IND vs AUS: ʻಸ್ಕಾಟ್ ಬೋಲೆಂಡ್ ಆಡಿಲ್ಲವಾಗಿದ್ರೆ ಭಾರತ ಟೆಸ್ಟ್ ಸರಣಿ ಗೆಲ್ಲುತ್ತಿತ್ತುʼ-ಅಶ್ವಿನ್!
R Ashwin on Scott Boland: ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ತೋರಿದ್ದ ಸ್ಕಾಟ್ ಬೋಲೆಂಡ್ ಅವರನ್ನು ಮಾಜಿ ಸ್ಪಿನ್ನರ್ ಆರ್ ಅಶ್ವಿನ್ ಗುಣಗಾನ ಮಾಡಿದ್ದಾರೆ. ಬೋಲೆಂಡ್ ಆಡಿಲ್ಲವಾಗಿದ್ದರೆ ಭಾರತ ತಂಡ ಟೆಸ್ಟ್ ಸರಣಿಯನ್ನು ಗೆಲ್ಲುತ್ತಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನವದೆಹಲಿ: ಆಸ್ಟ್ರೇಲಿಯಾ ತಂಡದ ಪರ ಸ್ಕಾಟ್ ಬೋಲೆಂಡ್ ಆಡಿಲ್ಲವಾಗಿದ್ದರೆ, ಭಾರತ ತಂಡ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯನ್ನು ಗೆಲ್ಲುತ್ತಿತ್ತು ಎಂದು ಟೀಮ್ ಇಂಡಿಯಾ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಗಾಯದ ಕಾರಣ ಜಾಶ್ ಹೇಝಲ್‌ವುಡ್ ಅವರು ಪರ್ತ್ ಟೆಸ್ಟ್ ಬಳಿಕ ಆಸ್ಟ್ರೇಲಿಯಾ ತಂಡದಿಂದ ಹೊರ ಬಿದ್ದಿದ್ದರು. ಅಡಿಲೇಡ್ ಟೆಸ್ಟ್‌ನಲ್ಲಿ ಜಾಶ್ ಹೇಝಲ್‌ವುಡ್ ಸ್ಥಾನವನ್ನು ಸ್ಕಾಟ್ ಬೋಲೆಂಡ್ ತುಂಬಿದ್ದರು. ಈ ಪಂದ್ಯದಲ್ಲಿ ಅವರು 105 ರನ್ ನೀಡಿ 5 ವಿಕೆಟ್‌ಗಳನ್ನು ಕಬಳಿಸಿದ್ದರು. ಆದರೆ, ಸಂಪೂರ್ಣ ಫಿಟ್‌ನೆಸ್ ಪಡೆಯುವ ಮೂಲಕ ಬ್ರಿಸ್ಬೇನ್ ಟೆಸ್ಟ್‌ಗೆ ಜಾಶ್ ಹೇಝಲ್‌ವುಡ್ ಮರಳಿದ್ದರಿಂದ ಸ್ಕಾಟ್ ಬೋಲೆಂಡ್ ಮೂರನೇ ಪಂದ್ಯದಿಂದ ಹೊರಗುಳಿದಿದ್ದರು.
ಜಾಶ್ ಹೇಝಲ್‌ವುಡ್ ಅವರು ಮೂರನೇ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ಗಾಯಕ್ಕೆ ತುತ್ತಾಗಿದ್ದರು. ಈ ಹಿನ್ನೆಲೆಯಲ್ಲಿ ಅವರು ಟೆಸ್ಟ್ ಸರಣಿಯ ಕೊನೆಯ ಎರಡು ಪಂದ್ಯಗಳಲ್ಲಿ ಆಡಿರಲಿಲ್ಲ. ಹಾಗಾಗಿ, ಟೆಸ್ಟ್ ಸರಣಿಯ ಕೊನೆಯ ಎರಡು ಪಂದ್ಯಗಳಲ್ಲಿ ಸ್ಕಾಟ್ ಬೋಲೆಂಡ್ ಸ್ಥಾನವನ್ನು ಪಡೆದಿದ್ದರು. ಮೆಲ್ಬರ್ನ್ ಟೆಸ್ಟ್‌ನಲ್ಲಿ 6 ವಿಕೆಟ್‌ಗಳನ್ನು ಕಬಳಿಸಿದ್ದ ಅವರು, ಸಿಡ್ನಿ ಟೆಸ್ಟ್ ಪಂದ್ಯದಲ್ಲಿಯೂ ಮ್ಯಾಚ್ ವಿನ್ನಿಂಗ್ ಬೌಲಿಂಗ್ ಪ್ರದರ್ಶನವನ್ನು ತೋರಿದ್ದರು. ಅಂದ ಹಾಗೆ ಆಸ್ಟ್ರೇಲಿಯಾ ಪ್ರದರ್ಶನದ ಬಗ್ಗೆ ಮಾತನಾಡಿದ ರವಿಚಂದ್ರನ್ ಅಶ್ವಿನ್, ಪ್ಯಾಟ್ ಕಮಿನ್ಸ್ ಎಡಗೈ ಬ್ಯಾಟ್ಸ್‌ಮನ್‌ಗಳ ಎದುರು ಬೌಲ್ ಮಾಡುವಲ್ಲಿ ಎಡವಿದ್ದರು. ಆದರೆ, ಸ್ಕಾಟ್ ಬೋಲೆಂಡ್ ಪಾತ್ರ ಆಸ್ಟ್ರೇಲಿಯಾ ತಂಡದ ಟೆಸ್ಟ್ ಸರಣಿಯ ಗೆಲುವಿನಲ್ಲಿ ಮಹತ್ತರ ಪಾತ್ರವನ್ನು ವಹಿಸಿದೆ ಎಂದಿದ್ದಾರೆ.
ʻಡ್ರೆಸ್ಸಿಂಗ್ ರೂಂ ವಿಷಯಗಳನ್ನು ಲೀಕ್ ಮಾಡಿದ್ದರುʼ:ಸರ್ಫರಾಝ್ ಖಾನ್ ವಿರುದ್ಧ ಗಂಭೀರ್ ಆರೋಪ!
ಸ್ಕಾಟ್ ಬೋಲೆಂಡ್‌ಗೆ ಆರ್ ಅಶ್ವಿನ್ ಮೆಚ್ಚುಗೆ
ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿರುವ ವಿಡಿಯೊದಲ್ಲಿ ಮಾತನಾಡಿದ ಆರ್ ಅಶ್ವಿನ್, "ಪ್ಯಾಟ್ ಕಮಿನ್ಸ್ ಪಾಲಿಗೆ ಈ ಸರಣಿ ಶ್ರೇಷ್ಠವಾಗಿದೆ ಎಂದು ಎಲ್ಲರೂ ಹೇಳುತ್ತಾರೆ ಆದರೆ, ಅವರು ಎಡಗೈ ಬ್ಯಾಟ್ಸ್‌ಮನ್‌ಗಳ ಎದುರು ವೈಫಲ್ಯ ಅನುಭವಿಸಿದ್ದಾರೆ. ಸ್ಕಾಟ್ ಬೋಲೆಂಡ್ ತಂಡಕ್ಕೆ ಬಂದಿದ್ದು ಆಸ್ಟ್ರೇಲಿಯಾ ಪಾಲಿಗೆ ಪ್ಲಸ್ ಪಾಯಿಂಟ್ ಆಗಿದೆ. ಒಂದು ವೇಳೆ ಸ್ಕಾಟ್ ಬೋಲೆಂಡ್ ಆಡಿಲ್ಲವಾಗಿದ್ದರೆ, ಈ ಟೆಸ್ಟ್ ಸರಣಿಯನ್ನು ಭಾರತ ತಂಡ ಗೆಲ್ಲುತ್ತಿತ್ತು. ಜಾಶ್ ಹೇಝಲ್‌ವುಡ್ ಬಗ್ಗೆ ಯಾವುದೇ ಆರೋಪ ಇಲ್ಲ, ಅವರು ಅದ್ಭುತ ಬೌಲರ್ ಆಗಿದ್ದಾರೆ. ಜಾಶ್ ಹೇಝಲ್‌ವುಡ್ ಅವರನ್ನೇ ಮುಂದುವರಿಸಿದ್ದರೆ ನಾವೇ ಟೆಸ್ಟ್ ಸರಣಿಯನ್ನು ಗೆಲ್ಲುತ್ತಿದ್ದೆವು. ಸ್ಕಾಟ್ ಬೋಲೆಂಡ್ ರೌಂಡ್ ದಿ ವಿಕೆಟ್ ಬೌಲ್ ಮಾಡಿದ್ದು, ಅದರಲ್ಲಿಯೂ ವಿಶೇಷವಾಗಿ ಎಡಗೈ ಬ್ಯಾಟ್ಸ್‌ಮನ್‌ಗಳಿಗೆ ಅವರು ಕಠಿಣ ಸವಾಲು ನೀಡಿದ್ದರು," ಎಂದು ಹೇಳಿದ್ದಾರೆ.
ಸ್ಕಾಟ್ ಬೋಲೆಂಡ್ ಅವರು ಈ ಟೆಸ್ಟ್ ಸರಣಿಯಲ್ಲಿ ಮೂರನೇ ಗರಿಷ್ಠ ವಿಕೆಟ್ ಪಡೆದ ಮೂರನೇ ಬೌಲರ್ ಎನಿಸಿಕೊಂಡಿದ್ದಾರೆ. ಅವರು ಆಡಿದ್ದ ಮೂರು ಟೆಸ್ಟ್ ಪಂದ್ಯಗಳಿಂದ 13.19ರ ಸರಾಸರಿ ಮತ್ತು 29.04ರ ಸ್ಟ್ರೈಕ್ ರೇಟ್‌ನಲ್ಲಿ 21 ವಿಕೆಟ್‌ಗಳನ್ನು ಕಬಳಿಸಿದ್ದರು. ಐದನೇ ಹಾಗೂ ಟೆಸ್ಟ್ ಸರಣಿಯ ಕೊನೆಯ ಪಂದ್ಯದಲ್ಲಿ ಸ್ಕಾಟ್ ಬೋಲೆಂಡ್ 10 ವಿಕೆಟ್‌ಗಳನ್ನು ಪಡೆದ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಸ್ವೀಕರಿಸಿದ್ದರು.
Karun Nairಗೆ ಅವಕಾಶ ಏಕೆ ನೀಡಿಲ್ಲ?: ಬಿಸಿಸಿಐ ವಿರುದ್ಧ ಹರ್ಭಜನ್ ಸಿಂಗ್ ಪ್ರಶ್ನೆ!
ಇದು ಅದ್ಭುತ ಟೆಸಟ್ ಸರಣಿಯಾಗಿದೆ: ಅಶ್ವಿನ್
"ಸಿಡ್ನಿಯಲ್ಲಿನ ಕೊನೆಯ ಸೆಷನ್‌ವರೆಗೂ ಈ ಟೆಸ್ಟ್ ಸರಣಿ ರೋಮಾಂಚನವಾಗಿತ್ತು. ಇದು ಅದ್ಭುತ ಟೆಸ್ಟ್ ಸರಣಿಯಾಗಿದೆ. ಇದು ನೈಜ ಕ್ರಿಕೆಟ್, ಇದು ಕ್ಲಾಸ್ ಸರಣಿ ಹಾಗೂ ಅಸಾಧರಣವಾಗಿತ್ತು. ಕೊನೆಯ ದಿನದವರೆಗೆ ನಡೆದಿದ್ದ ಈ ಸರಣಿಯನ್ನು ಆಸ್ಟ್ರೇಲಿಯಾ ಗೆದ್ದುಕೊಂಡಿದೆ. ಈ ಸರಣಿಯ ಬಳಿಕ ಜಸ್‌ಪ್ರೀತ್ ಬುಮ್ರಾ ಬಗ್ಗೆ ಉಸ್ಮಾನ್ ಖವಾಜ ನೀಡಿದ್ದ ಹೇಳಿಕೆಯಿಂದ ಇದು ಎಷ್ಟು ತೀವ್ರವಾಗಿತ್ತು ಎಂಬುದು ತಿಳಿಯುತ್ತದೆ," ಎಂದು ಆರ್ ಅಶ್ವಿನ್ ತಿಳಿಸಿದ್ದಾರೆ.