IND vs ENG 3rd ODI: ಸರಣಿ ಕ್ಲೀನ್‌ಸ್ವೀಪ್ ಯೋಜನೆಯಲ್ಲಿ ಭಾರತ
ಭಾರತ ಈ ಪಂದ್ಯಕ್ಕೆ ತನ್ನ ಆಡುವ ಬಳಗದಲ್ಲಿ ಒಂದು ಬದಲಾವಣೆ ಮಾಡುವ ಸಾಧ್ಯತೆ ಇದೆ. ಮೊದಲೆರಡು ಪಂದ್ಯಗಳಲ್ಲಿ ಒಂದಂಕಿಗೆ ಸೀಮಿತರಾಗಿದ್ದ ಮತ್ತು ಕೀಪಿಂಗ್‌ನಲ್ಲಿಯೂ ಎಡವಿದ್ದ ಕೆ.ಎಲ್ ರಾಹುಲ್ ಅವರನ್ನು ಈ ಪಂದ್ಯದಿಂದ ಕೈಬಿಟ್ಟು ರಿಷಭ್ ಪಂತ್‌ಗೆ ಅವಕಾಶ ನೀಡುವ ಸಾಧ್ಯತೆ ಇದೆ.
ಅಹಮದಾಬಾದ್: ಪ್ರವಾಸಿ ಇಂಗ್ಲೆಂಡ್ ತಂಡವನ್ನು ಮೊದಲೆರಡು ಪಂದ್ಯಗಳಲ್ಲಿ ಉರುಳಿಸಿರುವ ರೋಹಿತ್ ಶರ್ಮ ಪಡೆ ಏಕದಿನ ಸರಣಿಯನ್ನು ಕ್ಲೀನ್‌ಸ್ವೀಪ್ ಆಗಿ ವಶಪಡಿಸಿಕೊಳ್ಳುವ ಕಾತರದಲ್ಲಿದ್ದಾರೆ. ಇನ್ನೊಂದೆಡೆ ಜಾಸ್ ಬಟ್ಲರ್ ಬಳಗ ಕೊನೆಯ ಪಂದ್ಯವನ್ನಾದರೂ(IND vs ENG 3rd ODI) ಗೆದ್ದು ಪ್ರತಿಷ್ಠೆಯನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿದೆ. ಬುಧವಾರ(ಫೆ.12) ನಡೆಯುವ ಇತ್ತಂಡಗಳ ಈ ಕಾದಾಟಕ್ಕೆ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂ ಅಣಿಯಾಗಿದೆ.
ಮೊದಲ ಪಂದ್ಯ ಏಕಪಕ್ಷೀಯವಾಗಿ ಭಾರತ ಗೆಲುವು ಸಾಧಿಸಿತ್ತು. ಆದರೆ ದ್ವಿತೀಯ ಪಂದ್ಯದಲ್ಲಿ ಭಾರತದ ಬ್ಯಾಟಿಂಗ್ ತಾಕತ್ತಿನ ನಿಜದರ್ಶನವಾಗಿದೆ. 304 ರನ್‌ಗಳ ಬೃಹತ್ ಸವಾಲು ಮುಂದಿದ್ದರೂ ದಿಟ್ಟ ರೀತಿಯಲ್ಲಿ ಬೆನ್ನಟ್ಟಿ ಗೆಲುವು ಸಾಧಿಸಿತ್ತು. ಸೋತರೂ ಇಂಗ್ಲೆಂಡ್ ಬ್ಯಾಟಿಂಗ್ ಬಲ ಏನೆಂಬುದು ಬೆಳಕಿಗೆ ಬಂದಿತ್ತು. ಹೀಗಾಗಿ ಮೂರನೇ ಪಂದ್ಯ ತೀವ್ರ ಪೈಪೋಟಿ ಕಾಣುವ ಸಾಧ್ಯತೆ ಇದೆ.
ಸರಣಿ ಗೆದ್ದಾಯಿತೆಂದು ನಮ್ಮವರು ಈ ಪಂದ್ಯವನ್ನು ಲಘುವಾಗಿ ತೆಗೆದುಕೊಕೊಳ್ಳುವಂತಿಲ್ಲ. ಇನ್ನೊಂದು ವಾರದಲ್ಲಿ ಚಾಂಪಿಯನ್ಸ್ ಟ್ರೋಫಿ ಆರಂಭವಾಗಲಿದೆ. ವಿರಾಟ್ ಕೊಹ್ಲಿ, ಕೆ.ಎಲ್ ರಾಹುಲ್ ಸೇರಿ ಕೆಲ ಆಟಗಾರರು ಇನ್ನೂ ಫಾರ್ಮ್‌ಗೆ ಮರಳಲಿಲ್ಲ. ಇನ್ನೊಂದೆಡೆ ಭಾರತ ಚಾಂಪಿಯನ್ಸ್ ಟ್ರೋಫಿಯಲ್ಲಿ ಯಾವುದೇ ಅಭ್ಯಾಸ ಪಂದ್ಯ ಕೂಡ ಆಡುವುದಿಲ್ಲ ಎನ್ನಲಾಗಿದೆ. ಈ ಎಲ್ಲ ಕಾರಣದಿಂದ ಈ ಪಂದ್ಯವನ್ನು ಕೂಡ ಭಾರತ ಮಹತ್ವದ ಪಂದ್ಯವೆಂದೇ ಪರಿಗಣಿಸಿ ಆಡಬೇಕು.
2023ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯದ ಬಳಿಕ ಭಾರತ ಇಲ್ಲಿ ಮೊದಲ ಬಾರಿಗೆ ಏಕದಿನ ಪಂದ್ಯವನ್ನಾಡಲಿದೆ. ಅಂದಿನ ಸೋಲಿನ ಕಹಿ ನೆನಪು ಕೂಡ ಕಾಡುವುದು ನಿಜ. ಅಂದು ನಲ್‌ನಲ್ಲಿ ಆಸೀಸ್ ಪಡೆ ಭಾರತವನ್ನು 6 ವಿಕೆಟ್ ಅಂತರದಿಂದ ಗೆದ್ದು ಟ್ರೋಫಿ ಎತ್ತಿ ಹಿಡಿದಿತ್ತು.
ಭಾರತ ಈ ಪಂದ್ಯಕ್ಕೆ ತನ್ನ ಆಡುವ ಬಳಗದಲ್ಲಿ ಒಂದು ಬದಲಾವಣೆ ಮಾಡುವ ಸಾಧ್ಯತೆ ಇದೆ. ಮೊದಲೆರಡು ಪಂದ್ಯಗಳಲ್ಲಿ ಒಂದಂಕಿಗೆ ಸೀಮಿತರಾಗಿದ್ದ ಮತ್ತು ಕೀಪಿಂಗ್‌ನಲ್ಲಿಯೂ ಎಡವಿದ್ದ ಕೆ.ಎಲ್ ರಾಹುಲ್ ಅವರನ್ನು ಈ ಪಂದ್ಯದಿಂದ ಕೈಬಿಟ್ಟು ರಿಷಭ್ ಪಂತ್‌ಗೆ ಅವಕಾಶ ನೀಡುವ ಸಾಧ್ಯತೆ ಇದೆ.
ಇದನ್ನೂ ಓದಿ IND vs ENG: ಸತತ ವೈಫಲ್ಯದಿಂದ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿ ಕನ್ನಡಿಗ ಕೆಎಲ್ ರಾಹುಲ್!
ಪಿಚ್ ರಿಪೋರ್ಟ್
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನ ಪಿಚ್‌ನಲ್ಲಿ ರನ್ ಗಳಿಸಲು ಹೆಚ್ಚು ಅನುಕೂಲಕರವಾಗಿಲ್ಲ. ಕೆಂಪು ಮತ್ತು ಕಪ್ಪು ಮಿಶ್ರಿತ ಪಿಚ್ ಆಗಿರುವ ಕಾರಣ ಇಲ್ಲಿ ದೊಡ್ಡ ಮೊತ್ತ ದಾಖಲಾಗುವುದು ಅನುಮಾನ. ಚೇಸಿಂಗ್ ನಡೆಸಿದ ತಂಡಗಳು ಇಲ್ಲಿ ಹೆಚ್ಚಿನ ಯಶಸ್ಸು ಕಂಡಿದೆ. ಹೀಗಾಗಿ ಟಾಸ್ ಗೆದ್ದ ತಂಡ ಮೊದಲು ಬೌಲಿಂಗ್ ಆಯ್ದುಕೊಳ್ಳಬಹುದು. ಇನ್ನು ಪಂದ್ಯಕ್ಕೆ ಮಳೆ ಭೀತಿ ಇಲ್ಲವಾದರೂ ಇಬ್ಬನಿ ಕಾಟ ತಪ್ಪಿದ್ದಲ್ಲ.
Cuttack 🛬 Ahmedabad #TeamIndia have arrived for the Third and the Final #INDvENG ODI 👌👌@IDFCFIRSTBank pic.twitter.com/JOd2fCAkgU
— BCCI (@BCCI) February 10, 2025
ಸಂಭಾವ್ಯ ತಂಡ
ಇಂಗ್ಲೆಂಡ್: ಫಿಲ್ ಸಾಲ್ಟ್ (ವಿ.ಕೀ), ಬೆನ್ ಡಕೆಟ್, ಜೋ ರೂಟ್, ಹ್ಯಾರಿ ಬ್ರೂಕ್, ಜೋಸ್ ಬಟ್ಲರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಾಕೋಬ್ ಬೆಥೆಲ್, ಬೈರ್ಡಾನ್ ಕಾರ್ಸೆ, ಜೋಫ್ರಾ ಆರ್ಚರ್/ಮಾರ್ಕ್ ವುಡ್, ಆದಿಲ್ ರಶೀದ್, ಸಾಕಿಬ್ ಮಹಮೂದ್.
ಭಾರತ: ರೋಹಿತ್ ಶರ್ಮ, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ಹರ್ಷಿತ್ ರಾಣಾ, ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ.