IND vs ENG: ಐಪಿಎಲ್ ಟ್ರೋಫಿಗಿಂತ ಇಂಗ್ಲೆಂಡ್ನಲ್ಲಿ ಟೆಸ್ಟ್ ಸರಣಿ ಗೆಲ್ಲುವುದು ದೊಡ್ಡದು ಎಂದ ಶುಭಮನ್ ಗಿಲ್!
ಇಂಗ್ಲೆಂಡ್ನಲ್ಲಿ ಟೆಸ್ಟ್ ಸರಣಿಯನ್ನು ಗೆಲ್ಲುವುದು ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಟ್ರೋಫಿ ಜಯಿಸುವುದಕ್ಕಿಂತ ದೊಡ್ಡದು ಎಂದು ಭಾರತ ಟೆಸ್ಟ್ ತಂಡದ ನಾಯಕ ಶುಭಮನ್ ಗಿಲ್ ಹೇಳಿದ್ದಾರೆ. ಭಾರತ ಹಾಗೂ ಇಂಗ್ಲೆಂಡ್ ನಡುವಣ ಐದು ಪಂದ್ಯಗಳ ಟೆಸ್ಟ್ ಸರಣಿಯು ಜೂನ್ 20 ರಂದು ಆರಂಭವಾಗಲಿದೆ.

ಮೊದಲನೇ ಟೆಸ್ಟ್ಗೂ ಮುನ್ನ ಶುಭಮನ್ ಗಿಲ್ ಮಹತ್ವದ ಹೇಳಿಕೆ ನೀಡಿದ್ದಾರೆ.

ಲೀಡ್ಸ್: ಭಾರತ ಹಾಗೂ ಇಂಗ್ಲೆಂಡ್ ತಂಡಗಳು (IND vs ENG) ಶುಕ್ರವಾರದಂದು (ಜೂನ್ 20) ಆರಣಭವಾಗಲಿರುವ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಕಾದಾಟ ನಡೆಸಲು ಸಜ್ಜಾಗುತ್ತಿದೆ. ಈ ಪಂದ್ಯದ ಮೂಲಕ ಶುಭಮನ್ ಗಿಲ್ (Shubman Gill) ನಾಯಕತ್ವದ ಭಾರತ ತಂಡ, ಇಂಗ್ಲೆಂಡ್ ಪ್ರವಾಸವನ್ನು ಅಧಿಕೃತವಾಗಿ ಆರಂಭಿಸಲಿದೆ. ಇಲ್ಲಿನ ಹೆಡಿಂಗ್ಲೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆರಂಭವಾಗುವ ಮೊದಲನೇ ಟೆಸ್ಟ್ ಪಂದ್ಯದ ನಿಮಿತ್ತ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟೀಮ್ ಇಂಡಿಯಾ ನಾಯಕ ಶುಭಮನ್ ಗಿಲ್, ಇಂಡಿಯನ್ ಪ್ರೀಮಿಯರ್ ಲೀಗ್ (IPL) ಟೂರ್ನಿಯಲ್ಲಿ ಟ್ರೋಫಿ ಗೆಲ್ಲುವುದಕ್ಕಿಂತ ಸೇನಾ ರಾಷ್ಟ್ರಗಳಲ್ಲಿ (ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್, ಆಸ್ಟ್ರೇಲಿಯಾ) ಟೆಸ್ಟ್ ಸರಣಿಯನ್ನು ಜಯಿಸುವುದು ದೊಡ್ಡದು ಎಂದು ಹೇಳಿದ್ದಾರೆ.
ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ ಭಾರತ ತಂಡ 2007ರಲ್ಲಿ ಕೊನೆಯ ಬಾರಿ ಇಂಗ್ಲೆಂಡ್ನಲ್ಲಿ ಟೆಸ್ಟ್ ಸರಣಿಯನ್ನು ಗೆದ್ದಿತ್ತು. ಅಂದಿನಿಂದ ಇಲ್ಲಿಯವರೆಗೂ ಭಾರತ ತಂಡದಿಂದ ಆಂಗ್ಲರ ನಾಡಿನಲ್ಲಿ ಟೆಸ್ಟ್ ಸರಣಿಯನ್ನು ಗೆಲ್ಲಲು ಸಾಧ್ಯವಾಗಿಲ್ಲ. ಆರ್ ಅಶ್ವಿನ್, ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ್ದರಿಂದ, ಈ ಟೆಸ್ಟ್ ಸರಣಿಯಲ್ಲಿ ಹಲವು ಯುವ ಆಟಗಾರರು ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಲಿದ್ದಾರೆ. ನಾಯಕನಾಗಿ ಶುಭಮನ್ ಗಿಲ್ಗೂ ಕೂಡ ಇಂಗ್ಲೆಂಡ್ನಲ್ಲಿ ಕಠಿಣ ಸವಾಲು ಎದುರಾಗಲಿದೆ.
IND vs ENG 1st Test: ಲೀಡ್ಸ್ ಟೆಸ್ಟ್ನ ಪಿಚ್ ರಿಪೋರ್ಟ್, ಭಾರತ ಸಂಭಾವ್ಯ ಆಡುವ ಬಳಗ ಹೇಗಿದೆ?
ಇಂಗ್ಲೆಂಡ್ನಲ್ಲಿ ಟೆಸ್ಟ್ ಸರಣಿ ಗೆಲ್ಲುವುದು ಐಪಿಎಲ್ಗಿಂತ ದೊಡ್ಡದು
"ನಾಯಕನಾಗಿ ಇಂಗ್ಲೆಂಡ್ಗೆ ಬರಲು ನಿಮಗೆ ಹೆಚ್ಚು ಅವಕಾಶಗಳು ಸಿಗುವುದಿಲ್ಲ. ನಿಮಗೆ ಬಹುಶಃ ಎರಡು ಅವಕಾಶ ಸಿಗಬಹುದು- ನೀವು ನಿಮ್ಮ ಪೀಳಿಗೆಯ ಅತ್ಯುತ್ತಮರಾಗಿದ್ದರೆ, ಬಹುಶಃ ಮೂರು ಬಾರಿ ಇಂಗ್ಲೆಂಡ್ಗೆ ಬರಬಹುದು. ಆದರೆ ಐಪಿಎಲ್ ಪ್ರತಿ ವರ್ಷ ಬರುತ್ತದೆ. ನೀವು ಪ್ರತಿ ವರ್ಷ ಅದರಲ್ಲಿ ಉತ್ತಮ ಪ್ರದರ್ಶನ ನೀಡುತ್ತೀರಿ. ನನ್ನ ಅಭಿಪ್ರಾಯದಲ್ಲಿ, ಇಂಗ್ಲೆಂಡ್, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿಯನ್ನು ಗೆಲ್ಲುವುದು ಖಂಡಿತವಾಗಿಯೂ ದೊಡ್ಡದು ಮತ್ತು ಹೆಚ್ಚು ಪ್ರತಿಷ್ಠಿತವಾಗಿದೆ," ಎಂದು ಶುಭಮನ್ ಗಿಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
IND vs ENG: ಭಾರತ ತಂಡಕ್ಕೆ ಬ್ಯಾಟಿಂಗ್ ಕ್ರಮಾಂಕ ಆರಿಸಿದ ದಿನೇಶ್ ಕಾರ್ತಿಕ್!
ಭಾರತ ತಂಡವನ್ನು ಮುನ್ನಡೆಸುವುದು ದೊಡ್ಡ ಗೌರವ
ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ ಬಳಿಕ ಭಾರತ ಟೆಸ್ಟ್ ತಂಡವನ್ನು ಮುನ್ನಡೆಸಲು ಶುಭಮನ್ ಗಿಲ್ಗೆ ಅವಕಾಶ ಸಿಕ್ಕಿದೆ.
ಗಿಲ್ಗೆ ಉಪ ನಾಯಕನಾಗಿ ರಿಷಭ್ ಪಂತ್ ನೆರವು ನೀಡಲಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಭಾರತ ತಂಡವನ್ನು ಟೆಸ್ಟ್ ಕ್ರಿಕೆಟ್ನಲ್ಲಿ ಮುನ್ನಡೆಸುವುದು ಹೆಮ್ಮೆಯ ಸಂಗತಿ ಎಂದು ಹೇಳಿಕೊಂಡಿದ್ದಾರೆ. ಈ ಟೆಸ್ಟ್ ಸರಣಿಯ ಮೂಲಕ ಭಾರತ ತಂಡ, 2025-27ರ ಸಾಲಿನ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಅಭಿಯಾನವನ್ನು ಆರಂಭಿಸಲಿದೆ.
"ಹೌದು, ಖಚಿತವಾಗಿ ಭಾರತ ತಂಡವನ್ನು ಮುನ್ನಡೆಸುವುದು ಆಟಗಾರನಾಗಿ ದೊಡ್ಡ ಗೌರವ. ಟೆಸ್ಟ್ ಕ್ರಿಕೆಟ್ನಲ್ಲಿ ಭಾರತ ತಂಡವನ್ನು ಮುನ್ನಡೆಸಲು ಎಲ್ಲರಿಗೂ ಅವಕಾಶ ಸಿಗುವುದಿಲ್ಲ. ಹಾಗಾಗಿ ಈ ಕರ್ತವ್ಯವನ್ನು ನಿರ್ವಹಿಸಲು ನಾನು ಉತ್ಸುಕತೆಯಿಂದ ಎದುರು ನೋಡುತ್ತಿದ್ದೇನೆ," ಎಂದು ಶುಭಮನ್ ಗಿಲ್ ತಿಳಿಸಿದ್ದಾರೆ.
IND vs ENG: ಭಾರತದ ನಾಲ್ಕನೇ ಕ್ರಮಾಂಕದಲ್ಲಿ ಆಡಲಿರುವ ಬ್ಯಾಟ್ಸ್ಮನ್ ಆರಿಸಿದ ರಿಷಭ್ ಪಂತ್!
ಸೇನಾ ರಾಷ್ಟ್ರಗಳಲ್ಲಿ ಗಿಲ್ ವೈಫಲ್ಯ
ಶುಭಮನ್ ಗಿಲ್ ಇಲ್ಲಿಯವರೆಗೂ ತಮ್ಮ ಟೆಸ್ಟ್ ವೃತ್ತಿ ಜೀವನದಲ್ಲಿ 32 ಟೆಸ್ಟ್ ಪಂದ್ಯಗಳನ್ನು ಆಡಿದ್ದು 6 ಶತಕಗಳ ಮೂಲಕ 1893 ರನ್ಗಳನ್ನು ಬಾರಿಸಿದ್ದಾರೆ. ಆದರೆ, ಗುಜರಾತ್ ಟೈಟನ್ಸ್ ನಾಯಕ ವಿದೇಶಿ ಟೆಸ್ಟ್ ಸರಣಿಗಳಲ್ಲಿ ವಿಫಲರಾಗುತ್ತಿದ್ದಾರೆ. ಅವರು ಸೇನಾ ರಾಷ್ಟ್ರಗಳಲ್ಲಿ ಅವರ ಬ್ಯಾಟಿಂಗ್ ಪ್ರದರ್ಶನ ಅಷ್ಟೊಂದು ಉತ್ತಮವಾಗಿಲ್ಲ. ಈ ರಾಷ್ಟ್ರಗಳಲ್ಲಿ ಅವರು 11 ಟೆಸ್ಟ್ ಪಂದ್ಯಗಳಿಂದ 25.70ರ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ಇಂಗ್ಲೆಂಡ್ನಲ್ಲಿ ಅವರು ಮೂರು ಟೆಸ್ಟ್ ಪಂದ್ಯಗಳಿಂದ ಕೇವಲ 88 ರನ್ ಗಳಿಸಿದ್ದಾರೆ.