Union Budget: ಇಂದಿನಿಂದ ಸಂಸತ್ ಬಜೆಟ್ ಅಧಿವೇಶನ ಆರಂಭ ; ರಾಷ್ಟ್ರಪತಿ ಭಾಷಣದ ಬಳಿಕ ಆರ್ಥಿಕ ಸಮೀಕ್ಷಾ ವರದಿ ಮಂಡನೆ
ಇಂದಿನಿಂದ ಸಂಸತ್‌ನಲ್ಲಿ ಬಜೆಟ್ ಅಧಿವೇಶನ ಆರಂಭವಾಗಲಿದೆ. ಬೆಳಗ್ಗೆ 11 ಗಂಟೆಗೆ ಜಂಟಿ ಸದನ ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾಷಣ ಮಾಡಲಿದ್ದಾರೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆರ್ಥಿಕ ಸಮೀಕ್ಷಾ ವರದಿಯನ್ನು ಮಂಡನೆ ಮಾಡಲಿದ್ದಾರೆ.

union Budge

ನವದೆಹಲಿ: ನರೇಂದ್ರ ಮೋದಿ (Narendra Modi) ನೇತೃತ್ವದ ಸರ್ಕಾರದ ಎರಡನೇ ಪೂರ್ಣಾವಧಿ ಬಜೆಟ್ (Union Budget) ಅಧಿವೇಶನ ಶುಕ್ರವಾರದಿಂದ ಆರಂಭವಾಗಲಿದೆ. ಬೆಳಗ್ಗೆ 11 ಗಂಟೆಗೆ ಜಂಟಿ ಸದನ ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾಷಣ ಮಾಡಲಿದ್ದಾರೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sita Raman) ಆರ್ಥಿಕ ಸಮೀಕ್ಷಾ ವರದಿಯನ್ನು ಮಂಡನೆ ಮಾಡಲಿದ್ದಾರೆ. .ಶನಿವಾರ 2025 - 26ನೇ ಸಾಲಿನ ಕೇಂದ್ರ ಆಯವ್ಯಯವನ್ನು ಮಂಡಿಸಲಿದ್ದಾರೆ.
ಜನವರಿ 31ರಂದು ಆರಂಭವಾಗುವ ಅಧಿವೇಶನದ ಮೊದಲ ಹಂತ ಫೆಬ್ರವರಿ 13ಕ್ಕೆ ಅಂತ್ಯವಾಗಲಿದೆ. ಬಜೆಟ್ ಪ್ರಸ್ತಾವನೆಗಳನ್ನು ಪರಿಶೀಲಿಸಿದ ಬಳಿಕ ಮಾರ್ಚ್ 10 ರಿಂದ ಎರಡನೇ ಹಂತದ ಸಂಸತ್ ಅಧಿವೇಶನ ಆರಂಭವಾಗಲಿದೆ. ಒಟ್ಟು 27 ದಿನಗಳ ಕಾಲ ಅಧಿವೇಶನ ನಡೆಯಲಿರುವ ಅಧಿವೇಶನ ಏಪ್ರಿಲ್ 4ಕ್ಕೆ ಕೊನೆಗೊಳ್ಳಲಿದೆ.
ನಿರೀಕ್ಷೆಗಳೇನು?
ಕೇಂದ್ರ ಸರ್ಕಾರವು ಬಜೆಟ್ ಅಧಿವೇಶನದಲ್ಲಿ ವಕ್ಫ್ ತಿದ್ದುಪಡಿ ಸೇರಿದಂತೆ ಇತರ ಮೂರು ಹೊಸ ಕಾನೂನುಗಳನ್ನು ತರಲು ಮುಂದಾಗಿದೆ. ವಿಮಾನ ವಸ್ತುಗಳ ಮೇಲಿನ ಹಿತಾಸಕ್ತಿಗಳ ರಕ್ಷಣೆ ಮಸೂದೆ, ತ್ರಿಭುವನ್ ಸಹಕಾರಿ ವಿಶ್ವವಿದ್ಯಾಲಯ ಮಸೂದೆ, ವಲಸೆ ಮತ್ತು ವಿದೇಶಿಯ ಮಸೂದೆ ಜಾರಿಗೆ ಮುಂದಾಗಿದೆ. ಜೊತೆಗೆ ಹಿಂದಿನ ಅಧಿವೇಶನದಿಂದ ಉಭಯ ಸದನಗಳಲ್ಲಿ ಇನ್ನು 10 ಮಸೂದೆಗಳು ಬಾಕಿ ಉಳಿದಿದ್ದು ಅವುಗಳನ್ನೂ ಅಂಗೀಕರಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ ಎನ್ನಲಾಗಿದೆ.
ಈ ಬಾರಿ ವಾರ್ಷಿಕ 10 ಲಕ್ಷ ರೂಪಾಯಿಗಳವರೆಗಿನ ಆದಾಯಕ್ಕೆ ಆದಾಯ ತೆರಿಗೆಯಿಂದ ವಿನಾಯಿತಿ ನೀಡಬಹುದು ಎಂಬ ನಿರೀಕ್ಷೆ ಸದ್ಯಕ್ಕಿದೆ. ಒಂದು ವೇಳೆ ಸರ್ಕಾರ ಆದಾಯ ತೆರಿಗೆಯಲ್ಲಿ ವಿನಾಯಿತಿ ನೀಡಿದ್ರೆ ಸಂಬಳ ಪಡೆಯುವ ಮತ್ತು ಮಧ್ಯಮ ವರ್ಗದ ತೆರಿಗೆದಾರರು ಖುಷಿಯಾಗಲಿದ್ದಾರೆ. ಆರೋಗ್ಯ ವಿಮೆ ಮತ್ತು ಜೀವ ವಿಮೆಯ ಪ್ರೀಮಿಯಂ ಪಾವತಿಗೆ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ಸರ್ಕಾರ ಹೆಚ್ಚಿಸಬಹುದು ಎಂದು ಜನರು ಆಶಿಸುತ್ತಿದ್ದಾರೆ.
ಈ ಸುದ್ದಿಯನ್ನೂ ಓದಿ : Budget 2025: ಧಾರ್ಮಿಕ, ಸಾಂಸ್ಕೃತಿಕ ಪ್ರವಾಸೋದ್ಯಮಕ್ಕೆ ಬಜೆಟ್‌ನಲ್ಲಿ ನೆರವು ನಿರೀಕ್ಷೆ
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಗುರುವಾರ ಸರ್ವಪಕ್ಷಗಳ ಸಭೆ ನಡೆಯಿತು. ಸಚಿವ ರಾಜ್‌ನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 36 ಪಕ್ಷಗಳ 52 ನಾಯಕರು ಭಾಗಿಯಾಗಿದ್ದರು.
ಬಜೆಟ್ ಅಧಿವೇಶನವು ಫಲಪ್ರದವಾಗಿರುವಂತೆ ನೋಡಿಕೊಳ್ಳುವಂತೆ ಸಂಸದೀಯ ಖಾತೆ ಸಚಿವ ಕಿರಣ್ ರಿಜಿಜು ಎಲ್ಲಾ ಪಕ್ಷಗಳ ನಾಯಕರಿಗೂ ಮನವಿ ಮಾಡಿದರು.