ಕರ್ನಾಟಕ ಬಜೆಟ್​ ವಿದೇಶ ಪುನೀತ್​ @ 50 ಫ್ಯಾಷನ್​ ಧಾರ್ಮಿಕ ಕ್ರೈಂ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Assembly Session: ನಮ್ಮ ಸರ್ಕಾರದಲ್ಲಿ ರೈತರ ಆತ್ಮಹತ್ಯೆಗಳು ಕಡಿಮೆಯಾಗಿವೆ: ಸಿಎಂ ಸಿದ್ದರಾಮಯ್ಯ

Assembly Session: 2022-23 ರಲ್ಲಿ 1147 ಕೋಟಿ ರೂಪಾಯಿಗಳಷ್ಟು ಸಹಾಯಧನವನ್ನು ರೈತರಿಗೆ ಹಾಲಿನ ಪ್ರೋತ್ಸಾಹಧನವಾಗಿ ನೀಡಲಾಗಿತ್ತು. 2024-25 ರಲ್ಲಿ 1500 ಕೋಟಿ ರೂಪಾಯಿಗಳನ್ನು ಫೆಬ್ರವರಿ ಅಂತ್ಯದವರೆಗೆ ನೀಡಿದ್ದೇವೆ. ಇದರಲ್ಲಿ 2019 ರಿಂದ ಬಾಕಿ ಉಳಿಸಿದ್ದ ಮೊತ್ತವೂ ಸೇರಿದೆ. ಈ ವರ್ಷ ಮತ್ತೆ 1500 ಕೋಟಿ ರೂಪಾಯಿಗಳನ್ನು ಒದಗಿಸಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ನಮ್ಮ ಸರ್ಕಾರದಲ್ಲಿ ರೈತರ ಆತ್ಮಹತ್ಯೆಗಳು ಕಡಿಮೆಯಾಗಿವೆ: ಸಿಎಂ ಸಿದ್ದರಾಮಯ್ಯ

Profile Prabhakara R Mar 17, 2025 10:23 PM

ಬೆಂಗಳೂರು: ನಮ್ಮ ಸರ್ಕಾರದ ಅವಧಿಯಲ್ಲಿ ರೈತರ ಆತ್ಮಹತ್ಯೆ (Farmer Suicides) ಕಡಿಮೆಯಾಗಿದೆ. ಫೆಬ್ರವರಿ ಅಂತ್ಯದವರೆಗೆ 624 ರೈತರ ಆತ್ಮಹತ್ಯೆಗಳು ನಡೆದಿದ್ದು, ಅರ್ಹ ಪ್ರಕರಣ 527 ಆಗಿದೆ. ರೈತರ ಆತ್ಮಹತ್ಯೆಗಳು ನಡೆಯಬಾರದು. ರೈತರ ಆತ್ಮಹತ್ಯೆಗಳು ಪೂರ್ಣವಾಗಿ ನಿಲ್ಲಬೇಕೆನ್ನುವುದು ಸರ್ಕಾರದ ಆಶಯ. ರಾಜ್ಯಪಾಲರು ಸತ್ಯವನ್ನೇ ಹೇಳಿದ್ದಾರೆ. ನಾವು ಸುಳ್ಳು ಹೇಳಿಸಿಲ್ಲ. ರಾಜ್ಯಪಾಲರು ಬರೆದಿದ್ದನ್ನೆಲ್ಲ ಓದುವುದಿಲ್ಲ. ಅವರಿಗೆ ವಿವೇಚನೆ ಬಳಸಲು ಅವಕಾಶ ಇದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣದ ಕುರಿತ ಚರ್ಚೆ ವೇಳೆ ಸಿಎಂ ಮಾತನಾಡಿದ್ದಾರೆ.

ಅಭಿವೃದ್ಧಿ ಯೋಜನೆಗಳಿಗೂ ಹಣ ಮೀಸಲಿಟ್ಟು, ಗ್ಯಾರಂಟಿಗಳ ಜತೆಗೆ ಕರ್ನಾಟಕದ ಪ್ರಗತಿಯನ್ನೂ ಮಾಡಿದ್ದೇವೆ. ನಮ್ಮ ಕಾಲದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ. ರಾಜ್ಯ ಮಾದಕ ವಸ್ತು ಮುಕ್ತವಾಗಬೇಕು. ನೆನ್ನೆಯಷ್ಟೇ 75 ಕೋಟಿ ಮೌಲ್ಯದ ಮಾದಕವಸ್ತು ವಶಪಡಿಸಿಕೊಳ್ಳಲಾಗಿದೆ. ಕಾನೂನು ಸುವ್ಯವಸ್ಥೆ ಉತ್ತಮವಾಗಿರುವುದರಿಂದ ಹೂಡಿಕೆಗಳು ಹೆಚ್ಚಾಗಿದೆ. ಇತ್ತೀಚೆಗೆ ನಡೆದ ಘಟನೆಗಳಲ್ಲಿ ಆರೋಪಿಗಳನ್ನು ಕೂಡಲೇ ಬಂಧಿಸಲಾಗಿದೆ. ಇವರಿಗೆ ಶಿಕ್ಷೆಯಾಗುವಂತೆ ಕ್ರಮ ವಹಿಸಲಾಗುವುದು. ಅಪರಾಧಗಳು ನಡೆಯುತ್ತಲೇ ಇಲ್ಲ ಎಂದು ಹೇಳಲ್ಲ. ಆದರೆ ಕಡಿಮೆಯಾಗಿವೆ.

ವಿರೋಧ ಪಕ್ಷದ  ಸುನಿಲ್ ಕುಮಾರ್ ರವರು ಹಾಲಿನ ಪ್ರೋತ್ಸಾಹಧನವನ್ನು ಬಿಡುಗಡೆ ಮಾಡಿಲ್ಲ ಎಂದು ಆರೋಪ ಮಾಡಿದ್ದಾರೆ. ವಾಸ್ತವವೇನೆಂದರೆ ಹಿಂದಿನ ಬಿಜೆಪಿ ಸರ್ಕಾರ ಬಿಡುಗಡೆ ಮಾಡುತ್ತಿದ್ದುದಕ್ಕಿಂತ ಈ ವರ್ಷ 300 ಕೋಟಿ ರೂಪಾಯಿಗಳನ್ನು ನಮ್ಮ ಸರ್ಕಾರ ಹೆಚ್ಚಿಗೆ ಬಿಡುಗಡೆ ಮಾಡಿದೆ ಎಂದರು.

2022-23 ರಲ್ಲಿ 1147 ಕೋಟಿ ರೂಪಾಯಿಗಳಷ್ಟು ಸಹಾಯಧನವನ್ನು ರೈತರಿಗೆ ಹಾಲಿನ ಪ್ರೋತ್ಸಾಹಧನವಾಗಿ ನೀಡಲಾಗಿತ್ತು. 2024-25 ರಲ್ಲಿ 1500 ಕೋಟಿ ರೂಪಾಯಿಗಳನ್ನು ಫೆಬ್ರವರಿ ಅಂತ್ಯದವರೆಗೆ ನೀಡಿದ್ದೇವೆ. ಇದರಲ್ಲಿ 2019 ರಿಂದ ಬಾಕಿ ಉಳಿಸಿದ್ದ ಮೊತ್ತವೂ ಸೇರಿದೆ. ಈ ವರ್ಷ ಮತ್ತೆ 1500 ಕೋಟಿ ರೂಪಾಯಿಗಳನ್ನು ಒದಗಿಸಿದ್ದೇವೆ.

ಹಾಲಿನ ಪ್ರೋತ್ಸಾಹ ಧನವನ್ನು 2 ರೂಪಾಯಿಗಳಿಂದ 2013 ರಲ್ಲಿ 5 ರೂಪಾಯಿಗಳಿಗೆ ಹೆಚ್ಚಿಸಿದ್ದು ನಮ್ಮ ಸರ್ಕಾರವೆ. ನಮ್ಮ ಸರ್ಕಾರ ಕೈಗೊಂಡ ಕ್ರಮಗಳಿಂದಾಗಿ ಇಂದು 8.4 ಲಕ್ಷ ಹಾಲಿನ ಉತ್ಪಾದಕರಿಗೆ ಅನುಕೂಲವಾಗುತ್ತಿದೆ. 2012-13 ರಲ್ಲಿ ವರ್ಷಕ್ಕೆ 341 ಕೋಟಿ ರೂಗಳನ್ನು ಪ್ರೋತ್ಸಾಹಧನವಾಗಿ ಬಿಡುಗಡೆ ಮಾಡಲಾಗುತ್ತಿತ್ತು. ನಮ್ಮ ಸರ್ಕಾರ 2013 ರಲ್ಲಿ ಅಧಿಕಾರಕ್ಕೆ ಬಂದ ಕೂಡಲೆ 4 ರೂ. ಮಾಡಿದೆವು. ಇದರಿಂದ 341 ರೂಗಳಿಂದ 818 ಕೋಟಿ ರೂ. ಕೊಡುವಂತಾಯಿತು. 2016 ರಲ್ಲಿ 5 ರೂಗೆ ಹೆಚ್ಚಿಸಿದೆವು. ಇದರಿಂದಾಗಿ 1131 ಕೋಟಿ ರೂ.ಗಳನ್ನು ಆ ವರ್ಷ ಬಿಡುಗಡೆ ಮಾಡಲಾಯಿತು.

₹600 ಕೋಟಿ ಚಿಲ್ಲರೆ ಬಾಕಿ ಇದ್ದದ್ದು ನಿಜ. ಅದನ್ನು ಬಾಕಿ ಉಳಿಸಿದ್ದು ನಿಮ್ಮದೇ ಬಿಜೆಪಿ ಸರ್ಕಾರ. ಯಾಕೆ ಬಾಕಿ ಉಳಿಸಿ ಹೋದ್ರಿ ನೀವು? ವಿರೋಧ ಪಕ್ಷದ ನಾಯಕರು ಬಸ್ಸಿನ ದರ ಏರಿಕೆ ಬಗ್ಗೆ ಮಾತನಾಡಿದ್ದಾರೆ. 2008-2013 ವರೆಗೆ ಸಾರಿಗೆ ಸಚಿವರಾಗಿದ್ದ ಅಶೋಕ್ ಅವರು 47% ರಷ್ಟು ದರ ಏರಿಸಿದ್ದರು.



ನಾವು ಬಸ್ಸಿನ ದರ 15% ಮಾತ್ರ ಪರಿಷ್ಕರಣೆ ಮಾಡಿದ್ದೇವೆ. ಸಿಬ್ಬಂದಿ ವೇತನ, ಡೀಸಲ್ ಬೆಲೆ ಏರಿಕೆಯಾದ ಕಾರಣಕ್ಕೆ ನಾವು ಬಸ್ಸಿನ ದರ ಹೆಚ್ಚಳ ಮಾಡಬೇಕಾಗಿದೆ. ರಾಜ್ಯದಲ್ಲಿ ನಾವು ಸಾರಿಗೆ ದರ 15% ಏರಿಕೆ ಮಾಡಿದರೂ ಕೊಡ ಪಕ್ಕದ ರಾಜ್ಯಗಳಿಗಿಂತ ಕಡಿಮೆ ಇದೆ. ಸಾಮಾನ್ಯ ಸಾರಿಗೆ, ವೇಗದೂತ, ರಾಜಹಂಸ ಡೀಲಕ್ಸ್ ಬಸ್ಸುಗಳು ಒಂದು ಕಿಮೀ ಗೆ ತಗಲುವ ದರಗಳು ಮಹಾರಾಷ್ಟ್ರ, ಆಂಧ್ರಪ್ರದೇಶ ರಾಜ್ಯಗಳಿಗಿಂತ ಕಡಿಮೆ ಇದೆ ಎಂದರು.

ವಿದ್ಯಾರ್ಥಿಗಳ ಪಾಸ್‌ಗಳ ದರವನ್ನು 12 ವರ್ಷಗಳಿಂದ ಹೆಚ್ಚಿಸಿಲ್ಲ. ಬಿಜೆಪಿ ಅವಧಿಯಲ್ಲಿಯೂ ಪ್ರತಿ ವರ್ಷ ಬಸ್ಸಿನ ದರ ಹೆಚ್ಚಿಸಲಾಗಿದೆ. ಡೀಸಲ್ ಬೆಲೆ ಹೆಚ್ಚಿಗೆ ಆದಾಗ ದರಯೇರಿಸಲೇ ಬೇಕಾಗುತ್ತದೆ. ವೇತನ ಹೆಚ್ಚು ಮಾಡಿದಾಗ ನಷ್ಟಕ್ಕೆ ಸಾರಿಗೆ ನಿಗಮಗಳು ಒಳಗಾಗಿವೆ. ಹೆಚ್ಚುವರಿ ಅಬಕಾರಿ ಶುಲ್ಕವನ್ನು 31.84 ರೂ.ಗಳಿಗೆ ಹೆಚ್ಚು ಮಾಡಿದರು. ವೇತನ, ಡೀಸೆಲ್ ಬೆಲೆ ಹೆಚ್ಚಳ ಮಾಡಿದಾಗ ಅನಿವಾರ್ಯವಾಗಿ ದರ ಏರಿಸಬೇಕಾಗಿದೆ. ಇಷ್ಟೆಲ್ಲಾ ಇದ್ದರೂ ನಾವು 4,900 ಹೊಸ ಬಸ್ಸುಗಳನ್ನು ಖರೀದಿ ಮಾಡಿದ್ದೇವೆ. ಪ್ರಧಾನಿ ಮೋದಿ ಸರ್ಕಾರ ಡೀಸೆಲ್ ಬೆಲೆಯನ್ನು ಯದ್ವಾ ತದ್ವಾ ಏರಿಸಿದ್ದರಿಂದ ಪ್ರಯಾಣ ದರ ಏರಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ. ಇದನ್ನು ಹೇಳಿದರೆ ಬಿಜೆಪಿ ಸದಸ್ಯರಿಗೆ ಸಿಟ್ಟು ಬರುತ್ತದೆ.

ಮೆಟ್ರೋ ದರ ಹೆಚ್ಚಳ ನಮ್ಮ ಕೈಯಲ್ಲಿ ಇಲ್ಲ

ಮೆಟ್ರೋ ರೈಲು ಕಾರ್ಯಾಚರಣೆ ಮತ್ತು ನಿರ್ವಹಣೆ ಕಾಯ್ದೆ 2005 ರಲ್ಲಿ ಮಾಡಲಾಗಿದೆ. ಕೇಂದ್ರ ಸರ್ಕಾರ ಕಾಲಕಾಲಕ್ಕೆ ನಿವೃತ್ತ ಉಚ್ಚ ನ್ಯಾಯಾಲಯದ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ದರ ನಿಗದಿ ಮಾಡುವ ಸಮಿತಿ ರಚಿಸಬಹುದು ಎಂದು ಇದರಲ್ಲಿ ಹೇಳಲಾಗಿದೆ. ಬಿಜೆಪಿ ಅಧಿಕಾರದ ಅವಧಿಯಲ್ಲಿ ದರ ನಿಗದಿ ಮಾಡುವ ಬಗ್ಗೆ ಪತ್ರ ಬರೆದು, ಸಮಿತಿ ರಚನೆ ಮಾಡಲಾಗಿದೆ.

16-12-2024 ರಲ್ಲಿ ವರದಿ ಕೊಟ್ಟ ಮೇಲೆ ದರ ಪರಿಷ್ಕರಣೆ ಮಾಡಲಾಗಿದೆ. ನಂತರದಲ್ಲಿ ಇತಿಮಿತಿಯೊಳಗೆ ಸ್ವಲ್ಪ ಬೆಲೆ ಕಡಿಮೆ ಮಾಡಲಾಗಿದೆ. ಒಮ್ಮೆ ಸಮಿತಿ ಶಿಫಾರಸ್ಸು ಮಾಡಿದ ಮೇಲೆ ಹಿಂಪಡೆಯಲು ಸಾಧ್ಯವಿಲ್ಲ. ಮೆಟ್ರೋ ದರ ಹೆಚ್ಚಳ ನಮ್ಮ ಕೈಯಲ್ಲಿ ಇಲ್ಲ ಎಂದು ಹೇಳಿದರು.

ಬೆಂಗಳೂರು ಅಭಿವೃದ್ಧಿಗೆ ಉಚ್ಚ ನ್ಯಾಯಾಲಯದವರು ಬಿಜೆಪಿ ಅಧಿಕಾರದಲ್ಲಿದ್ದಾಗ ಏನೇನು ಹೇಳಿದ್ದರು ಎಂದು ತಿಳಿಸಬೇಕಾ? 1,700 ಕೋಟಿ ವೈಟ್ ಟಾಪಿಂಗ್ ಗೆ, 15 ಲಕ್ಷ ರೂಪಾಯಿಗಳನ್ನು ಪ್ರತಿ ವಾರ್ಡ್‌ಗೆ ಗುಂಡಿ ಮುಚ್ಚಲು, ಡಾಂಬರೀಕರಣಕ್ಕೆ 700 ಕೋಟಿ ನೀಡಲಾಗಿದೆ. ಈ ವರ್ಷಕ್ಕೆ 3000 ದ ಜೊತೆಗೆ ನಾಲ್ಕು ಸಾವಿರ ಸೇರಿಸಿ 7000 ಕೋಟಿಗಳನ್ನು ಮುಂದಿನ ವರ್ಷಕ್ಕೆ ವೆಚ್ಚ ಮಾಡಲಾಗುತ್ತಿದೆ.

ನಾವು ನುಡಿದಂತೆ ನಡೆಯುವವರು. ಬಸವರಾಜ ಬೊಮ್ಮಾಯಿಯವರಂತೆ ಹಣ ಮೀಸಲಿಟ್ಟು ಒಂದು ರೂಪಾಯಿ ಕೂಡ ಬಿಡುಗಡೆ ಮಾಡದೇ ಮೋಸ ಮಾಡಲ್ಲ.

ಈ ಸುದ್ದಿಯನ್ನೂ ಓದಿ | CM Siddaramaiah: ಆರ್‌ಎಸ್‌ಎಸ್‌ ಅವರನ್ನು ಎದುರಿಸಲು ನಾವು ಸಿದ್ಧ: ಸಿಎಂ ಸಿದ್ದರಾಮಯ್ಯ

ಇನ್ನು ಶಾಸಕ ಭರತ್ ಶೆಟ್ಟಿ ರಾಹುಲ್ ಗಾಂಧಿಯವರಿಗೆ ಕಪಾಳಕ್ಕೆ ಹೊಡೆಯಬೇಕು ಎಂದು ಹೇಳಿಕೆ ನೀಡಿದ್ದಾರೆ. ಇದೇ ದ್ವೇಷದ ರಾಜಕಾರಣ. ಇದನ್ನು ಮಾಡಬಾರದು. ಇದನ್ನು ಹುಟ್ಟುಹಾಕಿದ್ದು ಆರ್.ಎಸ್.ಎಸ್ ನವರು ಎಂದದ್ದಕ್ಕೆ ಗಲಾಟೆ ನೀವು ಮಾಡಿದಿರಿ ಎಂದು ಸಿಎಂ ಕಿಡಿಕಾರಿದರು.