IND vs PAK: ಐಸಿಸಿ ಟೂರ್ನಿಯಲ್ಲಿ ದಾಖಲೆ ಬರೆದ ಬಾಬರ್ ಅಜಂ
ಬಾಬರ್ ಅಜಂ(Babar Azam) ಭಾರತ ವಿರುದ್ಧದ ಪಂದ್ಯದಲ್ಲಿ 23 ರನ್ ಗಳಿಸುತ್ತಿದ್ದಂತೆ, ಪಾಕಿಸ್ತಾನ ಪರ ಐಸಿಸಿ ಟೂರ್ನಿಯಲ್ಲಿ ಸಾವಿರ ರನ್ ಪೂರ್ತಿಗೊಳಿಸಿದ ಮೂರನೇ ಹಾಗೂ ಅತಿ ವೇಗವಾಗಿ ಈ ಸಾಧನೆಗೈದ ಮೊದಲ ಬ್ಯಾಟರ್ ಎನಿಸಿಕೊಂಡರು.


ದುಬೈ: ಭಾರತ ವಿರುದ್ಧದ ಚಾಂಪಿಯನ್ಸ್ ಟ್ರೋಫಿ(ICC Champions Trophy) ಪಂದ್ಯದಲ್ಲಿ ಪಾಕಿಸ್ತಾನ(IND vs PAK) ಮಾಜಿ ನಾಯಕ ಬಾಬರ್ ಅಜಂ(Babar Azam) ನೂತನ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಪಾಕಿಸ್ತಾನ ಪರ ಐಸಿಸಿ ಟೂರ್ನಿಯಲ್ಲಿ ಸಾವಿರ ರನ್ ಪೂರ್ತಿಗೊಳಿಸಿದ ಮೂರನೇ ಹಾಗೂ ಅತಿ ವೇಗವಾಗಿ ಈ ಸಾಧನೆಗೈದ ಮೊದಲ ಬ್ಯಾಟರ್ ಎನಿಸಿಕೊಂಡರು. ಹರ್ಷಿತ್ ರಾಣಾ ಅವರ ಬೌಲಿಂಗ್‌ನಲ್ಲಿ ಕವರ್ ಬೌಂಡರಿಗೆ ಅದ್ದೂರಿ ಡ್ರೈವ್ ಮಾಡುವ ಮೂಲಕ ಅಜಂ ತಮ್ಮ 24ನೇ ಇನ್ನಿಂಗ್ಸ್‌ನಲ್ಲಿ ಈ ಮೈಲಿಗಲ್ಲನ್ನು ತಲುಪಿದರು. ಆದರೆ ಪಂದ್ಯದಲ್ಲಿ ಬಾಬರ್ ನಿರೀಕ್ಷಿತ ಬ್ಯಾಟಿಂಗ್ ನಡೆಸುವಲ್ಲಿ ವಿಫಲರಾದರು. 26 ಎಸೆತಗಳಿಂದ 23 ರನ್ ಗಳಿಸಿದರು.
ಐಸಿಸಿ ಏಕದಿನದಲ್ಲಿ ಪಾಕ್ ಪರ ಅತಿ ಹೆಚ್ಚು ರನ್ ಬಾರಿಸಿದ ಬ್ಯಾಟರ್
ಸಯೀದ್ ಅನ್ವರ್ - 25 ಇನ್ನಿಂಗ್ಸ್‌ಗಳಲ್ಲಿ 1204 ರನ್
ಜಾವೇದ್ ಮಿಯಾಂದಾದ್ - 30 ಇನ್ನಿಂಗ್ಸ್‌ಗಳಲ್ಲಿ 1083 ರನ್
ಬಾಬರ್ ಅಜಮ್ - 24 ಇನ್ನಿಂಗ್ಸ್‌ಗಳಲ್ಲಿ 1005 ರನ್
ಭಾರತಕ್ಕೆ 242 ರನ್ ಗುರಿ
ಇಲ್ಲಿನ ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ತಾನ ಮಧ್ಯಮ ಕ್ರಮಾಂಕದಲ್ಲಿ ನಾಯಕ ರಿಜ್ವಾನ್ ಮತ್ತು ಸೌದ್ ಶಕೀಲ್ ಅವರ ಸಣ್ಣ ಬ್ಯಾಟಿಂಗ್ ಹೋರಾಟದ ನೆರವಿನಿಂದ 49.4 ಓವರ್‌ಗಳಲ್ಲಿ 241 ರನ್‌ಗೆ ಸರ್ವಪತನ ಕಂಡಿತು. ರೋಹಿತ್ ಶರ್ಮ ಪಡೆ ಗೆಲುವಿಗೆ 242 ರನ್ ಬಾರಿಸಬೇಕಿದೆ.
ಆರಂಭಿಕ ಆಘಾತ ಎದುರಿಸಿದ ಪಾಕಿಸ್ತಾನಕ್ಕೆ ಆಸರೆಯಾದದ್ದು ನಾಯಕ ರಿಜ್ವಾನ್ ಮತ್ತು ಶಕೀಲ್. ಉಭಯ ಆಟಗಾರರು ತಾಳ್ಮೆಯುತ ಬ್ಯಾಟಿಂಗ್ ಮೂಲಕ ಭಾರತದ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿ ರನ್ ಕಸಿದರು. ಉತ್ತಮವಾಗಿ ಆಡುತ್ತಿದ್ದ ಈ ಜೋಡಿಯನ್ನು ಕೊನೆಗೆ ಅಕ್ಷರ್ ಪಟೇಲ್ ಬೇರ್ಪಡಿಸಿದರು. 46 ರನ್ ಗಳಿಸಿದ್ದ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ರಿಕ್ವಾನ್ ವಿಕೆಟ್ ಪತನಗೊಂಡು 8 ರನ್ ಅಂತರದಲ್ಲಿ ಶಕೀಲ್ ವಿಕೆಟ್ ಕೂಡ ಬಿತ್ತು. ಮೂರನೇ ವಿಕೆಟ್‌ಗೆ ಶಕೀಲ್ ಮತ್ತು ರಿಜ್ವಾನ್ 104 ರನ್ ರಾಶಿ ಹಾಕಿದರು. ಶಕೀಲ್ 5 ಬೌಂಡರಿ ನೆರವಿನಿಂದ 62 ರನ್ ಬಾರಿಸಿ ಅರ್ಧಶತಕ ಪೂರ್ತಿಗೊಳಿಸಿದರು.
ಅಂತಿಮ ಹಂತದಲ್ಲಿ ಖುಷ್ದಿಲ್ ಶಾ ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿ 38 ರನ್ ಚಚ್ಚಿದರು. ಅಂತಿಮ ಓವರ್‌ನಲ್ಲಿ ಸಿಕ್ಸರ್ ಬಾರಿಸುವ ಪ್ರಯತ್ನದಲ್ಲಿ ಲಾಂಗ್ ಆನ್‌ನಲ್ಲಿ ನಿಂತಿದ್ದ ಕೊಹ್ಲಿಗೆ ಸುಲಭ ಕ್ಯಾಚ್ ನೀಡಿ ವಿಕೆಟ್ ಕಳೆದುಕೊಂಡರು. ಇವರ ವಿಕೆಟ್ ಬೀಳುತ್ತಿದ್ದಂತೆ ಪಾಕ್ ಆಲೌಟ್ ಆಯಿತು.
ಶಮಿ ಫೇಲ್
ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ 5 ವಿಕೆಟ್ ಗೊಂಚಲು ಪಡೆದ ಮೊಹಮ್ಮದ್ ಶಮಿ ಈ ಪಂದ್ಯದಲ್ಲಿ ಕಮಾಲ್ ಮಾಡುವಲ್ಲಿ ವಿಫಲರಾದರು. 8 ಓವರ್ ಎಸೆದು ಒಂದೂ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಮಿಂಚಿದ್ದು ಎಡಗೈ ಸ್ಪಿನ್ನರ್ ಕುಲ್‌ದೀಪ್ ಯಾದವ್ ಮಾತ್ರ. 40 ರನ್‌ಗೆ 3 ವಿಕೆಟ್ ಕಿತ್ತರು. ಉಳಿದಂತೆ ಹಾರ್ದಿಕ್ ಪಾಂಡ್ಯ 2 ವಿಕೆಟ್ ಕಿತ್ತರೆ, ಹರ್ಷಿತ್ ರಾಣ, ಅಕ್ಷರ್ ಪಟೇಲ್ ಮತ್ತು ರವೀಂದ್ರ ಜಡೇಜಾ ತಲಾ ಒಂದು ವಿಕೆಟ್ ಪಡೆದರು.