಕೂಡ ತಂಡವನ್ನು ಹಗುರವಾಗಿ ಕಾಣುವಂತಿಲ್ಲ. ಮಿಚೆಲ್ ಸ್ಯಾಂಟ್ನರ್ ಪಡೆಯೂ ಕೂಡ ಸಮರ್ಥವಾಗಿದೆ. ಅದರಲ್ಲೂ ಭಾರತ ವಿರುದ್ಧ ಪ್ರತಿ ಪಂದ್ಯದಲ್ಲಿ ಆಡುವ ಕನ್ನಡಿಗ, ರಚಿನ್ ರವೀಂದ್ರ, ಕೇನ್ ವಿಲಿಯಮ್ಸನ್ ಮತ್ತು ಡೇರಿಯಲ್ ಮಿಚೆಲ್ ತುಂಬಾ ಅಪಾಯಕಾರಿಗಳು. ಇವರೆಲ್ಲ ಸ್ಪಿನ್ ಎಸೆತಗಳನ್ನು ಎದುರಿಸುವಲ್ಲಿ ಸಮರ್ಥರಾಗಿದ್ದಾರೆ.
ಇದನ್ನೂ ಓದಿ IND vs NZ final: ಫೈನಲ್‌ಗೆ ಕ್ಷಣಗಣನೆ; ಗೆದ್ದು ಬಾ ಭಾರತ
ಸಂಭಾವ್ಯ ತಂಡಗಳು
ಭಾರತ: ರೋಹಿತ್ ಶರ್ಮ (ನಾಯಕ), ಶುಭ್‌ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್, ಅಕ್ಷರ್ ಪಟೇಲ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ.
ನ್ಯೂಜಿಲೆಂಡ್: ಡೆವೋನ್ ಕಾನ್ವೆ, ರಚಿನ್ ರವೀಂದ್ರ, ಕೇನ್ ವಿಲಿಯಮ್ಸನ್, ಡ್ಯಾರಿಲ್ ಮಿಚೆಲ್, ಟಾಮ್ ಲೇಥಮ್ (ವಿ ಕಿ), ಗ್ಲೆನ್ ಫಿಲಿಪ್ಸ್, ಮೈಕಲ್ ಬ್ರೇಸ್‌ವೆಲ್, ಮಿಚೆಲ್ ಸ್ಯಾಂಟ್ನರ್ (ನಾಯಕ), ಮ್ಯಾಟ್ ಹೆನ್ರಿ, ಕೈಲ್ ಜೇಮಿಸನ್, ವಿಲಿಯಮ್ ರೌರ್ಕಿ
ಪಂದ್ಯ ಆರಂಭ: ಮಧ್ಯಾಹ್ನ 2.30ಕ್ಕೆ. ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್.