ʻಶ್ರೇಷ್ಠ ಬ್ಯಾಟ್ಸ್‌ಮನ್ʼ: ವಿರಾಟ್ ಕೊಹ್ಲಿ ಬಗ್ಗೆ ದೊಡ್ಡ ಹೇಳಿಕೆ ನೀಡಿದ ಆಂಡರ್ಸನ್!
James Anderson on Virat Kohli's Test Retirement: ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿಯನ್ನು ಇಂಗ್ಲೆಂಡ್ ಮಾಜಿ ವೇಗಿ ಜೇಮ್ಸ್ ಆಂಡರ್ಸನ್ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಕೊಹ್ಲಿ ಕೂಡ ಒಬ್ಬರು ಎಂದು ಜಿಮ್ಮಿ ಹೇಳಿದ್ದಾರೆ.

ವಿರಾಟ್ ಕೊಹ್ಲಿಯನ್ನು ಶ್ಲಾಘಿಸಿದ ಜೇಮ್ಸ್ ಆಂಡರ್ಸನ್.

ನವದೆಹಲಿ: ಇತ್ತೀಚೆಗೆ ಅಂತಾರಾಷ್ಟೀಯ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿಯನ್ನು ಇಂಗ್ಲೆಂಡ್ ವೇಗದ ಬೌಲಿಂಗ್ ದಿಗ್ಗಜ ಜೇಮ್ಸ್ ಆಂಡರ್ಸನ್ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ವಿಶ್ವ ಕ್ರಿಕೆಟ್‌ಗೆ ಅತ್ಯಂತ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳನ್ನು ವಿರಾಟ್ ಕೊಹ್ಲಿ ಕೂಡ ಒಬ್ಬರು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮೇ 12 ರಂದು ವಿರಾಟ್ ಕೊಹ್ಲಿ ತಮ್ಮ 14 ವರ್ಷಗಳ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಅವರು ಇಲ್ಲಿಯ ತನಕ ಆಡಿದ್ದ 123 ಟೆಸ್ಟ್ ಪಂದ್ಯಗಳಿಂದ 9230 ರನ್‌ಗಳನ್ನು ಬಾರಿಸಿದ್ದಾರೆ ಹಾಗೂ30 ಶತಕಗಳನ್ನು ಪೂರ್ಣಗೊಳಿಸಿದ್ದಾರೆ.
ವಿರಾಟ್ ಕೊಹ್ಲಿ ಟೆಸ್ಟ್‌ಗೆ ವಿದಾಯ ಹೇಳುವುದಕ್ಕೂ ಮುನ್ನ ರೋಹಿತ್ ಶರ್ಮಾ ಕೂಡ ದೀರ್ಘಾವಧಿ ಸ್ವರೂಪಕ್ಕೆ ಗುಡ್‌ಬೈ ಹೇಳಿದ್ದರು. ಟೆಸ್ಟ್ ತಂಡದಲ್ಲಿ ಈ ಇಬ್ಬರ ಸ್ಥಾನವನ್ನು ತುಂಬಲು ಭಾರತದಲ್ಲಿ ಅದ್ಭುತ ಪ್ರತಿಭಾವಂತ ಬ್ಯಾಟ್ಸ್‌ಮನ್‌ಗಳಿದ್ದಾರೆಂದು ಇಂಗ್ಲೆಂಡ್ ಮಾಜಿ ವೇಗಿ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ವಿರಾಟ್ ಕೊಹ್ಲಿಯ 4ನೇ ಕ್ರಮಾಂಕಕ್ಕೆ ಕನ್ನಡಿಗನನ್ನು ಸೂಚಿಸಿದ ಅನಿಲ್ ಕುಂಬ್ಳೆ!
ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯ ಟೆಸ್ಟ್ ನಿವೃತ್ತಿಯ ಬಗ್ಗೆ ಟಾಕ್ ಸ್ಪೋರ್ಟ್ಸ್ ಜೊತೆ ಮಾತನಾಡಿದ ಜೇಮ್ಸ್ ಆಂಡರ್ಸನ್, "ಈ ಇಬ್ಬರೂ ಶ್ರೇಷ್ಠ ಆಟಗಾರರು. ರೋಹಿತ್ ಶರ್ಮಾ ವಿದಾಯ ಹೇಳಿರುವ ಕಾರಣ ಇದೀಗ ಭಾರತ ತಂಡಕ್ಕೆ ಹೊಸ ನಾಯಕನನ್ನು ನೇಮಿಸಲಾಗುತ್ತದೆ. ವಿರಾಟ್ ಕೊಹ್ಲಿ ನಾನು ನೋಡಿದ ಅತ್ಯಂತ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿದ್ದಾರೆ. ಭಾರತ ತಂಡದಲ್ಲಿ ಇವರ ದೊಡ್ಡ ಸ್ಥಾನಗಳನ್ನು ತುಂಬಬೇಕಾಗಿದೆ. ಅದರಂತೆ ಅವರ ಸ್ಥಾನವನ್ನು ತುಂಬಲು ಅವರಲ್ಲಿ ಅದ್ಭುತ ಪ್ರತಿಭೆಗಳು ಇದ್ದಾರೆ," ಎಂದು ಹೇಳಿದ್ದಾರೆ.
"ಐಪಿಎಲ್ ಟೂರ್ನಿಯಲ್ಲಿ ನೀವು ಅವರನ್ನು ವೀಕ್ಷಿಸಬಹುದಾಗಿದೆ. ಐಪಿಎಲ್ ಟೂರ್ನಿಯಲ್ಲಿ ಯಾರು ಆಕ್ರಮಣಕಾರಿಯಾಗಿ ಆಡುತ್ತಾರೆ, ಯಾರು ಭಯ ಮುಕ್ತವಾಗಿ ಆಡುತ್ತಾರೆ ಹಾಗೂ ಯಾರು ದಾಳಿ ನಡೆಸುತ್ತಾರೆ, ಅಂಥಾ ಆಟಗಾರರನ್ನು ಇದೀಗ ಟೆಸ್ಟ್ ತಂಡಕ್ಕೆ ತರಲಾಗುತ್ತದೆ," ಎಂದು ಜಿಮ್ಮಿ ಭವಿಷ್ಯ ನುಡಿದಿದ್ದಾರೆ.
IND vs ENG: ವಿರಾಟ್ ಕೊಹ್ಲಿಯ 4ನೇ ಕ್ರಮಾಂಕಕ್ಕೆ ಯಾರು ಸೂಕ್ತ? ಚೇತೇಶ್ವರ್ ಫುಜಾರ ಅಭಿಪ್ರಾಯ!
ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಣ ಟೆಸ್ಟ್ ಸರಣಿಗಳಲ್ಲಿ ವಿರಾಟ್ ಕೊಹ್ಲಿ ಹಾಗೂ ಜೇಮ್ಸ್ ಆಂಡರ್ಸನ್ ಪ್ರಮುಖ ಆಕರ್ಷಣೆಯಾಗಿದೆ. 2014ರ ಇಂಗ್ಲೆಂಡ್ ಪ್ರವಾಸದಲ್ಲಿ ವಿರಾಟ್ ಕೊಹ್ಲಿಗೆ ಆಂಡರ್ಸನ್ ಸಾಕಷ್ಟು ಕಾಟವನ್ನು ನೀಡಿದ್ದರು. ಆದರೆ, 2018ರ ಇಂಗ್ಲೆಂಡ್ ಪ್ರವಾಸದಲ್ಲಿ ಕೊಹ್ಲಿ, ಆಂಡರ್ಸನ್ ಅವರನ್ನು ಸಮರ್ಥವಾಗಿ ಎದುರಿಸಿದ್ದರು. ಅವರು 593 ರನ್‌ಗಳನ್ನು ಬಾರಿಸಿದ್ದರು. ಆ ಮೂಲಕ ಇಂಗ್ಲೆಂಡ್ ಕಂಡೀಷನ್ಸ್‌ನಲ್ಲಿ ಬಲವಾಗಿ ಕಮ್‌ಬ್ಯಾಕ್ ಮಾಡಿದ್ದರು.
ಜೂನ್ 20 ರಂದು ಟೆಸ್ಟ್ ಸರಣಿ ಆರಂಭ
2025ರ ಇಂಡಿಯನ್ ಪ್ರೀಮಿಯರ್ ಲೀಗ್ ಮುಗಿದ ಬಳಿಕ ಭಾರತ ಟೆಸ್ಟ್ ತಂಡ ನೂತನ ನಾಯಕತ್ವದಲ್ಲಿ ಇಂಗ್ಲೆಂಡ್‌ಗೆ ಪ್ರವಾಸ ಮಾಡಲಿದೆ. ಜೂನ್ 20 ರಂದು ಲೀಡ್ಸ್ ಹೆಡಿಂಗ್ಲೆನಲ್ಲಿ ಮೊದಲನೇ ಟೆಸ್ಟ್ ಆಡುವ ಮೂಲಕ ಇಂಗ್ಲೆಂಡ್ ಪ್ರವಾಸವನ್ನು ಅಧಿಕೃತವಾಗಿ ಆರಂಭಿಸಲಿದೆ. ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಭಾರತ ತಂಡಕ್ಕೆ ಇಂಗ್ಲೆಂಡ್‌ನಲ್ಲಿ ಕಠಿಣ ಸವಾಲು ಎದುರಾಗಲಿದೆ.