ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

IND vs BAN: ಶುಭಮನ್‌ ಗಿಲ್‌ ಶತಕ, ಬಾಂಗ್ಲಾ ವಿರುದ್ಧ ಗೆದ್ದು ಶುಭಾರಂಭ ಮಾಡಿದ ಭಾರತ!

IND vs BAN Match Highlights: ಮೊಹಮ್ಮದ್‌ ಶಮಿ ಮಾರಕ ದಾಳಿ ಹಾಗೂ ಶುಭಮನ್‌ ಗಿಲ್‌ ಶತಕದ ಬಲದಿಂದ ಭಾರತ ತಂಡ ತನ್ನ ಆರಂಭಿಕ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ದ 6 ವಿಕೆಟ್‌ಗಳಿಂದ ಗೆಲುವು ಪಡೆದು, 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಭರ್ಜರಿ ಶುಭಾರಂಭ ಕಂಡಿದೆ.

IND vs BAN: ಶುಭಮನ್‌ ಗಿಲ್‌ ಶತಕದ ಅಬ್ಬರದಲ್ಲಿ ಗೆದ್ದ ಭಾರತ!

ಬಾಂಗ್ಲಾದೇಶ ವಿರುದ್ಧ ಭಾರತ ತಂಡಕ್ಕೆ 6 ವಿಕೆಟ್‌ ಜಯ.

Profile Ramesh Kote Feb 20, 2025 10:08 PM

ದುಬೈ: ಮೊಹಮ್ಮದ್‌ ಶಮಿ (53ಕ್ಕೆ 5) ಹಾಗೂ ಶುಭಮನ್‌ ಗಿಲ್‌ (101* ರನ್‌) ಅವರ ಶತಕದ ನೆರವಿನಿಂದ ಭಾರತ ತಂಡ, ತನ್ನ ಆರಂಭಿಕ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 6 ವಿಕೆಟ್‌ಗಳಿಂದ ಗೆಲುವು ಪಡೆಯಿತು. ಆ ಮೂಲಕ 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ರೋಹಿತ್‌ ಶರ್ಮಾ ಪಡೆ ಶುಭಾರಂಭ ಕಂಡಿದೆ. ಟೀಮ್‌ ಇಂಡಿಯಾ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ ಯುವ ಬ್ಯಾಟ್ಸ್‌ಮನ್‌ ಶುಭಮನ್‌ ಗಿಲ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಇಲ್ಲಿನ ದುಬೈ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶ ನೀಡಿದ್ದ 229 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಭಾರತ ತಂಡ,‌ ಶುಭಮನ್ ಗಿಲ್‌ ಶತಕದ ಬಲದಿಂದ 46.3 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 231 ರನ್‌ಗಳನ್ನು ಗಳಿಸಿ ಗೆಲುವಿನ ದಡವನ್ನು ಸೇರಿತು. ಗಿಲ್‌ ಶತಕದ ಜೊತೆಗೆ ನಾಯಕ ರೋಹಿತ್‌ ಶರ್ಮಾ (41 ರನ್‌) ಹಾಗೂ ಕೆಎಲ್‌ ರಾಹುಲ್‌ (41*) ಅವರ ನಿರ್ಣಾಯಕ ರನ್‌ಗಳು ಕೂಡ ತಂಡದ ಗೆಲುವಿಗೆ ನೆರವಾಯಿತು.

IND vs BAN:200ನೇ ಒಡಿಐ ಪಂದ್ಯವಾಡಿ ಅಪರೂಪದ ದಾಖಲೆ ಬರೆದ ರವೀಂದ್ರ ಜಡೇಜಾ!

ಶತಕ ಸಿಡಿಸಿ ಭಾರತವನ್ನು ಗೆಲ್ಲಿಸಿದ ಶುಭಮನ್‌ ಗಿಲ್‌

ಭಾರತ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಯಂಗ್‌ ಬ್ಯಾಟರ್‌ ಶುಭಮನ್‌ ಗಿಲ್‌ ಬ್ಯಾಟಿಂಗ್‌. ಗುರಿ ಹಿಂಬಾಲಿಸಿದ ಭಾರತ ತಂಡದ ಪರ ನಾಯಕ ರೋಹಿತ್‌ ಶರ್ಮಾ 41 ರನ್‌ ಗಳಿಸಿ ಉತ್ತಮ ಆರಂಭ ತಂದುಕೊಟ್ಟು ವಿಕೆಟ್‌ ಒಪ್ಪಿಸಿದ್ದರು. ನಂತರ ಬಂದ ವಿರಾಟ್‌ ಕೊಹ್ಲಿ (22 ರನ್‌), ಶ್ರೇಯಸ್‌ ಅಯ್ಯರ್‌ (15) ಹಾಗೂ ಅಕ್ಷರ್‌ ಪಟೇಲ್‌ ( 8) ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲು ಬಾಂಗ್ಲಾ ಬೌಲರ್‌ಗಳು ಅವಕಾಶ ನೀಡಲಿಲ್ಲ. ಆದರೆ, ಕೊನೆಯವರೆಗೂ ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್‌ ಮಾಡಿದ ಶುಭಮನ್‌ ಗಿಲ್‌, ಕಂಡೀಷನ್ಸ್‌ಗೆ ತಕ್ಕಂತೆ ಬುದ್ದಿವಂತಿಕೆಯಿಂದ ಬ್ಯಾಟ್‌ ಮಾಡಿದರು. ಇವರು ಆಡಿದ 129 ಎಸೆತಗಳಲ್ಲಿ ಎರಡು ಸಿಕ್ಸರ್‌ ಹಾಗೂ 9 ಬೌಂಡರಿಗಳೊಂದಿಗೆ ಅಜೇಯ 101 ರನ್‌ ಗಳಿಸಿ ಭಾರತ ತಂಡವನ್ನು ಗೆಲ್ಲಿಸಿದರು. ಕೊನೆಯ ಹಂತದಲ್ಲಿ ಗಿಲ್‌ ಸಾಥ್‌ ನೀಡಿದ್ದ ಕನ್ನಡಿಗ ಕೆಎಲ್‌ ರಾಹುಲ್‌, 47 ಎಸೆತಗಳಲ್ಲಿ ಅಜೇಯ 41 ರನ್‌ಗಳನ್ನು ಗಳಿಸಿ ಭಾರತದ ಗೆಲುವಿಗೆ ಕೈ ಜೋಡಿಸಿದರು.



228 ರನ್‌ಗಳನ್ನು ಕಲೆ ಹಾಕಿದ್ದ ಬಾಂಗ್ಲಾ

ಇದಕ್ಕೂ ಮುನ್ನ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ್ದ ಬಾಂಗ್ಲಾದೇಶ ತಂಡ, ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವೈಫಲ್ಯದ ಹೊರತಾಗಿಯೂ ತೌಹಿದ್‌ ಹೃದಯ್‌ (100 ರನ್‌) ಶತಕ ಹಾಗೂ ಜಾಕಿರ್‌ ಅಲಿ (68 ರನ್‌) ಅವರ ಅರ್ಧಶತಕದ ಬಲದಿಂದ 49.4 ಓವರ್‌ಗಳಿಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕಂಡು 228 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಟೀಮ್‌ ಇಂಡಿಯಾಗೆ 229 ರನ್‌ಗಳ ಗುರಿಯನ್ನು ನೀಡಿತ್ತು.



ಬಾಂಗ್ಲಾಗೆ ಆರಂಭಿಕ ಆಘಾತ

ಮೊದಲು ಬ್ಯಾಟಿಂಗ್‌ ನಿರ್ಧರಿಸಿದ್ದ ಬಾಂಗ್ಲಾದೇಶ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಮೊಹಮ್ಮದ್‌ ಶಮಿ, ಹರ್ಷಿತ್‌ ರಾಣಾ ಮತ್ತು ಅಕ್ಷರ್‌ ಪಟೇಲ್‌ ಅವರು ಪರಿಣಾಮಕಾರಿಯಾಗಿ ಬೌಲಿಂಗ್‌ಗೆ ನಲುಗಿದ್ದ ಬಾಂಗ್ಲಾ ಕೇವಲ 35 ರನ್‌ಗಳಿಗೆ ಪ್ರಮುಖ 5 ವಿಕೆಟ್‌ಗಳನ್ನು ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತ್ತು. ತಂಡದ ಮೊತ್ತ ಎರಡು ರನ್‌ ಇರುವಾಗ 2 ವಿಕೆಟ್‌ ಕಳೆದುಕೊಂಡಿದ್ದ ಬಾಂಗ್ಲಾದೇಶ, 26 ರನ್‌ಗಳಾಗುವಷ್ಟರಲ್ಲಿ ಮೂರನೇ ವಿಕೆಟ್‌ ಕಳೆದುಕೊಂಡಿತ್ತು. ನಂತರ 35 ರನ್‌ ಇರುವ ವೇಳೆ ಅಕ್ಷರ್‌ ಪಟೇಲ್‌ ಸತತ ಎರಡು ವಿಕೆಟ್‌ಗಳನ್ನು ಕಿತ್ತಿದ್ದರು. ಆದರೆ, ಅಕ್ಷರ್‌ ಪಟೇಲ್‌ರ ಹ್ಯಾಟ್ರಿಕ್‌ ವಿಕೆಟ್‌ ಅವಕಾಶವನ್ನು ರೋಹಿತ್‌ ಶರ್ಮಾ ಕೈ ಚೆಲ್ಲಿದ್ದರು.

ಬಾಂಗ್ಲಾದೇಶ ತಂಡಕ್ಕೆ ಆಸರೆಯಾದ ಹೃದಯ್‌-ಜಾಕಿರ್‌

ಒಂದು ಹಂತದಲ್ಲಿ ಬಾಂಗ್ಲಾದೇಶ ತಂಡ ಕೇವಲ 35 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಎದುರಾಳಿ ತಂಡ 100 ರನ್‌ಗಳನ್ನು ಗಳಿಸುವುದು ಅನುಮಾನ ಎಂದೇ ಹೇಳಲಾಗಿತ್ತು. ಆದರೆ, ಒತ್ತಡದ ಸಮಯದಲ್ಲಿ ಬಹಳಾ ಎಚ್ಚರಿಕೆಯಿಂದ ಬ್ಯಾಟ್‌ ಮಾಡಿದ ತೌಹಿದ್‌ ಹೃದಯ್‌ ಮತ್ತು ಜಾಕಿರ್‌ ಅಲಿ ಜೋಡಿ ಮುರಿಯದ ಆರನೇ ವಿಕೆಟ್‌ಗೆ 154 ರನ್‌ಗಳ ನಿರ್ಣಾಯಕ ಜೊತೆಯಾಟವನ್ನು ಆಡಿತು. ಆ ಮೂಲಕ ಬಾಂಗ್ಲಾವನ್ನು 200ರ ಗಡಿಯ ಸನಿಹ ತಂದಿತು. ತೌಹಿದ್‌ ಹೃದಯ್‌ಗೆ ಮತ್ತೊಂದು ತುದಿಯಲ್ಲಿ ಸಾಥ್‌ ನೀಡಿದ್ದ ಜಾಕಿರ್‌ ಅಲಿ 114 ಎಸೆತಗಳಲ್ಲಿ ನಾಲ್ಕು ಬೌಂಡರಿಗಳೊಂದಿಗೆ 68 ರನ್‌ಗಳ ಕೊಡುಗೆಯನ್ನು ತಂಡಕ್ಕೆ ನೀಡಿದರು.

IND vs BAN: 11000 ಒಡಿಐ ರನ್‌ ಪೂರ್ಣಗೊಳಿಸಿ ಸಚಿನ್‌ ದಾಖಲೆ ಮುರಿದ ರೋಹಿತ್‌ ಶರ್ಮಾ!

ಮಿಂಚಿದ ತೌಹಿದ್‌ ಹೃದಯ್‌

ದುಬೈನ ನಿಧಾನಗತಿಯ ಪಿಚ್‌ಗೆ ಹೊಂದಿಕೊಂಡು ಬ್ಯಾಟ್‌ ಮಾಡಿದ ತೌಹಿದ್‌ ಹೃದಯ್‌, ಭಾರತದ ಮಾರಕ ದಾಳಿಯನ್ನು ಸಮರ್ಥವಾಗಿ ಎದುರಿಸಿದರು. ಯಾವುದೇ ತಪ್ಪು ಹೊಡೆತಗಳಿಗೆ ಕೈಹಾಕದ ಅವರು, 118 ಎಸೆತಗಳಲ್ಲಿ 2 ಸಿಕ್ಸರ್‌ ಹಾಗೂ 6 ಬೌಂಡರಿಗಳೊಂದಿಗೆ 100 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ಶತಕವನ್ನು ಪೂರ್ಣಗೊಳಿಸಿದರು.

5 ವಿಕೆಟ್‌ ಸಾಧನೆ ಮಾಡಿದ ಮೊಹಮ್ಮದ್‌ ಶಮಿ

ಭಾರತ ತಂಡದ ಪರ ಪರಿಣಾಮಕಾರಿಯಾಗಿ ಬೌಲಿಂಗ್‌ ಸಂಘಟಿಸಿದ ಮೊಹಮ್ಮದ್‌ ಶಮಿ 53 ರನ್‌ಗಳನ್ನು ನೀಡಿದರೂ 5 ವಿಕೆಟ್‌ ಸಾಧನೆ ಮಾಡಿದರು. ಇವರಿಗೆ ಸಾಥ್‌ ನೀಡಿದ್ದ ಹರ್ಷಿತ್‌ ರಾಣಾ 3 ವಿಕೆಟ್‌ ಪಡೆದರೆ, ಅಕ್ಷರ್‌ ಪಟೇಲ್‌ ಎರಡು ವಿಕೆಟ್‌ಗಳನ್ನು ತನ್ನ ಖಾತೆಗೆ ಹಾಕಿಕೊಂಡಿದ್ದರು.

ಸ್ಕೋರ್‌ ವಿವರ

ಬಾಂಗ್ಲಾದೇಶ: 49.4 ಓವರ್‌ಗಳಿಗೆ 228-10 (ತೌಹಿದ್‌ ಹೃದಯ್‌ 100, ಜಾಕಿರ್‌ ಅಲಿ 68 ( ಮೊಹಮ್ಮದ್‌ ಶಮಿ 53ಕ್ಕೆ 5, ಹರ್ಷಿತ್‌ ರಾಣಾ 31 ಕ್ಕೆ 3, ಅಕ್ಷರ್‌ ಪಟೇಲ್‌ 43 ಕ್ಕೆ 2)

ಭಾರತ: 46.3 ಓವರ್‌ಗಳಿಗೆ 231-4 (ಶುಭಮನ್‌ ಗಿಲ್‌ 101*, ರೋಹಿತ್‌ ಶರ್ಮಾ 41, ಕೆಎಲ್‌ ರಾಹುಲ್‌ 41*; ರಿಷದ್‌ ಹುಸೇನ್‌ 38 ಕ್ಕೆ 2)