ಇಂದಿನಿಂದ ಬಿಯರ್ ಇನ್ನಷ್ಟು ಕಹಿ, ಬೆಲೆ 10- 40 ರೂ. ಏರಿಕೆ
ರಾಜ್ಯ ಸರ್ಕಾರ ಬಿಯರ್ ಮೇಲಿನ ಸುಂಕವನ್ನು 5ರಿಂದ 40 ರೂ.ವರೆಗೆ ಹೆಚ್ಚಳ ಮಾಡಿದ್ದು, ಬಿಯರ್‌ನಲ್ಲಿನ ಆಲ್ಕೋಹಾಲ್ ಅಂಶದ ಮೇಲೆ ದರ 10ರಿಂದ 40 ರೂ.ವರೆಗೆ ಹೆಚ್ಚಳವಾಗಲಿದೆ.

ಬಿಯರ್ ಬೆಲೆ ಹೆಚ್ಚಳ

ಬೆಂಗಳೂರು: ಬಿಯರ್‌ನಿಂದ ಕಿಕ್ ಏರಿಸಿಕೊಳ್ಳುತ್ತಿದ್ದ ಮದ್ಯಪ್ರಿಯರು ಈಗ ಬಿಯರ್ ಬೆಲೆ (Beer price hike) ಕೇಳಿಯೇ ಚಿತ್ ಆಗುವಂತಾಗಿದೆ. ರಾಜ್ಯ ಸರ್ಕಾರ (Karnataka Government) ಮದ್ಯ ಪ್ರಿಯರಿಗೆ ಶಾಕ್ ನೀಡಿದ್ದು, ಇಂದಿನಿಂದಲೇ ಜಾರಿಗೆ ಬರುವಂತೆ ಬಿಯರ್ ದರ ಏರಿಕೆ ಮಾಡಿ ಅಬಕಾರಿ ಇಲಾಖೆ (Excise department) ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರ ಬಿಯರ್ ಮೇಲಿನ ಸುಂಕವನ್ನು 5ರಿಂದ 40 ರೂ.ವರೆಗೆ ಹೆಚ್ಚಳ ಮಾಡಿದ್ದು, ಬಿಯರ್‌ನಲ್ಲಿನ ಆಲ್ಕೋಹಾಲ್ ಅಂಶದ ಮೇಲೆ ದರ 10ರಿಂದ 40 ರೂ.ವರೆಗೆ ಹೆಚ್ಚಳವಾಗಲಿದೆ. ಕಡಿಮೆ ಆಲ್ಕೋಹಾಲ್ ಅಂಶವಿರುವ ಬಿಯರ್‌ಗಳ ಬೆಲೆ ಯಥಾಸ್ಥಿತಿ ಇರಲಿದ್ದು, ಸ್ಟ್ರಾಂಗ್ ಬಿಯರ್‌ಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ. ಇಂದಿನಿಂದಲೇ ದರ ಹೆಚ್ಚಳ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಬಿಯರ್ ಪ್ರಿಯರಿಗೆ ರಾಜ್ಯ ಸರ್ಕಾರ ಬಿಗ್ ಶಾಕ್ ನೀಡಿದೆ.
2024-25ನೇ ಸಾಲಿನ ಬಜೆಟ್‌ನಲ್ಲಿ ಮುಖ್ಯಮಂತ್ರಿ ಐಎಂಎಲ್ ಹಾಗೂ ಬಿಯರ್ ಸ್ಪ್ಯಾಬ್‌ಗಳನ್ನು ಪರಿಷ್ಕರಿಸಲಾಗುವುದು ಎಂದು ಪ್ರಕಟಿಸಿದ್ದರು. ಅದರಂತೆ, ಐಎಂಎಲ್ ದರ ಪರಿಷ್ಕರಿಸಲಾಗಿತ್ತು. ಆದರೆ, ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಅಲ್ಕೋಹಾಲ್ ಪ್ರಮಾಣಕ್ಕೆ ತಕ್ಕಂತೆ ಪರಿಷ್ಕರಿಸಲು ಕಳೆದ ಆಗಸ್ಟ್ ನಲ್ಲಿಯೇ ಕರಡು ಅಧಿಸೂಚನೆ ಪ್ರಕಟಿಸಿ, ಆಕ್ಷೇಪಣೆ ಆಹ್ವಾನಿಸಿತ್ತು. ಆಗಲೇ ಸುಂಕ ಏರಿಕೆ ಕಡತ ಸಿದ್ಧಪಡಿಸಿ ಮುಖ್ಯಮಂತ್ರಿಗಳ ಅನುಮೋದನೆಗೆ ಸಲ್ಲಿಸಲಾಗಿತ್ತು. ಆದರೆ, ನಾನಾ ಕಾರಣಗಳಿಂದ ಆ ಕಡತಕ್ಕೆ ಸಿಎಂ ಸಿದ್ದರಾಮಯ್ಯ ಸಹಿ ಹಾಕಿರಲಿಲ್ಲ. ಈಗ, ಸಿಎಂ ಸುಂಕ ಏರಿಕೆಗೆ ಸಮ್ಮತಿಸಿರುವ ಹಿನ್ನೆಲೆಯಲ್ಲಿ ಸರ್ಕಾರ ಬಿಯರ್ ಬೆಲೆಯನ್ನು ಹೆಚ್ಚಳ ಮಾಡಲಿದೆ ಎನ್ನಲಾಗಿದೆ.