ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಎರಡನೇ ಅವಧಿಗೆ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಮಹತ್ವದ ನಿರ್ಣಯಗಳನ್ನು ಘೋಷಿಸುತ್ತಿದ್ದಾರೆ. ಇದೀಗ ಟ್ರಂಪ್ ಆದೇಶದ ಮೇರೆಗೆ ದೇಶಕ್ಕೆ ಪ್ರವೇಶಿಸಿದ ಅಕ್ರಮ ವಲಸಿಗರ ವಿರುದ್ಧ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಲು ಪ್ರಾರಂಭಿಸಿದ್ದು,ಈವರೆಗೆ ಬರೋಬ್ಬರಿ 500 ಅಕ್ರಮ ವಲಸಿಗರನ್ನು(Illegal Immigrants) ಬಂಧಿಸಲಾಗಿದೆ. ಮಿಲಿಟರಿ ವಿಮಾನದ ಸಹಾಯದಿಂದ 100ಕ್ಕೂ ಹೆಚ್ಚು ಜನರನ್ನು ಗಡಿಪಾರು ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಟ್ರಂಪ್ ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಮಹತ್ವದ ನಿರ್ಣಯಗಳನ್ನು ಕೈಗೊಳ್ಳುತ್ತಿದ್ದಾರೆ. ಇದೀಗ ಬೃಹತ್ ಕಾರ್ಯಾಚರಣೆಯಲ್ಲಿ, ನೂರಾರು ಅಕ್ರಮ ವಲಸಿಗರನ್ನು ಬಂಧಿಸಿ ಗಡಿಪಾರು ಮಾಡಲಾಗಿದೆ. ಶ್ವೇತಭವನದ ಅಧಿಕೃತ ಎಕ್ಸ್ ಖಾತೆಯ ಪೋಸ್ಟ್‌ನಲ್ಲಿ ತಿಳಿಸಿರುವಂತೆ 500ಕ್ಕೂ ಹೆಚ್ಚು ಅಕ್ರಮ ವಲಸಿಗರನ್ನು ಬಂಧಿಸಲಾಗಿದೆ.
ಅಮೆರಿಕ ಅಧಿಕಾರಿಗಳು 500 ಅಕ್ರಮ ವಲಸಿಗರನ್ನು ಬಂಧಿಸಿದ್ದಾರೆ. ಮಿಲಿಟರಿ ವಿಮಾನವನ್ನು ಬಳಸಿಕೊಂಡು ನೂರಾರು ಜನರನ್ನು ಗಡಿಪಾರು ಮಾಡಲಾಗಿದೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಹೇಳಿದ್ದಾರೆ. ಟ್ರಂಪ್ ಆಡಳಿತವು ನೂರಾರು ಅಕ್ರಮ ‘ವಲಸೆ ಅಪರಾಧಿಗಳನ್ನು’ ಮಿಲಿಟರಿ ವಿಮಾನಗಳ ಮೂಲಕ ಗಡಿಪಾರು ಮಾಡಿದೆ ಎಂದು ಅವರು ಹೇಳಿದರು. “ಇತಿಹಾಸದಲ್ಲಿಯೇ ಅತಿದೊಡ್ಡ ಬೃಹತ್ ಗಡಿಪಾರು ಕಾರ್ಯಾಚರಣೆ ಇದಾಗಿದ್ದು, ನೀಡಿದ ಭರವಸೆಯನ್ನು ಈಡೇರಿಸಲಾಗಿದೆ" ಎಂದರು.
ಈ ಸುದ್ದಿಯನ್ನೂ ಓದಿ:Donald Trump: ರಷ್ಯಾ- ಉಕ್ರೇನ್ ಯುದ್ಧ ನಿಲ್ಲಿಸಲು ಸೌದಿ ಅರೇಬಿಯಾಕ್ಕೆ ಸಾಧ್ಯ; ಡೊನಾಲ್ಡ್ ಟ್ರಂಪ್
ಅಮೆರಿಕದ 47ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ, ಟ್ರಂಪ್ ಸೋಮವಾರ ಅಮೆರಿಕ-ಮೆಕ್ಸಿಕೋ ಗಡಿಯಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದರು. ತಮ್ಮ ಉದ್ಘಾಟನಾ ಭಾಷಣದಲ್ಲಿ, ಅವರು ಅಮೆರಿಕ ಸೈನ್ಯವನ್ನು ಕಳುಹಿಸುವ, ನಿರಾಶ್ರಿತರು ಮತ್ತು ಆಶ್ರಯವನ್ನು ನಿರ್ಬಂಧಿಸುವ ಯೋಜನೆಗಳನ್ನು ಘೋಷಿಸಿದರು, ಅಕ್ರಮ ಪ್ರವೇಶ ಮತ್ತು ಗಡಿ ಅಪರಾಧವನ್ನು ನಿಲ್ಲಿಸುವುದಾಗಿ ಹೇಳಿದ್ದರು.