ಕರ್ನಾಟಕ ಬಜೆಟ್​ ಮಹಿಳಾ ದಿನಾಚರಣೆ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs NZ Final: ಭಾರತಕ್ಕೆ 25 ವರ್ಷದ ಸೇಡು ತೀರಿಸುವ ತವಕ

Champions Trophy Final 2025: ನ್ಯೂಜಿಲ್ಯಾಂಡ್‌ ತನ್ನ ಕೊನೆಯ ಲೀಗ್‌ ಪಂದ್ಯದಲ್ಲಿ ಭಾರತ ವಿರುದ್ಧ ಸೋತರೂ ಕೂಡ ತಂಡವನ್ನು ಹಗುರವಾಗಿ ಕಾಣುವಂತಿಲ್ಲ. ಮಿಚೆಲ್‌ ಸ್ಯಾಂಟ್ನರ್‌ ಪಡೆಯೂ ಕೂಡ ಸಮರ್ಥವಾಗಿದೆ. ಅದರಲ್ಲೂ ಭಾರತ ವಿರುದ್ಧ ಪ್ರತಿ ಪಂದ್ಯದಲ್ಲಿ ಆಡುವ ಕನ್ನಡಿಗ, ರಚಿನ್‌ ರವೀಂದ್ರ, ಕೇನ್‌ ವಿಲಿಯಮ್ಸನ್‌ ಮತ್ತು ಡೇರಿಯಲ್‌ ಮಿಚೆಲ್‌ ತುಂಬಾ ಅಪಾಯಕಾರಿಗಳು.

IND vs NZ Final: ಭಾರತಕ್ಕೆ 25 ವರ್ಷದ ಸೇಡು ತೀರಿಸುವ ತವಕ

Profile Abhilash BC Mar 8, 2025 3:49 PM

ದುಬೈ: ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಭಾರತವನ್ನು ಅತಿಯಾಗಿ ಕಾಡಿದ ತಂಡವೆಂದರೆ ನ್ಯೂಜಿಲ್ಯಾಂಡ್‌. ಐಸಿಸಿ ಪ್ರತಿಷ್ಠಿತ ಕೂಟದಲ್ಲಿ ಭಾರತ-ನ್ಯೂಜಿಲ್ಯಾಂಡ್‌(IND vs NZ Final) ನಡುವಿನ ಮುಖಾಮುಖೀ ಯಾವತ್ತೂ ಪೈಪೋಟಿಯಿಂದ ಕೂಡಿರುತ್ತದೆ. ಟೀಮ್‌ ಇಂಡಿಯಾ ತನ್ನ ಬದ್ಧ ಎದುರಾಳಿ ಪಾಕಿಸ್ತಾನದ ಸವಾಲವನ್ನು ಯಾವುದೇ ಅಳುಕಿಲ್ಲದೆ ಎದುರಿಸಬಲ್ಲದು, ಆದರೆ ಕಿವೀಸ್‌ ವಿರುದ್ಧ ಇದೇ ಪರಾಕ್ರಮ ಸಾಧ್ಯವಾಗಿಲ್ಲ. ಭಾರತವೀಗ ಬರೋಬ್ಬರಿ 25 ವರ್ಷಗಳ ಬಳಿಕ ಚಾಂಪಿಯನ್ಸ್‌ ಟ್ರೋಫಿ ಫೈನಲ್‌ನಲ್ಲಿ(Champions Trophy Final 2025) ನ್ಯೂಜಿಲ್ಯಾಂಡ್‌ ವಿರುದ್ಧ ಜಯಭೇರಿ ಮೊಳಗಿಸುವ ಕಾತರದಲ್ಲಿದೆ. ಇನ್ನೊಂದು ಕಡೆ 16 ವರ್ಷಗಳ ಬಳಿಕ ಚಾಂಪಿಯನ್ಸ್‌ ಟ್ರೋಫಿ ಕಿರೀಟ ಧರಿಸಿಕೊಳ್ಳಲು ಕಿವೀಸ್‌ ಕೂಡ ಕಾದು ಕುಳಿತಿದೆ. ಭಾನುವಾರ(ಮಾ.9) ನಡೆಯುವ ಇತ್ತಂಡಗಳ ಅಮೋಘ ಫೈನಲ್‌ ಹಣಾಹಣಿಗೆ ದುಬೈ(Dubai International Cricket Stadium) ಅಂಗಳ ಸಿಂಗರಿಸಿಕೊಂಡು ನಿಂತಿದೆ. ಇದೊಂದು ಸಂಪೂರ್ಣ ಜೋಶ್‌ನಿಂದ ಕೂಡಿದ, ಏಕದಿನ ಕ್ರಿಕೆಟಿನ ನೈಜ ರೋಮಾಂಚನನ್ನು ತೆರೆದಿಡುವ ಬ್ಯಾಟ್‌-ಬಾಲ್‌ ಕದನವಾಗುವುದರಲ್ಲಿ ಅನುಮಾನವಿಲ್ಲ.

ಲಕ್‌ ಕೂಡ ಬೇಕು

ತಂಡ ಎಷ್ಟೇ ಅಮೋಘ ಪ್ರದರ್ಶನ ನೀಡಿದರೂ ನಾಯಕರ ಅದೃಷ್ಟ ಕೂಡ ಚಾಂಪಿಯನ್‌ ನಿರ್ಧರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. 2023ರ ಏಕದಿನ ವಿಶ್ವಕಪ್‌ನಲ್ಲಿ ಅಜೇಯವಾಗಿ ಫೈನಲ್‌ ಪ್ರವೇಶಿಸಿದ್ದ ಭಾರತ ಅಲ್ಲಿ ಆಸೀಸ್‌ ವಿರುದ್ಧ ಸೋಲು ಕಂಡಿತ್ತು. 2024ರ ಟಿ20 ವಿಶ್ವಕಪ್‌ನಲ್ಲಿ ರೋಹಿತ್‌ ಶರ್ಮ ಅವರ ನಸೀಬು ಕೈ ಹಿಡಿತ್ತು. ತಂಡ ದಕ್ಷಿಣ ಆಫ್ರಿಕಾವನ್ನು ಮಣಿಸಿ ಚಾಂಪಿಯನ್‌ ಆಗಿತ್ತು. ಇದು ರೋಹಿತ್‌ ಪಾಲಿಗೆ ಚಾಂಪಿಯನ್ಸ್‌ ಟ್ರೋಫಿ ಫೈನಲ್‌ನಲ್ಲಿ ಭಾರತವನ್ನು ಮುನ್ನಡೆಸುವ ಕೊನೆಯ ಅವಕಾಶ. ಜತೆಗೆ ವಿರಾಟ್‌ ಕೊಹ್ಲಿ, ಜಡೇಜಾಗೂ ಇದು ಕೊನೆಯ ಟೂರ್ನಿ. ಹೀಗಾಗಿ ಇದು ಸ್ಮರಣೀಯವಾಗಬೇಕಿದೆ.

ಭಾರತ ಸಮತೋಲಿತ ತಂಡ

ಅಜೇಯವಾಗಿ ಫೈನಲ್‌ ಪ್ರವೇಶಿಸಿರುವ ಭಾರತ ತಂಡ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ವಿಭಾಗದಲ್ಲಿ ಸಮತೋಲಿತವಾಗಿ ಕಾಣಿಸಿಕೊಂಡಿದೆ. ವಿರಾಟ್‌ ಕೊಹ್ಲಿ ರನ್‌ ಬರಗಾಲದಿಂದ ಹೊರಬಂದಿರುವುದು, ಶುಭಮನ್‌ ಗಿಲ್‌, ಶ್ರೇಯಸ್‌ ಅಯ್ಯರ್‌, ಅಕ್ಷರ್‌ ಪಟೇಲ್‌, ಕನ್ನಡಿಗ ಕೆ.ಎಲ್‌ ರಾಹುಲ್‌ ಹಾರ್ದಿಕ್‌ ಪಾಂಡ್ಯ ಪ್ರಚಂಡ ಬ್ಯಾಟಿಂಗ್‌ ಪಾರ್ಮ್‌ನಲ್ಲಿದ್ದಾರೆ. ಭಾರತದ ಪಾಲಿನ ಸದ್ಯದ ಚಿಂತೆಯ ಸಂಗತಿ ಎಂದರೆ, ಅದು ನಾಯಕ ರೋಹಿತ್‌ ಔಟ್‌ ಆಫ್‌ದಿ ಪಾರ್ಮ್‌. ಗುಂಪು ಹಂತದ ಮೂರೂ ಪಂದ್ಯಗಳು ಮತ್ತು ಸೆಮಿ ಪಂದ್ಯದಲ್ಲಿ ರೋಹಿತ್‌ ಸ್ಫೋಟಕ ಆರಂಭ ನೀಡುವ ಪ್ರಯತ್ನ ನಡೆಸಿದರೂ, ದೊಡ್ಡ ಸ್ಕೋರ್‌ ಬಂದಿಲ್ಲ. ಈ ಕಳಪೆ ಫಾರ್ಮ್‌ ಫೈನಲ್‌ನಂಥ ಹೈ ವೋಲ್ಟೇಜ್‌ ಪಂದ್ಯದಲ್ಲಿ ಮರುಕಳಿಸಿದರೆ ತಂಡಕ್ಕೆ ಅಪಾಯ ತಪ್ಪಿದ್ದಲ್ಲ.

ಇದನ್ನೂ ಓದಿ IND vs NZ Final: ಫೈನಲ್​ಗೆ ಮಳೆ ಕಾಡಿದರೆ?, ಪಂದ್ಯ ಟೈ ಆದರೆ ಫಲಿತಾಂಶ ನಿರ್ಧಾರ ಹೇಗೆ?

ಸ್ಪಿನ್‌ ಅಸ್ತ್ರ

ಭಾರತದ ಬೌಲಿಂಗ್‌ ಸ್ಪಿನ್‌ ವಿಭಾಗವನ್ನು ನೆಚ್ಚಿಕೊಂಡಿದೆ. ಒಟ್ಟು ನಾಲ್ವರು ಸಿನ್ನರ್‌ಗಳಾದ ಕುಲದೀಪ್‌, ಅಕ್ಷರ್‌, ಜಡೇಜ, ವರುಣ್‌ ಚಕ್ರವರ್ತಿ ಅವರು ಕಿವೀಸ್‌ ಬ್ಯಾಟರ್‌ಗಳನ್ನು ಕಟ್ಟಿಹಾಕಿಯಾರೆಂಬ ನಂಬಿಕೆ ಇದೆ. ಏಕೆಂದರೆ ಲೀಗ್‌ ಹಂತದ ಕೊನೆಯ ಪಂದ್ಯದಲ್ಲಿ ಮತ್ತು ಸೆಮಿ ಫೈನಲ್‌ ಪಂದ್ಯದಲ್ಲಿ ಭಾರತ ಸ್ಪಿನ್‌ ಅಸ್ತ್ರವನ್ನೇ ಬಳಸಿ ಪಂದ್ಯವನ್ನು ಗೆದ್ದು ಬೀಗಿತ್ತು. ವೇಗಕ್ಕೆ ಮೊಹಮ್ಮದ್‌ ಶಮಿ, ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಸಾರಥ್ಯವಿದೆ.

ಕಿವೀಸ್‌ ಕೂಡ ಸಮರ್ಥ ತಂಡ

ನ್ಯೂಜಿಲ್ಯಾಂಡ್‌ ತನ್ನ ಕೊನೆಯ ಲೀಗ್‌ ಪಂದ್ಯದಲ್ಲಿ ಭಾರತ ವಿರುದ್ಧ ಸೋತರೂ ಕೂಡ ತಂಡವನ್ನು ಹಗುರವಾಗಿ ಕಾಣುವಂತಿಲ್ಲ. ಮಿಚೆಲ್‌ ಸ್ಯಾಂಟ್ನರ್‌ ಪಡೆಯೂ ಕೂಡ ಸಮರ್ಥವಾಗಿದೆ. ಅದರಲ್ಲೂ ಭಾರತ ವಿರುದ್ಧ ಪ್ರತಿ ಪಂದ್ಯದಲ್ಲಿ ಆಡುವ ಕನ್ನಡಿಗ, ರಚಿನ್‌ ರವೀಂದ್ರ, ಕೇನ್‌ ವಿಲಿಯಮ್ಸನ್‌ ಮತ್ತು ಡೇರಿಯಲ್‌ ಮಿಚೆಲ್‌ ತುಂಬಾ ಅಪಾಯಕಾರಿಗಳು. ಇವರೆಲ್ಲ ಸ್ಪಿನ್ ಎಸೆತಗಳನ್ನು ಎದುರಿಸುವಲ್ಲಿ ಸಮರ್ಥರಾಗಿದ್ದಾರೆ. ಪಂದ್ಯಕ್ಕೂ ಮುನ್ನವೇ ಕಿವೀಸ್‌ನ ಕೋಚ್ ಗ್ಯಾರಿ ಸ್ಟೆಡ್, 'ಕೆಲವೊಮ್ಮೆ ಪ್ರವಾಹದ ಎದುರು ಈಜುವ ಸಾಹಸ ಮಾಡಬೇಕಾಗುತ್ತದೆ. ಸ್ಪಿನ್ ದಾಳಿಯನ್ನು ಎದುರಿಸಲು ನಾವು ಎಲ್ಲ ರೀತಿಯಿಂದಲೂ ಸಿದ್ಧರಾಗುತ್ತಿದ್ದೇವೆ' ಎಂದು ಹೇಳಿದ್ದಾರೆ. ಹೀಗಾಗಿ ಸ್ಯಾಂಟ್ನರ್‌ ಪಡೆ ಸ್ಪಿನ್‌ ದಾಳಿಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡೆ ಅಖಾಡಕ್ಕೆ ಇಳಿಯುವಂತಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಸೆಮಿ ಪಂದ್ಯದಲ್ಲಿ ಫೀಲ್ಡಿಂಗ್‌ ಮಾಡುವ ವೇಳೆ ಭುಜದ ನೋವಿಗೆ ತುತ್ತಾಗಿದ್ದ ಮ್ಯಾಟ್‌ ಹೆನ್ರಿ ಫೈನಲ್‌ನಲ್ಲಿ ಆಡುವ ಸಾಧ್ಯತೆ ಕಮ್ಮಿ ಎನ್ನಲಾಗಿದೆ.



ಭಾರತ-ಪಾಕ್‌ ಪಂದ್ಯದ ಪಿಚ್‌!

ಗುಂಪು ಹಂತದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯ ನಡೆದಿದ್ದ ಪಿಚ್‌ನಲ್ಲಿಯೇ ಫೈನಲ್ ಆಯೋಜನೆಗೊಳ್ಳಲಿದೆ. ಪಂದ್ಯ ಸಾಗಿದಂತೆ ಪಿಚ್‌ ನಿಧಾನಗೊಳ್ಳಲಿದ್ದು, ಸ್ಪಿನ್ನರ್‌ಗಳು ಹೆಚ್ಚು ಪರಿಣಾಮಕಾರಿಯಾಗಲಿದ್ದಾರೆ. ಉಭಯ ತಂಡಗಳಲ್ಲಿಯೂ ನುರಿತ ಸ್ಪಿನ್ನರ್‌ಗಳಿದ್ದಾರೆ.

ಒಟ್ಟು ಮುಖಾಮುಖಿ: 119

ಭಾರತ ಗೆಲುವು: 50

ನ್ಯೂಜಿಲ್ಯಾಂಡ್‌ ಗೆಲುವು: 61

7 ಪಂದ್ಯ ಫಲಿತಾಂಶವಿಲ್ಲ. ಒಂದು ಪಂದ್ಯ ಟೈ.

ಪಂದ್ಯ ಆರಂಭ: ಮಧ್ಯಾಹ್ನ 2.30ಕ್ಕೆ