ಚಾಂಪಿಯನ್ಸ್ ಟ್ರೋಫಿ ಗೆದ್ದು ಕಪಿಲ್ ದೇವ್, ಸೌರವ್ ಗಂಗೂಲಿ ದಾಖಲೆ ಮುರಿದ ರೋಹಿತ್ ಶರ್ಮಾ!
Rohit Sharma surpasses Kapil Dev Record: ನ್ಯೂಜಿಲೆಂಡ್ ವಿರುದ್ಧ ಫೈನಲ್ ಗೆದ್ದ ಭಾರತ ತಂಡ ಮೂರನೇ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು. ತಮ್ಮ ನಾಯಕತ್ವದಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದ ರೋಹಿತ್ ಶರ್ಮಾ, ಮಾಜಿ ನಾಯಕರಾದ ಕಪಿಲ್ ದೇವ್ ಹಾಗೂ ಸೌರವ್ ಗಂಗೂಲಿ ಅವರನ್ನು ಹಿಂದಿಕ್ಕಿದ್ದಾರೆ.

ವಿಶೇಷ ದಾಖಲೆ ಬರೆದ ರೋಹಿತ್ ಶರ್ಮಾ.

ದುಬೈ: ನ್ಯೂಜಿಲೆಂಡ್ ತಂಡವನ್ನು ಫೈನಲ್ ಪಂದ್ಯದಲ್ಲಿ4 ವಿಕೆಟ್‌ಗಳಿಂದ ಮಣಿಸಿದ ಭಾರತ ತಂಡ (India) ಮೂರನೇ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು (ICC Champions Trophy 2025) ಮುಡಿಗೇರಿಸಿಕೊಂಡಿತು. ಇದರೊಂದಿಗೆ ಒಂದು ಅಂತರದಲ್ಲಿ ರೋಹಿತ್ ಶರ್ಮಾ(Rohit Sharma) ತಮ್ಮ ನಾಯಕತ್ವದಲ್ಲಿ ಎರಡನೇ ಐಸಿಸಿ ಟ್ರೋಫಿಯನ್ನು ಗೆದ್ದಂತಾಯಿತು. ಇದರೊಂದಿಗೆ ದಿಗ್ಗಜ ನಾಯಕರಾದ ಕಪಿಲ್ ದೇವ್ ಹಾಗೂ ಸೌರವ್ ಗಂಗೂಲಿ ಅವರ ದಾಖಲೆಗಳನ್ನು ರೋಹಿತ್ ಶರ್ಮಾ ಮುರಿದಿದ್ದಾರೆ. ಇಲ್ಲಿನ ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ನೀಡಿದ್ದ 252 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಭಾರತ ತಂಡ, ರೋಹಿತ್ ಶರ್ಮಾ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಶುಭಮನ್ ಗಿಲ್ ಬ್ಯಾಟಿಂಗ್ ಬಲದಿಂದ ಇನ್ನೂ ಒಂದು ಓವರ್ ಬಾಕಿ ಇರುವಂತೆಯೇ 254 ರನ್ ಗಳಿಸಿ ಗೆದ್ದು ಸಂಭ್ರಮಿಸಿತು.
ಭಾರತ ತಂಡದ ಈ ಗೆಲುವಿನ ಮೂಲಕ ಎರಡು ಐಸಿಸಿ ಟ್ರೋಫಿ ತಂದುಕೊಟ್ಟ ಎರಡನೇ ನಾಯಕ ಎಂಬ ಸಾಧನೆಗೆ ರೋಹಿತ್ ಶರ್ಮಾ ಭಾಜನರಾಗಿದ್ದಾರೆ. ಇದಕ್ಕೂ ಮುನ್ನ ತಮ್ಮ ನಾಯಕತ್ವದಲ್ಲಿ ರೋಹಿತ್ ಶರ್ಮಾ ಭಾರತ ತಂಡಕ್ಕೆ 2024ರ ಐಸಿಸಿ ಟಿ20 ವಿಶ್ವಕಪ್ ಅನ್ನು ಗೆದ್ದುಕೊಟ್ಟಿದ್ದರು. ರೋಹಿತ್ ಶರ್ಮಾಗೂ ಮುನ್ನ ತಮ್ಮ ನಾಯಕತ್ವದಲ್ಲಿ ಭಾರತಕ್ಕೆ ಎಂಎಸ್ ಧೋನಿ ಮೂರು ಐಸಿಸಿ ಟ್ರೋಫಿಗಳು, ಸೌರವ್ ಗಂಗೂಲಿ ಹಾಗೂ ಕಪಿಲ್ ದೇವ್ ತಲಾ ಒಂದೊಂದು ಟ್ರೋಫಿಯನ್ನು ಗೆದ್ದಿದ್ದರು.
IND vs NZ: ನ್ಯೂಜಿಲೆಂಡ್‌ಗೆ ಮಣ್ಣು ಮುಕ್ಕಿಸಿ ಮೂರನೇ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ!
ಇಲ್ಲಿನ ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತ ತಂಡದ ಚೇಸಿಂಗ್‌ನಲ್ಲಿ ನಾಯಕ ರೋಹಿತ್ ಶರ್ಮಾ ನಿರ್ಣಾಯಕ ಕೊಡುಗೆಯನ್ನು ನೀಡಿದ್ದರು. ಇವರು ಆಡಿದ್ದ 83 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 7 ಬೌಂಡರಿಗಳೊಂದಿಗೆ 76 ರನ್‌ಗಳನ್ನು ಕಲೆ ಹಾಕಿದ್ದರು. ಆ ಮೂಲಕ ಭಾರತ ತಂಡದ ಗೆಲುವಿಗೆ ನೆರವು ನೀಡುವ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಐಸಿಸಿ ಫೈನಲ್‌ನಲ್ಲಿ ರೋಹಿತ್ ಶರ್ಮಾ ಗಳಿಸಿದ ಮೊದಲ ಅರ್ಧಶತಕ ಇದಾಗಿದೆ.
ಸತತ ಎರಡು ಬಾರಿ ಐಸಿಸಿ ಟ್ರೋಫಿ ಗೆದ್ದ ಭಾರತ
27ನೇ ಓವರ್‌ನಲ್ಲಿ ರೋಹಿತ್ ಶರ್ಮಾ ವಿಕೆಟ್ ಒಪ್ಪಿಸಿದ ಬಳಿಕ ಭಾರತ ತಂಡ 122 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆದರೆ, ಶ್ರೇಯಸ್ ಅಯ್ಯರ್ (48 ರನ್) ಹಾಗೂ ಅಕ್ಷರ್ ಪಟೇಲ್ (29) ಅವರು ನಾಲ್ಕನೇ ವಿಕೆಟ್‌ಗೆ 61 ರನ್‌ಗಳ ಜೊತೆಯಾಟವನ್ನು ಆಡಿದ್ದರು. ಇವರಿಬ್ಬರೂ ವಿಕೆಟ್ ಒಪ್ಪಿಸಿದ ಬಳಿಕ ಕೆಎಲ್ ರಾಹುಲ್ (34*), ಹಾರ್ದಿಕ್ ಪಾಂಡ್ಯ (18) ಹಾಗೂ ರವೀಂದ್ರ ಜಡೇಜಾ (9*) ಅವರು 49ನೇ ಓವರ್‌ನಲ್ಲಿ ಭಾರತ ತಂಡವನ್ನು ಗೆಲ್ಲಿಸಿದ್ದರು.
ಇದಕ್ಕೂ ಮುನ್ನ ಈ ಟೂರ್ನಿಯಲ್ಲಿ ಭಾರತ ತಂಡ ಫೈನಲ್‌ಗೆ ಪ್ರವೇಶ ಮಾಡಿದ ಬಳಿಕ ನಾಯಕ ರೋಹಿತ್ ಶರ್ಮಾ ವಿಶೇಷ ದಾಖಲೆಯನ್ನು ಬರೆದಿದ್ದರು. ಅಂದರೆ, ರಾಷ್ಟ್ರೀಯ ತಂಡವನ್ನು ಐಸಿಸಿ ಎಲ್ಲಾ ನಾಲ್ಕೂ ಟೂರ್ನಿಗಳ ಫೈನಲ್ಸ್‌ಗೆ ತಲುಪಿಸಿದ್ದ ಮೊದಲ ನಾಯಕ ಎಂಬ ಕೀರ್ತಿಗೆ ಎಂಎಸ್ ಧೋನಿ ಭಾಜನರಾಗಿದ್ದರು. ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ, 2023ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್, 2023ರ ಐಸಿಸಿ ಏಕದಿನ ವಿಶ್ವಕಪ್ ಪೈನಲ್, 2024ರ ಐಸಿಸಿ ಟಿ20ರ ವಿಶ್ವಕಪ್ ಫೈನಲ್ ಹಾಗೂ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಫೈನಲ್‌ಗೆ ಪ್ರವೇಶ ಮಾಡಿತ್ತು.
IND vs NZ: 37 ರನ್ ಗಳಿಸಿ ಕೇನ್ ವಿಲಿಯಮ್ಸನ್ ದಾಖಲೆ ಮುರಿದ ರಚಿನ್ ರವೀಂದ್ರ!
2023ರ ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಹಾಗೂ 2023ರ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ಗಳಲ್ಲಿ ಭಾರತ ತಂಡವನ್ನು ಆಸ್ಟ್ರೇಲಿಯಾ ತಂಡ ಸೋಲಿಸಿತ್ತು. ಈ ಎರಡೂ ಸೋಲುಗಳ ಬಳಿಕ ಭಾರತ ತಂಡ, ಟಿ20 ವಿಶ್ವಕಪ್ ಹಾಗೂ 2025ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಗಳಲ್ಲಿ ಬಲಿಷ್ಠವಾಗಿ ಕಮ್‌ಬ್ಯಾಕ್ ಮಾಡಿತ್ತು.