IND vs IRE: ಚೊಚ್ಚಲ ಶತಕ ಸಿಡಿಸಿದ ಪ್ರತೀಕಾ ರಾವಲ್ ಯಾರು? ಇಲ್ಲಿದೆ ಮಾಹಿತಿ!
Pratika Rawal: ತಮ್ಮ ಭರ್ಜರಿ ಬ್ಯಾಟಿಂಗ್ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿರುವ ಭಾರತ ಮಹಿಳಾ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟ್ಸ್‌ವುಮೆನ್ ಪ್ರತೀಕಾ ರಾವತ್, ಚೊಚ್ಚಲ ಶತಕವನ್ನು ಸಿಡಿಸಿದ್ದಾರೆ. ಆ ಮೂಲಕ ಐರ್ಲೆಂಡ್ ವಿರುದ್ದ ಮೂರನೇ ಒಡಿಐನಲ್ಲಿ ಭಾರತದ ಗೆಲುವಿಗೆ ನೆರವಾಗಿದ್ದಾರೆ. ಇವರ ಹಿನ್ನೆಲೆಯ ಬಗ್ಗೆ ಇಲ್ಲಿ ವಿವರಿಸಲಾಗಿದೆ.
ರಾಜ್‌ಕೋಟ್: ಐರ್ಲೆಂಡ್ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ಮಹಿಳಾ ತಂಡದ ಬ್ಯಾಟರ್ ಪ್ರತೀಕಾ ರಾವಲ್ ಅವರು ತಮ್ಮ ಚೊಚ್ಚಲ ಏಕದಿನ ಶತಕವನ್ನು ಸಿಡಿಸಿದ್ದಾರೆ. ತಮ್ಮ ವೃತ್ತಿ ಜೀವನದ ಆರನೇ ಒಡಿಐ ಪಂದ್ಯದಲ್ಲಿ ಪ್ರತೀಕಾ ಸೆಂಚುರಿ ಬಾರಿಸಿದ್ದಾರೆ. ಒಟ್ಟು 129 ಎಸೆತಗಳನ್ನು ಆಡಿದ ಅವರು 154 ರನ್‌ಗಳನ್ನು ಗಳಿಸಿದರು.
ಅಷ್ಟೇ ಅಲ್ಲದೆ ನಾಯಕಿ ಸ್ಮೃತಿ ಮಂಧಾನಾ (135 ರನ್‌ಗಳು) ಅವರೊಂದಿಗೆ ಪ್ರತೀಕಾ ರಾವಲ್ ಅವರು 233 ರನ್‌ಗಳ ಭರ್ಜರಿ ಜೊತೆಯಾಟವನ್ನು ಆಡಿದ್ದರು. ಅದರಲ್ಲಿಯೂ ಮಂಧಾನಾ ಅವರು ಕೇವಲ 70 ಎಸೆತಗಳಲ್ಲಿ ತಮ್ಮ ವೃತ್ತಿ ಜೀವನದ 10ನೇ ಶತಕವನ್ನು ಪೂರ್ಣಗೊಳಿಸಿದ್ದರು. ಈ ಇಬ್ಬರು ಶತಕಗಳ ನೆರವಿನಿಂದ ಭಾರತ ಮಹಿಳಾ ತಂಡ ತನ್ನ 50 ಓವರ್‌ಗಳ ಅಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 435 ರನ್‌ಗಳನ್ನು ಕಲೆ ಹಾಕಿತು.
ಹರ್ಮನ್‌ಪ್ರೀತ್ ಕೌರ್ ದಾಖಲೆ ಮುರಿದ ಮಂಧಾನ
ಪ್ರತೀಕಾ ರಾವಲ್ ಯಾರು?
ಭಾರತ ತಂಡದಲ್ಲಿ ತಮ್ಮ ಆಕರ್ಷಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿರುವ ಪ್ರತೀಕಾ ರಾವಲ್ ಅವರು 2000ರ ಸೆಪ್ಟಂಬರ್ ಒಂದರಂದು ದಿಲ್ಲಿಯಲ್ಲಿ ಜನಿಸಿದ್ದರು. ಅವರು ರೈಲ್ವೇಸ್ ಪರ ದೇಶಿ ಕ್ರಿಕೆಟ್ ಆಡುತ್ತಿದ್ದಾರೆ. ಇವರ ತಂದೆ ಪ್ರದೀಪ್ ರಾವಲ್ ಅವರು ದಿಲ್ಲಿ ಹಾಗೂ ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್‌ನಲ್ಲಿ ಬಿಸಿಸಿಐನ ಎರಡನೇ ದರ್ಜೆಯ ಅಂಪೈರ್ ಆಗಿದ್ದಾರೆ.
ದಿಲ್ಲಿಯ ಬಾರಾಖಾಂಬ ರಸ್ತೆಯಲ್ಲಿರುವ ಮಾಡ್ರೆನ್ ಶಾಲಯಲ್ಲಿ ಓದಿದ್ದಾರೆ ಹಾಗೂ ಅವರು ಸಿಬಿಎಸ್‌ಇ ಬೋರ್ಡ್ ಪರೀಕ್ಷೆಯಲ್ಲಿ 92.5ರ ಸರಾಸರಿಯಲ್ಲಿ ಅಂಕವನ್ನು ಗಳಿಸಿದ್ದಾರೆ. ಇದಾದ ಬಳಿಕ ಅವರು ನವದೆಹಲಿಯ ಜೇಸಸ್ ಹಾಗೂ ಮೇರಿ ಕಾಲೇಜಿನಲ್ಲಿ ಮನೋವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.
🚨 𝙍𝙚𝙘𝙤𝙧𝙙 𝘼𝙡𝙚𝙧𝙩 🚨
— BCCI Women (@BCCIWomen) January 15, 2025
With a 3⃣0⃣4⃣-run victory in the series finale, #TeamIndia registered their Biggest ODI win (by runs) in women's cricket 👏 🔝
Well done! 🙌 🙌
Scorecard ▶️ https://t.co/xOe6thhPiL#INDvIRE | @IDFCFIRSTBank pic.twitter.com/3yGIheSB7X
ಕ್ರಿಕೆಟ್ ಜೊತೆಗೆ ಪ್ರತೀಕಾ ಅವರು ಬ್ಯಾಸ್ಕೆಟ್ ಬಾಲ್ ಕ್ರೀಡೆಯನ್ನೂ ಆಡಿದ್ದರು. ಅವರು ರಾಜೇಂದ್ರ ನಗರದ ಬಾಲ ಭಾರತಿ ಶಾಲೆಯ ಪರ 2019ರಲ್ಲಿ ನಡೆದಿದ್ದ 64ನೇ ಶಾಲಾ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಬ್ಯಾಸ್ಕೆಟ್‌ಬಾಲ್‌ನಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದರು. ರೋಹ್ಟಕ್ ರಸ್ತೆಯಲ್ಲಿರುವ ಜಿಮ್ಖಾನಾ ಕ್ರಿಕೆಟ್ ಅಕಾಡೆಮಿಯಲ್ಲಿ ಅವರು ಶರವಣ್ ಕುಮಾರ್ ಬಳಿ ಮೊದಲ ಬಾರಿ ಕ್ರಿಕೆಟ್ ತರಬೇತಿಯನ್ನು ಪಡೆದಿದ್ದರು. ಕಳೆದ ತಿಂಗಳು ವೆಸ್ಟ್ ಇಂಡೀಸ್ ವಿರುದ್ದದ ಸರಣಿಯ ಮೂಲಕ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು.
ಪದಾರ್ಪಣೆ ಪಂದ್ಯದಲ್ಲಿ 40 ರನ್
ತಮ್ಮ ಪದಾರ್ಪಣೆ ಪಂದ್ಯದಲ್ಲಿ ಅವರು 40 ರನ್‌ಗಳನ್ನು ಕಲೆ ಹಾಕುವ ಮೂಲಕ ಮುರಿಯದ ಮೊದಲನೇ ವಿಕೆಟ್‌ಗೆ ಸ್ಮೃತಿ ಮಂಧಾನಾ ಅವರ ಜೊತೆ 110 ರನ್‌ಗಳನ್ನು ಕಲೆ ಹಾಕಿದ್ದರು. ಇದೇ ಪಂದ್ಯದಲ್ಲಿಯೇ ಅವರು ತಮ್ಮ ಚೊಚ್ಚಲ ಏಕದಿನ ವಿಕೆಟ್ ಅನ್ನು ಕೂಡ ಕಬಳಿಸಿದ್ದರು. ವೆಸ್ಟ್ ಇಂಡೀಸ್ ನಾಯಕಿ ಹೈಲಿ ಮ್ಯಾಥ್ಯೂಸ್ ಅವರನ್ನು ಔಟ್ ಮಾಡಿದ್ದಾರೆ.