ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG 1st Test: ಲೀಡ್ಸ್‌ ಟೆಸ್ಟ್‌ನ ಪಿಚ್‌ ರಿಪೋರ್ಟ್‌, ಭಾರತ ಸಂಭಾವ್ಯ ಆಡುವ ಬಳಗ ಹೇಗಿದೆ?

IND vs ENG: ಇಂಗ್ಲೆಂಡ್‌ನ‌ಲ್ಲೀಗ ಬೇಸಗೆ ಆರಂಭಗೊಂಡಿದೆ. ವಾತಾವರಣ ಕೂಡ ಬಿಸಿ ಇದೆ. ಹೀಗಾಗಿ ಪಂದ್ಯಕ್ಕೆ ಯಾವುದೇ ಮಳೆ ಭೀತಿ ಇಲ್ಲ. 5 ದಿನಗಳ ಆಟ ಯಾವುದೇ ಅಡೆ ತಡೆ ಇಲ್ಲದೆ ಆಡಬಹುದು. ಬೆಳಗ್ಗಿನ ಜಾವ ಕೊಂಚ ಚಳಿಯ ವಾತಾವರಣ ಇದ್ದರೂ ಕೂಡ ಇದರಿಂದ ಪಂದ್ಯಕ್ಕೆ ಯಾವುದೇ ಅಡ್ಡಿಯಾಗದು.

ಲೀಡ್ಸ್‌ ಟೆಸ್ಟ್‌ನ ಪಿಚ್‌ ರಿಪೋರ್ಟ್‌, ಭಾರತ ಸಂಭಾವ್ಯ ಆಡುವ ಬಳಗ ಹೇಗಿದೆ?

Profile Abhilash BC Jun 19, 2025 11:28 AM

ಲೀಡ್ಸ್‌: ಶುಕ್ರವಾರ ಆರಂಭಗೊಳ್ಳಲಿರುವ ಭಾರತ-ಇಂಗ್ಲೆಂಡ್‌(IND vs ENG) ನಡುವಿನ ಮೊದಲ ಟೆಸ್ಟ್‌(IND vs ENG 1st Test) ಪಂದ್ಯಕ್ಕೆ ಲೀಡ್ಸ್‌ನ ಹೇಡಿಂಗ್ಲೆ(Headingley) ಅಂಗಳ ಸಿದ್ಧಗೊಂಡಿದೆ. 4 ವರ್ಷಗಳ ಬಳಿಕ ಭಾರತ ತಂಡ ಇಲ್ಲಿ ಪಂದ್ಯವನ್ನಾಡುವ ಕಾತರದಲ್ಲಿದೆ. ಇದುವರೆಗೆ ಭಾರತ ಇಲ್ಲಿ 7 ಪಂದ್ಯಗಳನ್ನು ಆಡಿದ್ದು ಕೇವಲ ಎರಡು ಪಂದ್ಯದಲ್ಲಷ್ಟೇ ಗೆಲುವು ಸಾಧಿಸಿದೆ. ಇದೀಗ ಶುಕ್ರವಾರ ನಡೆಯುವ ಪಂದ್ಯದ ಪಿಚ್‌ ರಿಪೋರ್ಟ್‌, ಹವಾಮಾನ ಮತ್ತು ಸಂಭಾವ್ಯ ತಂಡದ ಮಾಹಿತಿ ಹೀಗಿದೆ. ಆತಿಥೇಯ ಇಂಗ್ಲೆಂಡ್​ ಬುಧವಾರವೇ ಆಡುವ 11ರ ಬಳಗವನ್ನು ಘೋಷಿಸಿದ ಕಾರಣ ಭಾರತ ತಂಡದ ಪ್ಲೇಯಿಂಗ್‌ ಇಲೆವೆನ್‌ ಬಗ್ಗೆ ಮಾತ್ರ ಕುತೂಹಲ ಉಳಿದಿದೆ.

ಪಿಚ್‌ ರಿಪೋರ್ಟ್‌

ಹುಲ್ಲಿನಿಂದ ಆವರಿಸಿಕೊಂಡಿರುವ ಈ ಹಸಿರು ಅಂಕಣ, ಸ್ಪಿನ್‌ ಬೌಲಿಂಗ್‌ಗಿಂತ ವೇಗಿಗಳಿಗೆ ಹೆಚ್ಚು ಪೂರವಾಗಿದೆ ಎನ್ನಲಾಗುತ್ತಿದೆ. ಈಗಾಗಲೇ ಲೀಡ್ಸ್‌ ಪಿಚ್‌ ಬಗ್ಗೆ ಮಾಹಿತಿ ನೀಡಿರುವ ಕ್ಯುರೇಟರ್‌ ರಿಚರ್ಡ್‌ ರಾಬಿನ್ಸನ್‌, ಇಂಗ್ಲೆಂಡ್‌ನ‌ಲ್ಲೀಗ ಬಿಸಿ ವಾತಾವರಣವಿದೆ. ಹೀಗಾಗಿ ಪಿಚ್‌ ತೇವಾಂಶದಿಂದ ಕೂಡಿರುವಂತೆ ನೋಡಿಕೊಳ್ಳಲಾಗಿದೆ. ಇದು ಹೇಗೆ ವರ್ತಿಸಲಿದೆ ಎನ್ನುವುದನ್ನು ಕಾದುನೋಡಬೇಕಿದೆ. ಆರಂಭಿಕ ಹಂತದಲ್ಲಿ ಈ ಫ್ಲ್ಯಾಟ್‌ ಪಿಚ್‌ ವೇಗಿಗಳಿಗೆ ಕೊಂಚ ನೆರವಾಗುವ ಸಾಧ್ಯತೆಯಿದೆಯಾದರೂ ಪಂದ್ಯ ಮುಂದುವರಿದಂತೆ ಬ್ಯಾಟರ್‌ಗಳಿಗೂ ಅನುಕೂಲವಾಗಲಿದೆ ಎಂದಿದ್ದಾರೆ. ಹೀಗಾಗಿ ಲೀಡ್ಸ್‌ನ ಹಸಿರು ಪಿಚ್‌ ಸ್ಪಿನ್‌ಗೆ ನೆರವು ನೀಡುವುದು ಅನುಮಾನ.

ಮಳೆ ಭೀತಿ ಇಲ್ಲ

ಇಂಗ್ಲೆಂಡ್‌ನ‌ಲ್ಲೀಗ ಬೇಸಗೆ ಆರಂಭಗೊಂಡಿದೆ. ವಾತಾವರಣ ಕೂಡ ಬಿಸಿ ಇದೆ. ಹೀಗಾಗಿ ಪಂದ್ಯಕ್ಕೆ ಯಾವುದೇ ಮಳೆ ಭೀತಿ ಇಲ್ಲ. 5 ದಿನಗಳ ಆಟ ಯಾವುದೇ ಅಡೆ ತಡೆ ಇಲ್ಲದೆ ಆಡಬಹುದು. ಬೆಳಗ್ಗಿನ ಜಾವ ಕೊಂಚ ಚಳಿಯ ವಾತಾವರಣ ಇದ್ದರೂ ಕೂಡ ಇದರಿಂದ ಪಂದ್ಯಕ್ಕೆ ಯಾವುದೇ ಅಡ್ಡಿಯಾಗದು.

ಮುಖಾಮುಖಿ

ಇತ್ತಂಡಗಳು ಇದುವರೆಗೆ 136 ಟೆಸ್ಟ್‌ ಪಂದ್ಯಗಳನ್ನು ಆಡಿದ್ದು ಇಂಗ್ಲೆಂಡ್‌ ತಂಡ 51 ಪಂದ್ಯ ಗೆದ್ದಿದೆ. ಭಾರತ 35 ಪಂದ್ಯ ಜಯಿಸಿದೆ. 50 ಪಂದ್ಯ ಡ್ರಾಗೊಂಡಿದೆ. ತವರಿನಲ್ಲಿ ಇಂಗ್ಲೆಂಡ್‌ 36 ಮತ್ತು ಭಾರತ 26 ಪಂದ್ಯಗಳನ್ನು ಗೆದ್ದ ಸಾಧನೆ ಮಾಡಿದೆ. ಇಂಗ್ಲೆಂಡ್‌ನಲ್ಲಿ ಭಾರತ ಇದುವರೆಗೆ 9 ಪಂದ್ಯ ಮಾತ್ರ ಗೆದ್ದಿದೆ.

ಇಂಗ್ಲೆಂಡ್​ 11ರ ಬಳಗ

ಜಾಕ್​ ಕ್ರೌಲಿ, ಬೆನ್​ ಡಕೆಟ್​, ಒಲಿ ಪೋಪ್​, ಜೋ ರೂಟ್​, ಹ್ಯಾರಿ ಬ್ರೂಕ್​, ಬೆನ್​ ಸ್ಟೋಕ್ಸ್​ (ನಾಯಕ), ಜೇಮಿ ಸ್ಮಿತ್​ (ವಿ.ಕೀ), ಕ್ರಿಸ್​ ವೋಕ್ಸ್​, ಬೆಡನ್​ ಕರ್ಸ್​, ಜೋಶ್​ ಟಂಗ್​, ಶೋಯಿಬ್​ ಬಶೀರ್​

ಭಾರತ ಸಂಭಾವ್ಯ ತಂಡ

ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ಶುಭಮನ್ ಗಿಲ್ (ನಾಯಕ), ಕರುಣ್ ನಾಯರ್, ರಿಷಭ್ ಪಂತ್ (ವಿ.ಕೀ.), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಜಸ್‌ಪ್ರೀತ್‌ ಬುಮ್ರಾ, ಪ್ರಸಿದ್ಧ್ ಕೃಷ್ಣ.