IND vs ENG: ಔಟ್ ಆಫ್ ಫಾರ್ಮ್ ಸೂರ್ಯಕುಮಾರ್ ಯಾದವ್‌ಗೆ ಮೈಕಲ್ ವಾನ್ ಸಲಹೆ!
Michael Vaughan on Suryakumar Yadav: ಇಂಗ್ಲೆಂಡ್ ವಿರುದ್ಧ ಟಿ20ಐ ಸರಣಿಯ ಆರಂಭಿಕ ಮೂರು ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರನ್ನು ಆಂಗ್ಲರ ಮಾಜಿ ಮಾಜಿ ನಾಯಕ ಮೈಕಲ್ ಟೀಕಿಸಿದ್ದಾರೆ.
ನವದೆಹಲಿ: ಇಂಗ್ಲೆಂಡ್ ವಿರುದ್ಧ ಟಿ20ಐ ಸರಣಿಯ ಆರಂಭಿಕ ಮೂರೂ ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರನ್ನು ಆಂಗ್ಲರ ಮಾಜಿ ನಾಯಕ ಮೈಕಲ್ ವಾನ್ ಟೀಕಿಸಿದ್ದಾರೆ. ಏಕಾಏಕಿ ಸ್ಪೋಟಕ ಬ್ಯಾಟ್ ಮಾಡುವುದಕ್ಕೂ ಮುನ್ನ ಹಂತ-ಹಂತವಾಗಿ ಬ್ಯಾಟ್ ಮಾಡಬೇಕಾಗುತ್ತದೆ ಎಂದು ಸಲಹೆ ನೀಡಿದ್ದಾರೆ.
ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟಿ20ಐ ಸರಣಿಯ ಮೂರನೇ ಪಂದ್ಯ ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದಿತ್ತು. ಮೊದಲೆರಡು ಪಂದ್ಯಗಳನ್ನು ಗೆದ್ದಿದ್ದ ಭಾರತ ತಂಡ, ಮೂರನೇ ಟಿ20ಐನಲ್ಲಿ 26 ರನ್‌ಗಳ ಸೋಲನ್ನು ಎದುರಿಸಬೇಕಾಯಿತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಇಂಗ್ಲೆಂಡ್ ತಂಡ, 9 ವಿಕೆಟ್‌ಗೆ 171 ರನ್ ಕಲೆ ಹಾಕಿತ್ತು. 172 ರನ್‌ಗಳ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ 9 ವಿಕೆಟ್ ನಷ್ಟಕ್ಕೆ 145 ರನ್ ಗಳಿಸಲಷ್ಟೇ ಶಕ್ತವಾಯಿತು.
ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಪಾಲಿಗೆ ಈ ಸರಣಿ ಅತ್ಯಂತ ನಿರಾಶಾಯದಾಯಕವಾಗಿದೆ. ಮೂರನೇ ಟಿ20ಐ ಪಂದ್ಯದಲ್ಲಿ ಅವರು 7 ಎಸೆತಗಳಲ್ಲಿ 14 ರನ್ ಗಳಿಸಿ ಔಟಾದರು. ಅವರು ತಮ್ಮ ಸಣ್ಣ ಇನಿಂಗ್ಸ್‌ನಲ್ಲಿ ಒಂದು ಸಿಕ್ಸರ್ ಮತ್ತು ಬೌಂಡರಿಯನ್ನು ಹೊಡೆದರು. ಆದರೆ ಸರಣಿಯ ಮೊದಲನೇ ಟಿ20ಐ ಪಂದ್ಯದಲ್ಲಿ ಅವರು ಡಕ್ ಔಟ್ ಆಗಿದ್ದರು. ಎರಡನೇ ಪಂದ್ಯದಲ್ಲಿ 12 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಕ್ರಿಕ್‌ಬಝ್ ಜೊತೆ ಮಾತನಾಡಿದ ಮೈಕಲ್ ವಾನ್ ಅವರು, ಸೂರ್ಯಕುಮಾರ್ ಯಾದವ್ ಅವರ ಬ್ಯಾಟಿಂಗ್ ಪ್ರವೃತ್ತಿಯನ್ನು ಟೀಕಿಸಿದ್ದಾರೆ.
ಸೂರ್ಯಕುಮಾರ್ ಬಗ್ಗೆ ಮೈಕಲ್ ವಾನ್ ಹೇಳಿದ್ದೇನು?
"ಕ್ರೀಸ್‌ಗೆ ತೆರಳಿದ ಕೆಲವೇ ನಿಮಿಷದಲ್ಲಿ ಸೂರ್ಯಕುಮಾರ್ ಯಾದವ್ ಕೆಲ ಒಳ್ಳೆಯ ಹೊಡೆತಗಳನ್ನು ಬಾರಿಸಿದ್ದಾರೆ. ಆದರೆ, ಕಣ್ಣು ಮಿಟಿಕಿಸುವ ಹೊತ್ತಿಗೆ ಅವರು ಔಟ್ ಆಗಿ ತಂಡಕ್ಕೆ ಯಾವುದೇ ಕೊಡುಗೆ ನೀಡದೆ ವಿಕೆಟ್ ಒಪ್ಪಿಸಿ ಪೆವಿಲಿಯನ್‌ಗೆ ಮರಳಿದ್ದಾರೆ," ಎಂದು ಮೈಕಲ್ ವಾನ್ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
"ಬ್ಯಾಟಿಂಗ್‌ಗೆ ತೆರಳಿದಾಗ ಸೂರ್ಯಕುಮಾರ್ ಯಾದವ್ ಅವರು ಐದನೇ ಗೇರ್‌ನಲ್ಲಿ ಆಡುವುದಕ್ಕೂ ಮುನ್ನ ಮೂರನೇ ಗೇರ್‌ನಲ್ಲಿ ಆಡಬೇಕಾಗುತ್ತದೆ. ಆ ಮೂಲಕ ಸ್ವಲ್ಪ ಹೊತ್ತು ಕ್ರೀಸ್‌ನಲ್ಲಿ ಸಮಯ ಕಳೆಯಬೇಕು ಹಾಗೂ ಅವಕಾಶ ಸಿಕ್ಕಾಗ ದೊಡ್ಡ-ದೊಡ್ಡ ಹೊಡೆತಗಳಿಗೆ ಕೈ ಹಾಕಬೇಕು," ಎಂದು ಮೈಕಲ್ ವಾನ್ ಟೀಮ್ ಇಂಡಿಯಾ ಕ್ಯಾಪ್ಟನ್‌ಗೆ ಸಲಹೆ ನೀಡಿದ್ದಾರೆ.
ನಾಲ್ಕನೇ ಟಿ20ಐ ಪಂದ್ಯ ಯಾವಾಗ?
ಮೂರು ಪಂದ್ಯಗಳ ಅಂತ್ಯಕ್ಕೆ ಟಿ20ಐ ಸರಣಿಯಲ್ಲಿ ಭಾರತ ತಂಡ 2-1 ಅಂತರದಲ್ಲಿ ಕಾಯ್ದುಕೊಂಡಿದೆ. ಇದೀಗ ಉಭಯ ತಂಡಗಳು ಜನವರಿ 31 ರಂದು ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯುವ ನಾಲ್ಕನೇ ಟಿ20ಐ ಪಂದ್ಯದಲ್ಲಿ ಕಾದಾಟ ನಡೆಸಲಿವೆ. ಈ ಪಂದ್ಯವನ್ನು ಟಿ20ಐ ಸರಣಿಯಲ್ಲಿ ವಶಪಡಿಸಿಕೊಳ್ಳಲು ಟೀಮ್ ಇಂಡಿಯಾ ಎದುರು ನೋಡುತ್ತಿದೆ.