ಕೋಲ್ಕತಾ: ಪ್ರವಾಸಿ ಇಂಗ್ಲೆಂಡ್ ಎದುರಿನ 5 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯವನ್ನಾಡಲು(IND vs ENG 1st T20) ಭಾರತ ತಂಡ ಸಜ್ಜಾಗಿದೆ. ಬುಧವಾರ(ಜ. 22) ನಡೆಯುವ ಇತ್ತಂಡಗಳ ಈ ಕಾದಾಟಕ್ಕೆ ಐತಿಹಾಸಿಕ ಈಡನ್ ಗಾರ್ಡನ್ಸ್ ಮೈದಾನ ಅಣಿಯಾಗಿದೆ. ಇದು 14 ವರ್ಷಗಳ ಬಳಿಕ ಉಭಯ ತಂಡಗಳು ಇಲ್ಲಿ ಆಡುತ್ತಿರುವ ಪಂದ್ಯವಾಗಿದೆ. ಪಂದ್ಯದ ಪಿಚ್ ರಿಪೋರ್ಟ್, ಉಭಯ ತಂಡಗಳ ಟಿ20 ದಾಖಲೆಯ ವರದಿ ಹೀಗಿದೆ.
ಮುಖಾಮುಖಿ
ಭಾರತ ಮತ್ತು ಇಂಗ್ಲೆಂಡ್ ತಂಡಗಳು ಇದುವರೆಗೆ 23 ಬಾರಿ ಟಿ20 ಮುಖಾಮುಖಿಯಾಗಿವೆ. ಈ ಪೈಕಿ ಭಾರತ 13(ತವರಿನಲ್ಲಿ 5), ಇಂಗ್ಲೆಂಡ್ 11 ಪಂದ್ಯಗಳನ್ನು ಜಯಿಸಿದೆ. ಈಡನ್ ಗಾರ್ಡನ್ಸ್‌ನಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಆಡಿದ್ದು ಕೇವಲ ಒಂದು ಪಂದ್ಯ ಮಾತ್ರ. 2011ರಲ್ಲಿ ನಡೆದಿದ್ದ ಪಂದ್ಯವನ್ನು ಇಂಗ್ಲೆಂಡ್ 6 ವಿಕೆಟ್ ಅಂತರದಿಂದ ಗೆದ್ದು ಬೀಗಿತ್ತು.ಇದು ಈಡನ್‌ನಲ್ಲಿ ನಡೆದಿದ್ದ ಮೊದಲ ಅಂತಾರಾಷ್ಟ್ರೀಯ ಟಿ20 ಪಂದ್ಯವಾಗಿತ್ತು.
ಪಿಚ್ ರಿಪೋರ್ಟ್
ಈಡನ್ ಗಾರ್ಡನ್ಸ್ ಸಾಮಾನ್ಯವಾಗಿ ಬ್ಯಾಟಿಂಗ್ ಸ್ನೇಹಿ ಪಿಚ್. ಹೆಚ್ಚಾಗಿ ಇಲ್ಲಿ ಚೇಸಿಂಗ್ ನಡೆಸುವ ತಂಡಗಳೇ ಗೆದ್ದಿದೆ. ಇದಕ್ಕೆ ಕಾರಣ ಇಬ್ಬನಿ ಕಾಟ. ಹೀಗಾಗಿ ಟಾಸ್ ಗೆದ್ದ ತಂಡ ಬೌಲಿಂಗ್ ಆಯ್ದಕೊಳ್ಳುವ ಸಾಧ್ಯತೆ ಅಧಿಕ. ಈ ಮೈದಾನದಲ್ಲಿ ಅತ್ಯಧಿಕ ರನ್ ಬಾರಿಸಿದ ದಾಖಲೆ ಪಾಕಿಸ್ತಾನ ತಂಡದ ಹೆಸರಿನಲ್ಲಿದೆ. 2016ರ ಟಿ20 ವಿಶ್ವಕಪ್ ಟೂರ್ನಿಯ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಪಾಕ್ 5ಕ್ಕೆ 201 ರನ್ ಬಾರಿಸಿತ್ತು. ಭಾರತ ತಂಡದ ಗರಿಷ್ಠ ದಾಖಲೆ 5 ಕ್ಕೆ186 ರನ್.
ಉಭಯ ತಂಡಗಳು
ಇಂಗ್ಲೆಂಡ್: ಜೋಸ್ ಬಟ್ಲರ್ (ನಾಯಕ), ರೆಹಾನ್ ಅಹ್ಮದ್, ಜೋಫ್ರಾ ಆರ್ಚರ್, ಗಸ್ ಅಟ್ಕಿನ್ಸನ್, ಜಾಕಬ್ ಬೆಥೆಲ್, ಹ್ಯಾರಿ ಬ್ರೂಕ್, ಬ್ರೈಡನ್ ಕಾರ್ಸ್, ಬೆನ್ ಡಕೆಟ್, ಜಾಮಿ ಒವರ್ಟನ್, ಜಾಮಿ ಸ್ಮಿತ್, ಲಿಯಮ್ ಲಿವಿಂಗ್‌ಸ್ಟೋನ್, ಅದಿಲ್ ರಶೀದ್, ಸಕಿಬ್ ಮಹಮೂದ್, ಫಿಲ್ ಸಾಲ್ಟ್, ಮಾರ್ಕ್ ವುಡ್.
ಭಾರತ: ಸೂರ್ಯಕುಮಾರ್ ಯಾದವ್ (ನಾಯಕ), ಸಂಜು ಸ್ಯಾಮ್ಸನ್ (ವಿ.ಕೀ), ಅಭಿಷೇಕ್ ಶರ್ಮ, ತಿಲಕ್ ವರ್ಮ, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್ (ಉಪನಾಯಕ), ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್, ವಾಷಿಂಗ್ಟನ್ ಸುಂದರ್, ಧ್ರುವ್ ಜುರೆಲ್ (ವಿ.ಕೀ).