IND vs NZ: ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಗೆಲ್ಲಬಲ್ಲ ಆಟಗಾರನನ್ನು ಆರಿಸಿದ ರವಿ ಶಾಸ್ತ್ರಿ!
India vs New Zealand CT 2025 Final: ಭಾನುವಾರ (ಮಾರ್ಚ್ 9) ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ನಡೆಯುವ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ರವೀಂದ್ರ ಜಡೇಜಾ ಅಥವಾ ಅಕ್ಷರ್ ಪಟೇಲ್ ಅವರಲ್ಲಿ ಒಬ್ಬರು ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳಲಿದ್ದಾರೆಂದು ಟೀಮ್ ಇಂಡಿಯಾ ಮಾಜಿ ಹೆಡ್ ಕೋಚ್ ರವಿ ಶಾಸ್ತ್ರಿ ಭವಿಷ್ಯ ನುಡಿದಿದ್ದಾರೆ.

ಪಂದ್ಯ ಶ್ರೇಷ್ಠ ಪ್ರಶಸ್ತಿ ಗೆಲ್ಲಬಲ್ಲ ಆಟಗಾರನನ್ನು ಆರಿಸಿದ ರವಿ ಶಾಸ್ತ್ರಿ.

ನವದೆಹಲಿ: ಭಾನುವಾರ ದುಬೈ ಇಂಟರ್‌ನ್ಯಾನಷಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ (IND vs NZ) ನಡುವೆ ನಡೆಯುವ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ( ICC Champions Trophy 2025) ಟೂರ್ನಿಯ ಫೈನಲ್ ಪಂದ್ಯದಲ್ಲಿ ರವೀಂದ್ರ ಜಡೇಜಾ ಅಥವಾ ಅಕ್ಷರ್ ಪಟೇಲ್ ಅವರಲ್ಲಿ ಒಬ್ಬರು ಪಂದ್ಯ ಶ್ರೇಷ್ಠ ಪ್ರಶಸ್ತಿ ಮುಡಿಗೇರಿಸಿಕೊಳ್ಳಲಿದ್ದಾರೆಂದು ಟೀಮ್ ಇಂಡಿಯಾ ಹೆಡ್ ಕೋಚ್ ರವಿ ಶಾಸ್ತ್ರಿ (Ravi Shastri) ಭವಿಷ್ಯ ನುಡಿದಿದ್ದಾರೆ. ಭಾರತ ತಂಡಕ್ಕೆ ವಿರಾಟ್ ಕೊಹ್ಲಿ ಹಾಗೂ ವರುಣ್ ಚಕ್ರವರ್ತಿ ಕೀ ಆಟಗಾರರು ಹಾಗೂ ನ್ಯೂಜಿಲೆಂಡ್ ತಂಡಕ್ಕೆ ರಚಿನ್ ರವೀಂದ್ರ, ಕೇನ್ ವಿಲಿಯಮ್ಸನ್ ಕೀ ಆಟಗಾರರಾಗಿದ್ದಾರೆ. ಆದರೂ ರವಿ ಶಾಸ್ತ್ರಿ, ಆಲ್‌ರೌಂಡರ್‌ಗಳಲ್ಲಿ ಒಬ್ಬರು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆಯಬಹುದೆಂದು ಅಂದಾಜಿಸಿದ್ದಾರೆ.
ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತ ತಂಡ ಅತ್ಯುತ್ತಮ ಪ್ರದರ್ಶನವನ್ನು ತೋರುತ್ತಿದೆ. ಆ ಮೂಲಕ ಇಲ್ಲಿಯ ತನಕ ಆಡಿದ ನಾಲ್ಕೂ ಪಂದ್ಯಗಳಲ್ಲಿ ಗೆಲುವು ಪಡೆದು ಫೈನಲ್‌ಗೆ ಪ್ರವೇಶ ಮಾಡಿದೆ. ಅಲ್ಲದೆ, ಮತ್ತೊಂದು ಫೈನಲಿಸ್ಟ್ ಆಗಿರುವ ನ್ಯೂಜಿಲೆಂಡ್ ತಂಡದ ವಿರುದ್ಧವೂ ರೋಹಿತ್ ಶರ್ಮಾ ಪಡೆ, ಲೀಗ್ ಹಂತದ ಕೊನೆಯ ಪಂದ್ಯದಲ್ಲಿ 44 ರನ್‌ಗಳಿಂದ ಗೆಲುವು ಪಡೆದಿತ್ತು. ಆದರೂ ಭಾರತ ತಂಡಕ್ಕೆ, ಫೈನಲ್‌ನಲ್ಲಿ ಇದೇ ನ್ಯೂಜಿಲೆಂಡ್ ವಿರುದ್ದ ಕಠಿಣ ಸವಾಲು ಎದುರಾಗಲಿದೆ. ಹಲವರು ಭಾರತ ತಂಡ ಫೈನಲ್ ಗೆಲ್ಲುವ ನೆಚ್ಚಿನ ತಂಡವಾಗಿದೆ ಎಂದು ಅಭಿಒಪ್ರಾಯವನ್ನು ಮಂಡಿಸುತ್ತಿದ್ದಾರೆ. ಆದರೆ, ಐಸಿಸಿ ಟೂರ್ನಿಗಳ ನಾಕ್‌ಔಟ್ ಪಂದ್ಯಗಳಲ್ಲಿನ ಮುಖಾಮುಖಿ ದಾಖಲೆಯಲ್ಲಿ ಭಾರತವನ್ನು ಕಿವೀಸ್ ಹಿಂದಿಕ್ಕಿದೆ. ಈ ಹಿನ್ನೆಲೆಯಲ್ಲಿ ಭಾರತ ತಂಡಕ್ಕೆ ಕಿವೀಸ್ ಭೀತಿ ಹುಟ್ಟಿಸಿದೆ.
IND vs NZ Final: ಭಾರತಕ್ಕೆ 25 ವರ್ಷದ ಸೇಡು ತೀರಿಸುವ ತವಕ
ಪಂದ್ಯ ಶ್ರೇಷ್ಠ ಪ್ರಶಸ್ತಿ ಗೆಲ್ಲುವ ತಮ್ಮ ನೆಚ್ಚಿನ ಆಟಗಾರರನ್ನು ಆರಿಸಿದ ರವಿ ಶಾಸ್ತ್ರಿ
ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಯಾವ ಆಟಗಾರ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳಬಹುದೆಂದು ಭಾರತದ ಮಾಜಿ ಕೋಚ್ ರವಿ ಶಾಸ್ತ್ರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪೂರ್ಣ ಪ್ರಮಾಣದ ಬ್ಯಾಟ್ಸ್‌ಮನ್ ಅಥವಾ ಬೌಲರ್ ಅನ್ನು ಕಡೆಗಣಿಸಿದ ಶಾಸ್ತ್ರಿ, ಆಲ್‌ರೌಂಡರ್‌ಗಳನ್ನು ಆಯ್ಕೆ ಮಾಡಿದ್ದಾರೆ. ಈ ಪಂದ್ಯವನ್ನು ಭಾರತ ಗೆದ್ದರೆ ರವೀಂದ್ರ ಜಡೇಜಾ ಅಥವಾ ಅಕ್ಷರ್ ಪಟೇಲ್ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆಯಬಹುದು. ಒಂದು ವೇಳೆ ಕಿವೀಸ್ ಗೆದ್ದರೆ ಅವರ ಪರ ಗ್ಲೆನ್ ಫಿಲಿಪ್ಸ್ ಮ್ಯಾನ್ ಆಫ್ ಮ್ಯಾಚ್ ಸ್ವೀಕರಿಸಬಹುದು.
"ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ನಾನು ಆಲ್‌ರೌಂಡರ್‌ಗಳೊಂದಿಗೆ ಹೋಗುತ್ತೇನೆ. ಭಾರತ ತಂಡದಿಂದ ರವೀಂದ್ರ ಜಡೇಜಾ ಅಥವಾ ಅಕ್ಷರ್ ಪಟೇಲ್ ಅವರನ್ನು ಆರಿಸುತ್ತೇನೆ. ನ್ಯೂಜಿಲೆಂಡ್ ಪರ ಗ್ಲೆನ್ ಫಿಲಿಪ್ಸ್ ಅವರೊಂದಿಗೆ ಹೋಗುತ್ತೇನೆ. ಫೀಲ್ಡಿಂಗ್‌ನಲ್ಲಿ ಅವರು ಅದ್ಭುತ ಕೌಶಲವನ್ನು ತೋರಿದ್ದಾರೆ. ಅವರು ಕ್ರೀಸ್‌ಗೆ ಬಂದು 40, 50 ರನ್‌ಗಳನ್ನು ವೇಗವಾಗಿ ಹೊಡೆಯಬಲ್ಲರು. ಅಲ್ಲದೆ ಬೌಲಿಂಗ್‌ನಲ್ಲಿ ಒಂದು ಅಥವಾ ಎರಡು ವಿಕೆಟ್ ಕಿತ್ತು ಅಚ್ಚರಿ ಮೂಡಿಸಲಿದ್ದಾರೆ,"ಎಂದು ರವಿ ಶಾಸ್ತ್ರಿ ಐಸಿಸಿ ರಿವ್ಯೂವ್‌ನಲ್ಲಿ ತಿಳಿಸಿದ್ದಾರೆ.
IND vs NZ Final: ಫೈನಲ್‌ಗೆ ಮಳೆ ಕಾಡಿದರೆ?, ಪಂದ್ಯ ಟೈ ಆದರೆ ಫಲಿತಾಂಶ ನಿರ್ಧಾರ ಹೇಗೆ?
2019ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿಯೂ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ತೋರಿದ್ದ ಭಾರತ ತಂಡ, ಸೆಮಿಫೈನಲ್‌ವರೆಗೂ ಸೋಲಿಲ್ಲದೆ ಬಂದಿತ್ತು. ಆದರೆ, ಸೆಮಿಫೈನಲ್‌ನಲ್ಲಿ ಕಿವೀಸ್ ಎದುರು ಪಂದ್ಯ ಗೆಲ್ಲುವ ನೆಚ್ಚಿನ ತಂಡವಾಗಿತ್ತು. ಆದರೆ, ಮಳೆಯ ಕಾರಣ ಎರಡು ದಿನ ನಡೆದಿದ್ದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ಸೋತಿತ್ತು. ಅದೇ ರೀತಿ 2021ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ನಲ್ಲಿಯೂ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಕಾದಾಟ ನಡೆಸಿದ್ದವು. ಈ ಪಂದ್ಯದಲ್ಲಿಯೂ ಭಾರತ ಗೆಲ್ಲುವ ನೆಚ್ಚಿನ ತಂಡವಾಗಿತ್ತು. ಆದರೆ, ಅಂತಿಮವಾಗಿ ಭಾರತವನ್ನು ಮಣಿಸಿದ್ದ ಕೇನ್ ವಿಲಿಯಮ್ಸನ್ ನಾಯಕತ್ವದ ಕಿವೀಸ್ ಚೊಚ್ಚಲ ಟೆಸ್ಟ್ ಚಾಂಪಿಯನ್‌ಷಿಪ್ ಗೆದ್ದಿತ್ತು. 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿಯೂ ಭಾರತ ತಂಡದ ಕಥೆ ಇದೇ ರೀತಿ ಇತ್ತು. ಅಂದು ಒಂದೂ ಪಂದ್ಯವನ್ನು ಸೋಲದೆ ಟೀಮ್ ಇಂಡಿಯಾ ಫೈನಲ್‌ಗೆ ಲಗ್ಗೆ ಇಟ್ಟಿತ್ತು. ಫೈನಲ್‌ನಲ್ಲಿ ಪಂದ್ಯ ಗೆಲ್ಲುವ ನೆಚ್ಚಿನ ತಂಡವಾಗಿದ್ದ ಟೀಮ್ ಇಂಡಿಯಾ, ಅನಿರೀಕ್ಷಿತವಾಗಿ ಸೋತು ಆಸ್ಟ್ರೇಲಿಯಾಗೆ ಪ್ರಶಸ್ತಿಯನ್ನು ಬಿಟ್ಟು ಕೊಟ್ಟಿತ್ತು.